ಮಂಗಳೂರು: ಧರ್ಮಸ್ಥಳದ ಕೇಸ್ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಈಗಾಗಲೇ ಪ್ರಗತಿಯಲ್ಲಿದೆ. ಆರೋಪಿಯೆಂದು ಗುರುತಿಸಲ್ಪಟ್ಟಿರುವ ಚೆನ್ನಯ್ಯನನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈ ಪ್ರಕರಣ ರಾಜಕೀಯ ಅಂಗಳದಲ್ಲಿಯೂ ಹೊಸ ತಿರುವು ಪಡೆಯುತ್ತಿದ್ದು, ಇಂದು ಜೆಡಿಎಸ್ ಪಾದಯಾತ್ರೆ ಕೈಗೊಳ್ಳುತ್ತಿದೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, “ಧರ್ಮಸ್ಥಳ ಕ್ಷೇತ್ರದ ವಿರುದ್ಧ ವಿದೇಶಿ ಫಂಡಿಂಗ್ ಮೂಲಕ ಷಡ್ಯಂತ್ರ ರೂಪಿಸಲಾಗಿದೆ ಎಂಬ ಅನುಮಾನವಿದೆ. ಇದರ ಸತ್ಯಾಸತ್ಯತೆ ಹೊರತರಲು ಎನ್‌ಐಎ ತನಿಖೆ ಅವಶ್ಯಕ. ರಾಜ್ಯದ ಜನರಿಗೆ ಎಸ್‌ಐಟಿ ತನಿಖೆಯ ಮೇಲೆ ನಂಬಿಕೆ ಇಲ್ಲ” ಎಂದು ಹೇಳಿದರು.

ಜೆಡಿಎಸ್ ಯಾತ್ರೆಯು ಹಾಸನವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿದ್ದು, ಅಲ್ಲಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ನಂತರ ಧರ್ಮಸ್ಥಳ ನೇತ್ರಾವತಿಯಲ್ಲಿ ಸ್ನಾನ ಮಾಡಿ, ಮಂಜುನಾಥಸ್ವಾಮಿ ದೇವಾಲಯದವರೆಗೆ ಪಾದಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಜೆಡಿಎಸ್ ಸಂಸದರು, ಶಾಸಕರು, ಮಾಜಿ ಜನಪ್ರತಿನಿಧಿಗಳು ಹಾಗೂ ಭಕ್ತರು ರಾಜ್ಯದ ನಾನಾ ಜಿಲ್ಲೆಗಳಿಂದ ಭಾಗವಹಿಸಲಿದ್ದಾರೆ.