ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗ ದಸರಾ ಮಹೋತ್ಸವ–2025: ಸೆಪ್ಟೆಂಬರ್ 22ರಿಂದ ಆರಂಭ – ಭಕ್ತಿ, ಕಲೆ, ಸಂಸ್ಕೃತಿ, ಮನರಂಜನೆ ಸಮನ್ವಯದ ಉತ್ಸವ

On: October 2, 2025 1:48 PM
Follow Us:

ಶಿವಮೊಗ್ಗ, ಸೆಪ್ಟೆಂಬರ್ 20: ಮಲೆನಾಡಿನ ಸಂಸ್ಕೃತಿಯ ಅದ್ಧೂರಿ ಹಬ್ಬವಾದ ಶಿವಮೊಗ್ಗ ದಸರಾ ಮಹೋತ್ಸವ–2025 ಈ ಬಾರಿ ಭಕ್ತಿ, ಕಲೆ, ಸಂಸ್ಕೃತಿ ಮತ್ತು ಮನರಂಜನೆಯ ವೈಭವದಿಂದ ಜರುಗಲಿದೆ ಎಂದು ನಗರದ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ತಿಳಿಸಿದರು.

ದಸರಾ ಕಾರ್ಯಕ್ರಮಗಳು ಸೆಪ್ಟೆಂಬರ್ 22ರಂದು ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪನೆಯಿಂದ ಆರಂಭವಾಗಲಿವೆ. ಉದ್ಘಾಟನೆಯನ್ನು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ನೆರವೇರಿಸಲಿದ್ದಾರೆ.

ಬೆಳ್ಳಿ ಮಂಟಪದಲ್ಲಿ ದೇವಿಯ ಬೆಳ್ಳಿ ವಿಗ್ರಹವನ್ನು ಹೊತ್ತ “ಸಾಗರ” ಹೆಸರಿನ ಆನೆ ಅಂಬಾರಿ ಮೆರವಣಿಗೆಯಲ್ಲಿ ಸಾಗುವುದು ಈ ಬಾರಿಯ ವಿಶೇಷ ಆಕರ್ಷಣೆ ಎಂದು ಹೇಳಿದರುʼ

ಅದೇ ದಿನ ಮಕ್ಕಳ ದಸರಾ ಉದ್ಘಾಟನೆಯನ್ನು ರಾಷ್ಟ್ರೀಯ ಸ್ಕೇಟಿಂಗ್ ವಿಜೇತರು ಕು. ಅದ್ವಿಕಾ ನಾಯರ್ ಮತ್ತು ಕು. ಹಿತ ಪ್ರವೀಣ್ ನೆರವೇರಿಸಲಿದ್ದು, ಸರಿಗಮಪ ಖ್ಯಾತಿಯ ಕು. ದಿಯಾ ಹೆಗಡೆ ಭಾಗವಹಿಸಲಿದ್ದಾರೆ.ಯುವ ದಸರಾ ಉದ್ಘಾಟನೆಯನ್ನು ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ನೆರವೇರಿಸಲಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಚಲನಚಿತ್ರ ದಸರಾ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದೆ. ಜನಪ್ರಿಯ ನಟ  ಚರಣ್ ಮತ್ತು ಪ್ರತಿಭಾವಂತ ನಟಿ ಕು. ಕಾರುಣ್ಯ ರಾಮ್ ತಮ್ಮ ಹಾಜರಾತಿಯಿಂದ ಅಭಿಮಾನಿಗಳನ್ನು ಆಕರ್ಷಿಸಲಿದ್ದಾರೆ.

ಶಿವಪ್ಪ ನಾಯಕ ಅರಮನೆ ನಗೆಹಬ್ಬದ ನಾದಗಳಿಂದ ಕಂಗೊಳಿಸಲಿದ್ದು, ಜನಪ್ರಿಯ ನಗೆ ಭಾಷಣಕಾರರಾದ ಮುಖ್ಯಮಂತ್ರಿ ಚಂದ್ರು, ವೈ.ಎನ್. ಗುಂಡುರಾವ್, ಎಂ.ಎಸ್. ನರಸಿಂಹಮೂರ್ತಿ ಹಾಗೂ ಉಮೇಶ್ ಗೌಡ ತಮ್ಮ ಹಾಸ್ಯ ನುಡಿಗಳಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಅಲ್ಲಮ ಪ್ರಭು ಮೈದಾನ, ಫ್ರೀಡಂ ಪಾರ್ಕ್ನಲ್ಲಿ ಸಂಗೀತ ಪ್ರಿಯರಿಗಾಗಿ ಅದ್ಧೂರಿ ಮ್ಯೂಸಿಕಲ್ ನೈಟ್. ಖ್ಯಾತ ನಟ ಶಿವರಾಜ್ ಕುಮಾರ್ ಮುಖ್ಯ ಆಕರ್ಷಣೆಯಾಗಿದ್ದು, ಗಾಯಕರು ಹೇಮಂತ್ ಕುಮಾರ್, ಅನುರಾಧ ಭಟ್, ಸರಿಗಮಪ ತಂಡ ಹಾಗೂ “ಗಿಚ್ಚಿ ಗಿಲಿಗಿಲಿ” ತಂಡ ಮನಮೋಹಕ ಪ್ರದರ್ಶನ ನೀಡಲಿದ್ದಾರೆ.

ಜನಸಾಮಾನ್ಯರಿಗಾಗಿ ವಿಶೇಷ ಆಹಾರ ತಿನ್ನುವ ಸ್ಪರ್ಧೆ ಹಾಗೂ ಮೆಸ್ಕಾಂ ಸಿಬ್ಬಂದಿಗಳಿಗೆ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ಭಾಗವಹಿಸುವವರ ಉತ್ಸಾಹ ಈ ದಿನದ ವಿಶೇಷ ಆಕರ್ಷಣೆ ಆಗಲಿದೆ.

ಸಂಗೀತ ಪ್ರಿಯರಿಗೆ ಮೆಚ್ಚಿನ ದಿನ! ಅಲ್ಲಮ ಪ್ರಭು ಮೈದಾನದಲ್ಲಿ ನಾದ ವೈಭವ ಸಂಗೀತ ಕಾರ್ಯಕ್ರಮ ಜರುಗಲಿದ್ದು, ಖ್ಯಾತ ನಟಿ ಶ್ರೀಮತಿ ಗೀತಾ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಶಿವಪ್ಪ ನಾಯಕ ಅರಮನೆಯಲ್ಲಿ ಮಧ್ಯಾಹ್ನ 2.30ಕ್ಕೆ ನಂದಿ ಧ್ವಜ ಪೂಜೆ ನೆರವೇರಲಿದೆ. ಸಾಗರ ಆನೆ ಹೊತ್ತ ಅಂಬಾರಿ ಮೆರವಣಿಗೆ ದಸರಾ ಸಂಭ್ರಮವನ್ನು ಉಜ್ವಲಗೊಳಿಸಲಿದೆ. ನಂತರ ಅಲ್ಲಮ ಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮವನ್ನು ತಹಶೀಲ್ದಾರ್ ವಿ.ಎಸ್. ರಾಜೀವ್ ನೆರವೇರಿಸಲಿದ್ದಾರೆ. ಇದರಿಂದ ಶಿವಮೊಗ್ಗ ದಸರಾ ಸಾಂಸ್ಕೃತಿಕ ಮಹೋತ್ಸವವು ತನ್ನ ಅದ್ಧೂರಿ ಅಂತ್ಯಕ್ಕೆ ತಲುಪಲಿದೆ.

ಕಾರ್ಯಕ್ರಮಗಳಿಗೆ ಸಚಿವರಾದ ಮಧು ಬಂಗಾರಪ್ಪ, ಬೈರತಿ ಸುರೇಶ್, ರಹೀಂ ಖಾನ್, ಶಿವರಾಜ್ ತಂಗಡಗಿ, ಸಂಸದ ಬಿವೈ ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ,  ಮಾಜಿ ಶಾಸಕರು ಹಾಗೂ ನಿಗಮ ಮಂಡಳಿಯ ಗಣ್ಯರು ಹಾಜರಾಗಲಿದ್ದಾರೆ.

ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಗಳು ನಡೆದಿಲ್ಲದ ಕಾರಣ, ಜನಪ್ರತಿನಿಧಿಗಳಿಲ್ಲದೇ ದಸರಾ ಆಯೋಜನೆ ನಡೆಯುತ್ತಿದೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದ್ದಾರೆ.

“ಮಕ್ಕಳ ದಸರಾ, ಯುವ ದಸರಾ, ಪರಿಸರ ದಸರಾ, ರೈತ ದಸರಾ, ಪೌರ ಕಾರ್ಮಿಕ ದಸರಾ, ಯೋಗ ದಸರಾ, ಪತ್ರಕರ್ತರ ದಸರಾ, ಆಹಾರ ಮೇಳ ಎಲ್ಲವೂ ಯಶಸ್ವಿಯಾಗಿ ನೆರವೇರಲು ಸಾರ್ವಜನಿಕರು ಕೈ ಜೋಡಿಸಬೇಕು” ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಕೆ. ಮಾಯಣ್ಣಗೌಡ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment