ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ದುರುಪಯೋಗ ತಡೆಯಲು ಅನ್ನಭಾಗ್ಯ, ಶಕ್ತಿ ಯೋಜನೆ ಬದಲಾವಣೆ ಚಿಂತನೆ: ಡಿ.ಕೆ. ಶಿವಕುಮಾರ್

On: September 28, 2025 11:22 PM
Follow Us:


ರಾಮನಗರ, ಸೆ.28: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿನ ಅನ್ನಭಾಗ್ಯ ಹಾಗೂ ಶಕ್ತಿ ಯೋಜನೆಗಳಲ್ಲಿ ದುರುಪಯೋಗ ನಡೆದಿದೆ ಎಂಬ ಅಹವಾಲುಗಳು ಸರ್ಕಾರದ ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಕೆಲವು ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಗಳಲ್ಲಿ ಮಾರಾಟ ಮಾಡುವ ಪ್ರಕರಣಗಳು, ಶಕ್ತಿ ಯೋಜನೆಯಡಿ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು ಉಚಿತ ಪ್ರಯಾಣ ಪಡೆಯುತ್ತಿರುವ ಉದಾಹರಣೆಗಳು ಸಿಕ್ಕಿವೆ. ಇಂತಹ ದುರುಪಯೋಗಗಳಿಗೆ ಅಡ್ಡಿ ಒಡ್ಡಲು ಕೆಲವು ಬದಲಾವಣೆಗಳನ್ನು ಅಧ್ಯಯನ ಮಾಡಲಾಗುತ್ತಿದೆ,” ಎಂದರು.

ಪಂಚ ಗ್ಯಾರಂಟಿ ಯೋಜನೆಗಳು ಜನರ ಬದುಕಿನ ದಿಕ್ಕೇ ಬದಲಾಯಿಸುತ್ತಿವೆ. ಪ್ರಧಾನಿ ಮೋದಿ ತಾವು ಟೀಕಿಸಿದ ಇದೇ ಯೋಜನೆಗಳನ್ನು ಈಗ ಇತರ ರಾಜ್ಯಗಳಲ್ಲಿ ಅನುಸರಿಸುತ್ತಿದ್ದಾರೆ. ಬಿಹಾರ, ಮಹಾರಾಷ್ಟ್ರದಲ್ಲಿಯೇ ಮಹಿಳೆಯರಿಗೆ ಹಣ ಹಂಚಲಾಗುತ್ತಿದೆ. ಆದರೆ ಕರ್ನಾಟಕ ಬಿಜೆಪಿ ನಾಯಕರು ಸರ್ಕಾರ ಬಂದರೆ ಗ್ಯಾರಂಟಿ ಯೋಜನೆಗಳನ್ನು ರದ್ದುಪಡಿಸುವುದಾಗಿ ಹೇಳುತ್ತಿದ್ದು, ಒಳಾಂಗಣ ಸಭೆಗಳಲ್ಲಿ ಯೋಜನೆಗಳನ್ನು ದುರ್ಬಲಗೊಳಿಸಲು ಕೂಟ ನಡೆಸುತ್ತಿದ್ದಾರೆ, ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿರಾ ಗಾಂಧಿ, ದೇವರಾಜ ಅರಸು, ಎಸ್.ಎಂ. ಕೃಷ್ಣ ಅವರ ಕಾಲದ ಅನೇಕ ಯೋಜನೆಗಳು ಇಂದಿಗೂ ಸಾಗಿವೆ. ಯಾವ ಯೋಜನೆ ನಿಲ್ಲಿಸುವಂತದ್ದು ಅಲ್ಲ. ಬಿಜೆಪಿ ನಾಯಕರ ಸವಾಲುಗಳಿಗೆ ನಮ್ಮಿಂದ ಉತ್ತರ ಸಿದ್ಧವಾಗಿದೆ, ಎಂದ ಅವರು, “ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಿವೆ. ಹಿಂದಿನ ವಿರೋಧಿಗಳಿಗೆ ಈಗ ಬಾಯ್ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ,” ಎಂದು ತಿರುಗೇಟು ನೀಡಿದರು.

ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ ಅವರಿಗೆ 25 ಸಾವಿರ ಮತಗಳ ಅಂತರದಲ್ಲಿ ಗೆಲುವು ತಂದುಕೊಟ್ಟದ್ದು ಇದೇ ಗ್ಯಾರಂಟಿ ಯೋಜನೆ. ಜನರ ಬೆಂಬಲ ನಮಗೆ ಇದೆ. ಜನ ರಾಜಕೀಯ ಶಕ್ತಿ ಕೊಟ್ಟಿದ್ದರೆ, ನಾವು ಅವರಿಗೆ ಬದುಕಿನ ಶಕ್ತಿ ಕೊಡುತ್ತೇವೆ, ಎಂದು ಡಿ.ಕೆ. ಶಿ. ವಿಶ್ವಾಸ ವ್ಯಕ್ತಪಡಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಂದಲೇ ವೇದಿಕೆ ಉದ್ಘಾಟನೆ ನಡೆದಿದ್ದು, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ವೇದಿಕೆಗೂ ಮುನ್ನ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮಾಹಿತಿ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಇಕ್ಬಾಲ್ ಹುಸೇನ್, ಸಿ.ಪಿ. ಯೋಗೇಶ್ವರ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ರಾಜ್ಯ ಅಧಿವೆಕ್ಷಣಾ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷ ಸೂರಜ್ ಎಂ.ಎನ್. ಹೆಗಡೆ, ನಗರಸಭೆ ಅಧ್ಯಕ್ಷ ಶೇಷಾದ್ರಿ, ವಿವಿಧ ಜಿಲ್ಲೆಗಳ ಸಮಿತಿ ಅಧ್ಯಕ್ಷರು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಹಾಗೂ ಎಸ್‌ಪಿ ಶ್ರೀನಿವಾಸ್ ಗೌಡ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment