ಬೆಂಗಳೂರು: ಕೇರಳದಲ್ಲಿ “ಮಿದುಳು ತಿನ್ನುವ ಅಮೀಬಾ” ಎಂದು ಕರೆಯಲಾಗುವ ನೇಗೇರಿಯಾ ಫೌಲೇರಿ ಸೋಂಕಿನ ಹಾವಳಿ ಕಂಡುಬಂದ ಹಿನ್ನೆಲೆ, ಶಬರಿಮಲೆ ಯಾತ್ರೆಗೆ ತೆರಳುವ ಅಯ್ಯಪ್ಪಸ್ವಾಮಿ ಭಕ್ತರಿಗೆ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಶಬರಿಮಲೆ ದೇವರ ದರ್ಶನಕ್ಕಾಗಿ ಪ್ರತಿದಿನ ಸರಾಸರಿ 60 ರಿಂದ 70 ಸಾವಿರ ಭಕ್ತರು ಆಗಮಿಸುತ್ತಿದ್ದು, ಕರ್ನಾಟಕದಿಂದ ದೊಡ್ಡ ಪ್ರಮಾಣದಲ್ಲಿ ಯಾತ್ರಿಕರು ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ಹೊರಡಿಸಲಾಗಿದೆ.
ನೇಗೇರಿಯಾ ಫೌಲೇರಿ ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಬೆಚ್ಚಗಿನ ತಾಜಾ ನೀರು ಹಾಗೂ ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಿಂತ ನೀರು, ಕೊಳ, ಕೆರೆ ಮತ್ತು ಈಜುಕೊಳಗಳಲ್ಲಿ ಇದರ ವಾಸವಾಗುವ ಸಾಧ್ಯತೆ ಅಧಿಕ. ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ ಮತ್ತು ಕಲುಷಿತಗೊಂಡ ನೀರನ್ನು ಕುಡಿಯುವುದರಿಂದಲೂ ಸೋಂಕು ತಗುಲುವುದಿಲ್ಲ ಎಂದು ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಆದರೆ, ನೀರು ಮೂಗಿನ ಮೂಲಕ ಒಳನುಗ್ಗಿ ಮೆದುಳಿಗೆ ತಲುಪಿದರೆ ಅಮೀಬಿಕ್ ಮೆನಿಂಗೋಎನ್ನೆಫಲೈಟಿಸ್ ಎಂಬ ಅಪರೂಪದ, ಗಂಭೀರ ಹಾಗೂ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಯನ್ನು ಉಂಟುಮಾಡಬಹುದು. ರೋಗದ ಮೊದಲ ಹಂತದಲ್ಲಿ ಪ್ರಮುಖ ಲಕ್ಷಣಗಳು ಸಾಮಾನ್ಯ ಜ್ವರದಂತೆ ಕಾಣುವುದರಿಂದ, ಬಹು ಬಾರಿ ಪತ್ತೆಮಾಡುವುದು ವಿಳಂಬವಾಗುವ ಸಾಧ್ಯತೆ ಇದೆ.
ಯಾತ್ರಿಕರು ನಿಂತ ನೀರಲ್ಲಿ ಸ್ನಾನ ಮಾಡುವಾಗ ನೀರು ಮೂಗಿಗೆ ಪ್ರವೇಶಿಸದಂತೆ ಮೂಗಿನ ಕ್ಲಿಪ್‌ಗಳನ್ನು ಬಳಸಿ ಎಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ. ಕೆರೆ, ಕೊಳ ಅಥವಾ ಅನುಮಾನಾಸ್ಪದ ನೀರಿನಲ್ಲಿ ತಲೆ ಮುಳುಗಿಸುವುದನ್ನು ಸಂಪೂರ್ಣವಾಗಿ ತಪ್ಪಿಸುವುದು ಅತ್ಯಂತ ಮುಖ್ಯ ಎಂದು ಸಲಹೆ ನೀಡಲಾಗಿದೆ.
ನೀರಿನ ಸಂಪರ್ಕದ 1 ರಿಂದ 7 ದಿನಗಳ ಒಳಗೆ ಜ್ವರ, ತೀವ್ರ ತಲೆನೋವು, ವಾಕರಿಕೆ ಅಥವಾ ವಾಂತಿ, ಕುತ್ತಿಗೆ ಬಿಗಿತ, ಗೊಂದಲ ಅಥವಾ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ರೋಗ ಲಕ್ಷಣಗಳು ತಡವಾಗಿ ಗುರುತಾದಲ್ಲಿ ಚಿಕಿತ್ಸೆಯಲ್ಲಿ ಸವಾಲು ಎದುರಾಗುವ ಸಾಧ್ಯತೆ ಇರುವುದರಿಂದ ಜಾಗೃತಿಯೇ ಪ್ರಮುಖ ಉದ್ದೇಶ ಎಂದು ತಜ್ಞರು ಹೇಳಿದ್ದಾರೆ.
ಶಬರಿಮಲೆ ಯಾತ್ರೆ ಕೋಟ್ಯಂತರ ಭಕ್ತರ ಆಸ್ತಿಕತೆಯ ಮಹತ್ವದ ಧಾರ್ಮಿಕ ಆಚರಣೆ ಎಂಬುದನ್ನು ಪರಿಗಣಿಸಿ, ಯಾತ್ರೆಯ ವೇಳೆ ನೀರಿನ ಬಳಕೆಯಲ್ಲಿ ಮುನ್ನೆಚ್ಚರಿಕೆ ವಹಿಸುವುದು ಮತ್ತು ಆರೋಗ್ಯ ಇಲಾಖೆಯ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಭಕ್ತರ ಸುರಕ್ಷತೆಗೆ ಅಗತ್ಯವೆಂದು ಇಲಾಖೆಯು ಮನವಿ ಮಾಡಿದೆ.





