ಮೈಸೂರು, ಸೆಪ್ಟೆಂಬರ್ 22: ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೃದಯಸ್ಪರ್ಶಿ ಹಾಗೂ ರಾಜಕೀಯ ತೀವ್ರತೆಯ ಸಂದೇಶ ನೀಡಿದರು. ಬೂಕರ್ ಪ್ರಶಸ್ತಿ ಪುರಸ್ಕೃತ ಕವಯತ್ರಿ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಕೆಲವರಿಂದ ಎದ್ದ ವಿರೋಧಕ್ಕೆ ಅವರು ತೀವ್ರವಾಗಿ ಪ್ರತಿಕ್ರಿಯಿಸಿದರು.
“ಬಾನು ಮುಷ್ತಾಕ್ ಹುಟ್ಟಿನಿಂದ ಮುಸ್ಲಿಂ ಆಗಿರಬಹುದು. ಆದರೆ ಅವರು ಮೊದಲಿಗೆ ಮನುಷ್ಯರು. ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕು. ಧರ್ಮದ ಆಧಾರದ ಮೇಲೆ ದ್ವೇಷಿಸುವುದು ಮನುಷ್ಯತ್ವವಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ರಾಜಕೀಯ ಚಾಟಿ – “ಹಬ್ಬದ ವಿಚಾರದಲ್ಲಿ ರಾಜಕಾರಣ ಬೇಡ”
ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು, “ರಾಜಕೀಯ ಮಾಡಬೇಕಾದರೆ ಚುನಾವಣೆಯಲ್ಲಿ ಮಾಡಿ, ನಾಡಹಬ್ಬದಲ್ಲಿ ಮಾಡಬೇಡಿ. ದಸರಾ ಒಂದು ಧರ್ಮದ ಹಬ್ಬವಲ್ಲ, ಇದು ನಾಡಹಬ್ಬ. ಎಲ್ಲ ಧರ್ಮ, ಜಾತಿ, ಸಮುದಾಯಗಳ ಹಬ್ಬ” ಎಂದು ಹೇಳಿದರು. ಇತಿಹಾಸ ತಿರುಚಿ, ಹಬ್ಬದ ವಿಚಾರದಲ್ಲಿ ಸ್ವಾರ್ಥ ರಾಜಕೀಯ ಮಾಡುವುದು ಅಕ್ಷಮ್ಯ ಅಪರಾಧ ಎಂದೂ ಎಚ್ಚರಿಸಿದರು.
ಸಂವಿಧಾನ – ಧರ್ಮಾತೀತ ಭಾರತದ ದಿಕ್ಕು
ಸಂವಿಧಾನದ ಮೌಲ್ಯಗಳನ್ನು ಉಲ್ಲೇಖಿಸಿದ ಸಿಎಂ, “ನಮ್ಮ ಸಂವಿಧಾನ ಜಾತ್ಯತೀತ ಮತ್ತು ಧರ್ಮಾತೀತ. ಇದನ್ನೇ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮರುಮರು ಎತ್ತಿಹಿಡಿದಿವೆ. ಸಂವಿಧಾನ ಗೊತ್ತಿದ್ದವರಿಗೆ ಮಾತ್ರ ಹಕ್ಕು-ಜವಾಬ್ದಾರಿಗಳ ಅರಿವು ಇರುತ್ತದೆ. ಸಹಿಷ್ಣತೆ ಮತ್ತು ಸಹಬಾಳ್ವೆ ಪಾಲಿಸುವವರು ಮಾತ್ರ ಅಪ್ಪಟ ಭಾರತೀಯರು” ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಸಂದೇಶವನ್ನು ಉಲ್ಲೇಖಿಸಿದ ಸಿಎಂ, “ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರ ಬನ್ನಿ, ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಕವಿಯ ಆಶಯವನ್ನು ನೆನಪಿಸಿದರು. “ರಾಜ್ಯವನ್ನು ಕುವೆಂಪು ಬಯಸಿದಂತೆ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಗಟ್ಟಿಗೊಳಿಸಬೇಕು” ಎಂದು ಹೇಳಿದರು.

ಗ್ಯಾರಂಟಿಗಳ ಸಾಧನೆ – ಬಿಜೆಪಿಗೆ ಪ್ರಶ್ನೆ
ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಹೈಲೈಟ್ ಮಾಡಿದ ಸಿಎಂ, “ಸಂವಿಧಾನದ ಆಶಯದಂತೆ ಎಲ್ಲಾ ಜಾತಿ, ಧರ್ಮದ ಬಡವರಿಗೆ ನಾವು ಗ್ಯಾರಂಟಿ ನೀಡಿದ್ದೇವೆ. ಬಿಜೆಪಿಯವರು ಗ್ಯಾರಂಟಿಗಳ ಫಲಾನುಭವಿಗಳಲ್ಲವೇ? ಒಂದು ಕಡೆ ವಿರೋಧಿಸುತ್ತಾರೆ, ಇನ್ನೊಂದು ಕಡೆ ನಮ್ಮ ಯೋಜನೆಗಳನ್ನು ಕದ್ದುಕೊಂಡು ಹೋಗುತ್ತಾರೆ” ಎಂದು ಪ್ರಶ್ನಿಸಿದರು.

ಅವರು ಮತ್ತಷ್ಟು ವಿವರಿಸುತ್ತಾ, “ನಮ್ಮ ಗ್ಯಾರಂಟಿಗಳಿಂದ ರಾಜ್ಯದ ತಲಾ ಆದಾಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. GDP ಯಲ್ಲೂ ಕರ್ನಾಟಕ ಈಗ ನಂಬರ್ ಒನ್ ಆಗಿದೆ” ಎಂದು ಹೆಮ್ಮೆಪಟ್ಟರು.