ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ವ್ಯಕ್ತಿಯ ಅಂತರಂಗದ ಪರಿವರ್ತನೆಯಿಂದಲೇ ಸಮಾಜದ ಬದಲಾವಣೆ ಸಾಧ್ಯ; ಪರಿಸರ ಸಂರಕ್ಷಣೆಗೆ ಮನುಷ್ಯನ ಮನಸ್ಸಿನ ಶುದ್ಧತೆಯೇ ಮೊದಲ ಹೆಜ್ಜೆ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

On: November 5, 2026 1:08 PM
Follow Us:

ಸಾಣೇಹಳ್ಳಿ: ಮುಖದ ಮೇಲೆ ನಗು, ಮನದೊಳಗೆ ವಿಕಾರ, ಮಾತಿನಲ್ಲಿ ನೀತಿ, ನಡವಳಿಕೆಯಲ್ಲಿ ಅಪ್ರಾಮಾಣಿಕತೆ. ಇಂತಹ ದ್ವಂದ್ವ ಬದುಕಿನ ಮುಖವಾಡಗಳನ್ನು ಕಳಚಿ ಮನುಷ್ಯ ಮೊದಲು ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕು. ವ್ಯಕ್ತಿಯ ಅಂತರಂಗ ಶುದ್ಧವಾದಾಗ ಮಾತ್ರ ಕುಟುಂಬ, ಸಮಾಜ ಮತ್ತು ದೇಶದಲ್ಲಿ ನಿಜವಾದ ಪರಿವರ್ತನೆ ಸಾಧ್ಯ. ಪರಿಸರ ಉಳಿಸಬೇಕೆಂಬ ಕಾಳಜಿ ಕೇವಲ ಘೋಷಣೆಗಳಲ್ಲಿ ಸೀಮಿತವಾಗದೆ ನಮ್ಮ ಬದುಕಿನ ನಡೆ-ನುಡಿಗಳಲ್ಲೂ ಪ್ರತಿಫಲಿಸಬೇಕು. ಬಾಹ್ಯ ಪರಿಸರವನ್ನು ಸ್ವಚ್ಛವಾಗಿಡುವ ಮೊದಲು ಮನಸ್ಸಿನೊಳಗಿನ ಕೊಳೆಯನ್ನು ತೊಳೆದುಕೊಳ್ಳಬೇಕು. ವ್ಯಕ್ತಿಯ ಬದಲಾವಣೆಯಿಂದಲೇ ಸಮಾಜದ ಬದಲಾವಣೆ ಆರಂಭವಾಗುತ್ತದೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿಯ ಶ್ರೀಮಠದ ಆಶ್ರಯದಲ್ಲಿ ನಡೆಯುತ್ತಿರುವ 2026ರ ರಾಷ್ಟ್ರೀಯ ನಾಟಕೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಸವಣ್ಣನವರ ವಚನಗಳು, ಅಕ್ಕಮಹಾದೇವಿಯವರ ಪರಿಸರ ಪ್ರಜ್ಞೆ, ಶರಣರ ಸಾಮಾಜಿಕ ಚಿಂತನೆ ಹಾಗೂ ನಾಟಕೋತ್ಸವದ ಆಶಯಗಳನ್ನು ಮುಂದಿಟ್ಟುಕೊಂಡು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.

ಬೆಳಿಗ್ಗೆ ಮಕ್ಕಳು ಪ್ರದರ್ಶಿಸಿದ ‘ಮುಖವಾಡ’ ಎಂಬ ಕಿರು ನಾಟಕವನ್ನು ಉಲ್ಲೇಖಿಸಿದ ಸ್ವಾಮೀಜಿ, ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ಮುಖವಾಡ ಧರಿಸಿ ಬದುಕುತ್ತಿರುವಂತಿದೆ. ತನ್ನ ಸಹಜ ವ್ಯಕ್ತಿತ್ವವನ್ನು ಹೊರಹಾಕದೆ, ಮನಸ್ಸಿನಲ್ಲಿರುವ ವಿಕಾರಗಳನ್ನು ಮುಚ್ಚಿಟ್ಟುಕೊಂಡು ಸಮಾಜದ ಮುಂದೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ಮುಖವಾಡದ ಬದುಕಿನಿಂದ ಹೊರಬಂದು ನೈಜ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.

ಶರಣರು ಪ್ರತಿಪಾದಿಸಿದಂತೆ ಮೊದಲು ವ್ಯಕ್ತಿ ತನ್ನನ್ನು ತಾನು ಪರಿವರ್ತಿಸಿಕೊಳ್ಳಬೇಕು. ತಾನು ಬದಲಾದಾಗ ಮಾತ್ರ ಲೋಕವನ್ನು ಬದಲಾಯಿಸುವ ನೈತಿಕ ಶಕ್ತಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಬಸವಣ್ಣನವರು ಹೇಳಿದ, ‘ಲೋಕದ ಡೊಂಕ ನೀವೇಕೆ ತಿದ್ದುವಿರಿ?’ ಎಂಬ ವಚನವನ್ನು ಅರ್ಥಮಾಡಿಕೊಳ್ಳಬೇಕು. ಲೋಕದ ತಪ್ಪುಗಳನ್ನು ತಿದ್ದಬಾರದು ಎಂಬುದು ಇದರ ಅರ್ಥವಲ್ಲ. ಬದಲಾಗಿ, ಲೋಕದ ಡೊಂಕನ್ನು ತಿದ್ದುವ ಅರ್ಹತೆ, ಯೋಗ್ಯತೆ ಮತ್ತು ಸಾಮರ್ಥ್ಯ ನಮ್ಮಲ್ಲಿದೆಯೇ ಎಂದು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು.

ನಾವು ಪ್ರಾಮಾಣಿಕರಾಗಿದ್ದರೆ, ಸತ್ಯವಂತರಾಗಿದ್ದರೆ, ನೀತಿವಂತರಾಗಿದ್ದರೆ ನಮ್ಮ ಮಾತುಗಳಿಗೆ ಸಮಾಜದಲ್ಲಿ ಗೌರವ ಮತ್ತು ಮಾನ್ಯತೆ ದೊರೆಯುತ್ತದೆ. ಆದರೆ ಒಳಗೊಂದು, ಹೊರಗೊಂದು ವ್ಯಕ್ತಿತ್ವ ಹೊಂದಿದ್ದರೆ ನಮ್ಮ ಉಪದೇಶಗಳಿಗೆ ಬೆಲೆ ಇರುವುದಿಲ್ಲ. ಆದ್ದರಿಂದ ಬದಲಾವಣೆಯ ಮಾತು ಹೇಳುವ ಮೊದಲು ನಮ್ಮ ಬದುಕೇ ಅದಕ್ಕೆ ಸಾಕ್ಷಿಯಾಗಬೇಕು ಎಂದು ತಿಳಿಸಿದರು.

ಸಮಾಜದ ಸುಧಾರಣೆ ಮತ್ತು ಸಮಾನತೆಯ ಚಿಂತನೆಗೆ 12ನೇ ಶತಮಾನದ ಶರಣ ಚಳವಳಿ ಇಂದಿಗೂ ದಾರಿದೀಪವಾಗಿದೆ. ಗಿರೀಶ್ ಕಾರ್ನಾಡ್ ಅವರು ತಮ್ಮ ‘ತಲೆದಂಡ’ ನಾಟಕದಲ್ಲಿ ಹೇಳುವಂತೆ, ‘ನೋಯುವ ಹಲ್ಲಿಗೆ ನಾಲಿಗೆ ಮತ್ತೆ ಮತ್ತೆ ಹೊರಳುವಂತೆ ನಾವೆಲ್ಲರೂ 12ನೇ ಶತಮಾನದ ಕಡೆ ನೋಡಬೇಕಾಗಿದೆ’ ಎಂಬ ಮಾತು ಇಲ್ಲಿ ಪ್ರಸ್ತುತವಾಗಿದೆ ಎಂದು ಸಾಣೇಹಳ್ಳಿ ಶ್ರೀಗಳು ಹೇಳಿದರು.

ಸಮಾಜದ ಕಟ್ಟಕಡೆಯ ಸಮುದಾಯದ ಜನರಲ್ಲಿಯೂ ಜಾಗೃತಿ ಮೂಡಿಸಿ, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಮಹತ್ತರ ಕಾರ್ಯವನ್ನು ಬಸವಣ್ಣನವರು ಅನುಭವ ಮಂಟಪದ ಮೂಲಕ ಮಾಡಿದರು. ಅವರು ಎಂದಿಗೂ ತಮ್ಮನ್ನು ದೊಡ್ಡವರೆಂದು ಬಿಂಬಿಸಿಕೊಳ್ಳಲಿಲ್ಲ. ಬದಲಾಗಿ, ಎಲ್ಲರಿಗಿಂತ ತಾನು ಚಿಕ್ಕವನು ಎಂಬ ವಿನಯವನ್ನು ಪ್ರದರ್ಶಿಸಿದರು. ಹೊಗಳಿಕೆ, ಪ್ರಶಂಸೆ ಮತ್ತು ವೈಯಕ್ತಿಕ ಕೀರ್ತಿಗಾಗಿ ಹಂಬಲಿಸದೆ ಸಮಾಜದ ಒಳಿತಿಗಾಗಿ ಬದುಕಿದರು ಎಂದರು.

ಬಸವಣ್ಣನವರ, ‘ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ, ಹೊಗಳಿ!
ಎನ್ನ ಹೊಗಳತೆ ಎನ್ನನಿಮ್ಮೆಯ್ಗೊಂಡಿತ್ತಲ್ಲಾ!
ಅಯ್ಯೋ, ನಿಮ್ಮ ಮನ್ನಣೆಯೇ ಮಸೆದಲಗಾಗಿ ತಾಗಿತ್ತಲ್ಲಾ!
ಅಯ್ಯೋ ನೊಂದೆನು, ಸೈರಿಸಲಾರೆನು:
ಕೂಡಲಸಂಗಮದೇವಾ, ನೀನೆನಗೊಳ್ಳಿದನಾದರೆ
ಎನ್ನ ಹೊಗಳತೆಗಡ್ಡ ಬಾರಾ, ಧರ್ಮೀ!
‘ ಎಂಬ ವಚನವನ್ನು ಸ್ಮರಿಸಿದ ಅವರು, ಹೊಗಳಿಕೆ ಕೆಲವೊಮ್ಮೆ ಅಪಾಯಕಾರಿಯಾದರೆ, ಕೆಲವೊಮ್ಮೆ ಜವಾಬ್ದಾರಿಯನ್ನು ಹೆಚ್ಚಿಸುವ ಶಕ್ತಿಯೂ ಆಗುತ್ತದೆ. ಕೃತಕ ಹೊಗಳಿಕೆ ವ್ಯಕ್ತಿಯನ್ನು ದಾರಿ ತಪ್ಪಿಸುತ್ತದೆ. ಆದರೆ ಹೃದಯಪೂರ್ವಕ ಪ್ರಶಂಸೆ ದೊರೆತಾಗ ನಮ್ಮ ಮೇಲಿನ ನಿರೀಕ್ಷೆ ಹೆಚ್ಚಾಗಿದೆ, ಇನ್ನಷ್ಟು ಕೆಲಸ ಮಾಡಬೇಕಿದೆ ಎಂದು ಭಾವಿಸಬೇಕು. ಈ ವೇದಿಕೆಯಲ್ಲಿ ಎಲ್ಲರೂ ನಮ್ಮನ್ನು ಹೊಗಳಿದಾಗ ಬಸವಣ್ಣನವರ ಈ ವಚನ ನೆನಪಾಯಿತು ಎಂದು ಹೇಳಿದರು.

ಸಮಾಜ ಎಂದಿಗೂ ನಿಂತ ನೀರಲ್ಲ. ಅದು ನಿರಂತರವಾಗಿ ಹರಿಯುವ ನದಿ ಇದ್ದಂತೆ. ಆ ಹರಿವಿನಲ್ಲಿ ಕೊಳಕು ಸೇರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಸಮಾಜದ ಪರಿಸರವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಅಕ್ಕಮಹಾದೇವಿಯವರ ಪರಿಸರ ಪ್ರಜ್ಞೆಯನ್ನು ಸಾರುವ ವಚನವನ್ನು ಉಲ್ಲೇಖಿಸಿದ ಸಾಣೇಹಳ್ಳಿ ಶ್ರೀಗಳು,

‘ವನವೆಲ್ಲ ಕಲ್ಪತರು, ಗಿಡವೆಲ್ಲ ಮರುಜೇವಣಿ, ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಕಲ್ಲೆಲ್ಲ ಚಿಂತಾಮಣಿ. ಚನ್ನಮಲ್ಲಿಕಾರ್ಜುನಯ್ಯನ ಮೆಚ್ಚಿನ ಗಿರಿಯ ಸುತ್ತಿ ನೋಡುತ್ತ ಬಂದು ಕದಳಿಯ ವನವ ಕಂಡೆ ನಾನು’ ಎಂಬ ವಚನದಲ್ಲಿ ಅಕ್ಕಮಹಾದೇವಿಯವರು ಪ್ರಕೃತಿಯನ್ನು ನೋಡುವ ದೃಷ್ಟಿಕೋನವನ್ನು ಅದ್ಭುತವಾಗಿ ತೆರೆದಿಟ್ಟಿದ್ದಾರೆ ಎಂದರು.

ವನವನ್ನು ಕಲ್ಪವೃಕ್ಷವೆಂದೂ, ಪ್ರತಿಯೊಂದು ಗಿಡವನ್ನು ಜೀವ ನೀಡುವ ಔಷಧವೆಂದೂ, ಕಲ್ಲುಗಳನ್ನು ಪರುಷಮಣಿಯೆಂದೂ, ನೆಲವನ್ನು ಪವಿತ್ರ ಕ್ಷೇತ್ರವೆಂದೂ, ನೀರನ್ನು ಅಮೃತವೆಂದೂ ಕಂಡ ಅಕ್ಕಮಹಾದೇವಿಯವರ ಪ್ರಕೃತಿ ಪ್ರೇಮ ನಮಗೆಲ್ಲ ಆದರ್ಶವಾಗಬೇಕು. ಪ್ರಕೃತಿಯ ಪ್ರತಿಯೊಂದು ಅಂಶದಲ್ಲಿಯೂ ಜೀವಪರವಾದ ಮೌಲ್ಯವನ್ನು ಕಂಡಾಗ ಅದನ್ನು ನಾಶಮಾಡುವ ಮನಸ್ಸು ಯಾರಿಗೂ ಬರುವುದಿಲ್ಲ. ಅಕ್ಕನ ಈ ವಚನದ ಆಳವಾದ ಅರ್ಥವನ್ನು ಅರಿತುಕೊಂಡರೆ ಪರಿಸರದ ಶುದ್ಧತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರಲ್ಲೂ ಮೂಡುತ್ತದೆ ಎಂದು ಹೇಳಿದರು.

ಪರಿಸರ ಉಳಿದರೆ ಮಾತ್ರ ಮಾನವ ಉಳಿಯಲು ಸಾಧ್ಯ. ಪರಿಸರ ನಾಶವಾದರೆ ಮಾನವನ ಅಸ್ತಿತ್ವವೂ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಅರಣ್ಯ, ಗಿಡಮರ ಮತ್ತು ನದಿ-ಕೆರೆಗಳನ್ನು ಉಳಿಸುವುದಷ್ಟೇ ಅಲ್ಲ; ಅದು ಮಾನವ ಬದುಕನ್ನೇ ಉಳಿಸುವ ಹೋರಾಟವಾಗಿದೆ ಎಂದರು.

ಪರಿಸರದಲ್ಲಿ ಬಾಹ್ಯ ಪರಿಸರ ಮತ್ತು ಆಂತರಿಕ ಪರಿಸರ ಎಂಬ ಎರಡು ಆಯಾಮಗಳಿವೆ. ಸಾಮಾಜಿಕ ಪರಿಸರದ ಜೊತೆಗೆ ಮನುಷ್ಯನ ಅಂತರಂಗದ ಪರಿಸರವೂ ಶುದ್ಧವಾಗಿರಬೇಕು ಎಂಬ ವಿಚಾರವನ್ನು ಈ ವೇದಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಬಾಹ್ಯ ಪರಿಸರವನ್ನು ಶುದ್ಧಗೊಳಿಸಬೇಕಾದರೆ ಮೊದಲು ಆಂತರಿಕ ಪರಿಸರವನ್ನು ಶುದ್ಧಗೊಳಿಸಬೇಕು ಎಂದು ಸಾಣೇಹಳ್ಳಿ ಶ್ರೀಗಳು ಹೇಳಿದರು.

‘We have best face for the photographer‘ ಎಂಬ ಆಂಗ್ಲ ನುಡಿಗಟ್ಟನ್ನು ಉಲ್ಲೇಖಿಸಿದ ಅವರು, ಕ್ಯಾಮೆರಾ ಎದುರು ನಿಂತಾಗ ಎಲ್ಲರೂ ಮುಖದಲ್ಲಿ ಮಂದಹಾಸ ಮೂಡಿಸಿಕೊಂಡು ಸುಂದರವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ನಮ್ಮ ಅಂತರಂಗದಲ್ಲಿ ಅದೆಷ್ಟು ದ್ವೇಷ, ಅಸೂಯೆ, ಕ್ರೋಧ ಮತ್ತು ಸ್ವಾರ್ಥದ ವಿಕಾರಗಳು ಅಡಗಿವೆ ಎಂಬುದನ್ನು ನಾವು ಗಮನಿಸುವುದಿಲ್ಲ. ಹೊರಗಡೆ ಹಸನ್ಮುಖಿಯಾಗಿರುವುದಕ್ಕಿಂತ ಒಳಗಡೆಯೂ ಹಸನ್ಮುಖಿಯಾಗಿರುವುದು ಮುಖ್ಯ. ಅಂತರಂಗದಲ್ಲಿ ಜ್ಞಾನದ ಬೆಳಕು ಮೂಡಿದಾಗ ಅದು ಹೊರಗಿನ ಕತ್ತಲೆಯನ್ನು ದೂರಮಾಡಲು ಸಹಕಾರಿಯಾಗುತ್ತದೆ ಎಂದರು.

ಮನುಷ್ಯನ ಮನಸ್ಸು ಬದಲಾದಾಗಲೇ ಅವನ ನಡವಳಿಕೆ ಬದಲಾಗುತ್ತದೆ. ನಡವಳಿಕೆ ಬದಲಾದಾಗ ಕುಟುಂಬದಲ್ಲಿ ನೆಮ್ಮದಿ ಮೂಡುತ್ತದೆ. ಕುಟುಂಬಗಳು ಬದಲಾದಾಗ ಊರು ಮತ್ತು ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಹೀಗಾಗಿ ಪರಿಸರದ ಸುಧಾರಣೆಯ ಮೊದಲ ಹೆಜ್ಜೆ ವ್ಯಕ್ತಿಯ ಪರಿವರ್ತನೆಯಾಗಬೇಕು ಎಂದು ತಿಳಿಸಿದರು.

ಭಾರತದ ನಕ್ಷೆಯನ್ನು ಜೋಡಿಸುವ ಪುಟ್ಟ ಮಗುವಿನ ಕಥೆಯನ್ನು ವಿವರಿಸಿದ ಸಾಣೇಹಳ್ಳಿ ಶ್ರೀಗಳು, ತಂದೆಯೊಬ್ಬರು ಭಾರತದ ನಕ್ಷೆಯನ್ನು ಮಗುವಿನ ಮುಂದೆ ಇಟ್ಟು ಅದನ್ನು ಸರಿಪಡಿಸುವಂತೆ ಹೇಳುತ್ತಾರೆ. ದೇಶದ ನಕ್ಷೆಯ ಪರಿಚಯವಿಲ್ಲದ ಮಗು ಅದನ್ನು ನಾಲ್ಕು ತುಂಡುಗಳಾಗಿ ಹರಿದು ಹಾಕಿರುತ್ತದೆ. ತಂದೆ ನಕ್ಷೆಯನ್ನು ಮೊದಲಿನಂತೆ ಜೋಡಿಸದಿದ್ದರೆ ಊಟವಿಲ್ಲ ಎಂದು ಹೇಳುತ್ತಾರೆ.

ಏನು ಮಾಡಬೇಕೆಂದು ತಿಳಿಯದ ಮಗು ನಕ್ಷೆಯ ಹಿಂಭಾಗವನ್ನು ನೋಡಿದಾಗ ಅಲ್ಲಿ ಮನುಷ್ಯನ ಚಿತ್ರವಿರುವುದನ್ನು ಗಮನಿಸುತ್ತದೆ. ಮನುಷ್ಯನ ಚಿತ್ರವನ್ನು ಜೋಡಿಸುವುದು ಮಗುವಿಗೆ ಸುಲಭವಾಗಿರುತ್ತದೆ. ತಲೆ, ಕೈ, ಕಾಲು ಮತ್ತು ದೇಹದ ಭಾಗಗಳನ್ನು ಸರಿಯಾಗಿ ಜೋಡಿಸುತ್ತದೆ. ಆಗ ಹಿಂಭಾಗದ ಮನುಷ್ಯನ ಚಿತ್ರ ಸರಿಯಾದ ತಕ್ಷಣ ಮುಂಭಾಗದ ಭಾರತದ ನಕ್ಷೆಯೂ ಸರಿಯಾಗುತ್ತದೆ.

ತಂದೆ ಆಶ್ಚರ್ಯದಿಂದ ಹೇಗೆ ನಕ್ಷೆಯನ್ನು ಸರಿಪಡಿಸಿದೆ ಎಂದು ಕೇಳಿದಾಗ, ಮಗು ಮನುಷ್ಯನ ಚಿತ್ರವನ್ನು ಸರಿಪಡಿಸಿದ್ದರಿಂದ ಭಾರತದ ನಕ್ಷೆಯೂ ಸರಿಯಾಯಿತು ಎಂದು ಉತ್ತರಿಸುತ್ತದೆ. ಈ ಕಥೆಯ ಸಂದೇಶ ಬಹಳ ದೊಡ್ಡದು. ಭಾರತ ಸರಿಯಾಗಬೇಕು ಎಂದರೆ ಮೊದಲು ಮನುಷ್ಯ ಸರಿಯಾಗಬೇಕು. ನಮ್ಮ ಮನೆ, ಮಠ, ಊರು ಮತ್ತು ಸಮಾಜ ಸರಿಯಾಗಬೇಕಾದರೂ ಮೊದಲು ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕು. ಆಗ ಮಾತ್ರ ನಿಜವಾದ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇಂದು ನಾವು ಸೇವಿಸುವ ಆಹಾರ, ಉಸಿರಾಡುವ ಗಾಳಿ ಮತ್ತು ಕುಡಿಯುವ ನೀರು ಕೂಡ ಸಂಪೂರ್ಣ ಶುದ್ಧವಾಗಿ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಸುಧಾರಣೆ ತರಬೇಕಾಗಿದೆ ಎಂದರು.

ಸರ್ವೋದಯದ ಆಶಯದ ಹಿನ್ನೆಲೆಯಲ್ಲಿ ಐದು ಪ್ರಮುಖ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಅವುಗಳೆಂದರೆ:

  1. ಪರಿಸರ: ಪ್ರಕೃತಿ ಸಂಪತ್ತು, ಗಿಡಮರ, ನದಿ, ಕೆರೆ ಮತ್ತು ಜೀವವೈವಿಧ್ಯವನ್ನು ಉಳಿಸುವುದು.
  2. ಕೃಷಿ: ರೈತರ ಬದುಕನ್ನು ಸುಧಾರಿಸಿ, ಆರೋಗ್ಯಕರ ಆಹಾರ ಉತ್ಪಾದನೆಗೆ ಆದ್ಯತೆ ನೀಡುವುದು.
  3. ಶಿಕ್ಷಣ: ಮಕ್ಕಳಲ್ಲಿ ಜ್ಞಾನ, ಸಂಸ್ಕಾರ, ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಬೆಳೆಸುವುದು.
  4. ಆರೋಗ್ಯ: ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಮತ್ತು ಆರೋಗ್ಯಕರ ಜೀವನಶೈಲಿಯ ಅರಿವು ಮೂಡಿಸುವುದು.
  5. ಆಡಳಿತ: ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಜನಪರ ಕಾಳಜಿಯ ಆಡಳಿತ ವ್ಯವಸ್ಥೆ ರೂಪಿಸುವುದು.

ಈ ಐದು ವಿಚಾರಗಳು ಒಂದಕ್ಕೊಂದು ಪೂರಕವಾಗಿವೆ. ಒಂದೊಂದಾಗಿ ಅವುಗಳನ್ನು ಸುಧಾರಿಸುತ್ತಾ ಹೋದರೆ ಸಮಾಜದಲ್ಲಿ ಸಮಗ್ರ ಬದಲಾವಣೆ ತರಲು ಸಾಧ್ಯವಾಗುತ್ತದೆ. 12ನೇ ಶತಮಾನದ ಶರಣರು ಕಂಡ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯ ಮೌಲ್ಯಗಳ ಸಮಾಜವನ್ನು ಮತ್ತೆ ಕಟ್ಟಲು ಇವು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಸಾಣೇಹಳ್ಳಿ ನಾಟಕೋತ್ಸವದ ಆಶಯವನ್ನು ವಿವರಿಸಿದ ಸಾಣೇಹಳ್ಳಿ ಶ್ರೀಗಳು, ನಾಟಕೋತ್ಸವ ಎಂದರೆ ಕೇವಲ ನಾಟಕಗಳನ್ನು ವೀಕ್ಷಿಸಿ ಆನಂದಿಸುವ ಕಾರ್ಯಕ್ರಮವಲ್ಲ. ನಾಟಕಗಳಲ್ಲಿರುವ ತತ್ವ, ಸತ್ವ ಮತ್ತು ಸಾಮಾಜಿಕ ಸಂದೇಶಗಳನ್ನು ಅರ್ಥಮಾಡಿಕೊಂಡು ನಮ್ಮ ಮನಸ್ಸನ್ನು ವಿಕಾಸಗೊಳಿಸಿಕೊಳ್ಳುವ ಅವಕಾಶವಾಗಿದೆ. ನಮ್ಮೊಳಗಿನ ವಿಕಾರಗಳಿಂದ ಹೊರಬಂದು ಬದುಕಿನಲ್ಲಿ ಬದಲಾವಣೆ ತಂದುಕೊಳ್ಳಬೇಕು. ಆಗ ಮಾತ್ರ ನಾಟಕಗಳನ್ನು ವೀಕ್ಷಿಸಿದ್ದು ಮತ್ತು ಇಂತಹ ಸಮಾರಂಭಗಳಲ್ಲಿ ಭಾಗವಹಿಸಿದ್ದು ಸಾರ್ಥಕವಾಗುತ್ತದೆ ಎಂದರು.

ಇಲ್ಲದಿದ್ದರೆ ಇಂತಹ ಕಾರ್ಯಕ್ರಮಗಳು ಕೇವಲ ಜಾತ್ರೆಗಳಾಗಿ ಉಳಿಯುತ್ತವೆ. ಅಲ್ಲಮಪ್ರಭುದೇವರ ‘ಜನ ಮರುಳೋ, ಜಾತ್ರೆ ಮರುಳೋ‘ ಎಂಬ ವಚನವನ್ನು ಉಲ್ಲೇಖಿಸಿದ ಅವರು, ಪೂಜೆ, ಆಚರಣೆ ಮತ್ತು ಧಾರ್ಮಿಕ ವಿಧಿವಿಧಾನಗಳಲ್ಲಿ ತೊಡಗಿಸಿಕೊಂಡರೂ ಅವುಗಳ ನಿಜವಾದ ಅರ್ಥವನ್ನು ಅರಿಯದಿದ್ದರೆ ಆ ಎಲ್ಲ ಪ್ರಯತ್ನಗಳು ವ್ಯರ್ಥವಾಗುತ್ತವೆ ಎಂಬ ಎಚ್ಚರಿಕೆಯನ್ನು ಶರಣರು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವುದಷ್ಟೇ ಮುಖ್ಯವಲ್ಲ, ಅಲ್ಲಿನ ವಿಚಾರಗಳನ್ನು ಮನನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಕಲಿಸುವ ‘ಶ್ರವಣ, ಮನನ, ನಿಧಿಧ್ಯಾಸನ’ ಎಂಬ ಮೂರು ಹಂತಗಳ ಮಹತ್ವವನ್ನು ವಿವರಿಸಿದ ಅವರು, ಮೊದಲು ಶ್ರದ್ಧೆಯಿಂದ ಕೇಳಬೇಕು. ಕೇಳಿದ್ದನ್ನು ಮನಸ್ಸಿನಲ್ಲಿ ಚಿಂತನೆ ಮಾಡಬೇಕು. ಆ ಚಿಂತನೆಯಿಂದ ಅರಿತುಕೊಂಡ ವಿಚಾರಗಳನ್ನು ಜೀವನದಲ್ಲಿ ಆಚರಣೆಗೆ ತರಬೇಕು. ಈ ಪ್ರಕ್ರಿಯೆ ನಡೆದಾಗ ಮಾತ್ರ ಮನುಷ್ಯನ ಆಂತರಿಕ ಮತ್ತು ಬಾಹ್ಯ ಪರಿಸರ ಎರಡೂ ಸುಧಾರಿಸುತ್ತವೆ ಎಂದು ತಿಳಿಸಿದರು.

ವಿಶ್ವ ಒಕ್ಕಲಿಗ ಸಂಸ್ಥಾನದ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಜೀವನದ ಪಯಣವನ್ನು ಸ್ಮರಿಸಿದ ಸಾಣೇಹಳ್ಳಿ ಶ್ರೀಗಳು, ಅವರು ಹಿಂದೆ ಅತ್ಯಂತ ಅಪರೂಪದ ಅಧಿಕಾರಿಯಾಗಿದ್ದರು. ಆಡಳಿತ ವ್ಯವಸ್ಥೆಯಲ್ಲಿದ್ದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಂತಹ ಬೆಳವಣಿಗೆಗಳಿಂದ ಬೇಸತ್ತು, ಆ ಕ್ಷೇತ್ರವೇ ಬೇಡವೆಂದು ಒಂದು ಹಂತದಲ್ಲಿ ರಾಜೀನಾಮೆ ನೀಡಿ ಸ್ವಾಮಿಗಳಾಗುವ ನಿರ್ಧಾರ ಮಾಡಿದ್ದರು ಎಂದರು.

ಆದರೆ ಕೆಲವರು ಅವರೊಂದಿಗೆ ಚರ್ಚಿಸಿ, ಅಧಿಕಾರದಲ್ಲಿದ್ದುಕೊಂಡೇ ವ್ಯವಸ್ಥೆಯ ಸುಧಾರಣೆಗೆ ಪ್ರಯತ್ನಿಸಬೇಕು ಎಂದು ಮನವೊಲಿಸಿದ್ದರು. ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಸಂದರ್ಭದಲ್ಲಿ ಹಾಸನದಲ್ಲಿ ನಡೆದ ಕಾರ್ಯಕ್ರಮಕ್ಕೆ ಅವರು ಅಧಿಕಾರಿಯಾಗಿ ಬಂದಿದ್ದಾಗ ಅಲ್ಲಿನ ಜನರು ಅವರ ಸರಳತೆ, ಸಾತ್ವಿಕತೆ ಮತ್ತು ಉತ್ತಮ ಆಡಳಿತದ ಗುಣಗಳನ್ನು ಮೆಚ್ಚಿ ಮಾತನಾಡಿದ್ದರು. ಇಂತಹ ವ್ಯಕ್ತಿಗಳು ಸ್ವಾಮಿಗಳಾಗಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು ಎಂದು ನೆನಪಿಸಿಕೊಂಡರು.

ನಂತರ ಅವರು ಆ ಅಧಿಕಾರದ ಸ್ಥಾನವನ್ನು ತ್ಯಜಿಸಿ, ಎರಡು ವರ್ಷಗಳ ಹಿಂದೆ ಕಾವಿ ಧರಿಸಿ ಆಧ್ಯಾತ್ಮಿಕ ಮತ್ತು ಸಮಾಜಮುಖಿ ಬದುಕಿನ ಹಾದಿ ಹಿಡಿದರು. ಅವರ ಮನಸ್ಸು ಮೊದಲಿನಿಂದಲೂ ಸಮಾಜದ ಒಳಿತಿನ ಕಡೆಗೆ ಮುಖಮಾಡಿತ್ತು. ಹೀಗಾಗಿ ಅವರ ಬದುಕಿನ ಈ ಪರಿವರ್ತನೆ ಸಮಾಜಕ್ಕೆ ಉತ್ತಮ ಸಂದೇಶವಾಗಿದೆ ಎಂದು ಹೇಳಿದರು.

ದಾವಣಗೆರೆಯಲ್ಲಿ ನಡೆದ ಅಪರೂಪದ ‘ವಚನ ಅಭಿಯಾನ’ದ ಅನುಭವವನ್ನು ಹಂಚಿಕೊಂಡ ಸಾಣೇಹಳ್ಳಿ ಶ್ರೀಗಳು, ‘ವಚನ ಗಾನ ನಾದಲೋಕ’ ಎಂಬ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ 3,642 ಮಂದಿ ಏಕಕಂಠದಲ್ಲಿ 33 ವಚನಗಳನ್ನು ಹಾಡಿದ್ದು ಅದ್ಭುತ ಅನುಭವವಾಗಿತ್ತು ಎಂದರು.

ಇಂತಹ ದೊಡ್ಡ ಕಾರ್ಯಕ್ರಮಕ್ಕೆ ಆರ್ಥಿಕ ನೆರವು ಅಗತ್ಯವಿದ್ದ ಹಿನ್ನೆಲೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಸಂಪರ್ಕಿಸಲಾಯಿತು. ಅವರು ವಿದೇಶದಲ್ಲಿದ್ದ ಕಾರಣ ಪ್ರಭಾ ಅವರೊಂದಿಗೆ ಮಾತನಾಡುವಂತೆ ತಿಳಿಸಿದರು. ನಂತರ ಕಾರ್ಯಕರ್ತರನ್ನು ಪ್ರಭಾ ಅವರ ಬಳಿ ಕಳುಹಿಸಲಾಯಿತು. ಪ್ರಭಾ ಅವರು ಕುಟುಂಬದವರೊಂದಿಗೆ ಚರ್ಚಿಸಿ ಕಾರ್ಯಕ್ರಮಕ್ಕೆ 5 ಲಕ್ಷ ರೂಪಾಯಿಗಳ ನೆರವು ನೀಡಿದರು. ಸಾರ್ವಜನಿಕರೂ ತಮ್ಮ ಕೈಲಾದ ಸಹಕಾರ ನೀಡಿದರು ಎಂದು ವಿವರಿಸಿದರು.

ವಚನ ಅಭಿಯಾನದ ಕಾರ್ಯಕ್ರಮದ ಲೆಕ್ಕಪತ್ರ ಸಲ್ಲಿಸಲು ದಾವಣಗೆರೆಯ ಸಂಘಟಕರು ಮಠಕ್ಕೆ ಆಗಮಿಸಿದ್ದ ಘಟನೆಯನ್ನು ಉಲ್ಲೇಖಿಸಿದ ಸಾಣೇಹಳ್ಳಿ ಶ್ರೀಗಳು, ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಹಣಕಾಸಿನ ವ್ಯವಹಾರಗಳಿಗೆ ಸರಿಯಾದ ಲೆಕ್ಕಪತ್ರ ಇಡುವ ಪದ್ಧತಿ ಎಲ್ಲೆಡೆ ಕಂಡುಬರುವುದಿಲ್ಲ. ಆದರೆ ದಾವಣಗೆರೆಯ ಕಾರ್ಯಕರ್ತರು ಒಂದು ರೂಪಾಯಿಯಿಂದ ಹಿಡಿದು ಪ್ರತಿಯೊಂದು ಪೈಸೆಯವರೆಗೂ ಯಾರಿಂದ ಎಷ್ಟು ಹಣ ಬಂದಿದೆ, ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂಬ ಸಂಪೂರ್ಣ ವಿವರವನ್ನು ನೀಡಿದರು ಎಂದರು.

ಕಾರ್ಯಕ್ರಮದ ಖರ್ಚು-ವೆಚ್ಚದ ಲೆಕ್ಕ ಹಾಕಿದಾಗ ಸುಮಾರು 50 ಸಾವಿರ ರೂಪಾಯಿಗಳ ಕೊರತೆ ಕಂಡುಬಂದಿತ್ತು. ಆಗ ಕಾರ್ಯಕರ್ತರು, ‘ಬುದ್ಧಿ, ಅದರ ಬಗ್ಗೆ ಚಿಂತೆ ಮಾಡಬೇಡಿ. ನಾವೇ ಆ ಹಣವನ್ನು ಹಾಕಿಕೊಳ್ಳುತ್ತೇವೆ’ ಎಂದು ಹೇಳಿದರು. ಸಾರ್ವಜನಿಕರಿಂದ ಸಂಗ್ರಹಿಸಿದ ಹಣಕ್ಕೆ ಸಂಪೂರ್ಣ ಲೆಕ್ಕ ನೀಡುವ ಅವರ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಮೆಚ್ಚುವಂತಹದ್ದು. ನಮ್ಮ ಜನರ ಮನಸ್ಸು ಎಷ್ಟು ಶುದ್ಧವಾಗಿದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.

ಇಂತಹ ಪ್ರಾಮಾಣಿಕ ಮನಸ್ಸುಗಳನ್ನು ಅಶುದ್ಧಗೊಳಿಸುವ ಕೆಲಸಗಳು ಸಮಾಜದಲ್ಲಿ ಅಲ್ಲಲ್ಲಿ ನಡೆಯುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಬದುಕಿನಲ್ಲಿಯೂ ಹಣಕಾಸಿನ ಲೆಕ್ಕಪತ್ರ ಇಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಎಲ್ಲಿಂದ ಹಣ ಬಂತು, ಎಲ್ಲಿ ಖರ್ಚಾಯಿತು ಎಂಬುದನ್ನು ದಾಖಲಿಸಿಕೊಂಡರೆ ಅನಗತ್ಯ ವೆಚ್ಚಗಳ ಬಗ್ಗೆ ಅರಿವು ಮೂಡುತ್ತದೆ. ಕೆಲವೊಮ್ಮೆ ನಮ್ಮ ತಪ್ಪು ಅಭ್ಯಾಸಗಳಿಗೆ ಎಷ್ಟು ಹಣ ವ್ಯಯಿಸಿದ್ದೇವೆ ಎಂಬುದನ್ನು ಲೆಕ್ಕ ನೋಡಿದಾಗಲೇ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಆ ಆತ್ಮಾವಲೋಕನ ನಮ್ಮನ್ನು ಸರಿದಾರಿಗೆ ತರಬಲ್ಲದು ಎಂದು ಹೇಳಿದರು.

ಮಠದ ಹಿಂದಿನ ಗುರುಗಳು ಪ್ರತಿದಿನ ಡೈರಿ ಬರೆಯುವ ಪದ್ಧತಿಯನ್ನು ಅನುಸರಿಸುತ್ತಿದ್ದರು. ಭಕ್ತರು ನೀಡಿದ ಹಣ, ವಸ್ತುಗಳು ಮತ್ತು ಅವುಗಳನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬುದನ್ನು ದಾಖಲಿಸುತ್ತಿದ್ದರು. ಅದೇ ಪದ್ಧತಿಯನ್ನು ಮಠದ ಗುರುಗಳು ಮುಂದುವರಿಸಿಕೊಂಡು ಬಂದಿದ್ದಾರೆ. ಭಕ್ತರು ನಿನ್ನೆ ನೀಡಿದ ಕಾಣಿಕೆ ಎಲ್ಲಿ ಬಳಕೆಯಾಗಿದೆ ಎಂಬುದನ್ನು ಇಂದೇ ಮಠದ ಡೈರಿಯಲ್ಲಿ ಪರಿಶೀಲಿಸಬಹುದು. ಇದು ಕೇವಲ ಲೆಕ್ಕಪತ್ರದ ಪದ್ಧತಿಯಲ್ಲ, ಭಕ್ತರ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿಯುತ ನಡೆ ಎಂದು ವಿವರಿಸಿದರು.

ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿಯೂ ಇದೇ ರೀತಿಯ ಪ್ರಾಮಾಣಿಕ ಲೆಕ್ಕಪತ್ರದ ಅಭ್ಯಾಸ ಬೆಳೆಸಿಕೊಂಡರೆ ಆಂತರಿಕ ಶುದ್ಧತೆ ಮತ್ತು ಬಾಹ್ಯ ಶುದ್ಧತೆ ಎರಡೂ ಸಾಧ್ಯವಾಗುತ್ತವೆ. ಮನುಷ್ಯ ನೆಮ್ಮದಿಯಿಂದ ಬದುಕಲು ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು.

ಶಾಸಕ ಗೋವಿಂದಪ್ಪನವರನ್ನು ಉದ್ದೇಶಿಸಿ ಮಾತನಾಡಿದ ಸಾಣೇಹಳ್ಳಿ ಶ್ರೀಗಳು, ಬಿಡುವಿನ ಸಮಯದಲ್ಲಿ ನಾಟಕೋತ್ಸವದ ವೇದಿಕೆಗೆ ಆಗಮಿಸಿ ಕಾರ್ಯಕ್ರಮಗಳನ್ನು ವೀಕ್ಷಿಸುವಂತೆ ಈ ಹಿಂದೆ ಆಹ್ವಾನಿಸಿದ್ದೆವು. ಅವರ ಕಾರ್ಯಕ್ರಮದ ಕೊನೆಯ ದಿನಾಂಕ 6ನೇ ತಾರೀಖಾಗಿರುವ ಹಿನ್ನೆಲೆಯಲ್ಲಿ ಅವರು ನಾಟಕೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವುಗಳನ್ನು ಅವಲೋಕನ ಮಾಡಿದ್ದಾರೆ ಎಂದು ತಿಳಿಸಿದರು.

ಕೊನೆಯಲ್ಲಿ ವೇದಿಕೆಯಲ್ಲಿದ್ದ ಗಣ್ಯರು, ಕಲಾವಿದರು, ಸಂಘಟಕರು, ವಿದ್ಯಾರ್ಥಿಗಳು ಮತ್ತು ಪ್ರೇಕ್ಷಕರಿಗೆ ಶುಭ ಹಾರೈಸಿದ ಅವರು, ಕಲಾವಿದರು ಪ್ರದರ್ಶಿಸಲಿರುವ ಅಪರೂಪದ ನಾಟಕವನ್ನು ಎಲ್ಲರೂ ಆಸಕ್ತಿಯಿಂದ ವೀಕ್ಷಿಸಿ ಅದರ ಆಶಯವನ್ನು ಅರ್ಥಮಾಡಿಕೊಳ್ಳಬೇಕು ಎಂದು ಕರೆ ನೀಡುವ ಮೂಲಕ ಆಶೀರ್ವಚನ ಪೂರ್ಣಗೊಳಿಸಿದರು.

ವ್ಯಕ್ತಿಯ ಅಂತರಂಗದ ಪರಿವರ್ತನೆಯಿಂದ ಸಮಾಜದ ಪರಿವರ್ತನೆ ಸಾಧ್ಯ ಎಂಬ ಶರಣರ ಸಂದೇಶವನ್ನು ಸಾರಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಚನ, ಸಾಣೇಹಳ್ಳಿ ನಾಟಕೋತ್ಸವದ ಸಾಂಸ್ಕೃತಿಕ ಆಶಯಕ್ಕೆ ಹೊಸ ಚಿಂತನೆಯ ಆಯಾಮ ನೀಡಿತು. ನಾಟಕವನ್ನು ನೋಡುವ ಕಣ್ಣುಗಳ ಜೊತೆಗೆ ಅದರ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮನಸ್ಸುಗಳೂ ರೂಪುಗೊಳ್ಳಬೇಕು ಎಂಬುದು ಅವರ ಮಾತುಗಳ ಒಟ್ಟಾರೆ ಆಶಯವಾಗಿತ್ತು.

K.M.Sathish Gowda

Join WhatsApp

Join Now

Facebook

Join Now

Read more

ಗುರುವಿನ ಕಾಯಕವೇ ಶಿಷ್ಯನ ಬದುಕಿಗೆ ಬೆಳಕು; ಪರಿಸರದ ವಿನಾಶಕ್ಕೆ ಮನುಷ್ಯನೇ ಕಾರಣ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ನಿಸರ್ಗದ ಉಳಿವು, ಮಾನವೀಯ ಸಂಬಂಧಗಳ ಬೆಸುಗೆಯ ಸಂದೇಶ ಸಾರಿದ ಸಾಣೇಹಳ್ಳಿ ನಾಟಕೋತ್ಸವ; ಪಶ್ಚಿಮ ಘಟ್ಟಗಳ ನಾಶವಾದರೆ ಬದುಕೇ ಸಂಕಷ್ಟಕ್ಕೆ ಸಿಲುಕಲಿದೆ: ಅಖಿಲೇಶ್ ಚಿಪ್ಳಿ

ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವೂ ಮುಖ್ಯ; ಆಸ್ತಿ-ಅಂತಸ್ತಿಗಿಂತ ಮಾನವೀಯ ಸಂಬಂಧಗಳೇ ಬದುಕಿನ ನಿಜವಾದ ಸಂಪತ್ತು: ಬಿ.ವೈ. ವಿಜಯೇಂದ್ರ

ಮಠಗಳ ಮೌಲ್ಯಮಾಪನ ಅಗತ್ಯ; ಸಾಣೇಹಳ್ಳಿ ಮಠದ ಕಾರ್ಯಚಟುವಟಿಕೆಗಳು ಮಾದರಿ: ಡಾ. ಬಸವಕುಮಾರ ಸ್ವಾಮೀಜಿ

136 ಕಿ.ಮೀ. ಪಾದಯಾತ್ರೆಯ ಮೂಲಕ ಭಕ್ತಿ, ಶ್ರದ್ಧೆ ಮತ್ತು ಮಾನವೀಯತೆಯ ಸಂದೇಶ; ಬದುಕಿನ ಮೌಲ್ಯಗಳನ್ನು ಅರಿತು ಬಾಳುವುದೇ ನಿಜವಾದ ಪಾದಯಾತ್ರೆ: ಶ್ರೀ ರಂಭಾಪುರಿ ಜಗದ್ಗುರುಗಳು

ಸಾಣೇಹಳ್ಳಿಯಲ್ಲಿ ನವೆಂಬರ್ 1ರಿಂದ 6ರವರೆಗೆ ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮ; ಬಸವಾದಿ ಶರಣರ ತತ್ವಗಳ ಪ್ರಸಾರಕ್ಕೆ ರಂಗಭೂಮಿಯ ವೇದಿಕೆ; ಕಾಯಕ, ಸಮಾನತೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜಾಗೃತಿಗೆ ಆದ್ಯತೆ

Leave a Comment