ನವದೆಹಲಿ: ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್ಫೇಕ್ ವಿಡಿಯೊ ವೈರಲ್ ಆಗಿದ್ದ ಘಟನೆ ಇನ್ನೂ ಜನಚರ್ಚೆಗೆ ಕಾರಣವಾಗಿರುವಾಗಲೇ, ಡೀಪ್ಫೇಕ್ ತಂತ್ರಜ್ಞಾನ ದುರುಪಯೋಗವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಗಟ್ಟಿಯಾದ ಕಾನೂನು ರೂಪಿಸುವತ್ತ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಡೀಪ್ಫೇಕ್ ನಿಯಂತ್ರಣ ಮಸೂದೆಯನ್ನು ಶನಿವಾರ ಶಿವಸೇನಾ ನಾಯಕ ಶ್ರೀಕಾಂತ್ ಶಿಂಧೆ ಮಂಡಿಸಿದರು.
ಸಮಾಜ ಮಾಧ್ಯಮಗಳಲ್ಲಿ ಡೀಪ್ಫೇಕ್ ವಿಡಿಯೊಗಳನ್ನು ತಯಾರಿಸಿ, ವ್ಯಕ್ತಿಯ ಗೌಪ್ಯತೆ ಮತ್ತು ಮಾನಕ್ಕೆ ಧಕ್ಕೆ ತರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಮಸೂದೆ ವ್ಯಕ್ತಿಯನ್ನು ಚಿತ್ರಿಸುವ ಅಥವಾ ಚಿತ್ರೀಕರಿಸುವ ಯಾವುದೇ ಡೀಪ್ಫೇಕ್ ಕಂಟೆಂಟ್ಗಾಗಿ ಪೂರ್ವಾನುಮತಿ ಕಡ್ಡಾಯ ಮಾಡುವುದನ್ನು ಉದ್ದೇಶಿಸಿದೆ. ಮಸೂದೆ ಪ್ರಕಾರ, ಅನುಮತಿಯಿಲ್ಲದೆ ಡೀಪ್ಫೇಕ್ ರಚನೆ ಮತ್ತು ಪ್ರಸಾರ ಮಾಡಿದರೆ ಕಠಿಣ ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲಾಗುತ್ತದೆ.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ, ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ಗಣ್ಯರ ಡೀಪ್ಫೇಕ್ಗಳು ವೈರಲ್ ಆಗಿದ್ದವು. ಕಿರುಕುಳ, ಹಣಕಾಸು ವಂಚನೆ ಮತ್ತು ತಪ್ಪು ಮಾಹಿತಿ ಹರಡುವುದರಲ್ಲಿ ಡೀಪ್ಫೇಕ್ಗಳ ದುರುಪಯೋಗ ಹೆಚ್ಚುತ್ತಿರುವುದರಿಂದ ಜನರ ರಕ್ಷಣೆಗೆ ಕಠಿಣ ಕಾನೂನು ಅಗತ್ಯವಿದೆ ಎಂದು ಶಿಂಧೆ ಲೋಕಸಭೆಯಲ್ಲಿ ತಿಳಿಸಿದರು.
ತಂತ್ರಜ್ಞಾನ, ಶಿಕ್ಷಣ ಮತ್ತು ಮನರಂಜನೆ ಕ್ಷೇತ್ರಗಳಲ್ಲಿ ಡೀಪ್ಫೇಕ್ಗಳು ಉಪಯೋಗಕಾರಿಯಾದರೂ, ಇದರ ದುರುಪಯೋಗ ದೇಶದ ಭದ್ರತೆ, ವೈಯಕ್ತಿಕ ಗೌಪ್ಯತೆ ಮತ್ತು ಸಾರ್ವಜನಿಕ ನಂಬಿಕೆಗೆ ಗಂಭೀರ ಅಪಾಯ ಉಂಟುಮಾಡುತ್ತಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಡೀಪ್ಫೇಕ್ಗಳ ಮೌಲ್ಯಮಾಪನ, ಪತ್ತೆಹಚ್ಚುವಿಕೆ ಮತ್ತು ನಿಯಂತ್ರಣಕ್ಕಾಗಿ ‘ಡೀಪ್ಫೇಕ್ ಟಾಸ್ಕ್ ಫೋರ್ಸ್’ ರಚಿಸುವುದಕ್ಕೂ ಮಸೂದೆ ಪ್ರಸ್ತಾಪಿಸಿದೆ. ಜೊತೆಗೆ ಸುಧಾರಿತ ತಂತ್ರಜ್ಞಾನ ಅಭಿವೃದ್ಧಿಗೆ ಶೈಕ್ಷಣಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳೊಂದಿಗೆ ಸಹಕಾರ, ಹಾಗೂ ಸಾರ್ವಜನಿಕ-ಖಾಸಗಿ ಉಪಕ್ರಮಗಳನ್ನು ಉತ್ತೇಜಿಸಲು ವಿಶೇಷ ನಿಧಿ ಸ್ಥಾಪನೆಗಾಗಿಯೂ ಮಸೂದೆಯಲ್ಲಿ ಪರಿಗಣಿಸಲಾಗಿದೆ.
ಡಿಜಿಟಲ್ ಭವಿಷ್ಯದಲ್ಲಿ ನಾಗರಿಕರ ಭದ್ರತೆ, ಗೌಪ್ಯತೆ ಮತ್ತು ವಿಶ್ವಾಸ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಈ ಕ್ರಮವು ಮಹತ್ತರ ಹೆಜ್ಜೆಯಾಗಲಿದೆ.











