ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸಿಎಂ-ಡಿಸಿಎಂ ಒಳಜಗಳ ಮುಚ್ಚಲು ಜಾತಿ ಸಮೀಕ್ಷೆ ಅಸ್ತ್ರ: ಕೇಂದ್ರ ಸಚಿವ ಜೋಶಿ ಟೀಕೆ

On: September 26, 2025 11:52 PM
Follow Us:

ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ಆಡಳಿತ ವೈಫಲ್ಯ ಹಾಗೂ ಸಿಎಂ-ಡಿಸಿಎಂ ಒಳಜಗಳವನ್ನು ಮರೆಮಾಚಲು ಜಾತಿ ಸಮೀಕ್ಷೆ ನಡೆಸುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ಶುಕ್ರವಾರ ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಸಿದ್ದರಾಮಯ್ಯ ಈ ಜಾತಿ ಸಮೀಕ್ಷೆಯ ನಾಟಕವಾಡುತ್ತಿದ್ದಾರೆ. ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ತಿರುಗಿಸಲು ಕಾಂಗ್ರೆಸ್‌ ಸರ್ಕಾರ ಪ್ರಯತ್ನಿಸುತ್ತಿದೆ” ಎಂದು ಟೀಕಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯದೆ, ರಸ್ತೆ ಗುಂಡಿಗಳನ್ನು ಮುಚ್ಚಲು ಸಹ ಹಣವಿಲ್ಲದ ಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಜಾತಿ ಸಮೀಕ್ಷೆಗೆ ಕೋಟಿ ಕೋಟಿ ರೂಪಾಯಿ ವ್ಯಯಿಸುತ್ತಿರುವುದನ್ನು ಜೋಶಿ ಪ್ರಶ್ನಿಸಿದರು. “ಕೇಂದ್ರ ಸರ್ಕಾರ 2021ರಲ್ಲಿ ಕೋವಿಡ್‌ ಕಾರಣದಿಂದ ಗಣತಿ ಮುಂದೂಡಿತ್ತು. ಈಗ ಕೇಂದ್ರವೇ ಗಣತಿ ನಡೆಸಲು ಸಿದ್ಧತೆ ಮಾಡುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್‌ ಸರ್ಕಾರ ಒಳಜಗಳ ಮುಚ್ಚಿಹಾಕಲು ಜಾತಿ ಸಮೀಕ್ಷೆ ಬಣ್ಣ ಹಚ್ಚುತ್ತಿದೆ” ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ಗೆ ಜೋಶಿಯ ಕಿಡಿ

“ಕಾಂಗ್ರೆಸ್‌ ಪಕ್ಷ ಯಾವತ್ತೂ ಎಸ್ಸಿ, ಎಸ್ಟಿ, ಒಬಿಸಿಗಳಿಗೆ ವಿರೋಧಿ. ರಾಜೀವ್‌ ಗಾಂಧಿ, ಪಂಡಿತ್‌ ನೆಹರು ಸಂಸತ್‌ನಲ್ಲೇ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದರು. ಇಂದಿನ ಸಿದ್ದರಾಮಯ್ಯ ಅದೇ ನಾಟಕವನ್ನು ಮುಂದುವರಿಸುತ್ತಿದ್ದಾರೆ. ಅದೆಷ್ಟು ಜಾತಿಗಳಿಗೆ ಒಳ್ಳೆಯದು ಮಾಡಿದ್ದಾರೆ?” ಎಂದು ಪ್ರಶ್ನಿಸಿದ ಜೋಶಿ, ಧರ್ಮಾಧಾರಿತ ಮೀಸಲಾತಿ ಕ್ರಮವನ್ನು ಕಾಂಗ್ರೆಸ್‌ ಸರ್ಕಾರ ಬೆಂಬಲಿಸುತ್ತಿರುವುದನ್ನು ಗಂಭೀರವಾಗಿ ಟೀಕಿಸಿದರು.

ಅವರು ಮತ್ತಷ್ಟು ಆರೋಪಿಸಿ, “ಧರ್ಮಾಧಾರಿತ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಆದರೆ, ಕಾಂಗ್ರೆಸ್‌ ಸರ್ಕಾರ ಅದೇ ದಾರಿಗೆ ಹೆಜ್ಜೆ ಹಾಕುತ್ತಿದೆ. ಇದರಿಂದ ಮುಸ್ಲಿಮರು, ಕ್ರಿಶ್ಚಿಯನ್ನರಲ್ಲೂ ಅಸ್ಪೃಶ್ಯತೆ ಇದೆ ಎಂದು ಸರ್ಕಾರ ಒಪ್ಪಿಕೊಂಡಂತಾಗಿದೆ” ಎಂದರು.

ಜೋಶಿಯವರ ಹೇಳಿಕೆಯಿಂದಾಗಿ ಜಾತಿ ಸಮೀಕ್ಷೆ ಕುರಿತ ರಾಜಕೀಯ ಕದನ ಇನ್ನಷ್ಟು ತೀವ್ರಗೊಂಡಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment