ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸದನದಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಸ್ಪಷ್ಟನೆ: 3 ವರ್ಷಗಳಲ್ಲಿ 88 ಪೊಲೀಸ್ ಸಿಬ್ಬಂದಿ ಅಪರಾಧ ಕೃತ್ಯಗಳಲ್ಲಿ ಶಾಮೀಲು

On: December 18, 2025 5:42 PM
Follow Us:

ಬೆಳಗಾವಿ : ಇತ್ತೀಚೆಗೆ ರಾಜ್ಯದಲ್ಲಿ ನಡೆದ ಎಟಿಎಂ ಹಣ ಸಾಗಣೆ ವಾಹನ ದರೋಡೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿಯೇ ಭಾಗಿಯಾಗಿರುವುದು ಬಹಿರಂಗವಾಗಿದ್ದು, ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸುವಂತಾಗಿದೆ. “ರಕ್ಷಕರೇ ಭಕ್ಷಕರಾಗುತ್ತಿದ್ದಾರಾ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಈ ಆತಂಕಕಾರಿ ಬೆಳವಣಿಗೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನಪರಿಷತ್‌ನಲ್ಲಿ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 88 ಮಂದಿ ಪೊಲೀಸ್ ಸಿಬ್ಬಂದಿ ಕಳ್ಳತನ, ದರೋಡೆ, ಅಪಹರಣ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಅಂಕಿ-ಅಂಶ ಸಮೇತ ಉತ್ತರ ನೀಡಿದ್ದಾರೆ.

ಈ 88 ಪೊಲೀಸರನ್ನು ಬಂಧಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾನತು ಮಾಡಲಾಗಿದೆ. ಪ್ರಕರಣಗಳು ಸಾಬೀತಾದಲ್ಲಿ ಯಾವುದೇ ಮುಲಾಜಿಲ್ಲದೆ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಗೃಹ ಸಚಿವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ನಡೆದ ಕೆಲ ಸಂಚಲನಕಾರಿ ಪ್ರಕರಣಗಳಲ್ಲಿ ಪೊಲೀಸರೇ ಆರೋಪಿಗಳಾಗಿರುವುದು ಸಾರ್ವಜನಿಕರ ವಿಶ್ವಾಸಕ್ಕೆ ಭಾರೀ ಧಕ್ಕೆ ತಂದಿದೆ. ಬೆಂಗಳೂರಿನಲ್ಲಿ ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನವನ್ನು ಹಾಡಹಗಲೇ ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣ ಹಾಗೂ ಕೋರಮಂಗಲದ ಕಾಲ್‌ಸೆಂಟರ್ ಉದ್ಯೋಗಿಗಳ ಅಪಹರಣ ಪ್ರಕರಣದಲ್ಲಿಯೂ ಪೊಲೀಸ್ ಸಿಬ್ಬಂದಿಯ ಪಾತ್ರ ಬೆಳಕಿಗೆ ಬಂದಿತ್ತು.

ವಿಧಾನಪರಿಷತ್‌ನ ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ರಾಜ್ಯದಲ್ಲಿ 1,099 ಪೊಲೀಸ್ ಠಾಣೆಗಳು ಹಾಗೂ 1.06 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಬಹುಪಾಲು ಪೊಲೀಸರು ಕರ್ತವ್ಯ ದಕ್ಷತೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂದು ಹೇಳಿದರು. ಆದರೆ, ಕೆಲವೇ ಕೆಲವು ಸಿಬ್ಬಂದಿ ಅಪರಾಧಗಳಲ್ಲಿ ತೊಡಗಿ ಇಲಾಖೆಗೆ ಕೆಟ್ಟ ಹೆಸರು ತರುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಗೃಹ ಸಚಿವರ ಉತ್ತರದ ಬೆನ್ನಲ್ಲೇ ಮಾತನಾಡಿದ ಟಿ.ಎ. ಶರವಣ, “ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಪೊಲೀಸರೇ ದರೋಡೆ ಮತ್ತು ಕಳ್ಳತನಗಳಲ್ಲಿ ಭಾಗಿಯಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಇದರಿಂದ ಜನ ಪೊಲೀಸರ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ” ಎಂದು ಕಿಡಿಕಾರಿದರು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಪೊಲೀಸರನ್ನು ಕೇವಲ ಅಮಾನತು ಮಾಡುವುದಲ್ಲ, ನೇರವಾಗಿ ಸೇವೆಯಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಪೊಲೀಸ್ ಸಿಬ್ಬಂದಿ ಅಪರಾಧಗಳಲ್ಲಿ ತೊಡಗುವುದನ್ನು ತಡೆಯಲು ರಾಜ್ಯದ ಎಲ್ಲಾ ಘಟಕಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಕರ್ತವ್ಯ ಪಾಲನೆಯಲ್ಲಿ ಲೋಪ ಕಂಡುಬಂದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪುನರುಚ್ಚರಿಸಿದರು.

K.M.Sathish Gowda

Join WhatsApp

Join Now

Facebook

Join Now

Leave a Comment