ದೆಹಲಿ, ಸೆಪ್ಟೆಂಬರ್ 21: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ನೀಡಿದ ಭಾಷಣದಲ್ಲಿ, ಸೆಪ್ಟೆಂಬರ್ 22ರಿಂದ ಜಾರಿಯಾಗಲಿರುವ ಹೊಸ ಜಿಎಸ್ಟಿ ಪದ್ಧತಿಯನ್ನು “ಜನಸಾಮಾನ್ಯರ ಬಚಾತ್ ಉತ್ಸವ” ಎಂದು ಕರೆದರು. ಶೇಕಡಾ 99ರಷ್ಟು ದಿನಬಳಕೆಯ ವಸ್ತುಗಳ ಬೆಲೆ ಇಳಿಕೆಯಾಗಲಿದ್ದು, ಮಧ್ಯಮ ವರ್ಗ ಹಾಗೂ ವ್ಯಾಪಾರಿಗಳಿಗೆ ಇದು “ಡಬಲ್ ಧಮಾಕಾ” ಆಗಲಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಮಾತನಾಡುತ್ತಾ, “ಈ ಸುಧಾರಣೆ ಕೇವಲ ತೆರಿಗೆ ಬದಲಾವಣೆ ಮಾತ್ರವಲ್ಲ, ಪ್ರತಿಯೊಂದು ಕುಟುಂಬದ ಸಂತೋಷಕ್ಕಾಗಿ ಕೈಗೊಳ್ಳಲಾದ ಆರ್ಥಿಕ ಕ್ರಾಂತಿ. ಬಡವರಿಂದ ಹಿಡಿದು ಉದ್ಯಮಿಗಳವರೆಗೂ ಎಲ್ಲರ ಮೇಲಿನ ತೆರಿಗೆ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಜಾರಿಗೆ ಬರುತ್ತಿದೆ” ಎಂದು ಹೇಳಿದರು.
ಹೊಸ ಪದ್ಧತಿಯಲ್ಲಿ ತೆರಿಗೆ ಸ್ಲ್ಯಾಬ್‌ಗಳನ್ನು ಕೇವಲ 5% ಮತ್ತು 18% ಕ್ಕೆ ಸರಳೀಕರಿಸಲಾಗಿದೆ. ಹಿಂದೆ 12% ತೆರಿಗೆಯ ಅಡಿಯಲ್ಲಿ ಇದ್ದ ಶೇಕಡಾ 99ರಷ್ಟು ದಿನನಿತ್ಯ ಬಳಕೆಯ ವಸ್ತುಗಳು ಈಗ 5% ಕ್ಕೆ ಇಳಿಕೆಯಾಗುತ್ತವೆ. ಆಹಾರ ಪದಾರ್ಥ, ಔಷಧಿ, ಸಾಬೂನು ಮುಂತಾದ ಅಗತ್ಯ ವಸ್ತುಗಳು ಬಹುತೇಕ ತೆರಿಗೆ ಮುಕ್ತವಾಗಲಿದ್ದು, ಜನರ ಮಾಸಿಕ ಖರ್ಚಿನ ಮೇಲೆ ನೇರವಾಗಿ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಇದಲ್ಲದೆ, 12 ಲಕ್ಷ ರೂ.ವರೆಗಿನ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೊಂದಿರುವ ನವ-ಮಧ್ಯಮ ವರ್ಗಕ್ಕೆ ಈ ಹೊಸ ಜಿಎಸ್ಟಿ ಸುಧಾರಣೆ ಬಂಪರ್ ಲಾಭ ತರುತ್ತದೆ. ಜನರಿಗೆ ಒಟ್ಟು 2.5 ಲಕ್ಷ ಕೋಟಿ ರೂ. ಉಳಿತಾಯವಾಗಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿಯವರು ದೇಶದ ಜನತೆಗೆ ಸ್ವದೇಶಿ ಉತ್ಪನ್ನಗಳನ್ನು ಖರೀದಿಸಲು ಮನವಿ ಮಾಡಿದರು. “ಅಜಾಗರೂಕವಾಗಿ ನಾವು ದಿನನಿತ್ಯದಲ್ಲಿ ವಿದೇಶಿ ವಸ್ತುಗಳನ್ನು ಬಳಸುತ್ತಿದ್ದೇವೆ. ಆದರೆ ಈಗ ಭಾರತದಲ್ಲಿ ತಯಾರಾದ ಉತ್ಪನ್ನಗಳತ್ತ ಮುಖಮಾಡಿ, ಆತ್ಮನಿರ್ಭರ ಭಾರತಕ್ಕೆ ಬೆಂಬಲ ನೀಡಬೇಕು” ಎಂದು ಕರೆ ನೀಡಿದರು.
ಅವರು ಮುಂದುವರೆದು, ಕಳೆದ 11 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದು ನವ-ಮಧ್ಯಮ ವರ್ಗಕ್ಕೆ ಸೇರಿದ್ದಾರೆ ಎಂಬುದನ್ನು ಹಿಗ್ಗುಮುಖದಿಂದ ಪ್ರಸ್ತಾಪಿಸಿದರು. ಹೊಸ ಜಿಎಸ್ಟಿ ಪದ್ಧತಿ 2047ರ “ವಿಕಸಿತ ಭಾರತ” ಕನಸಿಗೆ ವೇಗ ನೀಡಲಿದೆ ಎಂದರು.
ಹೊಸ ಜಿಎಸ್ಟಿ ಸುಧಾರಣೆಯೊಂದಿಗೆ, ದಿನನಿತ್ಯದ ಶೇಕಡಾ 99ರಷ್ಟು ವಸ್ತುಗಳ ಬೆಲೆ ಇಳಿಯಲಿದ್ದು, ಮಧ್ಯಮ ವರ್ಗ, ಬಡವ ವರ್ಗ ಹಾಗೂ ವ್ಯಾಪಾರಿಗಳಿಗೆ ನೇರ ಲಾಭ ದೊರಕಲಿದೆ.