ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ (Cashless) ವೈದ್ಯಕೀಯ ಚಿಕಿತ್ಸೆ ಒದಗಿಸುವ ಆರೋಗ್ಯ ಸಂಜೀವಿನಿ ಯೋಜನೆ ಅಕ್ಟೋಬರ್ 1ರಿಂದ ಜಾರಿಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಧನ್ಯವಾದ ಸಲ್ಲಿಸಿದೆ.
ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಂತೆ, ರಾಜ್ಯದ 5.25 ಲಕ್ಷ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸೇರಿ ಸುಮಾರು 25 ಲಕ್ಷ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಯೋಜನೆಯ ಯಶಸ್ವಿ ಜಾರಿಗೆ ಸರ್ಕಾರವು ವಾರ್ಷಿಕ 500 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ.
ಯೋಜನೆಯ ಸೌಲಭ್ಯ ಪಡೆಯಲು ಸರ್ಕಾರಿ ನೌಕರರು ಪ್ರತಿ ತಿಂಗಳು ಸರ್ಕಾರ ನಿರ್ಧಿಷ್ಟಪಡಿಸಿರುವ ಮಾಸಿಕ ವಂತಿಗೆಯನ್ನು ಅಕ್ಟೋಬರ್‌ನಿಂದ ಪಾವತಿಸಬೇಕಾಗುತ್ತದೆ.
ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೆ, ಒಬ್ಬರಿಂದ ಮಾತ್ರ ವಂತಿಗೆಯನ್ನು ವಸೂಲಿಸಲಾಗುತ್ತದೆ.
ಮಾಸಿಕ ವಂತಿಗೆಯನ್ನು ನೀಡಲು ಇಚ್ಛಿಸದ ನೌಕರರು ಅಕ್ಟೋಬರ್ 18ರೊಳಗೆ ಸಂಬಂಧಿತ ಬಟವಾಡೆ ಅಧಿಕಾರಿಗಳಿಗೆ (DDO) ಲಿಖಿತ ಮಾಹಿತಿ ನೀಡಬೇಕು.
ನೌಕರರ ಪೋಷಕರು ಪಿಂಚಣಿದಾರರಾಗಿದ್ದಲ್ಲಿ, ಅವರ ಮಾಸಿಕ ಆದಾಯ ಮಿತಿ 17,000 ರೂ.ಗಳಿಂದ 27,000 ರೂ.ಗಳಿಗೆ ಹೆಚ್ಚಿಸಲಾಗಿದೆ.
ವಿವಾಹಿತ ಸರ್ಕಾರಿ ಮಹಿಳಾ ನೌಕರರ ತಂದೆ-ತಾಯಂದಿರೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಗೊಳ್ಳಲಿದ್ದಾರೆ.
ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ನಿರ್ವಹಿಸಲಿದೆ. ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳು ಹಾಗೂ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ಲಭ್ಯವಾಗಲಿದೆ.
ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು, “ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಗಳಿಗೆ ದೀರ್ಘಕಾಲದ ಬೇಡಿಕೆಯಾದ ಆರೋಗ್ಯ ಭದ್ರತೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಕೈಗೊಂಡಿರುವ ಈ ಮಹತ್ವದ ಹೆಜ್ಜೆಗೆ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು” ಎಂದಿದ್ದಾರೆ.
ಈ ಯೋಜನೆ ಜಾರಿಗೆ ಬರುವುದರಿಂದ, ಸರ್ಕಾರಿ ನೌಕರರ ಕುಟುಂಬಗಳು ಆರ್ಥಿಕ ಭಾರವಿಲ್ಲದೆ ಉತ್ತಮ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಸಂಘ ವ್ಯಕ್ತಪಡಿಸಿದೆ.