ಬೆಂಗಳೂರು: ಮತಕಳ್ಳತನದ ಬಗ್ಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡಿದ್ದ ಗಂಭೀರ ಆರೋಪಕ್ಕೆ ರಾಜಣ್ಣ ಅವರು ಸ್ವಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದು ಅವರಿಗೆ ಇದೀಗ ಮುಳುವಾಗಿದೆ.
ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾತ್ರವಲ್ಲ ಅವರನ್ನು ಪಕ್ಷದಿಂದಲೇ ಹೈಕಮಾಂಡ್ ಸೂಚನೆಯಂತೆ ಉಚ್ಚಾಟನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಸದನದಲ್ಲಿ ವಿಪಕ್ಷ ನಾಯಕರು, ರಾಜಣ್ಣ ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರು ಸದನದಲ್ಲಿ ಕೂರಬಾರದು ಎಂದು ಪಟ್ಟು ಹಿಡಿದ ಕೂಡಲೇ ರಾಜಣ್ಣ ಅವರು ಸದನದಿಂದಲೇ ಎದ್ದು ನಡೆದ ಪ್ರಸಂಗವೂ ನಡೆದಿದೆ.
ಅಧಿವೇಶನದಲ್ಲಿ ರಾಜಣ್ಣ ಕದನ: ಅಧಿವೇಶನದಲ್ಲಿ ರಾಜಣ್ಣ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಜೀನಾಮೆ ಕೊಟ್ಟ ರಾಜಣ್ಣ ಸಚಿವ ಸ್ಥಾನದಲ್ಲಿ ಕೂರಬಾರದು. ರಾಜಣ್ಣ ರಾಜೀನಾಮೆ ಕೊಟ್ಟು ಎರಡು ಗಂಟೆಯಾಗಿದೆ. ಆದರೂ ಸಚಿವ ಸ್ಥಾನದಲ್ಲಿ ಕೂರಬಾರದು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
ಕಾಂಗ್ರೆಸ್ನಲ್ಲಿಯೇ ಪ್ರಜಾಪ್ರಭುತ್ವ ಇಲ್ಲ. ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಎಲ್ಲಿಗೆ ಹೋದರೂ ಅಂಬೇಡ್ಕರ್ ಅವರ ಸಂವಿಧಾನ ಪುಸ್ತಕವನ್ನು ಹಿಡಿದುಕೊಂಡು ಹೋಗ್ತಾರೆ. ಆದರೆ, ಕಾಂಗ್ರೆಸ್ನಲ್ಲಿಯೇ ಪ್ರಜಾಪ್ರಭುತ್ವ ಇಲ್ಲ ಎಂದು ಆರ್ ಅಶೋಕ್ ಕಿಡಿಕಾರಿದರು.
ಮಾತು ಎತ್ತಿದ್ರೆ ಸಂವಿಧಾನದ ಬಗ್ಗೆ ರಾಹುಲ್ ಗಾಂಧಿ ಮಾತನ್ನಾಡ್ತಾರೆ. ಇನ್ಮುಂದೆ ರಾಹುಲ್ ಗಾಂಧಿ, ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ಹೋಗುವಂತಿಲ್ಲ. ರಾಜಣ್ಣ ಸತ್ಯ ಹೇಳಿದ್ದಾರೆ. ಹಾಗಿದ್ದರೆ ರಾಜಣ್ಣ ಏನು ಹೇಳಿದರು? ಅವತ್ತು ರಾಜ್ಯದಲ್ಲಿ ಇದ್ದಿದ್ದು ನಮ್ಮ ಸರ್ಕಾರ. ನಾವು ಸರಿ ಮಾಡಿದ್ದರೆ ಮತಗಳ್ಳತನ ಆಗುತ್ತಿರಲಿಲ್ಲ ಅಂತಾ ಸತ್ಯ ಹೇಳಿದ್ದಾರೆ. ಸತ್ಯ ಹೇಳಿದ್ದಕ್ಕೆ ಈ ರೀತಿಯ ಶಿಕ್ಷೆ ಆಗಿದೆ.
ರಾಹುಲ್ ಗಾಂಧಿ ಮೊನ್ನೆಯಷ್ಟೇ ಮತಗಳ್ಳತನದ ಆರೋಪ ಮಾಡಿದ್ದರು. ಅದಕ್ಕೆ ರಾಜಣ್ಣ ಸತ್ಯವನ್ನು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ನವರ ಹೊಟ್ಟೆಯೊಳಗೆ ಮೆಣಸಿನಕಾಯಿ ಇಟ್ಟಂಗೆ ಆಗಿದೆ. ಇದು ರಾಜಣ್ಣಗೆ ಆಗಿರುವ ಅವಮಾನ ಅಲ್ಲ. ಕಾಂಗ್ರೆಸ್ಗೆ ಆಗಿರುವ ಅವಮಾನ ಅಕ್ಟೋಬರ್ನಲ್ಲಿ ಕಾಂಗ್ರೆಸ್ನಲ್ಲಿ ಪ್ರಳಯ ಆಗ್ತಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಸಿಎಂ ಎಲ್ಲಾ ಹೇಳ್ತಾರೆ ಎಂದ ರಾಜಣ್ಣ: ನಾನು ರಾಜೀನಾಮೆ ಕೊಟ್ಟಿದ್ದೀನೋ.. ಬಿಟ್ಟಿದ್ದೀನೋ.. ಅದನ್ನು ಸದನದಲ್ಲಿ ಸಿಎಂ ಅವರೇ ಹೇಳ್ತಾರೆ ಎಂದು ರಾಜಣ್ಣ ಹೇಳಿದ್ರು. ಅಲ್ಲದೇ ಅಶೋಕ್ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿ ನಾಯಕರು ನನ್ನನ್ನು ಪ್ರಶ್ನೆ ಮಾಡಬಾರದು ಎಂದಿದ್ದಾರೆ.