ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟಿಸಲು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ನಿರ್ಧರಿಸಿದೆ. ಟ್ರಸ್ಟ್ ಕಾರ್ಯಕಾರಿಣಿ ಸಭೆಯಲ್ಲಿ 30 ಜನ ಸದಸ್ಯರ ಒಮ್ಮತದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಸ್ಟ್ ಕಾರ್ಯದರ್ಶಿ ನೀಲಕಂಠ ಅಸೂಟಿ ಅವರು, “ಸ್ವಾಮೀಜಿಗಳು ದಾವಣಗೆರೆ ಹಾಗೂ ಇತರ ಕಡೆ ಆಸ್ತಿ ಮಾಡಿದ್ದಾರೆ. ಲಿಂಗಾಯತ ತತ್ವ ಬಿಟ್ಟು ಹಿಂದುತ್ವ ಪರ ಹೊರಟಿದ್ದಾರೆ. ಟ್ರಸ್ಟ್ ಸದಸ್ಯರ ಮಾತು ಕೇಳುತ್ತಿಲ್ಲ. ಒಂದು ಪಕ್ಷದ ಪರವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರು ಸ್ವಾಮೀಜಿಗಳಾಗಿ ಉಳಿದಿಲ್ಲ ಎಂಬ ಅನೇಕ ಕಾರಣಗಳಿಂದ ಉಚ್ಚಾಟನೆ ಮಾಡಲಾಗಿದೆ” ಎಂದು ತಿಳಿಸಿದರು.
ಅವರು ಮುಂದುವರೆದು, “ಸ್ವಾಮೀಜಿಗೆ ಕಾರು ಸೇರಿ ಎಲ್ಲ ಸೌಲಭ್ಯಗಳನ್ನು ನಾವು ನೀಡಿದ್ದೇವೆ. ಆದರೆ ಬಸವತತ್ವಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ಬಸವತತ್ವದಲ್ಲಿ ‘ಹಿಂದೂ’ ಎನ್ನುವ ಕಲ್ಪನೆ ಇಲ್ಲ. ಬಸವಣ್ಣನವರು ಹಿಂದೂ ಧರ್ಮದ ವಿರುದ್ಧವೇ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ. ಹೀಗಾಗಿ ಸ್ವಾಮೀಜಿಯ ವರ್ತನೆ ಅಸ್ವೀಕಾರ್ಯ” ಎಂದು ಹೇಳಿದರು.
ಇನ್ನುಮುಂದೆ ಮಠಕ್ಕೂ, ಸ್ವಾಮೀಜಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಟ್ರಸ್ಟ್, ಮಲಪ್ರಭಾ ದಂಡೆ ಮೇಲೆ ಹೊಸ ಮಠ ಕಟ್ಟುವುದಾಗಿ ಹೇಳಿದ ಸಿಸಿ ಪಾಟೀಲರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, “ಅವರು ಕಟ್ಟಿಕೊಳ್ಳಲಿ, ಆದರೆ ನಮ್ಮ ಮಠಕ್ಕೆ ಬೇರೆ ಪೀಠಾಧಿಪತಿಯನ್ನು ನೇಮಿಸುತ್ತೇವೆ” ಎಂದು ಸ್ಪಷ್ಟಪಡಿಸಿದೆ.
ಕಾಶಪ್ಪನವರ್ ಬೆಂಬಲದ ಕೊರತೆಯಿಂದ ಉಚ್ಚಾಟನೆ ಆಯಿತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಸೂಟಿ, “ರಾಜಕೀಯದಲ್ಲಿ ಸೋಲು-ಗೆಲುವು ಸಹಜ. ಕಾಶಪ್ಪನವರ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಗೆದ್ದೇ ಗೆಲ್ಲುತ್ತಾರೆ” ಎಂದು ಅಭಿಪ್ರಾಯಪಟ್ಟರು.
ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ಶೀಘ್ರದಲ್ಲೇ ಹೊಸ ಪೀಠಾಧಿಪತಿ ನೇಮಕಗೊಳ್ಳಲಿದ್ದಾರೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.