ನವದೆಹಲಿ: ಭಾರತದ ಕ್ಯಾಬ್ ಸೇವಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡುವಂತೆ, ಕೇಂದ್ರ ಗೃಹ ಹಾಗೂ ಸಹಕಾರ ಖಾತೆ ಸಚಿವ ಅಮಿತ್ ಶಾ ಅವರು ಗುರುವಾರ ದೆಹಲಿಯಲ್ಲಿ ‘ಭಾರತ್ ಟ್ಯಾಕ್ಸಿ’ ಸೇವೆಗೆ ಅಧಿಕೃತ ಚಾಲನೆ ನೀಡಿದರು. ಸಹಕಾರಿ ತತ್ವದಡಿ ಆರಂಭಗೊಂಡಿರುವ ಈ ಸೇವೆ, ಓಲಾ ಮತ್ತು ಉಬರ್ನಂತಹ ಖಾಸಗಿ ರೈಡ್–ಹೇಲಿಂಗ್ ಕಂಪನಿಗಳಿಗೆ ನೇರ ಪೈಪೋಟಿ ನೀಡುವ ಉದ್ದೇಶ ಹೊಂದಿದೆ. ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪ್ರಾರಂಭಗೊಂಡಿರುವ ಭಾರತ್ ಟ್ಯಾಕ್ಸಿಗೆ ಈಗಾಗಲೇ ಸುಮಾರು 2.5 ಲಕ್ಷ ವಾಹನಗಳು ನೋಂದಾಯಿತವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ದೇಶದ ಪ್ರಮುಖ ನಗರಗಳಿಗೆ ಸೇವೆ ವಿಸ್ತರಿಸುವ ಗುರಿ ಇಡಲಾಗಿದೆ.

ಸಹಕಾರಿ ಮಾದರಿಯಲ್ಲೇ ವಿಭಿನ್ನ ಪ್ರಯತ್ನ
ಭಾರತ್ ಟ್ಯಾಕ್ಸಿಯನ್ನು ಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆಯಡಿ ನೋಂದಾಯಿತ ‘ಸಹಕಾರಿ ಟ್ಯಾಕ್ಸಿ ಸಹಕಾರಿ ಲಿಮಿಟೆಡ್’ ನಿರ್ವಹಿಸುತ್ತಿದ್ದು, ಇಫ್ಕೊ, ಅಮುಲ್, ನಬಾರ್ಡ್ ಸೇರಿದಂತೆ ಪ್ರಮುಖ ಸಹಕಾರಿ ಸಂಸ್ಥೆಗಳ ಬೆಂಬಲವಿದೆ. ಈ ವೇದಿಕೆಯ ವಿಶೇಷತೆ ಎಂದರೆ, ಇಲ್ಲಿ ಚಾಲಕರು ಕೇವಲ ಸೇವೆದಾರರಲ್ಲ, ಸಹಕಾರಿ ಸಂಘದ ಸದಸ್ಯರು ಮತ್ತು ಸಹ-ಮಾಲೀಕರೂ ಹೌದು.
ಖಾಸಗಿ ಕಂಪನಿಗಳಂತೆ ಪ್ರತಿ ಸವಾರಿಗೆ ಶೇಕಡಾವಾರು ಕಮಿಷನ್ ವಿಧಿಸುವ ಬದಲು, ಭಾರತ್ ಟ್ಯಾಕ್ಸಿಯಲ್ಲಿ ಚಾಲಕರು ದಿನಕ್ಕೆ ಸುಮಾರು ರೂ.30 ನಿಗದಿತ ಪ್ರವೇಶ ಶುಲ್ಕ ಪಾವತಿಸಬೇಕು. ಇದರಿಂದ ಸವಾರಿಯಿಂದ ಸಿಗುವ ಹೆಚ್ಚಿನ ಆದಾಯ ಚಾಲಕರ ಕೈಯಲ್ಲೇ ಉಳಿಯಲಿದೆ ಎಂಬುದು ಯೋಜನೆಯ ಉದ್ದೇಶ.

ಚಾಲಕ–ಕೇಂದ್ರಿತ ಗಿಗ್ ಆರ್ಥಿಕತೆಗೆ ಒತ್ತು
ಶೂನ್ಯ-ಕಮಿಷನ್ ಮಾದರಿಯೊಂದಿಗೆ, ಚಾಲಕರಿಗೆ ಆರೋಗ್ಯ ಹಾಗೂ ಅಪಘಾತ ವಿಮೆ, ನಿವೃತ್ತಿ ಉಳಿತಾಯ ಯೋಜನೆ, ಮತ್ತು ಸಹಕಾರಿ ಲಾಭ ವಿತರಣೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದು ಇತ್ತೀಚಿನ ಗಿಗ್ ಆರ್ಥಿಕತೆಯಲ್ಲಿ ಚಾಲಕರು ಎದುರಿಸುತ್ತಿರುವ ಅಸಮಾನತೆಗಳಿಗೆ ಪರ್ಯಾಯವಾಗಿ ಬಿಂಬಿಸಲಾಗುತ್ತಿದೆ.

ಪ್ರಯಾಣಿಕರಿಗೆ ಕಡಿಮೆ ದರ, ಹೆಚ್ಚು ಭದ್ರತೆ
ಪ್ರಯಾಣಿಕರ ದೃಷ್ಟಿಯಿಂದಲೂ ಭಾರತ್ ಟ್ಯಾಕ್ಸಿ ಆಕರ್ಷಕ ಆಯ್ಕೆಯಾಗುವ ಸಾಧ್ಯತೆ ಇದೆ. ಪೀಕ್ ಅವಧಿಯಲ್ಲೂ ಸರ್ಜ್ ಪ್ರೈಸಿಂಗ್ ಇಲ್ಲ ಎಂಬ ಭರವಸೆ ನೀಡಲಾಗಿದ್ದು, ಖಾಸಗಿ ಸೇವೆಗಳಿಗಿಂತ ಸುಮಾರು 30 ಶೇಕಡಾ ಕಡಿಮೆ ದರದಲ್ಲಿ ಪ್ರಯಾಣ ಸಾಧ್ಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ್ಯಪ್ ಆಂಡ್ರಾಯ್ಡ್ ಹಾಗೂ ಐಒಎಸ್ ಎರಡರಲ್ಲೂ ಲಭ್ಯವಿದ್ದು, ಆಟೋ, ಬೈಕ್ ಟ್ಯಾಕ್ಸಿ, ಎಸಿ–ನಾನ್ ಎಸಿ ಹಾಗೂ ಎಕ್ಸ್ಎಲ್ ಕ್ಯಾಬ್ಗಳ ಸೇವೆ ಒದಗಿಸುತ್ತದೆ. ಜೊತೆಗೆ 24×7 ಗ್ರಾಹಕ ಬೆಂಬಲ, ಬಹುಭಾಷಾ ಇಂಟರ್ಫೇಸ್ ಮತ್ತು ತುರ್ತು ಸುರಕ್ಷತಾ ವೈಶಿಷ್ಟ್ಯಗಳನ್ನೂ ಒಳಗೊಂಡಿದೆ. ದೆಹಲಿಯಲ್ಲಿ ಪೊಲೀಸರ ಸಹಯೋಗದೊಂದಿಗೆ 35 ಸಹಾಯ ಬೂತ್ಗಳ ಸ್ಥಾಪನೆ ಕೂಡ ಮಾಡಲಾಗಿದೆ.

ಮಾರುಕಟ್ಟೆಯಲ್ಲಿ ಹೊಸ ಸಂಚಲನವೇ?
ಸಹಕಾರಿ, ಚಾಲಕ-ಮಾಲೀಕತ್ವ ಆಧಾರಿತ ಈ ಮಾದರಿ, ರೈಡ್–ಹೇಲಿಂಗ್ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಕೇಳಿಬರುತ್ತಿದ್ದ ಅನ್ಯಾಯಕರ ಕಮಿಷನ್ ವ್ಯವಸ್ಥೆ ಮತ್ತು ಅಸ್ಪಷ್ಟ ದರ ನಿಗದಿಗೆ ಸವಾಲು ಹಾಕುತ್ತಿದೆ. ಸರ್ಕಾರ ಮತ್ತು ಸಹಕಾರಿ ವಲಯದ ಬೆಂಬಲದೊಂದಿಗೆ ಭಾರತ್ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದ್ದು, ಆದರೆ ಈಗಾಗಲೇ ಇದು ಓಲಾ–ಉಬರ್ಗೆ ಸ್ಪರ್ಧಾತ್ಮಕ ಒತ್ತಡ ತಂದಿರುವುದು ಸತ್ಯ,.!










