ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಈ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ಕಿಚ್ಚ ಸುದೀಪ್ ಅವರು, ಈ ವಿಚಾರದಲ್ಲಿ ಅಭಿಮಾನಿಗಳ ಪರ ನಿಲ್ಲುತ್ತೇನೆ. ಸ್ಮಾರಕವಿದ್ದ ಜಾಗವನ್ನು ಉಳಿಸಲು ಹಾಗೂ ಮರುಸ್ಥಾಪನೆ ಮಾಡುವುದಕ್ಕೆ ನಾನು ತಯಾರಿದ್ದೀನಿ ಎಂದು ಹೇಳಿದ್ದರು. ಇದೀಗ ಇದೀಗ ಕೆಂಗೇರಿ ಬಳಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸುದೀಪ್ ಭೂಮಿ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಷ್ಣುವರ್ಧನ್ ಅವರ ಅಭಿಮಾನಿಯೂ ಆದ ಕಿಚ್ಚ ಸುದೀಪ್, ವಿಷ್ಣುವರ್ಧನ್ ಸಮಾಧಿ ಧ್ವಂಸ ವಿಚಾರ ತಿಳಿದು ಭಾವುಕರಾಗಿದ್ದರು. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನು ಖರೀದಿ ಮಾಡಿರುವರೋ, ಅವರ ಮನ ಒಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ ಎಂದು ಹೇಳಿದ್ದರು. ಇದೀಗ ಸ್ಮಾರಕಕ್ಕಾಗಿ ಭೂಮಿ ಖರೀದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಟ ಕಿಚ್ಚ ಸುದೀಪ್ ಅವರು ಅಭಿಮಾನ್ ಸ್ಟುಡಿಯೋದಿಂದ ಸ್ವಲ್ಪ ದೂರದಲ್ಲಿ ಅರ್ಧ ಎಕರೆ ಜಾಗ ಖರೀದಿಸಿದ್ದಾರೆ. ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ವಿಷ್ಣು ಸಮಾಧಿ ತೆರವು ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ನಟ ಸುದೀಪ್ ಅವರು, ವಿಷ್ಣುವರ್ಧನ್ ಅಂತಹ ಒಬ್ಬ ಮೇರು ನಟರಿಗೆ, ಬೆಂಗಳೂರಿನಂತಹ ರಾಜಧಾನಿಯಲ್ಲಿ ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ, ಅವರ ಹೆಸರಿನಲ್ಲಿ, ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗ ಇಲ್ಲ ಅಂದರೆ ಇದು ಅತ್ಯಂತ ಖಂಡನೀಯ. ಅಭಿಮಾನ್ ಸ್ಟುಡಿಯೋದಲ್ಲಿನ ಜಾಗ ಖರೀದಿಸುವವರಿಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ವಿಷ್ಣುವರ್ಧನ್ ಸ್ಮಾರಕವನ್ನು ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ ಎಂದು ಹೇಳಿದ್ದರು.