ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾದ ಪ್ರಕರಣವನ್ನು ವಜಾಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ವರಣಾಸಿಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ರಾಹುಲ್ ಗಾಂಧಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವು ಕಳೆದ ವರ್ಷ ಅಮೆರಿಕ ಭೇಟಿ ವೇಳೆ ರಾಹುಲ್ ಗಾಂಧಿ ಸಿಖ್ಖರ ಧಾರ್ಮಿಕ ಸ್ವಾತಂತ್ರ್ಯದ ಕುರಿತಾಗಿ ನೀಡಿದ ಹೇಳಿಕೆಗೆ ಸಂಬಂಧಿಸಿದೆ.
2024ರಲ್ಲಿ ಅಮೆರಿಕ ಪ್ರವಾಸದಲ್ಲಿದ್ದಾಗ ರಾಹುಲ್ ಗಾಂಧಿ, “ಭಾರತದಲ್ಲಿ ಸಿಖ್ಖರು ಪೇಟ ಧರಿಸಲು, ಕಾಡಾ ತೊಡಲು ಅಥವಾ ಗುರುದ್ವಾರಕ್ಕೆ ಹೋಗಲು ಅವಕಾಶ ದೊರೆಯುತ್ತಿದೆಯೇ ಎಂಬ ಹೋರಾಟ ನಡೆಯುತ್ತಿದೆ” ಎಂದು ಹೇಳಿಕೆ ನೀಡಿದ್ದರು. ಈ ಮಾತು ವಿವಾದಕ್ಕೆ ಕಾರಣವಾಗಿ, ವಾರಣಾಸಿಯ ನಾಗೇಶ್ವರ ಮಿಶ್ರಾ ಎಂಬುವರು ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
ಪ್ರಾರಂಭದಲ್ಲಿ, ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ACJM) ಅವರು ಪ್ರಕರಣವನ್ನು ತಳ್ಳಿಹಾಕಿದರು. ಭಾಷಣ ಅಮೆರಿಕದಲ್ಲಿ ನಡೆದಿರುವುದರಿಂದ ಅದು ತಮ್ಮ ನ್ಯಾಯವ್ಯಾಪ್ತಿಗೆ ಸೇರುವುದಿಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದರು. ಆದರೆ, 2025ರ ಜುಲೈ 21ರಂದು ವಿಶೇಷ ನ್ಯಾಯಾಧೀಶರ ನ್ಯಾಯಾಲಯ (MP/MLA) ಮಿಶ್ರಾ ಸಲ್ಲಿಸಿದ ಪರಿಷ್ಕರಣಾ ಅರ್ಜಿಯನ್ನು ಅಂಗೀಕರಿಸಿ, ವಿಷಯವನ್ನು ಪುನಃ ವಿಚಾರಣೆ ನಡೆಸಲು ACJMಗೆ ಸೂಚಿಸಿತು.
ಈ ನಿರ್ಧಾರವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಆಗಸ್ಟ್‌ನಲ್ಲಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್, ವಿಶೇಷ ನ್ಯಾಯಾಲಯದ ಆದೇಶದಲ್ಲಿ ದೋಷವಿಲ್ಲವೆಂದು ತಿಳಿದು, ರಾಹುಲ್ ಅವರ ಅರ್ಜಿಯನ್ನು ವಜಾಗೊಳಿಸಿದೆ.