ನಾವೆಲ್ಲರೂ ಬಾಲ್ಯದಲ್ಲಿ ಅಜ್ಜ–ಅಜ್ಜಿ, ಅಪ್ಪ–ಅಮ್ಮ ಹಾಗೂ ಮನೆಯ ಹಿರಿಯರು ಮುಖ ತೊಳೆದು ಸೂರ್ಯನಿಗೆ ನಮಸ್ಕರಿಸಿ ಒಳಗೆ ಬರುವುದನ್ನು ನೋಡಿದ್ದೇವೆ. ಇಂದಿಗೂ ಕೆಲವರು ನಿತ್ಯ ಮುಖ ತೊಳೆದ ತಕ್ಷಣ ಅಥವಾ ಸ್ನಾನ ಮಾಡಿದ ಬಳಿಕ ಭೂಮಿಗೆ, ಸೂರ್ಯನ ಕಡೆಗೆ ತಿರುಗಿ ನಮಸ್ಕರಿಸುವುದು ರೂಢಿಯಾಗಿದೆ.
ಬಾಲ್ಯದಲ್ಲಿ ಅಜ್ಜಿ ಪಾಡ್ಯ, ಬಿದಿಗೆ, ತದಿಗೆ, ಅಮಾವಾಸ್ಯೆಯವರೆಗೆ ತಿಥಿಗಳನ್ನು ಕಂಠಪಾಠ ಮಾಡಿಸುವಾಗ, ಪ್ರತಿಯೊಂದು ತಿಥಿಗೆ ಒಂದೊಂದು ಹಬ್ಬವನ್ನು ಸೇರಿಸಿ ಹೇಳಿಕೊಡುತ್ತಿದ್ದರು.
ಪಾಡ್ಯ – ಉಗಾದಿ ಪಾಡ್ಯ
ಬಿದಿಗೆ – ಭಾನು ಬಿದಿಗೆ
ತದಿಗೆ – ಅಕ್ಷ ತದಿಗೆ
ಚೌತಿ – ವಿನಾಯಕ ಚೌತಿ
ಹೀಗೆ ‘ಸಪ್ತಮಿ’ಯ ಸರದಿ ಬಂದಾಗ ರಥಸಪ್ತಮಿ ಸೇರಿಕೊಳ್ಳುತ್ತಿತ್ತು. ಸಮಯ ಸಿಕ್ಕಾಗಲೆಲ್ಲ ಹಬ್ಬಗಳ ಮಹತ್ವವನ್ನು ವಿವರಿಸುತ್ತಿದ್ದರು.

ಹಬ್ಬಗಳು ಪ್ರತಿವರ್ಷ ಬರುತ್ತವೆ, ಹೋಗುತ್ತವೆ. ಆದರೆ ಅವುಗಳ ಆಚರಣೆಯ ಹಿಂದಿನ ಗೂಢಾರ್ಥ ಮತ್ತು ವೈಜ್ಞಾನಿಕ ಅಂಶಗಳನ್ನು ಅರಿತಾಗಲೇ ಅವು ಅರ್ಥಪೂರ್ಣವಾಗುತ್ತವೆ. ಯುಗಾದಿ ಹೊಸತನವನ್ನು ಹೊತ್ತು ತರುತ್ತದೆ ಎಂದರೆ, ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳೆಯದನ್ನು ಬಿಟ್ಟು ಹೊಸತನವನ್ನು ಸ್ವೀಕರಿಸಿ ಬದುಕನ್ನು ಉತ್ಸಾಹದಿಂದ ನಡೆಸಿಕೊಳ್ಳಲು ಪ್ರೇರೇಪಿಸುತ್ತದೆ.
“ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಸೂರ್ಯನು ಹಳೆಯ ರಥವನ್ನು ಬಿಟ್ಟು ಹೊಸ ರಥವನ್ನು ಹತ್ತುತ್ತಾನೆ” ಎಂದು ಅಜ್ಜಿ ಹೇಳುತ್ತಿದ್ದದ್ದು ಇಂದಿಗೂ ನೆನಪಾಗುತ್ತದೆ. ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪಂಡಿತರು ಹೇಳುತ್ತಾರೆ. ಯಾವುದೇ ವಸ್ತು ಹಳೆಯದಾಗಿದೆ ಎಂಬ ಕಾರಣಕ್ಕೆ ಬದುಕು ಹಳೆಯದಾಗುವುದಿಲ್ಲ; ಅದು ನಿತ್ಯ ನವೀನವೇ. ದೇಹ ಹಳತಾದಂತೆ ಹಳೆಯ ಬಟ್ಟೆಯನ್ನು ಬಿಟ್ಟು ಹೊಸದನ್ನು ಧರಿಸುವಂತೆ ಆತ್ಮವೂ ಹೊಸತನ್ನು ಸ್ವೀಕರಿಸುತ್ತದೆ ಎಂಬ ನಂಬಿಕೆಯಿದೆ. ಸೂರ್ಯನೂ ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸಿ ಭೂಮಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ.
ಈ ಹಿನ್ನೆಲೆಯಲ್ಲಿ ಸೂರ್ಯನನ್ನು ಗೌರವಿಸುವ ಸಲುವಾಗಿ (ಮಾಘ ಮಾಸ, ಶುಕ್ಲಪಕ್ಷದ ಸಪ್ತಮಿ, 25-01-2026)vರಥಸಪ್ತಮಿ ಆಚರಿಸಲಾಗುತ್ತಿದೆ.

“ಆರೋಗ್ಯಂ ಭಾಸ್ಕರಾದಿಚ್ಛೇತ್”
ಚಳಿಗಾಲದಲ್ಲಿ ಮುದುಡುವ ದೇಹ, ರಥಸಪ್ತಮಿಯ ನಂತರ ಸೂರ್ಯನ ಶಾಖದಿಂದ ನವಚೈತನ್ಯವನ್ನು ಪಡೆದುಕೊಳ್ಳುತ್ತದೆ. “ಆರೋಗ್ಯಂ ಭಾಸ್ಕರಾದಿಚ್ಛೇತ್” ಅಂದರೆ ಆರೋಗ್ಯವನ್ನು ಬಯಸುವವನು ಸೂರ್ಯನನ್ನು ಆರಾಧಿಸಬೇಕು. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ.
ಹಸುಗೂಸಿನ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಚಂದ್ರನ ಬೆಳಕಿನಲ್ಲಿ ವಿಟಮಿನ್ ‘ಬಿ–12’ ಇದ್ದರೆ, ಸೂರ್ಯನ ಕಿರಣಗಳಲ್ಲಿ ವಿಟಮಿನ್ ‘ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ.
ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿಯಾದ ಸೂರ್ಯನ ಆರಾಧನೆಗೆ, ವಿಗ್ರಹಾರಾಧನೆ ಪ್ರಚಲಿತಕ್ಕೆ ಬರುವ ಮುಂಚಿನಿಂದಲೂ ಪ್ರಾಮುಖ್ಯತೆ ಇದೆ. ಆಹಾರ ಮತ್ತು ರೋಗ ನಿವಾರಣೆಗೆ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ ಹಾಗೂ ವರಾಹ ಪುರಾಣಗಳಲ್ಲಿಯೂ ಉಲ್ಲೇಖವಾಗಿದೆ.
ರೋಗ ನಿವಾರಣೆ, ದೇಹದಾರ್ಡ್ಯ ಮತ್ತು ಆರೋಗ್ಯಕ್ಕಾಗಿ ಸೂರ್ಯಾರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶಮಾಡುವ ಶಕ್ತಿ ಸೂರ್ಯನ ಕಿರಣಗಳಲ್ಲಿ ಅಡಗಿದೆ. ಬೆಳಗಿನ ಹಾಗೂ ಸಂಜೆಯ ಸೂರ್ಯಕಿರಣಗಳು ಆರೋಗ್ಯ ವೃದ್ಧಿಗೆ ಸಹಾಯಕ. ರೋಗದಿಂದ ನರಳುವವರು ರಥಸಪ್ತಮಿಯ ದಿನದಿಂದಲಾದರೂ ಸೂರ್ಯನ ಕಿರಣಗಳಿಗೆ ಸೂಕ್ತ ಸಮಯದಲ್ಲಿ ಮೈಯೊಡ್ಡಿದರೆ ಬೇಗ ಗುಣಮುಖರಾಗುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಸೂರ್ಯಾರಾಧನೆ ಭಾರತ ಮಾತ್ರವಲ್ಲದೆ ಮಧ್ಯ ಆಫ್ರಿಕಾ, ಈಜಿಪ್ಟ್, ಗ್ರೀಸ್ ಹಾಗೂ ಮಧ್ಯ ಏಷ್ಯಾದ ದೇಶಗಳಲ್ಲಿಯೂ ಪ್ರಚಲಿತದಲ್ಲಿದೆ.

108 ಸೂರ್ಯನಮಸ್ಕಾರಗಳ ಮೂಲಕ ರಥಸಪ್ತಮಿ ಆಚರಣೆ
ಯೋಗಾಸನಗಳಲ್ಲಿ ಸೂರ್ಯನಮಸ್ಕಾರಕ್ಕೆ ಮೊದಲ ಪ್ರಾಶಸ್ತ್ಯವಿದೆ. ಇದು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದಲೇ ಸಾಧ್ಯವಾಗಿವೆ. ಸೂರ್ಯನಿಲ್ಲದೆ ಜೀವಿತದ ಅಸ್ತಿತ್ವವೇ ಇಲ್ಲ.
ಹೀಗಾಗಿ ರಥಸಪ್ತಮಿಯಂದು 108 ಸೂರ್ಯನಮಸ್ಕಾರಗಳು ಹಾಗೂ ಸಪ್ತಾಶ್ವಗಳ ಪ್ರತೀಕವಾಗಿ ಏಳು ನಮಸ್ಕಾರಗಳನ್ನು ಮಾಡುವ ಸಂಪ್ರದಾಯವಿದೆ.

ಪೌರಾಣಿಕ ಹಿನ್ನೆಲೆ
ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ರಥಸಪ್ತಮಿಯ ಮಹತ್ವವನ್ನು ವಿವರಿಸಿದ ಕಥೆ ಪ್ರಸಿದ್ಧವಾಗಿದೆ. ಯಶೋವರ್ಮನೆಂಬ ರಾಜನ ಮಗ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಜ್ಯೋತಿಷಿಗಳ ಸಲಹೆಯಂತೆ ಸಂಚಿತ ಕರ್ಮದಿಂದ ಬಂದ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಸೂಚಿಸಲಾಯಿತು. ಸೂರ್ಯಾರಾಧನೆಯ ಫಲವಾಗಿ ರಾಜಕುಮಾರನು ಆರೋಗ್ಯವಂತನೂ ಪ್ರಭಾವಶಾಲಿಯೂ ಆದನು.
ಪಾಂಡವರು ವನವಾಸದ ಸಂದರ್ಭದಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಸೂರ್ಯನಿಂದ ಅಕ್ಷಯಪಾತ್ರೆಯನ್ನು ಪಡೆದರು. ರಾವಣನನ್ನು ಜಯಿಸಬೇಕಾದಾಗ ಶ್ರೀರಾಮನು ಅಗಸ್ತ್ಯರ ಉಪದೇಶದಂತೆ ಆದಿತ್ಯಹೃದಯ ಸ್ತೋತ್ರದ ಮೂಲಕ ಸೂರ್ಯನನ್ನು ಆರಾಧಿಸಿದನೆಂದು ರಾಮಾಯಣದಲ್ಲಿ ಉಲ್ಲೇಖವಿದೆ.
ಹರಿವಂಶದಲ್ಲಿ ಸತ್ರಾಜಿತನು ಸೂರ್ಯಾರಾಧನೆಯ ಮೂಲಕ ಶಮಂತಕಮಣಿಯನ್ನು ಪಡೆದ ಕಥೆ ಇದೆ. ಮಯೂರ ಕವಿಯು ಸೂರ್ಯಶತಕ ರಚಿಸಿ ಕಳೆದುಕೊಂಡ ದೃಷ್ಟಿಯನ್ನು ಮರಳಿ ಪಡೆದನೆಂಬ ಕಥೆಯೂ ಪ್ರಸಿದ್ಧವಾಗಿದೆ. ಶ್ರೀರಾಮ ಸೂರ್ಯವಂಶದವನು; ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರು.

ಎಕ್ಕದೆಲೆಯ ಸ್ನಾನ
ರಥಸಪ್ತಮಿಯಂದು ಅರ್ಕ ಅಥವಾ ಎಕ್ಕದೆಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ ಹಾಗೂ ಪಾದಗಳ ಮೇಲೆ ಇಟ್ಟು ಸ್ನಾನ ಮಾಡುವುದು ವಿಶೇಷ ಆಚರಣೆ. ಎಕ್ಕದ ಎಲೆಗಳಿಗೆ ಚರ್ಮಸಂಬಂಧಿ ಸಮಸ್ಯೆಗಳು, ಕೀಲು ನೋವು, ಹಲ್ಲು ನೋವು ಹಾಗೂ ಹೊಟ್ಟೆ ನೋವಿಗೆ ಔಷಧೀಯ ಗುಣಗಳಿವೆ. ಈ ಕಾರಣದಿಂದಲೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.
ದೇವರು ಎಲ್ಲಿದ್ದಾನೆ ಎಂದು ಪ್ರಶ್ನಿಸುವುದಕ್ಕಿಂತ, ಪ್ರತ್ಯಕ್ಷವಾಗಿ ಕಾಣುವ ದೈವೀ ಸ್ವರೂಪಗಳಾದ ಸೂರ್ಯ, ಚಂದ್ರ, ವೃಕ್ಷಗಳು, ಬೆಟ್ಟಗಳು, ನದೀನದಗಳ ಆರಾಧನೆಯನ್ನು — ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ — ನಮ್ಮ ಪೂರ್ವಿಕರು ಆಚರಣೆಯಾಗಿ ರೂಪಿಸಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆ!
ಹಾಗಾದರೆ ಬನ್ನಿ, ರಥಸಪ್ತಮಿಯ ನೆಪದಲ್ಲಾದರೂ ಸೂರ್ಯದೇವನಿಗೆ ನಮಿಸೋಣ. ಪ್ರತಿದಿನ ಬೆಳಿಗ್ಗೆ ನಿತ್ಯಕರ್ಮ ಮುಗಿಸಿ ಸೂರ್ಯನಿಗೆ ನಮಸ್ಕರಿಸುವ ಸಂಪ್ರದಾಯವನ್ನು ಮತ್ತೆ ಜೀವಂತಗೊಳಿಸೋಣ. ಏನಂತೀರಾ?











