ಶಿವಮೊಗ್ಗ: ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ (ಮಾಮ್ಕೋಸ್) ತನ್ನ ವ್ಯಾಪ್ತಿಯನ್ನು ರಾಜ್ಯದೆಲ್ಲೆಡೆ ವಿಸ್ತರಿಸಲು ನಿರ್ಧರಿಸಿದೆ. ಶಿವಮೊಗ್ಗ ಮೂಲದ ಈ ಸಂಘವು ಮಲೆನಾಡಿನ ಕೆಲ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದರೂ, ಇದೀಗ ಅಡಕೆಯ ಜೊತೆಗೆ ಕಾಳುಮೆಣಸು, ತೆಂಗು ಹಾಗೂ ಕಾಫಿ ಖರೀದಿ ವ್ಯವಹಾರಕ್ಕೂ ಮುಂದಾಗಿದೆ.
ನಗರ ಹೊರ ವಲಯದಲ್ಲಿರುವ ಪೆಸಿಟ್ ಕಾಲೇಜು ಪ್ರೇರಣಾ ಸಭಾಂಗಣದಲ್ಲಿ ಶನಿವಾರ ನಡೆದ 85ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಸಭೆಯನ್ನು ಜಿಲ್ಲಾಧಿಕಾರಿ ಹಾಗೂ ಸಂಘದ ಅಧ್ಯಕ್ಷ ಗುರುದತ್ತ ಹೆಗಡೆ ಅವರು ಅಧ್ಯಕ್ಷತೆ ವಹಿಸಿದ್ದರು.
2024-25ನೇ ಸಾಲಿನಲ್ಲಿ ಸಂಘವು ₹5.52 ಕೋಟಿ ಲಾಭ ಗಳಿಸಿದೆ. ಕಳೆದ ಸಾಲಿನಿಗಿಂತ ₹27.26 ಲಕ್ಷ ಹೆಚ್ಚಾಗಿದೆ. ಆಡಿಟ್‌ನಲ್ಲಿ ‘ಎ’ ಶ್ರೇಣಿಯನ್ನು ಮುಂದುವರಿಸಿರುವ ಸಂಘವು, ಈ ವರ್ಷ ಇ-ಟೆಂಡರ್ ಮೂಲಕ ಹಾಗೂ ಇತರೆ ಸಹಕಾರ ಸಂಘಗಳ ಮೂಲಕ ಒಟ್ಟು 1.40 ಲಕ್ಷ ಕ್ವಿಂಟಾಲ್ (₹685 ಕೋಟಿ ಮೌಲ್ಯದ) ಅಡಕೆ ಖರೀದಿ ಮಾಡಿದ್ದು, ಅದರಲ್ಲಿ 1.21 ಲಕ್ಷ ಕ್ವಿಂಟಾಲ್ ಮಾರಾಟ ಮಾಡಿದೆ. ಇದೇ ಅವಧಿಯಲ್ಲಿ 210 ಕ್ವಿಂಟಾಲ್ ಕಾಳುಮೆಣಸು ಖರೀದಿ ಮಾಡಿ, 119 ಕ್ವಿಂಟಾಲ್ ಮಾರಾಟ ಮಾಡಲಾಗಿದೆ.

ಇದುವರೆಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ (ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕುಗಳು ಮಾತ್ರ) ಜಿಲ್ಲೆಗಳಿಗೆ ಸೀಮಿತವಾಗಿದ್ದ ಮಾಮ್ಕೋಸ್ ಇದೀಗ ದಾವಣಗೆರೆ ಸಂಪೂರ್ಣ ಜಿಲ್ಲೆ, ಚಿತ್ರದುರ್ಗ, ಹಾವೇರಿ, ಹಾಸನ, ತುಮಕೂರು, ಮಂಡ್ಯ, ಚಾಮರಾಜನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೂ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಿದೆ.
ಕೈಗೊಂಡ ಪ್ರಮುಖ ನಿರ್ಣಯಗಳು
- ಅಡಕೆ, ಕಾಳುಮೆಣಸಿನೊಂದಿಗೆ ತೆಂಗು ಮತ್ತು ಕಾಫಿ ಖರೀದಿ ವ್ಯವಹಾರ ಆರಂಭ
- ಸಾಮಾನ್ಯ ಸಭೆಯ ಒತ್ತಡ ತಡೆಯಲು ತಾಲೂಕುವಾರು ಷೇರುದಾರರ ಸಭೆ ನಡೆಸುವ ವ್ಯವಸ್ಥೆ
- ಕೃಷಿ ಉತ್ಪನ್ನಗಳೊಂದಿಗೆ ವಾಣಿಜ್ಯ ಮತ್ತು ಬ್ಯಾಂಕಿಂಗ್ ವಹಿವಾಟು
- ಮಾಮ್ಕೋಸ್ ಬ್ರ್ಯಾಂಡ್‌ನಡಿ ಕುಡಿಯುವ ನೀರು ಮಾರಾಟ
- ಅಡಕೆ ಮೌಲ್ಯವರ್ಧನೆಗಾಗಿ ಸುವಾಸಿತ, ಸಿಹಿ ಅಡಕೆ ಪುಡಿ ಮತ್ತು ಪಾನ್ ಮಸಾಲಾ ಉತ್ಪಾದನೆ
- ವಾಹನ ಶೋ ರೂಂ ಸ್ಥಾಪನೆ ಮತ್ತು ಸದಸ್ಯರಿಗೆ ವಾಹನ ಸಾಲ ಸೌಲಭ್ಯ
- ಸಿದ್ಧ ಉಡುಪುಗಳ ಮಾರಾಟ ಮಳಿಗೆ ಸ್ಥಾಪನೆ
- ಅಡಕೆ ಸಿಪ್ಪೆ ಬಳಸಿ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ
ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ನಿರ್ದೇಶಕರಾದ ವೈ.ಎಸ್. ಸುಬ್ರಹ್ಮಣ್ಯ, ಜಿ.ಇ. ವಿರೂಪಾಕ್ಷಪ್ಪ, ಟಿ.ಕೆ. ಪರಾಶರ, ಡಾ. ಆರ್. ದೇವಾನಂದ್, ಕೆ.ಕೆ. ಜಯಶ್ರೀ ಮತ್ತಿತರರು ಹಾಜರಿದ್ದರು.
ಮಲೆನಾಡಿಗೆ ಸೀಮಿತವಾಗಿದ್ದ ಮಾಮ್ಕೋಸ್ ಇದೀಗ ರಾಜ್ಯಮಟ್ಟಕ್ಕೆ ಹೆಜ್ಜೆ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಕೃಷಿ ಉತ್ಪನ್ನಗಳೊಂದಿಗೆ ವಾಣಿಜ್ಯ ಕ್ಷೇತ್ರದಲ್ಲಿಯೂ ತನ್ನ ಬಲವನ್ನು ತೋರಿಸಲಿದೆ.