ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಪಡಿಸಬೇಕೆಂದು ಕೋರಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿದೆ. ಈ ಮೂಲಕ ರಾಜೀವ್ ಗೌಡಗೆ ಹೈಕೋರ್ಟ್‌ನಿಂದ ಭಾರೀ ಆಘಾತ ಎದುರಾಗಿದೆ.
ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ತಾರತಮ್ಯ ಅಥವಾ ಕಾನೂನುಬದ್ಧ ಆಧಾರ ಇಲ್ಲ ಎಂದು ಸ್ಪಷ್ಟಪಡಿಸಿ, ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಬಂಧನದಿಂದ ಮಧ್ಯಂತರ ರಕ್ಷಣೆ ನೀಡಬೇಕೆಂಬ ಮನವಿಗೂ ನ್ಯಾಯಾಲಯ ಒಪ್ಪಿಗೆ ನೀಡಿಲ್ಲ. ಯಾವುದೇ ರೀತಿಯ ರಿಲೀಫ್ ನೀಡದೇ ಅರ್ಜಿಯನ್ನು ವಜಾಗೊಳಿಸಿರುವುದು ರಾಜೀವ್ ಗೌಡಗೆ ದೊಡ್ಡ ಹಿನ್ನಡೆ ಎನ್ನಲಾಗಿದೆ.
ನ್ಯಾಯಾಲಯ ತನ್ನ ಆದೇಶದಲ್ಲಿ, “ಅರ್ಜಿಯಲ್ಲಿ ಯಾವುದೇ ಮೆರಿಟ್ ಕಂಡುಬರುವುದಿಲ್ಲ. ಹೀಗಾಗಿ ಅರ್ಜಿಗಳನ್ನು ವಜಾಗೊಳಿಸಲಾಗುತ್ತದೆ” ಎಂದು ಹೇಳಿದ್ದು, ಈ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ತನಿಖೆಯ ಪ್ರಕ್ರಿಯೆಗೆ ಯಾವುದೇ ರೀತಿಯ ಅಡ್ಡಿಪಡಿಸಬಾರದು ಎಂದು ಸಹ ಸ್ಪಷ್ಟಪಡಿಸಿದೆ.
ಈ ಆದೇಶದ ಪರಿಣಾಮವಾಗಿ, ಈಗಾಗಲೇ ತಲೆಮರೆಸಿಕೊಂಡಿರುವ ರಾಜೀವ್ ಗೌಡಗೆ ಬಂಧನದಿಂದ ಯಾವುದೇ ಕಾನೂನು ರಕ್ಷಣೆ ಉಳಿದಿಲ್ಲ. ಹೀಗಾಗಿ, ಚಿಕ್ಕಬಳ್ಳಾಪುರ ಪೊಲೀಸರು ರಾಜೀವ್ ಗೌಡನ ಪತ್ತೆ ಹಾಗೂ ಬಂಧನಕ್ಕಾಗಿ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇನ್ನು, ರಾಜೀವ್ ಗೌಡ ವಿರುದ್ಧ ಪೋಕ್ಸೋ ಕಾಯ್ದೆ, ಬೆದರಿಕೆ, ಕೊಲೆ ಯತ್ನ ಸೇರಿದಂತೆ ಒಟ್ಟು 16ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, “ರಾಜೀವ್ ಗೌಡ ಸಾಮಾನ್ಯ ವ್ಯಕ್ತಿಯಲ್ಲ. ಆತ ಒಬ್ಬ ನಟೋರಿಯಸ್ (ನಾಮಧೇಯ) ವ್ಯಕ್ತಿ” ಎಂದು ತಿಳಿಸಿದ್ದಾರೆ.
ಹೈಕೋರ್ಟ್ ಆದೇಶದ ಬಳಿಕ ರಾಜೀವ್ ಗೌಡನ ಸಂಕಷ್ಟ ಮತ್ತಷ್ಟು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಇನ್ನಷ್ಟು ಕಠಿಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.











