ಬೆಂಗಳೂರು, ಸೆಪ್ಟೆಂಬರ್ 27: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಸೆಪ್ಟೆಂಬರ್ 22ರಿಂದ ರಾಜ್ಯಾದ್ಯಂತ ಆರಂಭಗೊಂಡಿದೆ. ಸಮೀಕ್ಷೆ ಪ್ರಾರಂಭದ ವೇಳೆ ಸರ್ಕಾರ ಮಾಹಿತಿ ನೀಡುವುದು ಕಡ್ಡಾಯವೆಂದು ಹೇಳಿದ್ದರೂ, ಇದೀಗ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದ ಬೆನ್ನಲ್ಲೇ ಆಯೋಗ ತನ್ನ ನಿಲುವು ಬದಲಿಸಿಕೊಂಡಿದೆ. ಸಮೀಕ್ಷೆಯಲ್ಲಿ ಭಾಗವಹಿಸುವುದು ಪೂರ್ಣವಾಗಿ ಸ್ವಯಂಪ್ರೇರಿತ ಎಂದು ಆಯೋಗ ಸ್ಪಷ್ಟಪಡಿಸಿದೆ.
ಆಯೋಗದ ಪತ್ರಿಕಾ ಪ್ರಕಟಣೆ
ಹಿಂದುಳಿದ ವರ್ಗಗಳ ಆಯೋಗದಿಂದ ಹೊರಬಂದ ಪ್ರಕಟಣೆಯಲ್ಲಿ,ರಾಜ್ಯದ ಎಲ್ಲಾ ಕುಟುಂಬಗಳು ಹಾಗೂ ನಾಗರಿಕರನ್ನು ಸಮೀಕ್ಷೆಗೆ ಒಳಪಡಿಸುವ ಗುರಿ ಇದ್ದರೂ, ಮಾಹಿತಿ ನೀಡುವುದು ಜನರ/ಕುಟುಂಬಗಳ ಸ್ವಯಂ ಇಚ್ಛೆಗೆ ಮಾತ್ರ ಬಿಟ್ಟಿದೆ.
ಸಮೀಕ್ಷೆ ಸಮಯದಲ್ಲಿ ಯಾವುದೇ ವ್ಯಕ್ತಿ ಅಥವಾ ಕುಟುಂಬವನ್ನು ಬಲವಂತಪಡಿಸಲು ಅಧಿಕಾರಿಗಳಿಗೆ ಅವಕಾಶವಿಲ್ಲ.ಜನರು ನೀಡುವ ಮಾಹಿತಿಯು ಸಂಪೂರ್ಣ ಗೌಪ್ಯವಾಗಿರುತ್ತದೆ ಎಂದು ಖಚಿತಪಡಿಸಲಾಗಿದೆ.

ಹೈಕೋರ್ಟ್ ಮಧ್ಯಂತರ ಆದೇಶ
ಕರ್ನಾಟಕ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ,
ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ.
ಸಿಬ್ಬಂದಿ ಮಾಹಿತಿಯನ್ನು ಪಡೆಯಲು ಬಲವಂತ ಮಾಡಬಾರದು.
ಸಂಗ್ರಹಿಸಲಾದ ಮಾಹಿತಿಯನ್ನು ಸಂಪೂರ್ಣವಾಗಿ ಗೌಪ್ಯವಾಗಿಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ.
ಆದೇಶದ ಅನುಸರಣೆಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ಆಯೋಗವು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ. ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಹಾಗೂ ನ್ಯಾಯಾಲಯದ ಆದೇಶ ಪಾಲನೆಗಾಗಿ ಈ ಪ್ರಕಟಣೆ ಹೊರಬೀಳಲಾಗಿದೆ.
ರಾಜ್ಯ ಸರ್ಕಾರದ ಪ್ರಕಾರ, ಈ ಸಮೀಕ್ಷೆಯ ಉದ್ದೇಶ ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಂಶಗಳ ನಿಖರ ಚಿತ್ರಣ ಪಡೆಯುವುದು. ಆದರೆ ಯಾರ ಮೇಲೂ ಒತ್ತಡವಿಲ್ಲ, ಭಾಗವಹಿಸುವಿಕೆ ಸಂಪೂರ್ಣವಾಗಿ ಅವರ ಸ್ವ ಇಚ್ಛೆಯಿಗೆ ಬಿಟ್ಟಿದೆ ಎಂದು ಸರ್ಕಾರ ಹೇಳಿದೆ.