ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಎಸ್‌ಐಆರ್ ವಿಚಾರದಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಕಾಂಗ್ರೆಸ್; ರಾಹುಲ್ ಗಾಂಧಿ ಅವರದ್ದು ‘ನೋ ಡೇಟಾ, ಓನ್ಲಿ ಗಲಾಟೆ’: ಡಾ. ಸಂಬಿತ್ ಪಾತ್ರಾ ವ್ಯಂಗ್ಯ

On: November 5, 2026 5:42 PM
Follow Us:

ಬೆಂಗಳೂರು, ನ.05: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ದೇಶದ ಆಗುಹೋಗುಗಳ ಬಗ್ಗೆ ಅಗತ್ಯವಾದ ಅಂಕಿಅಂಶಗಳು ಮತ್ತು ಸಮರ್ಪಕ ಮಾಹಿತಿಯಿಲ್ಲ. ಆದರೆ ಯಾವುದೇ ವಿಷಯವನ್ನು ಮುಂದಿಟ್ಟುಕೊಂಡು ಗದ್ದಲ ಸೃಷ್ಟಿಸುವುದರಲ್ಲಿ ಮಾತ್ರ ಅವರು ಮುಂದಿದ್ದಾರೆ. ಅವರದ್ದು ‘ನೋ ಡೇಟಾ, ಓನ್ಲಿ ಗಲಾಟೆ’ (No Data, Only Galata) ರಾಜಕಾರಣ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಡಾ. ಸಂಬಿತ್ ಪಾತ್ರಾ ವ್ಯಂಗ್ಯವಾಡಿದರು.

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವಿಚಾರದಲ್ಲಿ ಕಾಂಗ್ರೆಸ್ ದೇಶಾದ್ಯಂತ ಜನರಲ್ಲಿ ಅನಗತ್ಯ ಗೊಂದಲ ಮೂಡಿಸುತ್ತಿದೆ. ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ವಿರುದ್ಧವಾಗಿ ಬಿಜೆಪಿ ಚುನಾವಣಾ ಆಯೋಗದ ಕಾರ್ಯವಿಧಾನ, ಮತದಾರರ ಪಟ್ಟಿ ಪರಿಷ್ಕರಣೆಯ ಉದ್ದೇಶ ಮತ್ತು ಪ್ರಜಾಪ್ರಭುತ್ವದ ಮಹತ್ವದ ಕುರಿತು ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಕುರಿತು ಬಿಜೆಪಿ ಯುವಜನತೆ, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ನಿರಂತರ ಸಂವಾದ ನಡೆಸುತ್ತಿದೆ. ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆಗೆ ಚುನಾವಣಾ ವ್ಯವಸ್ಥೆಯ ಬಗ್ಗೆ ಜನರಲ್ಲಿ ಸರಿಯಾದ ತಿಳಿವಳಿಕೆ ಇರಬೇಕು. ದೇಶದ ಸಾಂವಿಧಾನಿಕ ಸಂಸ್ಥೆಗಳು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಜನರು ಅರಿತುಕೊಳ್ಳಬೇಕು. ಈ ಉದ್ದೇಶದಿಂದ ಬಿಜೆಪಿ ಮಾಹಿತಿ ಹಂಚಿಕೊಳ್ಳುತ್ತಿದೆ. ಆದರೆ ಕಾಂಗ್ರೆಸ್ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಗಂಭೀರ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಬದಲು ಗದ್ದಲಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸಂಸತ್ತಿನ ಕಲಾಪದ ವೇಳೆ ಐದಾರು ನಿಮಿಷವೂ ಒಂದೆಡೆ ಕುಳಿತುಕೊಳ್ಳದೆ ಹೊರಗೆ ಹೋಗುವುದು, ಮತ್ತೆ ಒಳಗೆ ಬರುವುದು ಅವರ ವರ್ತನೆಯಾಗಿದೆ. ಬೇಕಾದರೆ ಸಂಸತ್ತಿನ ದಾಖಲೆಗಳನ್ನು ಪರಿಶೀಲಿಸಬಹುದು. ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಯಾವುದೇ ವಿಚಾರದ ಬಗ್ಗೆ ಸಮರ್ಪಕ ಮಾಹಿತಿ ಮತ್ತು ಅಂಕಿಅಂಶಗಳೊಂದಿಗೆ ಚರ್ಚೆಗೆ ಬರುವುದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಬೇಕೆಂದು ಬಯಸುತ್ತಾರೆ ಎಂದು ಟೀಕಿಸಿದರು.

ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಿಳಿವಳಿಕೆ ಹೊಂದಿರುವುದು ಮತ್ತು ದಾಖಲೆಗಳ ಆಧಾರದ ಮೇಲೆ ಮಾತನಾಡುವುದು ಜವಾಬ್ದಾರಿಯುತ ರಾಜಕಾರಣಿಯ ಕರ್ತವ್ಯ. ಆದರೆ ರಾಹುಲ್ ಗಾಂಧಿ ಅವರು ವಿಷಯಾಧಾರಿತ ಚರ್ಚೆಗಿಂತ ಬೀದಿಗಳಲ್ಲಿ ಪ್ರತಿಭಟನೆ, ಗದ್ದಲ ಮತ್ತು ಆರೋಪಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ ಎಂದು ದೂರಿದರು.

ರಾಹುಲ್ ಗಾಂಧಿ ಅವರು ಮೊದಲು ತಮ್ಮ ಇಂಡಿ ಒಕ್ಕೂಟದ ನಾಯಕರೊಂದಿಗೆ ಕುಳಿತು ಚರ್ಚೆ ನಡೆಸಲಿ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಸ್ನೇಹಿತ ಎಂದು ಹೇಳುವ ರಾಹುಲ್ ಗಾಂಧಿ, ಮತ್ತೊಂದೆಡೆ ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಕೇಳಬೇಕಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರ್ಕಾರದ ಬಗ್ಗೆಯೂ ರಾಹುಲ್ ಗಾಂಧಿ ಹಿಂದೆ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿ ಅವರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನೂ ಗಮನಿಸಬೇಕು. ಅವರ ಹೇಳಿಕೆಗಳ ನಂತರ ರಾಜಕೀಯ ಬೆಳವಣಿಗೆಗಳು ಯಾವ ದಿಕ್ಕಿನಲ್ಲಿ ಸಾಗಿವೆ ಎಂಬುದನ್ನು ಜನರೇ ನೋಡಿದ್ದಾರೆ. ಈಗ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರು ರಾಹುಲ್ ಗಾಂಧಿ ಅವರೊಂದಿಗೆ ಇದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು. ತಮ್ಮ ಒಕ್ಕೂಟದೊಳಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಾಗದವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಎಸ್‌ಐಆರ್ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಚಿವ ಸತೀಶ್ ಜಾರಕಿಹೊಳಿ ಅವರೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಯಾವುದೇ ಆಕ್ಷೇಪಣೆ ಇಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿ ಮೃತಪಟ್ಟಿದ್ದರೆ ಅಂತಹವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದು ಸಹಜ ಪ್ರಕ್ರಿಯೆ ಎಂದು ಹೇಳಿದ್ದಾರೆ.

ಇತರ ರಾಜ್ಯಗಳಲ್ಲಿ ಎಸ್‌ಐಆರ್ ಕುರಿತು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದ್ದರೂ ಕರ್ನಾಟಕದಲ್ಲಿ ಆಕ್ಷೇಪಣೆ ಇಲ್ಲ ಎಂಬುದಾಗಿ ಸಚಿವರೇ ಹೇಳಿರುವಾಗ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಬಂದು ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚೆ ನಡೆಸಬೇಕು. ತಮ್ಮದೇ ಪಕ್ಷದ ಸಚಿವರ ಅಭಿಪ್ರಾಯವನ್ನು ಮೊದಲು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.

ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮದೇ ಪಕ್ಷದ ಹಿರಿಯ ನಾಯಕ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಡೆಗಣಿಸಿದ ರೀತಿ ಅವರ ದುರಹಂಕಾರಕ್ಕೆ ಸಾಕ್ಷಿಯಾಗಿದೆ ಎಂದು ಸಂಬಿತ್ ಪಾತ್ರಾ ಆರೋಪಿಸಿದರು.

ಡಿ.ಕೆ. ಶಿವಕುಮಾರ್ ಅವರನ್ನು ದೂರ ತಳ್ಳಿದ ಘಟನೆ ನಡೆದಿದ್ದು, ಇದರಿಂದ ಅವರು ನೋವು ಅನುಭವಿಸಿದ್ದಾರೆ. ಈ ಘಟನೆಯ ಕುರಿತು ಶಿವಕುಮಾರ್ ಅವರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಬೇಕಿತ್ತು. ನಾನು ಕಾಂಗ್ರೆಸ್ ಪಕ್ಷದವನಲ್ಲ. ಹೀಗಾಗಿ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಮಾತನಾಡುವ ಅಗತ್ಯವಿಲ್ಲ. ಆದರೆ ಗಾಂಧಿ ಕುಟುಂಬದ ರಾಜಕೀಯ ದುರಹಂಕಾರ ಹೇಗಿದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ ಎಂದು ಟೀಕಿಸಿದರು.

ಮತಗಳ್ಳತನದ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗಿದ್ದರೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹೀಗಿರುವಾಗ ಚುನಾವಣಾ ವ್ಯವಸ್ಥೆಯ ಬಗ್ಗೆ ನಿರಂತರವಾಗಿ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶಿಲ್ಪಾ ಬಡಮ್ಮನವರ್ ಎಂಬುವವರ ಹೆಸರಿನಲ್ಲಿ ನಕಲಿ ಮತದಾನ ನಡೆದಿರುವ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪತ್ನಿಯ ಹೆಸರಿನಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯೊಬ್ಬರು ನಕಲಿ ಮತದಾನ ಮಾಡಿದ್ದಾರೆ ಎಂಬ ಆರೋಪವೂ ವಿವಾದಕ್ಕೆ ಕಾರಣವಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಕಾಂಗ್ರೆಸ್ ಉತ್ತರ ನೀಡಬೇಕು.

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಸ್ ಪ್ರಯಾಣ ದರ ಮತ್ತು ಹಾಲಿನ ದರ ಹೆಚ್ಚಳದಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿ ಚರ್ಚೆಗೆ ಬರಬೇಕು. ಕೇವಲ ಮತಗಳ್ಳತನದ ಆರೋಪಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಮತಗಳ್ಳತನದ ಬಗ್ಗೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಪ್ರತಿಭಟನೆಗಳಲ್ಲಿ ಭಾಗವಹಿಸಿ ಸಂಭ್ರಮಿಸುವ ಬದಲು, ತಮ್ಮ ಬಳಿ ಇರುವ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಮತಗಳ್ಳತನ ನಡೆದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕು. ಬೂತ್ ಮಟ್ಟದ ಏಜೆಂಟರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಸವಾಲು ಹಾಕಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎಎಸ್‌ಡಿಡಿ (ASDD) ವರ್ಗದಡಿ ಬರುವ ಮತದಾರರ ಹೆಸರುಗಳನ್ನು ಪರಿಶೀಲಿಸಿ, ನಿಯಮಾನುಸಾರ ಅನರ್ಹ ಹೆಸರುಗಳನ್ನು ತೆಗೆದುಹಾಕುವ ಕ್ರಮ ಕೈಗೊಳ್ಳಲಾಗಿದೆ. ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ಪತ್ತೆಯಾಗದ ಮತದಾರರ ವಿವರಗಳನ್ನು ಪರಿಶೀಲಿಸುವುದು ಮತದಾರರ ಪಟ್ಟಿ ಪರಿಷ್ಕರಣೆಯ ಭಾಗವಾಗಿದೆ. ಆದರೆ ಇಂತಹ ಪ್ರಕ್ರಿಯೆಗಳನ್ನೇ ಕಾಂಗ್ರೆಸ್ ಮತಗಳ್ಳತನ ಎಂದು ಬಿಂಬಿಸುತ್ತಿದೆ.

ಮೃತಪಟ್ಟವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳುವ ಮೂಲಕ ಬೋಗಸ್ ಮತದಾನಕ್ಕೆ ಅವಕಾಶ ಮಾಡಿಕೊಡಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.

ಎಸ್‌ಐಆರ್ ಪ್ರಕ್ರಿಯೆಯ ನಂತರ ಅರ್ಹ ಮತದಾರರ ಹೆಸರು ಯಾವುದಾದರೂ ಕಾರಣದಿಂದ ಪಟ್ಟಿಯಿಂದ ಕೈಬಿಟ್ಟಿದ್ದರೆ, ಅಂತಹವರು ಮತ್ತೆ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಹೀಗಿದ್ದರೂ ಕಾಂಗ್ರೆಸ್ ಜನರಲ್ಲಿ ಭಯ ಮತ್ತು ಗೊಂದಲ ಮೂಡಿಸುತ್ತಿದೆ.

ಎಸ್‌ಐಆರ್ ಸಂದರ್ಭದಲ್ಲಿ ಮೂರು ಕೋಟಿ ಮತದಾರರಿಗೆ ನೋಟಿಸ್ ನೀಡಲಾಗಿದೆ. ಅವರಲ್ಲಿ ಅನೇಕರು ಸಮರ್ಪಕ ಉತ್ತರ ನೀಡಿಲ್ಲ. ಅಕ್ರಮವಾಗಿ ವಲಸೆ ಬಂದವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿರುವ ಬಗ್ಗೆಯೂ ಪರಿಶೀಲನೆ ನಡೆದಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಒದಗಿಸಲಾಗಿದೆ ಎಂಬ ಆರೋಪವನ್ನು ಮುಂದಿಟ್ಟ ಅವರು, ರೋಹಿಂಗ್ಯಾ ಸೇರಿದಂತೆ ಅಕ್ರಮ ವಲಸಿಗರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿರುವ ವಿಚಾರ ಗಂಭೀರವಾಗಿದೆ ಎಂದರು.

ಇಂತಹ ಅಕ್ರಮಗಳನ್ನು ತಡೆಯುವ ಉದ್ದೇಶದಿಂದಲೇ ಎಸ್‌ಐಆರ್ ನಡೆಯುತ್ತಿದೆ. ಇದರಿಂದ ಕಾಂಗ್ರೆಸ್‌ನ ಮತಬ್ಯಾಂಕ್‌ಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಜವಾದ ಭಾರತೀಯರ ಹಿತಾಸಕ್ತಿ ಮತ್ತು ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ. ಅಕ್ರಮ ವಲಸಿಗರನ್ನು ರಕ್ಷಿಸುವುದು ಸರ್ಕಾರದ ಉದ್ದೇಶವಲ್ಲ ಎಂದು ಹೇಳಿದರು.

ದೇವಸ್ಥಾನಗಳ ಒಳಗೆ ಅರ್ಚಕರು ಅತ್ಯಾಚಾರ ಎಸಗುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ನೇಹಾ ಬೋರಾ ಅವರು ಈಗ ರಾಹುಲ್ ಗಾಂಧಿ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ವಿವಿಧ ವೇದಿಕೆಗಳಲ್ಲಿ ಕಾಂಗ್ರೆಸ್ ಪರವಾಗಿ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆಗಳು ಮತ್ತು ನಿಲುವುಗಳ ಬಗ್ಗೆ ಕಾಂಗ್ರೆಸ್ ತನ್ನ ಸ್ಪಷ್ಟ ಅಭಿಪ್ರಾಯ ತಿಳಿಸಬೇಕು ಎಂದು ಆಗ್ರಹಿಸಿದರು.

ಭಾರತವು ಧಾರ್ಮಿಕ ಮೂಲಭೂತವಾದಿಗಳ ದೇಶವಲ್ಲ. ನಮ್ಮದು ಸಂವಿಧಾನಬದ್ಧ ಜಾತ್ಯತೀತ ರಾಷ್ಟ್ರ. ಧಾರ್ಮಿಕ ಮೂಲಭೂತವಾದ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳನ್ನು ಬಿಜೆಪಿ ವಿರೋಧಿಸುತ್ತದೆ. ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇಂತಹ ವಿಚಾರಗಳಲ್ಲಿ ಬಿಜೆಪಿ ಮೌನವಾಗಿರುವುದಿಲ್ಲ. ಆದರೆ ನಾವು ಸಾಂವಿಧಾನಿಕ ಮಾರ್ಗದಲ್ಲಿ, ಶಾಂತಿಯುತವಾಗಿ ಜನರ ಮುಂದೆ ನಮ್ಮ ನಿಲುವನ್ನು ಮಂಡಿಸುತ್ತೇವೆ ಎಂದರು.

ಕೇಂದ್ರ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಡಾ. ಸಂಬಿತ್ ಪಾತ್ರಾ ತಳ್ಳಿಹಾಕಿದರು.

ಚುನಾವಣಾ ಆಯೋಗವು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದೆ. ಅದರ ಕಾರ್ಯವೈಖರಿಯ ಬಗ್ಗೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೆ ಕಾನೂನುಬದ್ಧವಾಗಿ ಪ್ರಶ್ನಿಸಬಹುದು. ಆದರೆ ಯಾವುದೇ ಆಧಾರವಿಲ್ಲದೆ ಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಪ್ರಯತ್ನ ಮಾಡಬಾರದು.

ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಸಾರ್ವಜನಿಕವಾಗಿ ಗೊಂದಲ ಸೃಷ್ಟಿಸುವ ಬದಲು ಕಾನೂನು ಪ್ರಕ್ರಿಯೆಯನ್ನು ಗೌರವಿಸಬೇಕು. ಒಂದು ರಾಜಕೀಯ ಪಕ್ಷ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆಧಾರರಹಿತ ದಾಳಿ ನಡೆಸಿದರೆ, ಅದರ ವಿರುದ್ಧ ಸತ್ಯಾಂಶಗಳನ್ನು ಜನರ ಮುಂದಿಡುವುದು ಮತ್ತೊಂದು ರಾಜಕೀಯ ಪಕ್ಷದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ದೇಶದಲ್ಲಿ 13 ಕೋಟಿ ಮತಗಳ್ಳತನವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಬಿಜೆಪಿ ದಾಖಲೆ ಮತ್ತು ಮಾಹಿತಿಗಳೊಂದಿಗೆ ಉತ್ತರ ನೀಡುತ್ತಿದೆ. ಎಲ್ಲ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರುಗಳ ಗಮನಕ್ಕೆ ತಂದು, ಅವರ ಭಾಗವಹಿಸುವಿಕೆಯೊಂದಿಗೆ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತದೆ. ಹೀಗಿರುವಾಗ ಚುನಾವಣಾ ಆಯೋಗದ ಕಾರ್ಯವಿಧಾನದ ಬಗ್ಗೆ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ.

ಮತಗಳ್ಳತನದ ಕುರಿತು ಕಾಂಗ್ರೆಸ್ ಬಳಿ ನೈಜ ದಾಖಲೆಗಳಿದ್ದರೆ ಅವುಗಳನ್ನು ಚುನಾವಣಾ ಆಯೋಗಕ್ಕೆ ಅಥವಾ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆರೋಪಗಳಿಗೆ ದಾಖಲೆಗಳೇ ಆಧಾರವಾಗಬೇಕು. ಬೀದಿಯಲ್ಲಿ ಪ್ರತಿಭಟನೆ ನಡೆಸುವುದರಿಂದ ಸತ್ಯಾಸತ್ಯತೆ ನಿರ್ಧಾರವಾಗುವುದಿಲ್ಲ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ. ಸುನೀಲ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ರಾಜ್ಯದ ಅಭಿವೃದ್ಧಿಗೆ ಸಚಿವ ಸಂಪುಟದ ಮಹತ್ವದ ನಿರ್ಧಾರ: 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಸೇತುವೆ ಅಭಿವೃದ್ಧಿಗೆ ಅಸ್ತು

ಶಿವಮೊಗ್ಗ ತುಂಗಾ ಸೇತುವೆ, ಭದ್ರಾವತಿ ಸೇತುವೆ ಮರುನಿರ್ಮಾಣಕ್ಕೆ 82 ಕೋಟಿ ರೂ. ಅನುದಾನ: ಸಚಿವ ಸಂಪುಟ ಅಸ್ತು

ಪ್ರತಿ ರೈತನಿಗೆ ₹5,000 ಬರ ಪರಿಹಾರ: ಮೊದಲ ಕಂತಿನಲ್ಲಿ ₹2,500 ಬಿಡುಗಡೆಗೆ ಸಿಎಂ ಡಿ.ಕೆ. ಶಿವಕುಮಾರ್ ನಿರ್ಧಾರ

ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಐಕಿಯಾ ಸಂಸ್ಥೆಗೆ ಸಲಹೆ; ಕರ್ನಾಟಕದ ಸಣ್ಣ ಉದ್ಯಮಗಳಿಗೆ ಆದ್ಯತೆ ನೀಡಿ: ಸಿಎಂ ಡಿ.ಕೆ. ಶಿವಕುಮಾರ್

ಭಿಕ್ಷಾಪಾತ್ರೆ ಹಿಡಿದು ಬಿಜೆಪಿ ಪ್ರತಿಭಟನೆ; ಇದು ದುಷ್ಟರ ಲೂಟಿ ಸರ್ಕಾರ: ಆರ್. ಅಶೋಕ್

ಬೆಲೆ ಏರಿಕೆ, ಅರಾಜಕತೆ ಖಂಡಿಸಿ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ; 2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರಲಿದೆ: ಬಿ.ವೈ. ವಿಜಯೇಂದ್ರ

Leave a Comment