ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಜಾತಿ ಗಣತಿ ಚುರುಕುಗೊಳಿಸಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

On: September 26, 2025 3:06 PM
Follow Us:

ಬೆಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ಜಾತಿ ಗಣತಿ ಕಾರ್ಯವನ್ನು ಚುರುಕುಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಪ್ರತಿದಿನ ಜಿಲ್ಲಾವಾರು ಕನಿಷ್ಠ ಶೇಕಡಾ 10ರಷ್ಟು ಗಣತಿ ಗುರಿಯನ್ನು ಸಾಧಿಸಬೇಕು ಎಂದು ಆದೇಶಿಸಿದರು.

ಸಮೀಕ್ಷೆ ಪ್ರಗತಿ ಕುರಿತು ಕೃಷ್ಣಾದಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಸಿಎಂ ಅಧಿಕಾರಿಗಳಿಗೆ ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು. ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಗಣತಿ ಕಾರ್ಯದ ದಿನನಿತ್ಯ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು. ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಗಣತಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸಭೆಯ ಪ್ರಮುಖ ಅಂಶಗಳು:

ತಾಂತ್ರಿಕ ತೊಂದರೆಗಳಿಂದ ಆರಂಭದಲ್ಲಿ ನಿಧಾನವಾಗಿದ್ದ ಸಮೀಕ್ಷೆ ಇದೀಗ ಸುಗಮವಾಗಿದ್ದು, ಎಲ್ಲಾ ಜಿಲ್ಲಾಧಿಕಾರಿಗಳು ಕಾರ್ಯವನ್ನು ವೇಗವಾಗಿ ಮುನ್ನಡೆಸಬೇಕು.

ರಾಜ್ಯದ ಒಟ್ಟು 1,43,81,702 ಕುಟುಂಬಗಳಲ್ಲಿ ಈಗಾಗಲೇ 2,76,016 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.

ಒಟ್ಟು 1,20,728 ಗಣತಿದಾರರು ಹಾಗೂ 1,22,085 ಗಣತಿ ಬ್ಲಾಕ್‌ಗಳು ಗುರುತಿಸಲ್ಪಟ್ಟಿದ್ದು, ಅಕ್ಟೋಬರ್ 7ರೊಳಗೆ ಕಾರ್ಯ ಪೂರ್ಣಗೊಳ್ಳಬೇಕು.

ಶಿಕ್ಷಕರ ಸೇವೆಯನ್ನು ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಬಾರದು. ಗೌರವಧನ ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳು ಪ್ರತಿದಿನ ಸಮೀಕ್ಷೆ ಪ್ರಗತಿಯನ್ನು ಪರಿಶೀಲಿಸಬೇಕು. ಕಂದಾಯ, ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕು.

ಕೆಲವು ಜಿಲ್ಲೆಗಳಲ್ಲಿ ನಿಧಾನಗತಿಯಲ್ಲಿರುವ ಸಮೀಕ್ಷೆಯನ್ನು ವೇಗಗೊಳಿಸಲು ಅಗತ್ಯವಿರುವ ಕಡೆ ಅನುದಾನಿತ ಶಾಲೆಗಳ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಬೇಕು.

ತಾಲೂಕು ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿ ಮೇಲ್ವಿಚಾರಣೆ ನಡೆಸಲು ಸೂಚನೆ.

ತಾಂತ್ರಿಕ ತೊಂದರೆಗಳಿಗೆ ಜಿಲ್ಲಾಸ್ತರದಲ್ಲೇ ಐಟಿ ತಜ್ಞರ ನೆರವಿನಿಂದ ಪರಿಹಾರ ಕಂಡುಕೊಳ್ಳಬೇಕು.

ಬೆಂಗಳೂರು ನಗರ ಜಿಲ್ಲೆಯಲ್ಲಿ 50 ಲಕ್ಷ ಮನೆಗಳ ಸಮೀಕ್ಷೆ ಕಾರ್ಯ ಪ್ರಾರಂಭವಾಗಿದ್ದು, ಯಾವುದೇ ಕುಟುಂಬ ಬಾಕಿ ಉಳಿಯದಂತೆ ಗಮನಹರಿಸಲು ಆದೇಶ.

ಸಮೀಕ್ಷೆ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಅವಶ್ಯಕವೆಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗುಡ್ಡಗಾಡು ಪ್ರದೇಶಗಳಲ್ಲಿ ಶಾಲೆಗಳಲ್ಲಿ ಕೇಂದ್ರಗಳನ್ನು ತೆರೆಯುವ ಮೂಲಕ ಜನರಿಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಜೊತೆಗೆ ಆನ್‌ಲೈನ್ ಮೂಲಕವೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಇದು ಕೇವಲ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಕಾರ್ಯವಲ್ಲ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ ಎಂದು ಸಿಎಂ ಒತ್ತಿ ಹೇಳಿದರು.

ಈ ಸಂಧರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಶಿವರಾಜ ತಂಗಡಗಿ, ಕೃಷ್ಣ ಭೈರೇಗೌಡ, ರಹೀಂ ಖಾನ್, ಭೈರತಿ ಸುರೇಶ್, ಮಧು ಬಂಗಾರಪ್ಪ, ಬೋಸರಾಜು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್, ಕಾನೂನು ಸಲಹೆಗಾರ ಪೊನ್ನಣ್ಣ, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment