ಮೈಸೂರು, ಸೆಪ್ಟೆಂಬರ್ 22: ಪ್ರಸಿದ್ಧ ಸಾಹಿತಿ ಹಾಗೂ ಕವಯತ್ರಿ ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟಿಸಿ, ತಮ್ಮ ಹೃದಯಂಗಮವಾದ ಭಾವನೆಗಳನ್ನು ಹಂಚಿಕೊಂಡರು. “ನನ್ನ ಮತ್ತು ಹಿಂದು ಧರ್ಮದೊಂದಿಗಿನ ಬಾಂಧವ್ಯದ ಆತ್ಮಕಥೆ ಶೀಘ್ರದಲ್ಲೇ ಬರುತ್ತಿದೆ” ಎಂದು ಅವರು ಘೋಷಿಸಿದರು.
ಬಾನು ಮುಷ್ತಾಕ್ ಅವರು ಮೈಸೂರಿನ ಒಡೆಯರ್‌ಗಳ ಕಾಲವನ್ನು ಸ್ಮರಿಸಿಕೊಂಡು, “ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಂ ಜನರಲ್ಲಿ ನಂಬಿಕೆ ಇಟ್ಟು, ರಾಜ್ಯದ ರಕ್ಷಣೆಯ ಜವಾಬ್ದಾರಿ ಅವರಿಗೆ ನೀಡುತ್ತಿದ್ದರು” ಎಂದರು. ಸಂಸ್ಕೃತಿ ಹೃದಯಗಳನ್ನು ಸೇರುವ ಸೇತುವೆ, ಅದು ದ್ವೇಷವಲ್ಲ, ಪ್ರೀತಿಯನ್ನು ಹರಡಬೇಕು ಎಂಬ ಸಂದೇಶವನ್ನೂ ಅವರು ಒತ್ತಿ ಹೇಳಿದರು.
ಚಾಮುಂಡಿ ಶಕ್ತಿಯ ಪ್ರತೀಕ
ಚಾಮುಂಡೇಶ್ವರಿ ದೇವಿಯ ಶಕ್ತಿಯನ್ನು ಉಲ್ಲೇಖಿಸಿದ ಅವರು, “ಸ್ತ್ರೀತ್ವ ಎಂದರೆ ಕೇವಲ ಮೃದುತ್ವವಲ್ಲ, ಬದುಕಿನ ಹೋರಾಟದ ಸಂಕೇತವೂ ಆಗಿದೆ” ಎಂದು ಅಭಿಪ್ರಾಯಪಟ್ಟರು. ಒಡೆಯರ್ ಅರಸೊತ್ತಿಗೆಯ ಸಾಮಾಜಿಕ ಹಾಗೂ ಆರ್ಥಿಕ ಔದಾರ್ಯವನ್ನು ಮಾದರಿಯಾಗಿ ಕೊಂಡಾಡಿದರು.
ಸಾಂವಿಧಾನಿಕ ಮೌಲ್ಯಗಳ ಗೌರವ
“ನಾವು ಪರಸ್ಪರರ ನಂಬಿಕೆ ಮತ್ತು ಮೌಲ್ಯಗಳನ್ನು ಗೌರವಿಸೋಣ. ಏಕತೆ ಮತ್ತು ಸೌಹಾರ್ಧ ಈ ಭೂಮಿಯ ಸುಗಂಧವಾಗಲಿ. ಚಾಮುಂಡೇಶ್ವರಿ ದೇವಿಯ ಆಶೀರ್ವಾದಗಳು ದ್ವೇಷ ಮತ್ತು ಅಸಹಿಷ್ಣುತೆಯನ್ನು ಜಯಿಸಲು ಶಕ್ತಿ ನೀಡಲಿ” ಎಂದು ಅವರು ಕರೆ ನೀಡಿದರು.
ಬಾಗಿನ ಕವನ ವಾಚನ
ಮುಸ್ಲಿಂ ಮಹಿಳೆಯಾಗಿ ಬಾಗಿನ ಪಡೆದಾಗ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ಕವನದ ರೂಪದಲ್ಲಿ ವಾಚಿಸಿದ ಅವರು, ಈ ಸಂದರ್ಭಕ್ಕೆ ಆಹ್ವಾನಿಸಿದ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸಿದರು.
ಆತ್ಮಕಥೆ ಪ್ರಕಟಣೆಗೆ ಸಿದ್ಧತೆ
“ನಾನು ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ, ದೀಪ ಬೆಳಗಿಸಿದ್ದೇನೆ, ಮಂಗಳಾರತಿ ಸ್ವೀಕರಿಸಿದ್ದೇನೆ. ನಾಳೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ‘ಬುಕರ್ ಬಾನು ಬದುಕು ಬರಹ’ ಎಂಬ ಪುಸ್ತಕ ಬಿಡುಗಡೆಯಾಗಲಿದೆ. ಅದರಲ್ಲಿ ನನ್ನ ಮತ್ತು ಹಿಂದು ಧರ್ಮದೊಂದಿಗಿನ ಸಂಬಂಧ, ಬಾಂಧವ್ಯವನ್ನು ವಿವರಿಸಿದ್ದೇನೆ” ಎಂದು ಬಾನು ಮುಷ್ತಾಕ್ ತಿಳಿಸಿದರು.

ಉರ್ದು ಭಾಷಿಕರ ದಸರಾ ಸ್ವೀಕಾರ
ಮೈಸೂರಿನ ಉರ್ದು ಭಾಷಿಕರು ದಸರಾವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದು, ವಿಜಯದಶಮಿಯನ್ನು ‘ಸಿಲಿಂಗನ್’ ಎಂದು ಕರೆಯುತ್ತಾರೆ ಎಂಬುದನ್ನೂ ಅವರು ನೆನಪಿಸಿದರು.
ಈ ಮೂಲಕ, ಬಾನು ಮುಷ್ತಾಕ್ ದಸರಾವನ್ನು ಕೇವಲ ಹಬ್ಬವಲ್ಲ, ಶಾಂತಿ, ಸೌಹಾರ್ದ ಮತ್ತು ಮಾನವೀಯ ಮೌಲ್ಯಗಳ ಸಂಕೇತವೆಂದು ಘೋಷಿಸಿದರು.