ಬೆಂಗಳೂರು: ನಗರದಷ್ಟೇ ಅಲ್ಲದೆ ರಾಜ್ಯದಾದ್ಯಂತ ರಸ್ತೆಗುಂಡಿ ಸಮಸ್ಯೆ ತೀವ್ರವಾಗಿದ್ದು, ಇದನ್ನು ಎತ್ತಿಹಿಡಿಯಲು ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಬುಧವಾರ (ಸೆಪ್ಟೆಂಬರ್ 24) ಒಂದು ಗಂಟೆ ಕಾಲ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ತಡೆ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಘೋಷಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಶಾಲಾ ಮಕ್ಕಳು ರಸ್ತೆ ಸ್ಥಿತಿಗತಿ ಕುರಿತ ವಿಡಿಯೋ ಹಂಚಿಕೊಂಡಿದ್ದು, ಬ್ಲಾಕ್ ಬಕ್ ಸಂಸ್ಥೆಯ ಸಿಇಒ ಕೂಡ ಟ್ವೀಟ್ ಮೂಲಕ ಕಚೇರಿ ಸ್ಥಳಾಂತರಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿ ಜೆಬಿಎ ಅಧಿಕಾರಿಗಳಿಗೆ ಗಡುವು ನೀಡಿದ್ದರು. ಆದಾಗ್ಯೂ ಸಮಸ್ಯೆ ಪರಿಹಾರವಾಗದೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಭಟನೆ ತೀರ್ಮಾನಿಸಿದೆ.
“ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ರಸ್ತೆಗಳು ಗುಂಡಿಬಿದ್ದಿವೆ, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಗುಂಡಿಗಳನ್ನೂ ಮುಚ್ಚಲು ಅಸಮರ್ಥವಾಗಿರುವ ಸರ್ಕಾರವನ್ನು ಎಚ್ಚರಿಸಲು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸುತ್ತೇವೆ” ಎಂದು ವಿಜಯೇಂದ್ರ ಹೇಳಿದ್ದಾರೆ.
ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ವಿಜಯೇಂದ್ರರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಒಬ್ಬ ನೆಟ್ಟಿಗ “ನಿಮ್ಮ ಕಾಲದಲ್ಲಿ ರಸ್ತೆಗಳು ರಾಣಿ ಕ್ಲಿಯೋಪಾತ್ರೆಯ ಮುಖದಂತೆ ನಯವಾಗಿದ್ದವೆಯೇ? ಎಲ್ಲಾ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿವೆ. ದೇಶಕ್ಕೆ ಬೇಕಿರುವುದು ಭ್ರಷ್ಟಾಚಾರ ವಿರೋಧಿ ಜೆನ್ ಜಿ” ಎಂದು ಕಟುವಾಗಿ ಕಾಮೆಂಟ್ ಮಾಡಿದ್ದಾರೆ.
ಶಿಕಾರಿಪುರ ಕ್ಷೇತ್ರದ ಶಾಸಕರಾದ ವಿಜಯೇಂದ್ರ “ಪುರಸಭೆ ವ್ಯಾಪ್ತಿಯಲ್ಲಿನ ಹಾಗೂ ತಾಲೂಕು ಹೆದ್ದಾರಿಗಳಲ್ಲಿನ ರಸ್ತೆಗಳಲ್ಲಿ ಮಳೆಗಾಲದಲ್ಲಿ ಹಾನಿ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಶಾಸಕರಾಗಿ ಸರಕಾರದ ಗಮನಕ್ಕೆ ತಂದು ರಸ್ತೆಗಳನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದ್ದಾರೆ.