ಬೆಂಗಳೂರು: ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ತೀವ್ರ ಟೀಕೆ ನಡೆಸಿದ್ದಾರೆ.
“ಅಮಾವಾಸ್ಯೆ ದಿನ ಕಾಣದಿರುವವನು ಚಂದ್ರ; ಸಿದ್ದರಾಮಯ್ಯ ಅವರೇ ಸೂರ್ಯನಲ್ಲ. ಚಂದ್ರನನ್ನು ನೋಡಿ ಪೂಜೆ ಮಾಡುವ ಜನರೊಂದಿಗೆ ಅವರು ಇದ್ದು ಇದ್ದು, ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಸೂರ್ಯ ಇರುವುದಿಲ್ಲ ಎಂಬ ಗೊಂದಲದಲ್ಲಿ ಅವರು ಇದ್ದಾರೆ,” ಎಂದು ತೇಜಸ್ವಿ ಸೂರ್ಯ ವ್ಯಂಗ್ಯವಾಡಿದರು.
ಅವರು ಮುಂದುವರೆದು, “ರಾಜ್ಯದಲ್ಲಿ ವರ್ಷವಿಡೀ ಅಪರಾಧಗಳು ಹೆಚ್ಚಾಗುತ್ತಿವೆ. ಕಿರಿಯ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ಆಗಿದೆ. ಆದರೆ ಗೃಹ ಸಚಿವರು ದೀಪಾವಳಿಯ ಬೆಟ್ಟಿಂಗ್ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ. ಇದೇ ನಿಮ್ಮ ಆಡಳಿತದ ವೈಖರಿ” ಎಂದು ಆರೋಪಿಸಿದರು.
“ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರದೊಳಗೆ 3 ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆದಿವೆ. ಆದರೆ ಮುಖ್ಯಮಂತ್ರಿಗಳಾಗಲಿ, ಉಪಮುಖ್ಯಮಂತ್ರಿಗಳಾಗಲಿ ಅಥವಾ ಗೃಹ ಸಚಿವರಾಗಲಿ ಯಾರೂ ಆ ವಿಷಯದ ಬಗ್ಗೆ ಶಬ್ದ ಮಾಡಿಲ್ಲ,” ಎಂದು ಅವರು ಕಿಡಿಕಾರಿದರು.
ತೇಜಸ್ವಿ ಸೂರ್ಯ ಅವರು ಮುಂದುವರಿಸಿ, “ಕಾಂಗ್ರೆಸ್ ಆಡಳಿತದ ವೈಫಲ್ಯದಿಂದ ರಾಜ್ಯ 15 ಬಿಲಿಯನ್ ಡಾಲರ್ ಹೂಡಿಕೆಯನ್ನು ಕಳೆದುಕೊಂಡಿದೆ, ಅದು ಆಂಧ್ರದ ಪಾಲಾಗಿದೆ. ರಾಜ್ಯದ ಅಭಿವೃದ್ಧಿ ಕಡೆಗಣಿಸಿ, ಐಟಿ ಸಚಿವರು ಆರ್‌ಎಸ್‌ಎಸ್ ನಿಷೇಧದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ, ಗೃಹ ಸಚಿವರು ಬೆಟ್ಟಿಂಗ್‍ನಲ್ಲಿ ಕಾರ್ಯನಿರತರಾಗಿದ್ದಾರೆ” ಎಂದು ಗಂಭೀರ ಆರೋಪ ಹೊರಿಸಿದರು.
ಕಾಂಗ್ರೆಸ್ ಆಡಳಿತದ ವಿಫಲತೆಗೆ ಪ್ರಧಾನಿ ಕಾರಣರೇ?
“ಪ್ರತಿ ಬಾರಿ ಕಾಂಗ್ರೆಸ್ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪ್ರಧಾನಿ ಮೋದಿ ಮತ್ತು ನಮ್ಮ ಸಂಸದರನ್ನು ಗುರಿಯಾಗಿಸುತ್ತಿದೆ. ಆದರೆ ರಾಜ್ಯದ ಸ್ಥಿತಿ ಏನಾಗಿದೆ ನೋಡಿ — ಎರಡು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಬಸ್ ನೌಕರರು ಸಂಬಳಕ್ಕಾಗಿ ಬೀದಿಗಿಳಿದಿದ್ದಾರೆ — ಇದಕ್ಕೂ ಮೋದಿ ಕಾರಣವೇ?” ಎಂದು ಪ್ರಶ್ನಿಸಿದರು.
“ಹುಬ್ಬಳ್ಳಿ–ಧಾರವಾಡ ಸೇರಿದಂತೆ ಸಾವಿರಾರು ಯುವಕರು ಸರ್ಕಾರಿ ಮತ್ತು ಶಿಕ್ಷಕರ ಹುದ್ದೆ ಭರ್ತಿಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ. ವಿವಿಧ ಇಲಾಖೆಗಳ ತೆರಿಗೆ ಹೆಸರಿನಲ್ಲಿ ಭ್ರಷ್ಟಾಚಾರ ಉಕ್ಕಿ ಹರಿಯುತ್ತಿದೆ. ರಾಜ್ಯದ ಹಣ ಬಿಹಾರ ಚುನಾವಣೆಗೆ ಉಪಯೋಗವಾಗುತ್ತಿದೆ,” ಎಂದು ಅವರು ಆರೋಪಿಸಿದರು.
ತೇಜಸ್ವಿ ಸೂರ್ಯ ಹೇಳಿದರು: “ಕಾಂಗ್ರೆಸ್ ಆಡಳಿತದಿಂದ ಏಳು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರಿಗೆ ಕೆಲಸದ ಹಣ ಬಿಡುಗಡೆ ಮಾಡದೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಜನರನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ಬದಲು, ಸರ್ಕಾರದ ಮೇಲೆಯೇ ಅವಲಂಬಿತರನ್ನಾಗಿ ಮಾಡಿರುವುದು ನಿಮ್ಮ ಸರ್ಕಾರದ ಸಾಧನೆ” ಎಂದು ಕಟುವಾಗಿ ವ್ಯಂಗ್ಯವಾಡಿದರು.
ಕೊನೆಗೆ ಅವರು ಹೇಳಿದರು, “ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಹೊಂದಿದ ನಂತರ ಜನರು ನೆನಪಿಸಿಕೊಳ್ಳುವಂಥದ್ದು ಎಂದರೆ — ಶ್ರೀಮಂತ ಕರ್ನಾಟಕವನ್ನು ಸಾಲದ ಕೂಪಕ್ಕೆ ತಳ್ಳಿದ ಆಡಳಿತ ಮಾತ್ರ. ಇದು ನಿಮ್ಮ ಸರ್ಕಾರದ ‘ಸಾಧನೆ’” ಎಂದು ತೇಜಸ್ವಿ ಸೂರ್ಯ ಹೇಳಿದರು.






