ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರಥಸಪ್ತಮಿ: ಸೂರ್ಯಾರಾಧನೆಯ ಪವಿತ್ರ ದಿನಕ್ಕೆ “ಸೂರ್ಯಥಾನ್” ಪುಸ್ತಕ ಬಿಡುಗಡೆ

On: January 26, 2026 8:55 PM
Follow Us:

ಶಿವಮೊಗ್ಗ: ಆರೋಗ್ಯ, ಆತ್ಮಶುದ್ಧಿ ಮತ್ತು ಪ್ರಕೃತಿ ಆರಾಧನೆಯ ಸಂಕೇತವಾಗಿರುವ ರಥಸಪ್ತಮಿಯ ಪವಿತ್ರ ದಿನವನ್ನು ಶಿವಮೊಗ್ಗದಲ್ಲಿ ಭಕ್ತಿಭಾವ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸೂರ್ಯನು ಉತ್ತರಾಯಣ ಪಥದಲ್ಲಿ ಚಲಿಸುವ ಈ ಶುಭ ದಿನವು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವ ಪಡೆದಿದ್ದು, ಸೂರ್ಯಾರಾಧನೆ ಹಾಗೂ ಯೋಗಾಭ್ಯಾಸಕ್ಕೆ ವಿಶೇಷ ಮಹತ್ವವಿದೆ.

ಈ ಹಿನ್ನೆಲೆಯಲ್ಲಿ ನಗರದ ನೆಹರು ಕ್ರೀಡಾಂಗಣದ ಯೋಗ ಮಂದಿರದಲ್ಲಿ ಕಣಾದ ಯೋಗ & ರಿಸರ್ಚ್ ಫೌಂಡೇಷನ್ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ 5.30 ಗಂಟೆಗೆ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಾತಃಕಾಲದ ತಂಪಾದ ವಾತಾವರಣದಲ್ಲಿ ಭಕ್ತಿಭಾವದಿಂದ ನಡೆದ ಈ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಬಾಟ್ನಿ ವಾದಿರಾಜ್ ಆಚಾರ್ಯರು ಶಾಸ್ತ್ರೋಕ್ತವಾಗಿ ಪೂಜಾ ವಿಧಿಗಳನ್ನು ನೆರವೇರಿಸಿ ಸೂರ್ಯನಿಗೆ ಅರ್ಘ್ಯ ಸಮರ್ಪಿಸಿದರು. ನಂತರ ಶ್ರೀಧರ್–ಶಾಲಿನಿ ದಂಪತಿಗಳಿಂದ ಪೂಜೆ ಸಂಪನ್ನಗೊಂಡಿತು. ಈ ಬಳಿಕ ಕ್ರೀಡಾಪಟುಗಳು, ಯೋಗಾಭ್ಯಾಸಿಗಳು ಹಾಗೂ ಸಾರ್ವಜನಿಕರನ್ನು ಒಳಗೊಂಡು ಸುಮಾರು 200ಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ 108 ಸೂರ್ಯ ನಮಸ್ಕಾರಗಳನ್ನು ಅಭ್ಯಾಸ ಮಾಡುವ ಮೂಲಕ ಸೂರ್ಯಾರಾಧನೆಯ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಸಾರಿದರು.

ಈ ವಿಶೇಷ ಸಂದರ್ಭದಲ್ಲೇ ಯೋಗಾಚಾರ್ಯ ಅನಿಲ್ ಕುಮಾರ್ ಹೆಚ್. ಶೆಟ್ಟರ್ ಅವರು ರಚಿಸಿದ “ಸೂರ್ಯಥಾನ್” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಸೂರ್ಯ ನಮಸ್ಕಾರಗಳ ಕುರಿತಾದ ವೈಜ್ಞಾನಿಕ ಮಾಹಿತಿ, ಆರೋಗ್ಯ ಲಾಭಗಳು ಹಾಗೂ ರಸಪ್ರಶ್ನೆಗಳನ್ನೊಳಗೊಂಡ ಈ ಕೃತಿ ಯೋಗಾಸಕ್ತರಿಗೆ ಮಾರ್ಗದರ್ಶಕವಾಗಲಿದೆ. ಪುಸ್ತಕವನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಧಿಕಾರಿ ರೇಖ್ಯಾ ನಾಯ್ಕ್ ಅವರು ಬಿಡುಗಡೆ ಮಾಡಿದರು.

ಪುಸ್ತಕ ಬಿಡುಗಡೆ ನಂತರ ಮಾತನಾಡಿದ ಡಿ.ಎಸ್. ಅರುಣ್ ಅವರು, “ಇಂದಿನ ಸ್ಪರ್ಧಾತ್ಮಕ ಹಾಗೂ ಒತ್ತಡದ ಜೀವನಶೈಲಿಯಲ್ಲಿ ಯುವಜನತೆ ತಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಯೋಗ ಮತ್ತು ಸೂರ್ಯ ನಮಸ್ಕಾರಗಳಂತಹ ಪ್ರಾಚೀನ ಭಾರತೀಯ ಅಭ್ಯಾಸಗಳು ಆರೋಗ್ಯಕರ ಜೀವನಕ್ಕೆ ಅತ್ಯಂತ ಪರಿಣಾಮಕಾರಿ ಮಾರ್ಗಗಳಾಗಿವೆ,” ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾ ತರಬೇತುದಾರ ಬಾಳಪ್ಪ ಮಾನೆ, ಕ್ರೀಡಾಪಟುಗಳಾದ ಸುದೀಪ್ ಮತ್ತು ಗೌತಮ್, ಹಾಗೂ ಸಾಗರದ ಉದಯೋನ್ಮುಖ ಯೋಗಪಟು ಕುಮಾರಿ ಪರಿಚಿತ ಅವರು ನೀಡಿದ ಅದ್ಭುತ ಯೋಗನೃತ್ಯ ಪ್ರದರ್ಶನಕ್ಕಾಗಿ ನಗದು ಪುರಸ್ಕಾರ ಸಹಿತ ಗೌರವ ಸನ್ಮಾನವನ್ನು ಅತಿಥಿಗಳು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಂಜುನಾಥ್ ಅವರು ಸ್ವಾಗತ ಭಾಷಣ ಮಾಡಿದರು, ಸುನೀತಾ ಅವರು ಪ್ರಾರ್ಥನೆ ಸಲ್ಲಿಸಿದರು. ಮಂಜು ಕಾರ್ನಳ್ಳಿ ಅವರು ವಂದನಾರ್ಪಣೆ ಸಲ್ಲಿಸಿದರೆ, ವೇದಿಕೆಯ ಕಾರ್ಯಕ್ರಮವನ್ನು ತ್ಯಾಗರಾಜ ಮಿತ್ಯಾಂತರು ಸಮರ್ಪಕವಾಗಿ ನಿರ್ವಹಿಸಿದರು.

ಒಟ್ಟಾರೆ ರಥಸಪ್ತಮಿಯ ಈ ಆಚರಣೆ ಸೂರ್ಯಾರಾಧನೆ, ಯೋಗ ಮತ್ತು ಆರೋಗ್ಯದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಮೂಡಿಬಂದಿತು.

“ಸೂರ್ಯಥಾನ್” ರಸಪ್ರಶ್ನೆ-ಬಹುಮಾನಗಳ ಈ ಪುಸ್ತಕವನ್ನು ಮತ್ತು ಮನೆಯಿಂದಲೇ‌ ರಸಪ್ರಶ್ನೆಗಳಿಗೆ ಉತ್ತರಿಸಿ ಉತ್ತರ ಪತ್ರಿಕೆಯನ್ನು ಫೆಬ್ರುವರಿ 25 ರೊಳಗಾಗಿ ತಲುಪಿಸಬಹುದಾದ ಈ ಪುಸ್ತಕವನ್ನು ಕೊಳ್ಳಲು ಆಸಕ್ತಿ ಇರುವವರು ಲೇಖಕರಾದ ಯೋಗಾಚಾರ್ಯ ಅನಿಲ್ ಕುಮಾರ್. ಹೆಚ್.ಶೆಟ್ಟರ್ (9886674375) ಸಂಪರ್ಕಿಸಬಹುದು.

K.M.Sathish Gowda

Join WhatsApp

Join Now

Facebook

Join Now

Leave a Comment