ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಸಿರಿಗೆರೆ ಶ್ರೀ ತರಳಬಾಳು ಮಠದ ವೈಮನಸ್ಸನ್ನು ರಾಜಕೀಯ ಲಾಭಕ್ಕೆ ಬಳಸುವವರೇ, ಎಚ್ಚರ,.!”

On: September 25, 2025 7:52 PM
Follow Us:

ಸಿರಿಗೆರೆ ಶ್ರೀ ತರಳಬಾಳು ಪೀಠದ 20ನೇ ಜಗದ್ಗುರು ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 34ನೇ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಸ್ಮರಿಸುವ ಸಂದರ್ಭಕ್ಕೆ, ಭಕ್ತರ ಹೃದಯಗಳಲ್ಲಿ ಒಂದೇ ಧ್ವನಿ ಕೇಳಿಬರುತ್ತಿದೆ — ಮಠಗಳ ಮಹತ್ವವನ್ನು ರಾಜಕೀಯ ಲಾಭಕ್ಕೆ ಬಳಸಬೇಡಿ, ಬದಲಿಗೆ ಪೂಜ್ಯರ ತ್ಯಾಗ–ಸೇವಾ ದಾರಿಯನ್ನು ಅನುಸರಿಸಿ ಸಮಾಜವನ್ನು ಮುನ್ನಡೆಸಿರಿ.

ಇಂದು ಸಿರಿಗೆರೆ ಮತ್ತು ಸಾಣೇಹಳ್ಳಿ ಮಠಗಳೆರಡೂ ಭಕ್ತರ ತಾಣಗಳಾಗಿ, ವಿದ್ಯಾ–ಸಂಸ್ಕೃತಿ ಕೇಂದ್ರಗಳಾಗಿ ಬೆಳೆದಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೂ ಕೆಲವು ರಾಜಕೀಯ ಮುಖಂಡರು, ಮಠಗಳ ನಡುವಿನ ವೈಮನಸ್ಸನ್ನು ದುರುಪಯೋಗ ಮಾಡಿಕೊಂಡು,  ಬಾಡಿಗೆ ವಾಹನಗಳನ್ನು ಮಾಡಿ ಭಕ್ತರನ್ನು ಕರೆದುಕೊಂಡು ಹೋಗುವ ಮೂಲಕ ತಮ್ಮ ಸ್ವಾರ್ಥಕ್ಕೆ ಲಾಭ ಪಡೆಯಲು ಯತ್ನಿಸುತ್ತಿರುವುದು ನೋವಿನ ಸಂಗತಿ. ಸ್ವಾಮಿಗಳ ಹೆಸರಿನಲ್ಲಿ ಭಕ್ತರ ಭಾವನೆಗಳ ಮೇಲೆ ರಾಜಕೀಯ ಆಟವಾಡುವುದು, ಮಠಗಳ ಗೌರವಕ್ಕೆ ಬೆಂಕಿ ಹಚ್ಚುವಂತಹ ಕಾರ್ಯವಾಗಿದೆ.

ತರಳಬಾಳು ಪೀಠದ 20ನೇ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 34ನೇ ಶ್ರದ್ಧಾಂಜಲಿ ಸಂದರ್ಭದಲ್ಲಿ, ಕೆಲವು ಸ್ವಾರ್ಥಪರ ರಾಜಕೀಯ ಮುಖಂಡರು ಮಠಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ತಮ್ಮ ಲಾಭಕ್ಕಾಗಿ ಆಟವಾಡುತ್ತಿರುವುದು ಭಕ್ತರ ಮನಸ್ಸಿಗೆ ನೋವುಂಟುಮಾಡುತ್ತಿದೆ.

ಮಠಗಳು ಸಮಾಜಕ್ಕೆ ಬೆಳಕು ನೀಡುವ ದೀಪಗಳು. ಆದರೆ ಇಂದಿನ ಕೆಲವರು ಆ ದೀಪದ ಬೆಳಕನ್ನೇ ಕತ್ತಲೆಗೆ ತಳ್ಳಲು ಯತ್ನಿಸುತ್ತಿದ್ದಾರೆ. ಸಿರಿಗೆರೆ ಮತ್ತು ಸಾಣೇಹಳ್ಳಿ ಮಠಗಳ ವೈಮನಸ್ಸನ್ನು ಎತ್ತಿ ತೋರಿಸಿ, ಭಕ್ತರನ್ನು ವಾಹನಗಳಲ್ಲಿ ಕರೆದುಕೊಂಡು ರಾಜಕೀಯ ಮೈದಾನದಲ್ಲಿ ಅಂಕ ಗಳಿಸುವವರನ್ನು ಸಮಾಜ ತಿರಸ್ಕರಿಸಬೇಕು.

ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ತಪಸ್ಸಿನಿಂದ ವಿದ್ಯಾಸಂಸ್ಥೆ, ಸಮಾಜ ಮತ್ತು ಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. 46 ವರ್ಷಗಳ ಕಾಲ ವಿದ್ಯೆ, ಧರ್ಮ, ಸಮಾಜ, ಸಾಹಿತ್ಯ, ಸಂಸ್ಕೃತಿ ಎಲ್ಲ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ ಮಠವನ್ನು ವಿಶ್ವ ನಕ್ಷೆಯ ಮೇಲೆ ಎತ್ತಿ ಕಟ್ಟಿದ ಮಹಾಸ್ವಾಮಿಗಳ ತ್ಯಾಗವನ್ನು ಮರೆತು, ಸುಳ್ಳುಪ್ರಚಾರ ಮಾಡುವವರನ್ನು ತಡೆಯುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ.

ಇದೇ ರೀತಿ ಸಾಣೇಹಳ್ಳಿ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮದೇ ಆದ ಸೇವಾ ದಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಬ್ಬರ ವೈಮನಸ್ಸನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಮಾತ್ರವಲ್ಲದೆ, ಸಮಾಜವನ್ನು ವಿಭಜಿಸುವ ಅಪಾಯವನ್ನುಂಟುಮಾಡುತ್ತದೆ.

ಇದು ನಮ್ಮ ಸನಾತನ ಮಠ ಸಂಪ್ರದಾಯಕ್ಕೆ ತಕ್ಕದ್ದಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು. 1938ರಲ್ಲಿ ತನ್ನ ಆತ್ಮನಿವೇದನೆ ದಿನಚರಿಯಲ್ಲಿ ಶಿವಕುಮಾರ ಮಹಾಸ್ವಾಮಿಗಳು ಬರೆದ ಮಾತುಗಳು ಇಂದಿಗೂ ಕಣ್ಣೆದುರಿಗೆ ಮೂಡುತ್ತವೆ.

“ಸನ್ಯಾಸಿಗಳು ಕೆಡಲು ಭಕ್ತರಲ್ಲಿರುವ ಅಜ್ಞಾನವೇ ಕಾರಣ. ಅಜ್ಞಾನವಿದ್ದಲ್ಲಿ ಸತ್ಯಕ್ಕೆ ಬೆಲೆಯಿಲ್ಲ. ಕಂದಾಚಾರಕ್ಕೆ ಬೆಲೆ ಇರುವವರೆಗೆ ಜಗತ್ತಿಗೆ ಸುಖವಿಲ್ಲ. ನಿರಕ್ಷರ ಕುಕ್ಷಿಗಳೂ ವಿಷಯ ಕೂಪದಲ್ಲಿ  ಬೆಳೆದವರು ಮತ್ತು ವಿಷಯದಲ್ಲೆ ತೊಳಲಿ ಬಳಲಿದವರು ಗುರುಗಳಾದರೆ ಯಾವ ಜಗತ್ತು ಉದ್ಧಾರವಾಗುತ್ತದೆ?”

ಈ ವಾಕ್ಯಗಳು ಕೇವಲ ಬರೆದ ಮಾತಲ್ಲ, ಇಂದು ನಡೆಯುತ್ತಿರುವ ಘಟನೆಯ ಸತ್ಯಚಿತ್ರಣ. ಪೂಜ್ಯರು ತಮ್ಮ 24ನೇ ವಯಸ್ಸಿನಲ್ಲಿಯೇ ಸ್ವಾಮಿಗಳಾಗಬೇಕಾದ ಮಾರ್ಗದರ್ಶನ ತೋರಿದರು. ಸಮಾಜಕ್ಕೆ ಬೇಕಾಗಿದ್ದುದನ್ನು ಕೊಟ್ಟು, ಮಠವನ್ನು ಭಾರತದಷ್ಟೇ ಅಲ್ಲ, ವಿಶ್ವದ ಮಟ್ಟದಲ್ಲಿಯೂ ಗುರುತಿಸಿದರು. ಅವರ 39 ವರ್ಷದ ಪಟ್ಟಾಭಿಷೇಕ ಅವಧಿಯಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಾಡಿದ ಸೇವೆಗಳನ್ನು ಇತಿಹಾಸ ಮರೆತೇ ಬಿಡುವುದಿಲ್ಲ.

ಇಂತಹ ಪೀಠಗಳ ಬಗ್ಗೆ ಸುಳ್ಳುಪ್ರಚಾರ ಮಾಡುವವರನ್ನು ಸಮಾಜವೇ ತಿರಸ್ಕರಿಸಬೇಕು. ಮಠಗಳನ್ನು ಎತ್ತಿ ಕಟ್ಟುವುದು ಎಂದರೆ ಭಕ್ತರ ಹೃದಯಗಳಲ್ಲಿ ಗೌರವ–ಭರವಸೆಗಳನ್ನು ಬೆಳೆಸುವುದು. ಅದನ್ನು ಕುಗ್ಗಿಸುವುದು ಎಂದರೆ, ನಮ್ಮ ಸ್ವಂತ ಸಂಸ್ಕೃತಿಯನ್ನು ಬೆಂಕಿಗೀಡು ಮಾಡುವಂತಾಗಿದೆ.

ಮಠಗಳು ಎಂದರೆ ಭಕ್ತರ ನಂಬಿಕೆಯ ತಾಣ, ಸಮಾಜದ ಬೆಳವಣಿಗೆಯ ದಾರಿ. ಇಂತಹ ಮಠಗಳ ಬಗ್ಗೆ ಸುಳ್ಳು ಆರೋಪ ಮಾಡುವುದು ಅಥವಾ ರಾಜಕೀಯ ಸ್ವಾರ್ಥಕ್ಕಾಗಿ ಭಕ್ತರ ಭಾವನೆಗಳನ್ನು ಬಳಸಿಕೊಳ್ಳುವುದು, ನಮ್ಮ ಸಂಸ್ಕೃತಿಗೆ ತಕ್ಕದ್ದಲ್ಲ.

ಇಂದು ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸಾಣೇಹಳ್ಳಿ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ತಮ್ಮ ಸೇವಾ ದಾರಿಯಲ್ಲಿ ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಇವರ ನಡುವೆ ವೈಮನಸ್ಸನ್ನು ದುರುಪಯೋಗ ಮಾಡಿಕೊಂಡು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು, ಭಕ್ತರ ಮನಸ್ಸಿಗೆ ನೋವು ಉಂಟುಮಾಡುತ್ತದೆ.

ಸಾಧು ಸದ್ಧರ್ಮ ಸಮಾಜದ ಯುವಜನತೆ ಇಂದಿನ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮಠಗಳ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಕೆಲವರು ಮಾಡುತ್ತಿರುವ ಕುತಂತ್ರಗಳಿಗೆ ಮೌನವಾಗಿ ಕೂರುವುದು ಅಜ್ಞಾನಕ್ಕೆ ಆಹಾರ ನೀಡಿದಂತಾಗುತ್ತದೆ. ನಮ್ಮ ಪೂಜ್ಯರು ತಪಸ್ಸು–ತ್ಯಾಗದಿಂದ ಕಟ್ಟಿದ ಮಠಗಳನ್ನು ವಿಭಜನೆಗೆ ತಳ್ಳಲು ಹೊರಟವರ ವಿರುದ್ಧ ನಿಲ್ಲುವುದು ಯುವಜನರ ಕರ್ತವ್ಯ. ಸ್ವಾರ್ಥಕ್ಕಾಗಿ ಮಠಗಳ ವೈಮನಸ್ಸನ್ನು ಎತ್ತಿ ಹಿಡಿದುಕೊಳ್ಳುವ ರಾಜಕಾರಣಿಗಳಿಗೆ ಸ್ಪಷ್ಟ ಸಂದೇಶ ಒಂದೇ — ‘ಮಠಗಳ ಹೆಸರಿನಲ್ಲಿ ಭಕ್ತರ ಭಾವನೆಗಳೊಂದಿಗೆ ಆಟವಾಡಬೇಡಿ, ಇಲ್ಲವಾದರೆ ಯುವ ಸಮಾಜವೇ ನಿಮ್ಮನ್ನು ತಿರಸ್ಕರಿಸುತ್ತದೆ.’ ಮಠಗಳ ಗೌರವ ಕಾಪಾಡುವುದು ಅಂದರೆ, ನಮ್ಮ ಸಂಸ್ಕೃತಿ ಮತ್ತು ಭವಿಷ್ಯವನ್ನು ಕಾಪಾಡುವುದು ಎಂಬ ಸತ್ಯವನ್ನು ಮರೆಯಬೇಡಿ.

“ಸಾಧು ಸದ್ಧರ್ಮ ಸಮಾಜದ ಯುವಜನತೆ ಕಣ್ಣು ತೆರೆದುಕೊಳ್ಳಬೇಕು! ಮಠಗಳ ವೈಭವವನ್ನು ಕುಗ್ಗಿಸಿ ತಮ್ಮ ಸ್ವಾರ್ಥ ರಾಜಕೀಯವನ್ನು ಬೆಳೆಸಲು ಕೆಲವರು ನಡೆಸುತ್ತಿರುವ ಕುತಂತ್ರಗಳನ್ನು ನೋಡದೆ ಕುಳಿತರೆ, ನಾಳೆ ಮಠಗಳೇ ಕುಸಿಯುವ ಅಪಾಯವಿದೆ. ತಪಸ್ಸಿನಿಂದ ಕಟ್ಟಿದ ಮಠಗಳನ್ನು ರಾಜಕೀಯ ಮಣಿಕಟ್ಟಿನಲ್ಲಿಟ್ಟುಕೊಂಡು ಅಂಕಗಳ ಲೆಕ್ಕ ಹಾಕುವವರಿಗೆ ಸ್ಪಷ್ಟ ಎಚ್ಚರಿಕೆ — ಭಕ್ತರ ಭಾವನೆಗಳೊಂದಿಗೆ ಆಟವಾಡಬೇಡಿ! ಮಠಗಳನ್ನು ಕೆಡಿಸುವವರಿಗೆ ಸಮಾಜದಿಂದ ಗೌರವವಿಲ್ಲ, ಯುವ ಸಮಾಜವೇ ಅವರ ಮುಖವಾಡವನ್ನು ಹರಿದು ಹಾಕುತ್ತದೆ.”

ಸಾಧು ಸದ್ಧರ್ಮ ಸಮಾಜದ ಯುವಜನತೆ ಇಂದಿನ ಕಾಲದಲ್ಲಿ ಎಚ್ಚರಿಕೆ ವಹಿಸಬೇಕು. ಮಠಗಳ ಹೆಸರಿನಲ್ಲಿ ಸ್ವಾರ್ಥ ರಾಜಕೀಯ ಮಾಡಲು ಯತ್ನಿಸುವವರನ್ನು ಬೆಂಬಲಿಸದೆ, ಮಠಗಳ ಗೌರವ–ಸಂಸ್ಕೃತಿ ಕಾಪಾಡುವ ದಾರಿಯಲ್ಲಿ ನಡೆಯಬೇಕು. ನಮ್ಮ ಪೂಜ್ಯರು ತೋರಿದ ತ್ಯಾಗ–ಸೇವೆಯ ಪಾಠವೇ ನಮ್ಮ ಶಕ್ತಿ. ಆದ್ದರಿಂದ ಯುವಕರ ಸಂದೇಶ ಒಂದೇ — ಮಠಗಳ ವೈಮನಸ್ಸನ್ನು ದುರುಪಯೋಗಪಡಿಸಿಕೊಳ್ಳುವವರನ್ನು ತಿರಸ್ಕರಿಸಿ, ಮಠಗಳ ಒಗ್ಗಟ್ಟನ್ನು ಕಾಪಾಡಿ, ಸಮಾಜವನ್ನು ಒಗ್ಗಟ್ಟಿನಿಂದ ಮುನ್ನಡೆಸೋಣ.

ಪೂಜ್ಯರು ಹಾಕಿ ಕೊಟ್ಟ ದಾರಿಯ ಶ್ರೇಷ್ಠತೆಯ ಸಾಕ್ಷಿಯಾಗಿದೆ. ಮಠಗಳ ಮೇಲೆ ನಂಬಿಕೆ ಇಟ್ಟು, ಪೂಜ್ಯರ ಮಾರ್ಗವನ್ನು ಅನುಸರಿಸಿದರೆ, ಯುವಕರ ಜೀವನ ಮಾತ್ರವಲ್ಲ, ಸಮಾಜದ ಭವಿಷ್ಯವೂ ಶೋಭಿಸುತ್ತದೆ ಎಂಬುದು ನಿಜ.”

ಸಾಧು ಸದ್ಧರ್ಮ ಸಮಾಜದ ಯುವ ಮುಖಂಡ,

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ,

ಶ್ರೀ ತರಳಬಾಳು ಹಾಗೂ ಸಾಣೇಹಳ್ಳಿ ಮಠದ ಭಕ್ತ,

ಸಾಮಾಜಿಕ ಕಾರ್ಯಕರ್ತ ಹಾಗೂ  ಪತ್ರಕರ್ತ,

ಡಿಟೆಕ್ಟಿವ್‌ ನ್ಯೂಸ್‌ 24, ಮುಖ್ಯಸಂಪಾದಕರು,

ಅಧ್ಯಕ್ಷರು, ಆಸರೆ ಟ್ರಸ್ಟ್‌ (ರಿ). ಶಿವಮೊಗ್ಗ.

ಮೊ:9972221153

K.M.Sathish Gowda

Join WhatsApp

Join Now

Facebook

Join Now

Leave a Comment