ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಟಾಟಾ ಗ್ರೂಪ್ ನಲ್ಲಿ ಆಂತರಿಕ ಬಿಕ್ಕಟ್ಟು: ಕೇಂದ್ರ ಸರ್ಕಾರ ಮಧ್ಯಪ್ರವೇಶ

On: October 8, 2025 9:00 PM
Follow Us:

ನವದೆಹಲಿ: ಟಾಟಾ ಟ್ರಸ್ಟ್‌ನಲ್ಲಿ ಆಡಳಿತ ಮತ್ತು ನೇಮಕಾತಿ ವಿಚಾರವಾಗಿ ಉಂಟಾದ ಭಿನ್ನಮತ ತಾರಕಕ್ಕೇರಿದ ಹಿನ್ನೆಲೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಹಾಗೂ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಮಂಗಳವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸಭೆಯಲ್ಲಿ ಟಾಟಾ ಟ್ರಸ್ಟ್‌ನ ಉಪಾಧ್ಯಕ್ಷ ವೇಣು ಶ್ರೀನಿವಾಸನ್ ಹಾಗೂ ಟ್ರಸ್ಟಿ ಡೇರಿಯಸ್ ಖಂಬಾಟಾ ಸಹ ಭಾಗವಹಿಸಿದ್ದರು. ಟಾಟಾ ಟ್ರಸ್ಟ್‌ಗಳು ಟಾಟಾ ಸನ್ಸ್‌ನಲ್ಲಿ ಶೇ. 66ರಷ್ಟು ಪಾಲು ಹೊಂದಿರುವುದರಿಂದ, ಈ ಸಂಘಟನೆಯೊಳಗಿನ ಬಿಕ್ಕಟ್ಟು ಸಮೂಹದ ಆಡಳಿತದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಭಿನ್ನಮತದ ಮೂಲ

ರತನ್ ಟಾಟಾ ಅವರ ನಿಧನದ ನಂತರ ಟ್ರಸ್ಟ್ ಅಧ್ಯಕ್ಷರಾಗಿ ನೇಮಕಗೊಂಡ ನೋಯೆಲ್ ಟಾಟಾ ಅವರ ಬಣ ಮತ್ತು ಶಪೂರ್ಜಿ ಪಲ್ಲೊಂಜಿ ಕುಟುಂಬದ ಮೆಹ್ಲಿ ಮಿಸ್ತ್ರಿ ನೇತೃತ್ವದ ಬಣದ ನಡುವೆ ಗಂಭೀರ ಭಿನ್ನಮತ ಉಂಟಾಗಿದೆ. ಆಡಳಿತ ಮಂಡಳಿಯಲ್ಲಿ ಪ್ರಮುಖ ಹುದ್ದೆಗಳ ಹಂಚಿಕೆ ಮತ್ತು ನಿರ್ಣಯ ಪ್ರಕ್ರಿಯೆಯಿಂದ ಕೆಲ ಟ್ರಸ್ಟಿಗಳು ಹೊರಗಿಡಲ್ಪಟ್ಟಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಸೆಪ್ಟೆಂಬರ್ 11ರಂದು ನಡೆದ ಸಭೆಯಲ್ಲಿ ಈ ಭಿನ್ನಮತ ಬಹಿರಂಗಗೊಂಡಿತು. ಟಾಟಾ ಸನ್ಸ್‌ನ ನಾಮನಿರ್ದೇಶಿತ ನಿರ್ದೇಶಕರಾಗಿದ್ದ ಮಾಜಿ ರಕ್ಷಣಾ ಕಾರ್ಯದರ್ಶಿ ವಿಜಯ್ ಸಿಂಗ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದ ಕ್ರಮ ವಿವಾದಕ್ಕೆ ಕಾರಣವಾಯಿತು. ಅವರ ಸ್ಥಾನಕ್ಕೆ ಮೆಹ್ಲಿ ಮಿಸ್ತ್ರಿ ಅವರನ್ನು ನೇಮಿಸುವ ಪ್ರಸ್ತಾಪಕ್ಕೆ ನೋಯೆಲ್ ಟಾಟಾ ಮತ್ತು ವೇಣು ಶ್ರೀನಿವಾಸನ್ ವಿರೋಧ ವ್ಯಕ್ತಪಡಿಸಿದ್ದರೆ, ಇತರ ಟ್ರಸ್ಟಿಗಳು ನೇಮಕಕ್ಕೆ ಬೆಂಬಲ ನೀಡಿದ್ದರು. ಅಕ್ಟೋಬರ್ 10ರಂದು ಈ ವಿಷಯದ ಕುರಿತು ನಿರ್ಣಾಯಕ ಸಭೆ ನಿಗದಿಯಾಗಿದೆ.

ಟಾಟಾ ಸನ್ಸ್‌ ಲಿಸ್ಟಿಂಗ್ ಗಡುವು ಸಮೀಪ

ಈ ಬಿಕ್ಕಟ್ಟು ಮಧ್ಯೆ, ಟಾಟಾ ಸನ್ಸ್ ಷೇರು ಮಾರುಕಟ್ಟೆ ಪ್ರವೇಶದ ಗಡುವು ಕೂಡ ಸಮೀಪಿಸುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಟಾಟಾ ಸನ್ಸ್ ಅನ್ನು ‘ಅಪ್ಪರ್ ಲೇಯರ್’ ಎನ್‌ಬಿಎಫ್‌ಸಿ ಎಂದು ವರ್ಗೀಕರಿಸಿದ್ದು, ಮೂರು ವರ್ಷಗಳೊಳಗೆ ಕಂಪನಿಯು ಲಿಸ್ಟ್ ಆಗಬೇಕೆಂದು ಸೂಚಿಸಿತ್ತು. ಸೆಪ್ಟೆಂಬರ್ 30ರಂದು ಈ ಗಡುವು ಮುಗಿದಿದ್ದು, ಕಂಪನಿಯು ವಿನಾಯಿತಿ ಕೋರಿ ಆರ್‌ಬಿಐಗೆ ಮನವಿ ಸಲ್ಲಿಸಿದೆ.

ಇನ್ನೊಂದೆಡೆ, ಟಾಟಾ ಸನ್ಸ್‌ನಲ್ಲಿ ಶೇ. 18.37ರಷ್ಟು ಪಾಲು ಹೊಂದಿರುವ ಶಪೂರ್ಜಿ ಪಲ್ಲೊಂಜಿ ಸಮೂಹವು ತನ್ನ ಸಾಲದ ನಿರ್ವಹಣೆಗೆ ಲಿಸ್ಟಿಂಗ್ ಅಗತ್ಯವಿದೆ ಎಂದು ಒತ್ತಾಯಿಸುತ್ತಿದೆ.

ಸರ್ಕಾರದ ಹಸ್ತಕ್ಷೇಪ

ದೇಶದ ಆರ್ಥಿಕತೆಗೆ ಟಾಟಾ ಸಮೂಹದ ಕೊಡುಗೆ ಅಪಾರವಾಗಿರುವುದರಿಂದ, ಈ ಆಂತರಿಕ ಕಲಹವು ಇಡೀ ಸಮೂಹದ ಸ್ಥಿರತೆಗೆ ದುಷ್ಪರಿಣಾಮ ಉಂಟುಮಾಡಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಅವರೊಂದಿಗೆ ನಡೆದ ಈ ಸಭೆಯನ್ನು ಬಿಕ್ಕಟ್ಟನ್ನು ಬಗೆಹರಿಸುವ ಪ್ರಯತ್ನವೆಂದು ವಲಯದ ಮೂಲಗಳು ವಿವರಿಸಿವೆ.

ಟಾಟಾ ಟ್ರಸ್ಟ್‌ನ ಒಳಗಿನ ಭಿನ್ನಮತದಿಂದ ಉಂಟಾದ ಆಡಳಿತಾತ್ಮಕ ಬಿಕ್ಕಟ್ಟನ್ನು ಬಗೆಹರಿಸಲು ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ಅಕ್ಟೋಬರ್ 10ರಂದು ನಡೆಯಲಿರುವ ಟ್ರಸ್ಟ್ ಸಭೆಯಲ್ಲಿ ಮುಂದಿನ ತೀರ್ಮಾನಗಳು ಸ್ಪಷ್ಟವಾಗುವ ನಿರೀಕ್ಷೆಯಿದೆ.

ರತನ್ ಟಾಟಾ ಅವರು ಕೇವಲ ವ್ಯವಹಾರ ಸಾಮ್ರಾಜ್ಯವನ್ನೇ ಕಟ್ಟಲಿಲ್ಲ, ಆದರೆ ನಂಬಿಕೆ, ನೈತಿಕತೆ ಮತ್ತು ಜನಸೇವೆಯ ಗಟ್ಟಿಯಾದ ನೆಲೆ ನಿರ್ಮಿಸಿದರು. ತಮ್ಮ ಸ್ವಾರ್ಥಕ್ಕಿಂತ ರಾಷ್ಟ್ರದ ಹಿತವನ್ನು ಮುಂದಿಟ್ಟ ಅವರು ಕೋಟ್ಯಾಂತರ ಜನರಿಗೆ ಉದ್ಯೋಗದ ಅವಕಾಶ ನೀಡಿ, ಭಾರತೀಯ ಉದ್ಯಮ ಲೋಕಕ್ಕೆ ಹೊಸ ದಿಕ್ಕು ತೋರಿಸಿದರು. ಇಂತಹ ವ್ಯಕ್ತಿತ್ವದಿಂದ ಬೆಳೆದು ಬಂದ ಟಾಟಾ ಸಮೂಹದೊಳಗೆ ಇಂದು ಉಂಟಾಗಿರುವ ಒಳಜಗಳ, ಆ ಮಹಾನ್ ಪರಂಪರೆಯ ಮೌಲ್ಯಗಳಿಗೆ ಧಕ್ಕೆ ತರುತ್ತಿದೆ. ರತನ್ ಟಾಟಾ ಅವರ ಕನಸಿನ ಸಂಸ್ಥೆ ವೈಯಕ್ತಿಕ ಪೈಪೋಟಿಯ ಅಖಾಡವಾಗದೇ, ಸಮಾಜದ ಅಭಿವೃದ್ಧಿಯ ದೀಪವಾಗಿ ಮುಂದುವರಿಯಬೇಕು ಎನ್ನುವುದು ಕೋಟ್ಯಾಂತರ ಜನರ ಆಶಯವಾಗಿದೆ.

K.M.Sathish Gowda

Join WhatsApp

Join Now

Facebook

Join Now

Read more

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ಸಂದೇಶ

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ: ಮುಖ್ಯಮಂತ್ರಿ ಸಿದ್ದರಾಮಯ್ಯ

Leave a Comment