ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನ್ಯಾಮತಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಸಂತೆ ಮತ್ತು ವಿಜ್ಞಾನ ವಸ್ತು ಪ್ರದರ್ಶನಕ್ಕೆ ಮೆಚ್ಚುಗೆ

On: February 28, 2026 3:34 PM
Follow Us:

ನ್ಯಾಮತಿ, ಫೆ.28: ಮಕ್ಕಳಲ್ಲಿನ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ವ್ಯವಹಾರಿಕ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ನ್ಯಾಮತಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಆಯೋಜಿಸಲಾದ ಮಕ್ಕಳ ಸಂತೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವು ವಿಶಿಷ್ಟ ಮೆರುಗು ಪಡೆದುಕೊಂಡಿತು.

ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ ಮಕ್ಕಳ ಸಂತೆ ಕಾರ್ಯಕ್ರಮ ಎಲ್ಲರ ಮನಗೆದ್ದಿತು. ಪುಟ್ಟ ಮಕ್ಕಳು ತಾವೇ ವ್ಯಾಪಾರಿಗಳಾಗಿ ವಿವಿಧ ಆಹಾರ ಪದಾರ್ಥಗಳು, ಕೈಚಳಕ ವಸ್ತುಗಳು ಮತ್ತು ಉಪಯೋಗಿ ಸಾಮಗ್ರಿಗಳನ್ನು ಮಳಿಗೆಗಳಲ್ಲಿ ಅಳವಡಿಸಿಕೊಂಡು ಮಾರಾಟ ನಡೆಸಿದ ದೃಶ್ಯ ಮನಮೋಹಕವಾಗಿತ್ತು. ಖರೀದಿ–ಮಾರಾಟದ ವ್ಯವಹಾರ, ಹಣದ ಲೆಕ್ಕಾಚಾರ, ಗ್ರಾಹಕರೊಂದಿಗೆ ಸಂವಹನ ಕೌಶಲ್ಯ ಇವುಗಳನ್ನು ಮಕ್ಕಳು ಪ್ರಾಯೋಗಿಕವಾಗಿ ಕಲಿತರು.

ಮಕ್ಕಳ ಆತ್ಮವಿಶ್ವಾಸ, ಮಾತುಕತೆ ಶೈಲಿ ಹಾಗೂ ಹಣಕಾಸಿನ ಅರಿವು ಗಮನಸೆಳೆಯಿತು. ಪೋಷಕರು ಮತ್ತು ಶಿಕ್ಷಕರು ಗ್ರಾಹಕರಾಗಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. “ಪಾಠ ಪುಸ್ತಕದಾಚೆಗಿನ ಬದುಕಿನ ಪಾಠ”ವನ್ನು ಮಕ್ಕಳಿಗೆ ನೀಡಿದ ಈ ಸಂತೆ ಕಾರ್ಯಕ್ರಮ ಶ್ಲಾಘನೀಯವೆಂದು ಪೋಷಕರು ಅಭಿಪ್ರಾಯಪಟ್ಟರು.

ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಆವಿಷ್ಕಾರಾತ್ಮಕ ಚಿಂತನೆ ಸ್ಪಷ್ಟವಾಗಿ ಗೋಚರಿಸಿತು. ಪರಿಸರ ಸಂರಕ್ಷಣೆ, ಮಳೆಯ ನೀರಿನ ಸಂಗ್ರಹ, ಶಕ್ತಿ ಉಳಿತಾಯ, ವಿಜ್ಞಾನಾಧಾರಿತ ಉಪಕರಣಗಳ ಮಾದರಿಗಳು ಸೇರಿದಂತೆ ಹಲವಾರು ವಿನೂತನ ಪ್ರದರ್ಶನಗಳು ಗಮನ ಸೆಳೆದವು.

ವಿದ್ಯಾರ್ಥಿಗಳು ಸ್ವತಃ ತಯಾರಿಸಿದ ಮಾದರಿಗಳನ್ನು ವಿವರಿಸುವಲ್ಲಿ ತೋರಿದ ಆತ್ಮವಿಶ್ವಾಸ ಮತ್ತು ವಿಷಯಜ್ಞಾನ ಶಿಕ್ಷಕರನ್ನೂ ಪೋಷಕರನ್ನೂ ಮೆಚ್ಚಿಸಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜು ವಿಭಾಗದ ಪ್ರಾಂಶುಪಾಲ ವಿ.ಪಿ. ಪೂರ್ಣಾನಂದ ಅವರು ರಾಸಾಯನಿಕ ಬದಲಾವಣೆಗಳ ಪ್ರಾಯೋಗಿಕ ಪ್ರದರ್ಶನ ನೀಡಿ ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿ ಹೆಚ್ಚಿಸಿದರು.

ಕಾರ್ಯಕ್ರಮವು ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಮಂಜಾ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಉಪನ್ಯಾಸಕ ಗಂಗಾಧರ್, ಪ್ರೌಢಶಾಲಾ ಹಿರಿಯ ಸಹ ಶಿಕ್ಷಕ ರವಿಕುಮಾರ್ ಕೆ., ಶಾಲಾ–ಕಾಲೇಜುಗಳ ಸಿಬ್ಬಂದಿ, ಎಸ್‌ಡಿಎಂಸಿ ಸದಸ್ಯರು, ಪದಾಧಿಕಾರಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಹಿರಿಯ ಸಹ ಶಿಕ್ಷಕ ಸಿದ್ದಪ್ಪ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವೆಂದರು. ಸಹಶಿಕ್ಷಕಿ ಶ್ರೀಮತಿ ಗೌರಮ್ಮ ಪ್ರಾರ್ಥಿಸಿದರು. ಶಿಕ್ಷಕರಾದ ಹೆಚ್. ಚಂದ್ರಶೇಖರ್ ಸ್ವಾಗತಿಸಿದರು. ಲೋಕೇಶಪ್ಪ ಪಿಜಿ ವಂದಿಸಿದರು.

ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಉತ್ಸಾಹ ತುಂಬಿದರು. ಒಟ್ಟಾರೆ, ಮಕ್ಕಳ ಸಂತೆ ಮತ್ತು ವಿಜ್ಞಾನ ವಸ್ತು ಪ್ರದರ್ಶನವು ಕಲಿಕೆ ಮತ್ತು ಕೌಶಲ್ಯಾಭಿವೃದ್ಧಿಗೆ ಹೊಸ ದಾರಿಯನ್ನು ತೆರೆದ ಶ್ಲಾಘನೀಯ ಪ್ರಯತ್ನವಾಗಿ ಪರಿಣಮಿಸಿತು.

K.M.Sathish Gowda

Join WhatsApp

Join Now

Facebook

Join Now

Leave a Comment