ಶಿವಮೊಗ್ಗ: ಇತ್ತೀಚೆಗೆ “ಕ್ರಾಂತಿದೀಪ”ಪತ್ರಿಕೆಯ ಸಂಪಾದಕ ಎನ್. ಮಂಜುನಾಥ್ ಅವರು ಮಾಡಿದ ಪತ್ರಿಕಾಗೋಷ್ಠಿಯ ಹೇಳಿಕೆಗಳು ಮತ್ತು ತಮ್ಮ ಮೇಲೆ ಮಾಡಿದ ಆರೋಪಗಳ ವಿರುದ್ಧ ನೀಡಿದ ವಿವರಣೆಗಳು ಈಗ ಶಿವಮೊಗ್ಗದ ಪತ್ರಿಕೋದ್ಯಮ ವಲಯದಲ್ಲಿ ಹೊಸ ಚರ್ಚೆ ಹುಟ್ಟಿಸಿವೆ. ಆದರೆ ಸ್ಥಳೀಯ ಪತ್ರಕರ್ತರ ಬಹುಪಾಲು ಈ ಹೇಳಿಕೆಗಳನ್ನು “ವೈಯಕ್ತಿಕ ಅಹಂಕಾರದ ಪ್ರದರ್ಶನ” ಹಾಗೂ “ಮಾಧ್ಯಮದ ಗೌರವಕ್ಕೆ ಧಕ್ಕೆ ತರುವ ಕೃತ್ಯ”ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾ ಘಟಕ ಖಂಡಿಸಿದೆ.
“ಮಾಧ್ಯಮ ಎಂದರೆ ಸತ್ಯದ ಪ್ರತಿಬಿಂಬ, ಅಧಿಕಾರದ ಬಲಗೈ ಅಲ್ಲ”
ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷರು ಹಾಗೂ ಹಲೋ ಶಿವಮೊಗ್ಗ ಪತ್ರಿಕೆಯ ಸಂಪಾದಕರಾದ ಡಿ.ಜಿ.ನಾಗರಾಜ್‌ರವರು ಹೇಳುವಂತೆ — “ಶಿವಮೊಗ್ಗದ ಮಾಧ್ಯಮ ಕ್ಷೇತ್ರ ಯಾರೊಬ್ಬರ ಖಾಸಗಿ ಆಸ್ತಿಯೂ ಅಲ್ಲ. ಪತ್ರಿಕೋದ್ಯಮ ಎನ್ನುವುದು ಸಮಾಜದ ಧ್ವನಿ, ಸಾರ್ವಜನಿಕ ಹೊಣೆಗಾರಿಕೆಗೆ ಕಟ್ಟಿಬದ್ದವಾದ ವೃತ್ತಿ. ಪತ್ರಿಕಾ ಭವನ ಸರ್ಕಾರದ ಸಂಪತ್ತಾಗಿದ್ದು, ಅದನ್ನು ಯಾರೇ ಆಗಲಿ ತಮ್ಮ ಖಾಸಗಿ ಪ್ರಚಾರ ವೇದಿಕೆಯಾಗಿಸಲು ಹಕ್ಕಿಲ್ಲ”ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಧ್ವನಿ ಸಂಘದಿಂದ ಪ್ರತಿಕ್ರಿಯೆ: ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರ ಆರೋಪಗಳು ಸುಳ್ಳು – ನಾಗರಾಜ್
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡುತ್ತಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಶಿವಮೊಗ್ಗ ಘಟಕದ ಅಧ್ಯಕ್ಷ ಡಿ.ಜಿ. ನಾಗರಾಜ್ ಅವರು ಸ್ಪಷ್ಟನೆ ನೀಡಿದರು.
ಅವರು ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ, “2018 ರಿಂದ 2022ರವರೆಗೆ ನಡೆದಿರುವ ಕೇಸಿನಲ್ಲಿ ಹೈಕೋರ್ಟ್ ಅಥವಾ ಜಿಲ್ಲಾಧಿಕಾರಿ ಕಚೇರಿಯಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪರವಾಗಿ ಯಾವುದೇ ಆದೇಶ ಹೊರಬಿದ್ದಿಲ್ಲ. ಹೈಕೋರ್ಟ್ ವಿಚಾರಣೆಯ ಸಮಯದಲ್ಲಿ ಟ್ರಸ್ಟ್ ಸಲ್ಲಿಸಿದ ರಿಟ್ ಪೆಟಿಷನ್ ವಾಪಸ್ಸಾಗಿದ್ದು, ವಿಚಾರಣೆ ನಡೆಯದೇ ವಿಲೇವಾರಿಯಾಗಿದೆ. ಆದ್ದರಿಂದ ‘ಟ್ರಸ್ಟ್ ಪರವಾಗಿ ಕೋರ್ಟ್ ಆದೇಶ ಬಂದಿದೆ’ ಎಂಬ ಹೇಳಿಕೆ ಸುಳ್ಳು,” ಎಂದು ನಾಗರಾಜ್ ತಿಳಿಸಿದ್ದಾರೆ.
ಅವರು ಮುಂದುವರೆದು, “ನಮ್ಮ ಧ್ವನಿ ಸಂಘದ ಹೋರಾಟ ಸರ್ಕಾರದ ಅನುದಾನದಿಂದ ನಿರ್ಮಿತವಾದ ಸರ್ಕಾರದ ಪತ್ರಿಕಾಭವನದ ಸತ್ಯಾಸತ್ಯತೆ ಮತ್ತು ಪಾರದರ್ಶಕತೆಗೆ ಸಂಬಂಧಿಸಿದೆ. ಇದು ಯಾವುದೇ ಖಾಸಗಿ ಟ್ರಸ್ಟ್ ಸ್ವತ್ತು ಅಲ್ಲ. ಪತ್ರಿಕಾಭವನದಲ್ಲಿ ಹಣ ವಸೂಲಿ ನಡೆಯುತ್ತಿರುವ ಬಗ್ಗೆ ಈಗಾಗಲೇ ತನಿಖಾ ವರದಿ ಮತ್ತು ಡಿಸಿ ನಡಾವಳಿಗಳು ಲಭ್ಯವಿದೆ,” ಎಂದು ಹೇಳಿದ್ದಾರೆ.


ನಾಗರಾಜ್ ಅವರು ತಮ್ಮ ಮೇಲೆ ಯಾವುದೇ ಕೇಸು ದಾಖಲಾಗಿಲ್ಲವೆಂದು ಸ್ಪಷ್ಟಪಡಿಸಿ, “ನನ್ನ ವಿರುದ್ಧ ಸುಳ್ಳು ಪ್ರಚಾರ ನಡೆಯುತ್ತಿದೆ. ಪತ್ರಕರ್ತರನ್ನು ಬೆದರಿಸುವ ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರದ ಪತ್ರಿಕಾಭವನದಲ್ಲಿ ಎಲ್ಲ ಪತ್ರಕರ್ತರು ಮುಕ್ತವಾಗಿ ಕಾರ್ಯನಿರ್ವಹಿಸಲು ಹಕ್ಕು ಹೊಂದಿದ್ದಾರೆ,” ಎಂದಿದ್ದಾರೆ.
ಅವರು ಹಿರಿಯ ಹಾಗೂ ಕಿರಿಯ ಪತ್ರಕರ್ತರಿಗೆ ಮನವಿ ಮಾಡಿಕೊಂಡು, “ಒಬ್ಬ ವ್ಯಕ್ತಿ ಟೈಪ್ ಮಾಡಿದ ಸುದ್ದಿಯನ್ನು ಯಥಾವತ್ತಾಗಿ ಪ್ರಕಟಿಸುವುದಕ್ಕಿಂತ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ ಪ್ರಕಟಿಸಬೇಕು. ನಾವು ಹೈಕೋರ್ಟ್ ಮೂಲಕ ಸತ್ಯದ ಹೋರಾಟ ಮುಂದುವರಿಸುತ್ತೇವೆ,” ಎಂದು ಹೇಳಿದ್ದಾರೆ.

ಪತ್ರಿಕಾ ಭವನದ ವಿವಾದದ ನಿಜಸ್ಥಿತಿ
ಮಾಧ್ಯಮ ಮೂಲಗಳ ಪ್ರಕಾರ, ರಾಜ್ಯ ಸರ್ಕಾರದಿಂದ ಪತ್ರಕರ್ತರ ಕಲ್ಯಾಣಕ್ಕಾಗಿ ನಿರ್ಮಿಸಲಾದ ಶಿವಮೊಗ್ಗ ಪತ್ರಿಕಾ ಭವನವನ್ನು ಕೆಲವರು “ಸ್ವಂತ ಕಚೇರಿ”ಯಂತೆ ಬಳಸುತ್ತಿರುವುದರ ಬಗ್ಗೆ ಹಲವು ಬಾರಿ ಜಿಲ್ಲಾ ಆಡಳಿತದ ಗಮನಕ್ಕೂ ವಿಷಯ ಗೊತ್ತಾಗಿದ್ದು, ಅಧಿಕಾರಿಗಳು ಮತ್ತು ನಿಜವಾದ ಕಾರ್ಯನಿರತ ಪತ್ರಕರ್ತರ ಒಂದು ವಲಯ ಈಗಾಗಲೇ ಈ ವಿಷಯವನ್ನು ಉನ್ನತ ಮಟ್ಟದಲ್ಲಿ ಪ್ರಸ್ತಾಪಿಸಿರುವುದಾಗಿ ತಿಳಿದುಬಂದಿದೆ.
“ಪ್ರೆಸ್ ಟ್ರಸ್ಟ್ ನಮ್ಮದು”ಎಂಬ ಘೋಷಣೆಗೆ ಕಟು ಪ್ರತಿಕ್ರಿಯೆ
ಮಂಜುನಾಥ್ ಅವರ “ಜಿಲ್ಲೆಯ ಪ್ರೆಸ್ ಟ್ರಸ್ಟ್ ನಮ್ಮದು”ಎನ್ನುವ ಹೇಳಿಕೆಗೆ ಜಿಲ್ಲೆಯ ನಿಷ್ಪಕ್ಷಪಾತ ಪತ್ರಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಒಬ್ಬ ವ್ಯಕ್ತಿ ಅಥವಾ ಸಣ್ಣ ಗುಂಪೊಂದು ಪತ್ರಿಕೋದ್ಯಮದ ಹೆಸರಿನಲ್ಲಿ ಆಡಳಿತವನ್ನು ಬೆದರಿಸುವುದು, ಅಧಿಕಾರಿಗಳನ್ನು ಧಿಕ್ಕರಿಸುವುದು, ಹಾಗೂ ನಿಜವಾದ ಪತ್ರಕರ್ತರ ವಿಶ್ವಾಸವನ್ನು ಕುಸಿಯುವಂತೆ ಮಾಡುವುದು ನಿಷೇಧಾರ್ಹ. ಪತ್ರಿಕೋದ್ಯಮವು ಅಹಂಕಾರದ ವೇದಿಕೆ ಅಲ್ಲ; ಅದು ಸತ್ಯಕ್ಕಾಗಿ ಹೋರಾಡುವ ಕ್ಷೇತ್ರ,” ಎಂದು ಹಿರಿಯ ಪತ್ರಕರ್ತರು ಮತ್ತು ಹೊಸದಾಗಿ ಬರುತ್ತಿರುವ ಯುವ ಪತ್ರಕರ್ತರು ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಭವನದ ಪ್ರವೇಶ ನಿರ್ಬಂಧ ಹೇಳಿಕೆಗೆ ತೀವ್ರ ಖಂಡನೆ, “ಪತ್ರಿಕೋದ್ಯಮ ಯಾರೊಬ್ಬರ ಸೊತ್ತು ಅಲ್ಲ” ಎಂದು ಯುವ ಪತ್ರಕರ್ತರ ಕಿಡಿ
“ಸಂಬಂಧ ಇಲ್ಲದವರು ಬಂದು ಪತ್ರಿಕಾ ಭವನದ ಹೆಸರಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಪತ್ರಿಕಾಗೋಷ್ಠಿ ಅಥವಾ ಪತ್ರಿಕಾ ಸಂವಾದಗಳಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸದಸ್ಯತ್ವ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು” ಎಂದು ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್. ಮಂಜುನಾಥ್ ನೀಡಿದ ಹೇಳಿಕೆ ಇದೀಗ ಪತ್ರಕರ್ತರ ವಲಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ.
ಈ ಹೇಳಿಕೆಯಿಂದ ಯುವ ಪತ್ರಕರ್ತರು ಹಾಗೂ ಪತ್ರಕರ್ತರ ಸಂಘಟನೆಗಳಲ್ಲಿ ಆಕ್ರೋಶದ ಅಲೆ ಎದ್ದಿದ್ದು, “ಪತ್ರಿಕೋದ್ಯಮ ಯಾರೊಬ್ಬರ ಸ್ವಂತದ ಉದ್ಯಮವಲ್ಲ, ಇದು ಜನರ ಧ್ವನಿಯ ವೇದಿಕೆ”ಎಂದು ಖಂಡನೆ ವ್ಯಕ್ತವಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಡಿಟೆಕ್ವಿವ್ ನ್ಯೂಸ್24 ನ ಮುಖ್ಯ ಸಂಪಾದಕರಾದ ಕೆ.ಎಂ. ಸತೀಶ್ ಗೌಡ ಅವರು “ಪತ್ರಿಕಾ ಭವನ ಯಾರೊಬ್ಬರ ಖಾಸಗಿ ಆಸ್ತಿಯೂ ಅಲ್ಲ, ಯಾರೊಬ್ಬರ ಕಚೇರಿಯೂ ಅಲ್ಲ. ಇದು ಎಲ್ಲ ಪತ್ರಕರ್ತರ ಮನೆ. ‘ಇವರಿಗೆ ಮಾತ್ರ ಪ್ರವೇಶ, ಇತರರಿಗೆ ಇಲ್ಲ’ಎಂಬ ನಿಲುವು ತಾಳುವ ಅಧಿಕಾರವಿಲ್ಲ. ಹೊಸ ಪತ್ರಕರ್ತರನ್ನು ತಡೆಹಿಡಿಯುವುದು ವೃತ್ತಿಗೆ ಅವಮಾನ. ಪತ್ರಿಕೋದ್ಯಮ ಎಲ್ಲರಿಗೂ ಮುಕ್ತ ವೇದಿಕೆ,” ಎಂದು ಖಂಡಿಸಿದ್ದಾರೆ.
ಅವರು ಮತ್ತಷ್ಟು ಸ್ಪಷ್ಟಪಡಿಸಿ, “ಪತ್ರಿಕೋದ್ಯಮ ಯಾರೊಬ್ಬರ ಸ್ವತ್ತಲ್ಲ. ಪತ್ರಿಕೆ ಅಚ್ಚು ಹಾಕುವುದೇ ಪತ್ರಕರ್ತನ ಮಾನದಂಡವಲ್ಲ. ನಿಜವಾದ ಪತ್ರಕರ್ತರು ಸತ್ಯದ ಪರ ನಿಲ್ಲುತ್ತಾರೆ, ಜನರ ಧ್ವನಿಯನ್ನು ಮುಂದಿರುತ್ತಾರೆ. ಪತ್ರಿಕೋದ್ಯಮಕ್ಕೆ ಬರುವವರನ್ನು ತಡೆಯಲು ಯಾರು ಅಧಿಕಾರ ನೀಡಿದರು? ಹೊಸ ಪೀಳಿಗೆ ಬರಬಾರದೆಂದರೆ ವೃತ್ತಿಯ ಭವಿಷ್ಯವೇ ನಿಂತುಹೋಗುತ್ತದೆ,” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಅದು ಸಾರ್ವಜನಿಕ ವೇದಿಕೆ. ಪತ್ರಕರ್ತರ ಹಕ್ಕುಗಳನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹೊಸ ಪತ್ರಕರ್ತರು ಪತ್ರಿಕೋದ್ಯಮದ ಶಕ್ತಿಯ ಭಾಗ ಇವರನ್ನು ‘ಹೊರಗಿನವರು’ಎಂದು ತಿರಸ್ಕರಿಸುವುದು ನಾಚಿಕೆಗೇಡಿತನ,” ಎಂದು ಕಿಡಿಕಾರಿದ್ದಾರೆ.
ಕೆಲವರು ಹಿರಿಯ ಪತ್ರಕರ್ತರೂ ಸಹ ಯುವ ಪತ್ರಕರ್ತರ ಪರವಾಗಿ ನಿಂತು, “ಪತ್ರಿಕೋದ್ಯಮ ಜೀವಂತವಾಗಿರಲು ಹೊಸ ತಲೆಮಾರಿನ ಭಾಗವಹಿಸುವಿಕೆ ಅಗತ್ಯ. ‘ನಾವೇ ನಿಜವಾದ ಪತ್ರಕರ್ತರು’ ಎಂಬ ಧೋರಣೆ ವೃತ್ತಿಯ ಧರ್ಮವಲ್ಲ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಪ್ರೆಸ್ ಟ್ರಸ್ಟ್ ಜಿಲ್ಲಾಧಿಕಾರಿ ವ್ಯಾಪ್ತಿಗೆ ಒಳಪಡಲ್ಲʼ ಹೇಳಿಕೆ ವಿರುದ್ಧ ಖಂಡನೆ
ಮಂಜುನಾಥ್ ಅವರು “ಪ್ರೆಸ್ ಟ್ರಸ್ಟ್ ನಮ್ಮದು, ಜಿಲ್ಲಾಧಿಕಾರಿಯೂ ನಮಗೇ ಕೇಳಬೇಕು”ಎಂಬ ಶೈಲಿಯ ಹೇಳಿಕೆ ನೀಡಿದ ಕುರಿತು ಹಲವು ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.“ಒಬ್ಬ ವ್ಯಕ್ತಿ ಅಥವಾ ಗುಂಪು ಪತ್ರಿಕೋದ್ಯಮದ ಹೆಸರಿನಲ್ಲಿ ಆಡಳಿತದ ವಿರುದ್ಧ ಬೆದರಿಕೆ ಹುಟ್ಟಿಸುವುದು ಪತ್ರಿಕೋದ್ಯಮದ ನೈತಿಕತೆಗೆ ಧಕ್ಕೆ ತರುವ ಕೆಲಸ. ಅಧಿಕಾರಿಗಳು ಅಥವಾ ಸಹಪತ್ರಕರ್ತರನ್ನು ತಾನೇ ನಿಯಂತ್ರಿಸುತ್ತೇನೆ ಎಂಬ ಭಾವನೆ ಸಮಾಜದ ವಿಶ್ವಾಸಕ್ಕೆ ಧಕ್ಕೆ ತರುತ್ತದೆ,” ಎಂದು ಪತ್ರಕರ್ತ ಹಾಗೂ ಅಗ್ನಿಯುಗ ಪತ್ರಿಕೆಯ ಸಂಪಾದಕ ಶಿವರಾಜ್ ಬಿ.ಸಿ ಅಭಿಪ್ರಾಯಪಟ್ಟಿದ್ದಾರೆ.
ಹೈಕೋರ್ಟ್ ಆದೇಶದ ಕುರಿತು ಗೊಂದಲ
ಮಂಜುನಾಥ್ ಅವರು ತಮ್ಮ ಪರವಾಗಿ ಹೈಕೋರ್ಟ್ ಆದೇಶವಿದೆ ಎಂದು ಹೇಳಿರುತ್ತಾರೆ, ಅದರ ಪ್ರತಿಯನ್ನು ಪತ್ರಕರ್ತರಿಗೆ ಹಾಗೂ ಜಿಲ್ಲಾಡಳಿತಕ್ಕೆ “ಕೋರ್ಟ್ ಆದೇಶವಿದ್ದರೆ ಸಾರ್ವಜನಿಕ ದಾಖಲೆ ನೀಡಲಿ; ಕಾನೂನಿನ ಹೆಸರಿನಲ್ಲಿ ತಪ್ಪು ಪ್ರಚಾರ ಮಾಡುವುದೂ ಕಾನೂನುಬಾಹಿರ,” ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕಾನೂನು ಸಲಹೆಗಾರರಾದ ಷಡಾಕ್ಷರಪ್ಪ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಭವನದ ಹೆಸರಲ್ಲಿ ದಬ್ಬಾಳಿಕೆ: ಪ್ರೆಸ್ ಟ್ರಸ್ಟ್‌ನ ಹೇಳಿಕೆಗಳಿಗೆ ಪ್ರತಿಕ್ರಿಯೆ
ಶಿವಮೊಗ್ಗ ಪತ್ರಿಕಾ ಭವನ ಮತ್ತು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕುರಿತಾಗಿ ಅಧ್ಯಕ್ಷ ಎನ್.ಮಂಜುನಾಥ್ ನೀಡಿದ ಹೇಳಿಕೆಗಳ ವಿರುದ್ಧ, ಜಿಲ್ಲಾ ಮಟ್ಟದ ಅನೇಕ ಪತ್ರಕರ್ತರು ಮತ್ತು ಮಾಧ್ಯಮ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರೆಸ್ ಟ್ರಸ್ಟ್‌ನ ಹೇಳಿಕೆಗಳು ಸತ್ಯಾಂಶವಿಲ್ಲದ ಹಾಗೂ ಪತ್ರಿಕೋದ್ಯಮದ ಸ್ವತಂತ್ರತೆಯನ್ನು ಹದಗೆಡಿಸಲು ಮಾಡಿದ ಪ್ರಯತ್ನವೆಂದು ಆರೋಪಿಸಿದ್ದಾರೆ.
“ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಯುತ್ತದೆ” — ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಘೋಷಣೆ
ಶಿವಮೊಗ್ಗ ಪತ್ರಿಕಾ ಭವನ ಹಾಗೂ ಪ್ರೆಸ್ ಟ್ರಸ್ಟ್ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ನವರ ಮಾರ್ಗದರ್ಶನದೊಂದಿಗೆ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ.ನಾಗರಾಜ್ ರವರ ನೇತೃತ್ವ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಘಟಕದ ಪದಾಧಿಕಾರಿಗಳು ಒಂದೇ ಧ್ವನಿಯಾಗಿದ್ದು, “ನೈಜ ಪತ್ರಕರ್ತರ ಹಕ್ಕು, ಪತ್ರಿಕಾ ಸ್ವಾತಂತ್ರ್ಯ ಮತ್ತು ಪಾರದರ್ಶಕ ಆಡಳಿತಕ್ಕಾಗಿ ನಾವು ಎಲ್ಲ ರೀತಿಯ ಕಾನೂನು ಹೋರಾಟವನ್ನು ನ್ಯಾಯ ಸಿಗುವವರೆಗೆ ಮುಂದುವರಿಸುತ್ತೇವೆ. ಪತ್ರಿಕಾ ಭವನ ಎಲ್ಲರದು, ಕೆಲವರ ಸ್ವಂತ ಆಸ್ತಿ ಅಲ್ಲ. ಪತ್ರಕರ್ತರ ಹಿತಾಸಕ್ತಿ ಮತ್ತು ವೃತ್ತಿಯ ಗೌರವ ಕಾಪಾಡುವುದು ನಮ್ಮ ನೈತಿಕ ಜವಾಬ್ದಾರಿ,” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರೆಸ್ ಟ್ರಸ್ಟ್‌ನ ‘ಐಡಿ ಕಾರ್ಡ್ ನಿಯಮ’ಪ್ರಶ್ನೆಗೊಳಪಟ್ಟಿದೆ
ಪ್ರೆಸ್ ಟ್ರಸ್ಟ್ ವತಿಯಿಂದ ಪ್ರಕಟವಾದ ಹೊಸ ನಿಯಮದ ಪ್ರಕಾರ, “ಪ್ರೆಸ್ ಟ್ರಸ್ಟ್ ಸದಸ್ಯರಿಗೆ ಮಾತ್ರ ಪತ್ರಿಕಾಗೋಷ್ಠಿಗಳ ಪ್ರವೇಶ” ಎಂದು ಹೇಳಲಾಗಿದೆ. ಇದನ್ನು ಬಹುತೇಕ ಪತ್ರಕರ್ತರು “ಸ್ವತಂತ್ರ ಮಾಧ್ಯಮದ ಹಕ್ಕಿಗೆ ಧಕ್ಕೆ” ಎಂದು ವಿರೋಧಿಸಿದ್ದಾರೆ.
“ಒಬ್ಬ ಅಧ್ಯಕ್ಷ ಅಥವಾ ಸಮಿತಿಯ ನಿರ್ಧಾರದಿಂದ ಪತ್ರಿಕಾಗೋಷ್ಠಿಗೆ ಪ್ರವೇಶ ನಿರಾಕರಿಸುವುದು ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ. ಸರ್ಕಾರದ ಅನುದಾನ ಪಡೆದ ಕಟ್ಟಡದಲ್ಲಿ ಇಂತಹ ನಿಬಂಧನೆ ವಿಧಿಸುವುದು ಕಾನೂನಾತ್ಮಕವಾಗಿಲ್ಲ” ಎಂದು ಹಿರಿಯ ಪತ್ರಕರ್ತರು ಅಭಿಪ್ರಾಯಪಟ್ಟಿದ್ದಾರೆ.
“ಪತ್ರಿಕಾ ಭವನದ ನಿಜವಾದ ಉದ್ದೇಶ ವೃತ್ತಿಪರ ಪತ್ರಿಕೋದ್ಯಮಕ್ಕೆ”
“ಪತ್ರಿಕಾ ಭವನದ ಉದ್ದೇಶ ಪತ್ರಕರ್ತರ ಏಕತೆ, ವೃತ್ತಿ ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳ ಚರ್ಚೆಗಾಗಿ. ಅದನ್ನು ಕೆಲವರ ವೈಯಕ್ತಿಕ ವೇದಿಕೆಯಾಗಿ ರೂಪಿಸಲು ಯತ್ನಿಸುವುದೇ ನಿಜವಾದ ಅಕ್ರಮ. ನೈಜ ಪತ್ರಕರ್ತರ ಧ್ವನಿಯನ್ನು ಮುಚ್ಚಲು ಪ್ರಯತ್ನಿಸಿದರೆ, ರಾಜ್ಯ ಮಟ್ಟದ ಮಾಧ್ಯಮ ಸಂಘಟನೆಗಳು ಹೋರಾಟದ ದಾರಿ ಹಿಡಿಯಲಿವೆ” ಎಂದು ಪತ್ರಿಕೋದ್ಯಮ ಕ್ಷೇತ್ರದ ಹಿರಿಯರು ಎಚ್ಚರಿಸಿರುತ್ತಾರೆ.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ನೀಡಿದ ಹೇಳಿಕೆಗಳು ವಿವಾದದ ಹೊಸ ಅಧ್ಯಾಯ ತೆರೆದಿವೆ. ಪತ್ರಿಕಾ ಭವನದ ಸ್ವಾಮ್ಯ, ಆಡಳಿತ ಹಕ್ಕು ಮತ್ತು ಪತ್ರಕರ್ತರ ಪ್ರವೇಶ ಹಕ್ಕುಗಳ ಕುರಿತ ವಿವಾದ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಸರ್ಕಾರ ಮತ್ತು ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕೆಂದು ಪತ್ರಕರ್ತರು ಒತ್ತಾಯಿಸುತ್ತಿದ್ದಾರೆ.
ಮಾಧ್ಯಮದ ನೈತಿಕತೆಗೆ ಕರೆ
ಸಮಾಜದಲ್ಲಿ ಮಾಧ್ಯಮದ ವಿಶ್ವಾಸ ಉಳಿಸಿಕೊಳ್ಳಲು “ಸತ್ಯ, ನೈತಿಕತೆ ಮತ್ತು ಸಹಕಾರದ”ವಾತಾವರಣ ನಿರ್ಮಾಣ ಅಗತ್ಯವೆಂದು ಶಿವಮೊಗ್ಗದ ಪತ್ರಕರ್ತರು ಒಟ್ಟಾಗಿ ಘೋಷಿಸಿದ್ದಾರೆ. “ಮಾಧ್ಯಮದ ಹೆಸರಿನಲ್ಲಿ ಅಥವಾ ಸಂಘದ ಹೆಸರಿನಲ್ಲಿ ಜನರನ್ನು ಬೆದರಿಸುವ ದಿನಗಳು ಹೋಗಿವೆ. ಇದು ಜನರ ವೇದಿಕೆ, ವ್ಯಕ್ತಿಯ ವೇದಿಕೆ ಅಲ್ಲ”ಎಂದು ಹಿರಿಯ ಪತ್ರಕರ್ತರು ಸ್ಪಷ್ಟ ಸಂದೇಶ ನೀಡಿದ್ದಾರೆ.
ಮಾಧ್ಯಮದ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಪ್ರಯತ್ನ ಮಾಡಿದರೆ, ಅದು ಪತ್ರಿಕೋದ್ಯಮದ ಶುದ್ಧತೆಗೆ ಧಕ್ಕೆ ತರುತ್ತದೆ. ಪತ್ರಕರ್ತರು ಪರಸ್ಪರ ಗೌರವದಿಂದ, ನೈತಿಕತೆಯಿಂದ ಮತ್ತು ಪಾರದರ್ಶಕತೆಯಿಂದ ನಡೆದುಕೊಂಡಾಗ ಮಾತ್ರ ಜನರ ವಿಶ್ವಾಸ ಉಳಿಯುತ್ತದೆ. ಪತ್ರಿಕೋದ್ಯಮದ ಪ್ರಭಾವ ಜನರ ಪರವಾಗಿರಬೇಕು, ವ್ಯಕ್ತಿ ಅಥವಾ ಅನಧಿಕೃತ ಸಂಘದ ಪರವಲ್ಲ.
ಶಿವಮೊಗ್ಗದ ಪತ್ರಿಕೋದ್ಯಮ ಇಂದು ತಿರುವು ಬಿಂದುವಿನಲ್ಲಿದೆ, ಸ್ವಾರ್ಥದ ಅಹಂಕಾರ ಮತ್ತು ನೈತಿಕ ಹೊಣೆಗಾರಿಕೆಯ ನಡುವೆ ನಡೆಯುತ್ತಿರುವ ಈ ಹೋರಾಟದಲ್ಲಿ ಜನರ ನಂಬಿಕೆಯೇ ಅತೀ ದೊಡ್ಡ ತೀರ್ಪಾಗಲಿದೆ.






