ಉತ್ತರ ಕರ್ನಾಟಕದ ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ರಾಜು ತಾಳಿಕೋಟೆಯವರು ಇಹಲೋಕ ತ್ಯಜಿಸಿದ್ದಾರೆ. ಹಾಸ್ಯ, ವ್ಯಂಗ್ಯ ಹಾಗೂ ನಾಟಕಗಳ ಮೂಲಕ ಜನಮನ ಗೆದ್ದ ಈ ಪ್ರತಿಭಾವಂತ ಕಲಾವಿದ ಇಂದು (ಅ.13) ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ರಾಜು ತಾಳಿಕೋಟೆಯವರು ಸಿನಿಮಾ ಶೂಟಿಂಗ್‌ಗೆ ಉಡುಪಿಗೆ ಬಂದಿದ್ದರು. ಈ ವೇಳೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಾಲ್ಕು ಗಂಟೆ ಸುಮಾರಿಗೆ ವಿಧಿವಶರಾದರು. 59 ವರ್ಷದ ರಾಜು ತಾಳಿಕೋಟೆಯವರು ಪತ್ನಿಯರು, ಮೂವರು ಮಕ್ಕಳನ್ನು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ಮೂಲದ ರಾಜು ತಾಳಿಕೋಟೆ ಅವರ ಮೂಲ ಹೆಸರು ರಾಜೇಸಾಬ ಮುಕ್ತುಮಸಾಬ್ ತಾಳಿಕೋಟೆ. ಅವರ ತಂದೆ-ತಾಯಿ ಸ್ಥಾಪಿಸಿದ್ದ ‘ಖಾಸ್ಗತೇಶ್ವರ ನಾಟ್ಯ ಸಂಘ’ದ ಪ್ರಭಾವದಲ್ಲಿ ಬಾಲ್ಯದಲ್ಲೇ ರಂಗಭೂಮಿಗೆ ಕಾಲಿಟ್ಟ ಅವರು, ಶಾಲಾ ಶಿಕ್ಷಣವನ್ನು ನಾಲ್ಕನೇ ತರಗತಿಯವರೆಗೂ ಮಾತ್ರ ಮುಂದುವರಿಸಿದ್ದರು. ನಂತರ ಪೂರ್ಣಕಾಲಿಕ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡರು.
‘ಕಲಿಯುಗದ ಕುಡುಕ’ ನಾಟಕದ ಮೂಲಕ ರಾಜ್ಯಾದ್ಯಂತ ಜನಪ್ರಿಯರಾದ ರಾಜು ತಾಳಿಕೋಟೆ, ನಂತರ ಧಾರವಾಡ ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ನಿರ್ದೇಶಕ ಆನಂದ್ ಪಿ ರಾಜು ಅವರ ‘ಹೆಂಡ್ತಿ ಅಂದ್ರೆ ಹೆಂಡ್ತಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾದ ಅವರು, ಯೋಗರಾಜ್ ಭಟ್ ನಿರ್ದೇಶನದ ‘ಮನಸಾರೆ’ ಚಿತ್ರದಿಂದ ಖ್ಯಾತಿ ಪಡೆದರು.
‘ಪಂಚರಂಗಿ’, ‘ಜಾಕಿ’, ‘ಮೈಲಾರಿ’, ‘ವೀರಬಾಹು’, ‘ಟೋಪಿವಾಲಾ’, ‘ಭರ್ಜರಿ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಹಾಸ್ಯಭರಿತ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, ಕಿಚ್ಚ ಸುದೀಪ್ ನಿರೂಪಣೆಯ ‘ಬಿಗ್ ಬಾಸ್ ಕನ್ನಡ ಸೀಸನ್ 7’ ಕಾರ್ಯಕ್ರಮದಲ್ಲೂ ಭಾಗವಹಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು.
ನಿಜಜೀವನದಲ್ಲೂ ತಮ್ಮ ಹಾಸ್ಯಪ್ರವೃತ್ತಿ, ಸರಳತೆ ಮತ್ತು ಜನಪರ ನಡವಳಿಕೆಯಿಂದ ಎಲ್ಲರ ಮನದಲ್ಲಿ ಸ್ಥಾನ ಪಡೆದಿದ್ದ ರಾಜು ತಾಳಿಕೋಟೆಯವರ ಅಗಲಿಕೆಯಿಂದ ಕನ್ನಡ ಚಿತ್ರರಂಗ, ರಂಗಭೂಮಿ ಹಾಗೂ ಅಭಿಮಾನಿಗಳಲ್ಲಿ ಆಘಾತ ಉಂಟಾಗಿದೆ.
ರಾಜು ತಾಳಿಕೋಟೆ ಅವರಿಗೆ ಅಂತ್ಯಕ್ರಿಯೆ ನಾಳೆ ತಾಳಿಕೋಟೆಯಲ್ಲಿ ನಡೆಯುವ ಸಾಧ್ಯತೆ ಇದೆ.
ಕಲಾರಂಗದ ಅನೇಕ ಗಣ್ಯರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.







