ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿಂತು, ಹಿಂದೂ ಪರಂಪರೆಯ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಂವಿಧಾನ ಯಾರನ್ನಾದರೂ ತುಳಿಯಲು ಅಥವಾ ಯಾರನ್ನಾದರೂ ಓಲೈಸಲು ಅಲ್ಲ. ಎಲ್ಲರನ್ನೂ ಒಟ್ಟಾಗಿ ಒಳ್ಳೆಯ ದಾರಿಗೆ ತೆಗೆದುಕೊಂಡು ಹೋಗಬೇಕಾಗಿದೆ. ಆದರೆ ಈ ಸರ್ಕಾರ ಹಿಂದೂತ್ವ ವಿರೋಧಿ” ಎಂದು ಟೀಕಿಸಿದರು.
ಗಣೇಶೋತ್ಸವಕ್ಕೆ ಅಡ್ಡಿ ಆರೋಪ: ಗಣೇಶೋತ್ಸವಗಳಿಗೆ ಸರ್ಕಾರ ಮೌಖಿಕವಾಗಿ ನಿರ್ಬಂಧ ಹೇರಿದೆ ಎಂದು ಅವರು ದೂರಿದರು. “ಹಿಂದೆಂದೂ ಗಣೇಶೋತ್ಸವಗಳಲ್ಲಿ ಗಲಾಟೆಗಳು ನಡೆದಿಲ್ಲ. ಆದರೆ ಈಗ ಸರ್ಕಾರ ಮತಬ್ಯಾಂಕಿಗಾಗಿ ಅಲ್ಪಸಂಖ್ಯಾತರ ಪರವಾಗಿ ನಿಂತು, ಹಬ್ಬಗಳಿಗೆ ತಡೆಯುಂಟುಮಾಡುತ್ತಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಸಿಕ್ಕಿಕೊಂಡಿರುವವರ ಮೇಲೆ ಕೇಸುಗಳನ್ನು ವಾಪಸ್ ಪಡೆಯುವ ಮೂಲಕ ಶಾಂತಿದೂತರನ್ನಾಗಿ ಮಾಡುವ ಕೆಲಸ ಮುಖ್ಯಮಂತ್ರಿಗಳು ಮಾಡಿದ್ದಾರೆ” ಎಂದು ನಾರಾಯಣಸ್ವಾಮಿ ಆರೋಪಿಸಿದರು.
ಹಾಸನ ದುರಂತ – ಪರಿಹಾರ ಒತ್ತಾಯ: ಹಾಸನ ಜಿಲ್ಲೆಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಟ್ರಕ್ ದುರಂತದಲ್ಲಿ 8-9 ಜನರು ಸಾವಿಗೀಡಾದ ಘಟನೆಗೆ ಸಂತಾಪ ಸೂಚಿಸಿದ ಅವರು, “ಪ್ರಧಾನಿ ಈಗಾಗಲೇ ನೆರವು ಘೋಷಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ: ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಸುಧಾರಣೆಗೆ ಕೋಟಿ ಕೋಟಿ ಖರ್ಚು ಮಾಡುತ್ತಿದೆಯಾದರೂ, ದಲಿತರ ಬದುಕಿನತ್ತ ಕಾಳಜಿ ತೋರಿಲ್ಲ ಎಂದು ಆರೋಪಿಸಿದರು. “ಅಲ್ಪಸಂಖ್ಯಾತರಿಗೆ ಬಹುಮಾನ – ದಲಿತರಿಗೆ ಅವಮಾನ, ಇದು ಕಾಂಗ್ರೆಸ್‌ನ ಇಬ್ಬಗೆಯ ನೀತಿ. ದಲಿತ ಸಮುದಾಯಗಳ ಹಕ್ಕುಗಳನ್ನು ಕಡೆಗಣಿಸುವ ಮೂಲಕ, ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನಕ್ಕೆ ದ್ರೋಹ ಮಾಡುತ್ತಿದ್ದಾರೆ” ಎಂದು ಹೇಳಿದರು.
ಜನರ ತೀರ್ಪು – ಕಾಂಗ್ರೆಸ್‌ಗೆ ತಿರಸ್ಕಾರ: “ಈ ಸರ್ಕಾರ ಜನರಲ್ಲಿ ವಿಷಬೀಜ ಬಿತ್ತುತ್ತಿದೆ. ಸಮಾಜ ಸುಧಾರಣೆಯ ಭಾವನೆ ಇಲ್ಲ. ಜನತೆ ಈಗಾಗಲೇ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಅಳಿಸಿ ಹಾಕುವರು” ಎಂದು ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.