ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸುಳ್ಳು ಸಾಕ್ಷ್ಯ ಆರೋಪ – ಕಾಮಾಕ್ಷಿಪಾಳ್ಯ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮಕ್ಕೆ ಮನವಿ

On: February 25, 2026 3:33 PM
Follow Us:

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮತ್ತೆ ಹೊಸ ತಿರುವು ಪಡೆದಿದ್ದು, ಸುಳ್ಳು ಸಾಕ್ಷ್ಯ ಒದಗಿಸಿರುವ ಆರೋಪದ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಗಿರೀಶ್ ನಾಯ್ಕ್ ಅವರನ್ನು ಆರೋಪಿಯಾಗಿ ಸೇರಿಸಿ ವಿಚಾರಣೆ ನಡೆಸಬೇಕು ಎಂದು 3ನೇ ಆರೋಪಿ ಪವನ್ ಪರ ವಕೀಲರು ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ.

ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮಂಗಳವಾರ ಪ್ರಕರಣದ ಮುಂದಿನ ವಿಚಾರಣೆ ನಡೆಯಿತು. ಈ ವೇಳೆ ಪವನ್ ಪರ ವಕೀಲ ಸುಧನ್ವ ಹಾಜರಾಗಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಆವರಣಕ್ಕೆ ತಮಗೆ ಪ್ರವೇಶ ನೀಡುವಂತೆ ಪೊಲೀಸರಿಗೆ ನಿರ್ದೇಶಿಸಲು ಕೋರಿ ಮೆಮೊ ಸಲ್ಲಿಸಿದರು.

ಟೈಲ್ಸ್ ವಿಚಾರದಲ್ಲಿ ಉದ್ಭವಿಸಿದ ಅನುಮಾನ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಜೂನ್ 11ರಂದು ರಾತ್ರಿ 1 ಗಂಟೆ ಸುಮಾರಿಗೆ ಏಳು ಆರೋಪಿಗಳ ಎಂಟು ಮೊಬೈಲ್‌ಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಮಹಜರು ನಡೆಸಿ ಜಪ್ತಿ ಮಾಡಿರುವುದಾಗಿ ದಾಖಲೆ ಸಲ್ಲಿಸಿದ್ದಾರೆ. ಈ ವೇಳೆ ಮೊಬೈಲ್‌ಗಳನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲೇ ವಶಪಡಿಸಿಕೊಂಡಿರುವುದಾಗಿ ಹೇಳಿ, ಅದರ ಪೋಟೋಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.

ಆದರೆ, ಸಲ್ಲಿಸಿರುವ ಪೋಟೋಗಳಲ್ಲಿ ಕಾಣುವ ನೆಲದ ಟೈಲ್ಸ್‌ ಬಿಳಿ ಬಣ್ಣದ ವೆಟ್ರಿಫೈಡ್‌ ಟೈಲ್ಸ್ ಆಗಿದ್ದು, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಆ ರೀತಿಯ ಟೈಲ್ಸ್ ಇಲ್ಲವೆಂದು ವಕೀಲ ಸುಧನ್ವ ಕೋರ್ಟ್ ಮುಂದೆ ವಾದಿಸಿದರು. ಹೀಗಾಗಿ ಮಹಜರು ಪೊಲೀಸ್ ಠಾಣೆಯಲ್ಲಿ ನಡೆದಿಲ್ಲ ಎಂಬ ಗಂಭೀರ ಅನುಮಾನ ಮೂಡುತ್ತದೆ ಎಂದು ಹೇಳಿದರು.

ಈ ಕುರಿತು ಪರಿಶೀಲನೆಗಾಗಿ ಸೋಮವಾರ ತಾವು ಕಾಮಾಕ್ಷಿಪಾಳ್ಯ ಠಾಣೆಗೆ ಭೇಟಿ ನೀಡಲು ಪ್ರಯತ್ನಿಸಿದ್ದರೂ, ಪೊಲೀಸರೇ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.

ನ್ಯಾಯಾಧೀಶರೇ ಸ್ಥಳ ಪರಿಶೀಲನೆ ನಡೆಸಲಿ

ಪೊಲೀಸ್ ಠಾಣೆ ಸಾರ್ವಜನಿಕ ಕಚೇರಿಯಾಗಿರುವುದರಿಂದ ಪ್ರವೇಶ ನಿರಾಕರಿಸುವ ಅಧಿಕಾರ ಪೊಲೀಸರಿಗೆ ಇಲ್ಲ. ಸುಳ್ಳು ಸಾಕ್ಷ್ಯ ಒದಗಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ಆರಂಭಿಕ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯಾಗಿ ಸೇರಿಸಿ ವಿಚಾರಣೆ ನಡೆಸಬೇಕು ಎಂದು ವಕೀಲರು ಒತ್ತಾಯಿಸಿದರು. ಅಲ್ಲದೆ, ಈ ವಿಚಾರದಲ್ಲಿ ಸತ್ಯಾಸತ್ಯತೆ ತಿಳಿದುಕೊಳ್ಳಲು ನ್ಯಾಯಾಧೀಶರೇ ಸ್ವತಃ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.

ವಾದವನ್ನು ಪರಿಗಣಿಸಿದ ನ್ಯಾಯಾಧೀಶರು, ವಕೀಲ ಸುಧನ್ವ ಸೋಮವಾರ ಠಾಣೆಗೆ ಭೇಟಿ ನೀಡಿದ ಸಂದರ್ಭದ ಸಿಸಿಟಿವಿ ದೃಶ್ಯಾವಳಿಯನ್ನು ಸಂರಕ್ಷಿಸಬೇಕು ಎಂದು ಪೊಲೀಸರಿಗೆ ಸೂಚಿಸಿದರು. ಜೊತೆಗೆ, ಪ್ರವೇಶ ನಿರಾಕರಿಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಸುಧನ್ವ ಅವರಿಗೆ ನಿರ್ದೇಶನ ನೀಡಿದರು.

ದರ್ಶನ್ ಪರ ಅರ್ಜಿಗಳು

ಇದೇ ವೇಳೆ, ನಟ ದರ್ಶನ್ ಪರ ವಕೀಲರು ಹಲವು ಅರ್ಜಿಗಳನ್ನು ಸಲ್ಲಿಸಿದರು. ಜೈಲಿನೊಳಗೆ ಕುಟುಂಬ ಸದಸ್ಯರು ಭೇಟಿ ಮಾಡಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಹಾಗೂ ಪ್ರಕರಣವನ್ನು ಪ್ರತಿದಿನ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ನ್ಯಾಯಾಲಯ ಈ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದು ತಿಳಿಸಿತು.

ಇನ್ನೊಂದು ಅರ್ಜಿಯಲ್ಲಿ, ಘಟನೆ ನಡೆದ ಸ್ಥಳಕ್ಕೆ ನ್ಯಾಯಾಧೀಶರೇ ಭೇಟಿ ನೀಡಿ ಪರಿಶೀಲಿಸಬೇಕು ಹಾಗೂ ದೋಷಾರೋಪ ಪಟ್ಟಿಯಲ್ಲಿ ಹೆಸರಿಸದ ಸಾಕ್ಷಿಗಳನ್ನು ವಿಚಾರಣೆಗೆ ಕರೆಸಬೇಕು ಎಂದು ಕೋರಲಾಗಿದೆ. ಈ ಕುರಿತು ವಿಶೇಷ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಸೂಚನೆ ನೀಡಿತು.

ಸಾಕ್ಷಿಗಳಿಗೆ ಸಮನ್ಸ್, ಬಂಧನಾವಧಿ ವಿಸ್ತರಣೆ

ಪ್ರಕರಣದ 17 ಮತ್ತು 18ನೇ ಕೋರ್ಟ್ ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡಿದ ನ್ಯಾಯಾಲಯ, ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿತು. ಅದುವರೆಗೆ ದರ್ಶನ್ ಮತ್ತು ಪವಿತ್ರಾಗೌಡ ಸೇರಿದಂತೆ ಜೈಲಿನಲ್ಲಿರುವ ಏಳು ಆರೋಪಿಗಳ ನ್ಯಾಯಾಂಗ ಬಂಧನಾವಧಿಯನ್ನು ವಿಸ್ತರಿಸಲಾಯಿತು.

ಶವದ ಆಭರಣ ಪೋಷಕರಿಗೆ ಹಸ್ತಾಂತರ

ರೇಣುಕಾಸ್ವಾಮಿ ಮೃತದೇಹದ ಮೇಲಿದ್ದ ಆಭರಣಗಳನ್ನು ಪೋಷಕರಿಗೆ ಹಸ್ತಾಂತರಿಸಲು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ಆಭರಣಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಸುರಕ್ಷಿತವಾಗಿ ಸಂಗ್ರಹಿಸಿಡಬೇಕು ಹಾಗೂ ಕೋರ್ಟ್ ಸೂಚಿಸಿದಾಗ ಹಾಜರುಪಡಿಸಬೇಕು ಎಂದು ನಿರ್ದೇಶಿಸಲಾಗಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ದರ್ಶನ್

ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ದರ್ಶನ್, ಜೈಲಿನ ತಮ್ಮ ಕೊಠಡಿಗೆ ಟಿವಿ ಅಳವಡಿಸಲು ಆದೇಶ ನೀಡಿದಕ್ಕಾಗಿ ನ್ಯಾಯಾಧೀಶರಿಗೆ ಧನ್ಯವಾದ ತಿಳಿಸಿದರು. ಜೊತೆಗೆ, ಮುಂದಿನ ವಿಚಾರಣೆಗೆ ತಮ್ಮನ್ನು ಖುದ್ದಾಗಿ ಕೋರ್ಟ್‌ಗೆ ಹಾಜರುಪಡಿಸುವಂತೆ ಸೂಚಿಸಬೇಕು. ಹೀಗೆ ಮಾಡಿದರೆ ಮನೆ ಊಟ ಸಿಗುವ ಅವಕಾಶ ದೊರೆಯುತ್ತದೆ ಎಂದು ನ್ಯಾಯಾಧೀಶರನ್ನು ಮನವಿ ಮಾಡಿಕೊಂಡರು.

ಈ ನಡುವೆ, ಪ್ರಕರಣವು ದಿನದಿಂದ ದಿನಕ್ಕೆ ಹೊಸ ಬೆಳವಣಿಗೆಗಳನ್ನು ಕಾಣುತ್ತಿದ್ದು, ತನಿಖಾ ಪ್ರಕ್ರಿಯೆಯ ಮೇಲಿನ ಪ್ರಶ್ನೆಗಳು ಹಾಗೂ ಆರೋಪಿಗಳ ಪರ ವಾದಗಳು ನ್ಯಾಯಾಲಯದ ಗಮನ ಸೆಳೆಯುತ್ತಿವೆ. ಮುಂದಿನ ವಿಚಾರಣೆ ವೇಳೆ ಮಹತ್ವದ ನಿರ್ಧಾರಗಳು ಹೊರಬರುವ ಸಾಧ್ಯತೆ ಇದೆ.

K.M.Sathish Gowda

Join WhatsApp

Join Now

Facebook

Join Now

Leave a Comment