ಶಿವಮೊಗ್ಗ: ತಾಲ್ಲೂಕಿನ ಪ್ರಸಿದ್ಧ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಸೂಗೂರು ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ಮನೆ ಮಾಡಿತ್ತು. ಗ್ರಾಮದ ಆರಾಧ್ಯ ದೈವ ಶ್ರೀ ಮೃಡಬಸವೇಶ್ವರ ಸ್ವಾಮಿಯ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಾಗೂ ಸಮುದಾಯ ಭವನದ ಉದ್ಘಾಟನಾ ಸಮಾರಂಭವು ಅತ್ಯಂತ ವೈಭವದಿಂದ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಶ್ರೀ ಜಗದ್ಗುರು ಬೆಕ್ಕಿನಕಲ್ಮಠದ ಶ್ರೀ ಮಲ್ಲಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದ ಮೂಲಕ ಭಕ್ತ ಸಮೂಹಕ್ಕೆ ಜೀವನದ ತತ್ವವನ್ನು ಬೋಧಿಸಿದರು.

“ಗುರುಪರಂಪರೆಯ ಮಹತ್ವವನ್ನು ಸ್ಮರಿಸಿದ ಬೆಕ್ಕಿನಕಲ್ಮಠ ಶ್ರೀಗಳ ದಿವ್ಯ ಸಂದೇಶ”
ಶಿವಮೊಗ್ಗ ಜಿಲ್ಲೆಯ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವ ಹೊಂದಿರುವ ಸೂಗೂರು ಗ್ರಾಮ ಇಂದು ಮತ್ತೊಮ್ಮೆ ತನ್ನ ಪವಿತ್ರತೆಯ ಕಾರಣದಿಂದ ಭಕ್ತಿಭಾವದ ಕೇಂದ್ರಬಿಂದುವಾಗಿ ಹೊಳೆಯಿತು. ಶ್ರೀ ಮೃಡಬಸವೇಶ್ವರ ದೇವಸ್ಥಾನದ ಗೃಹಪ್ರವೇಶ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಡುವೆ, ಗ್ರಾಮದ ಗುರುಪರಂಪರೆಯ ಮಹತ್ವವನ್ನು ಸ್ಮರಿಸಿ ಬೆಕ್ಕಿನಕಲ್ಮಠದ ಶ್ರೀ ಮಲ್ಲಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಭಕ್ತರಿಗೆ ಆಧ್ಯಾತ್ಮಿಕ ಸಂದೇಶವನ್ನು ನೀಡಿದರು.

“ಸೂಗೂರು ಗುರುಗಳ ಜನ್ಮಭೂಮಿ: ತರಳಬಾಳು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಜೀವನಸ್ಮರಣೆ – ಬೆಕ್ಕಿನಕಲ್ಮಠ ಶ್ರೀಗಳ ಭಕ್ತಿಭಾವ”
ಈ ಸಂದರ್ಭದಲ್ಲಿ ಶ್ರೀಗಳು ಸೂಗೂರು ಗ್ರಾಮವನ್ನು “ಗುರುಗಳ ಜನ್ಮಪವಿತ್ರ ಭೂಮಿ” ಎಂದು ಕೊಂಡಾಡಿ, ಸಿರಿಗೆರೆಯ ತರಳಬಾಳು ಮಠದ ಜಗದ್ಗುರುಗಳಾದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಜೀವನಯಾತ್ರೆಯನ್ನು ಭಕ್ತಿಭಾವದಿಂದ ಸ್ಮರಿಸಿದರು. “ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಬಾಲಕನು ಇಂದು ಗುರುಪರಂಪರೆಯ ಮಹೋನ್ನತ ಸ್ಥಾನವನ್ನು ಅಲಂಕರಿಸಿ ಮಠವನ್ನು ಮುನ್ನಡೆಸುತ್ತಿರುವುದು ಈ ಮಣ್ಣಿನ ದಿವ್ಯ ಶಕ್ತಿಗೆ ಸಾಕ್ಷಿ” ಎಂದು ಅವರು ಹೇಳಿದರು.
ಶ್ರೀಗಳ ಮಾತಿನಲ್ಲಿ ವಿಶೇಷವಾಗಿ ಸಿರಿಗೆರೆಯ ತರಳಬಾಳು ಮಠದ ಹಿಂದಿನ ಪರಮ ಪೂಜ್ಯ ಲಿಂಗೈಕ್ಯ ಜಗದ್ಗುರುಗಳಾದ ಶಿವಕುಮಾರ ಮಹಾಸ್ವಾಮಿಗಳ ಗುರುಪರಂಪರೆಯ ಪ್ರಭಾವವನ್ನು ಉಲ್ಲೇಖಿಸಿ, ಸೂಗೂರು ಗ್ರಾಮದ ಒಬ್ಬ ಯುವಕನ ಜೀವನದಲ್ಲಿ ಮೂಡಿದ ಗುರುಚೇತನವು ಇಡೀ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವ ಶಕ್ತಿಯಾಗಿದ್ದುದು ಈ ನೆಲದ ಮಹತ್ವವನ್ನು ಮತ್ತಷ್ಟು ಬೆಳಗಿಸುತ್ತದೆ ಎಂದು ಹೇಳಿದರು.

“ಆಧ್ಯಾತ್ಮಿಕ ಶಕ್ತಿಯ ನೆಲೆ: ಗುರುಭಕ್ತಿ ಮತ್ತು ಧರ್ಮಪಾಲನೆಯ ಪುಣ್ಯಭೂಮಿ ಸೂಗೂರು”
“ಗುರುಪರಂಪರೆ ಎಂಬುದು ಕೇವಲ ಪದವಲ್ಲ, ಅದು ಭಕ್ತಿಯಿಂದ ಬೆಳೆಯುವ ಜೀವನದ ದಾರಿ. ಅಂತಹ ದಾರಿಯನ್ನು ನೀಡುವ ಶಕ್ತಿ ಈ ಪುಣ್ಯಭೂಮಿ ಸೂಗೂರಿನಲ್ಲಿದೆ. ಈ ಗ್ರಾಮದಿಂದ ಉದಯವಾದ ಸಾಧನೆಗಳು ಸಮಸ್ತ ಭಕ್ತರಿಗೆ ಹೆಮ್ಮೆ ತಂದಿವೆ,” ಎಂದು ಶ್ರೀಗಳು ಭಾವಪೂರ್ಣವಾಗಿ ನುಡಿದರು.
ಸೂಗೂರು ಗ್ರಾಮವು ಕೇವಲ ಒಂದು ಸ್ಥಳವಲ್ಲ, ಅದು ಆಧ್ಯಾತ್ಮಿಕ ಶಕ್ತಿಯ ನೆಲೆ. ಇಲ್ಲಿ ಜನಿಸಿದವರು, ಬೆಳೆದವರು ಅಥವಾ ಪ್ರಭಾವಿತರಾದವರು ಸಮಾಜಕ್ಕೆ ಬೆಳಕಾಗುವ ಸಾಮರ್ಥ್ಯವನ್ನು ಪಡೆಯುತ್ತಾರೆ ಎಂದು ಹೇಳಿದರು. ಈ ಗ್ರಾಮವು ಗುರುಭಕ್ತಿ, ಶಿಸ್ತು ಮತ್ತು ಧರ್ಮಪಾಲನೆಯ ಸಂಕೇತವಾಗಿ ಇಡೀ ಪ್ರದೇಶಕ್ಕೆ ಪ್ರೇರಣೆಯಾಗಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.

ಭಕ್ತಿಗೆ ಒಲಿಯುವ ಈಶ್ವರ: ಶ್ರೀಗಳ ಸಂದೇಶ
ಆಶೀರ್ವಚನ ನೀಡಿದ ಶ್ರೀಗಳು, “ಭಗವಂತನು ಭಕ್ತ ಪರಾಧೀನ. ನಾವು ಮಲಗಿ ಪ್ರಾರ್ಥಿಸಿದರೆ ಆತ ಕುಳಿತು ಕೇಳುತ್ತಾನೆ, ನಾವು ಕುಳಿತು ಪ್ರಾರ್ಥಿಸಿದರೆ ಆತ ನಿಂತು ಕೇಳುತ್ತಾನೆ. ಒಂದು ವೇಳೆ ನಾವು ಭಕ್ತಿಯಿಂದ ನಿಂತು ಪ್ರಾರ್ಥಿಸಿದರೆ, ಆ ಭಗವಂತನೇ ನಮ್ಮೆದುರು ಕುಣಿದಾಡುತ್ತಾ ಭಕ್ತಿಯನ್ನು ಆಲಿಸುತ್ತಾನೆ,” ಎಂದು ಭಕ್ತಿಯ ಶಕ್ತಿಯನ್ನು ಬಣ್ಣಿಸಿದರು. ಪಾರ್ವತಿ ದೇವಿಯು ‘ಪಂಚಾಗ್ನಿ’ಗಳ ಮಧ್ಯೆ ಕುಳಿತು ಕಠಿಣ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡಂತೆ, ಇಂದು ಸೂಗೂರಿನ ಭಕ್ತರು ಸೂರ್ಯನ ಬಿಸಿಲು ಮತ್ತು ವಿದ್ಯುತ್ ದೀಪಗಳ ಶಾಖದ ನಡುವೆಯೂ ತೋರುತ್ತಿರುವ ಶಿಸ್ತು ಹಾಗೂ ಭಕ್ತಿ ಅನನ್ಯವಾದುದು ಎಂದು ಶ್ಲಾಘಿಸಿದರು.

ಕಾಯಕ ಮತ್ತು ದಾಸೋಹ: ಬಸವಣ್ಣನವರ ತತ್ವವೇ ದಾರಿ
12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ತತ್ವಗಳನ್ನು ನೆನಪಿಸಿದ ಶ್ರೀಗಳು, “ಬಸವಣ್ಣನವರು ನಮಗೆ ಕೇವಲ ದೈವವಲ್ಲ; ಅವರು ನಮಗೆ ಮೈಗೆ ಬಟ್ಟೆ, ಹೊಟ್ಟೆಗೆ ಅನ್ನ ಮತ್ತು ನೆತ್ತಿಗೆ ಜ್ಞಾನ ನೀಡಿದ ಮಹಾಪುರುಷ. ಅಂದು ಕೇವಲ ‘ಎತ್ತಿನ ಜಯಂತಿ’ಯಾಗಿದ್ದ ಆಚರಣೆ ಇಂದು ವಚನ ಸಾಹಿತ್ಯದ ಪ್ರಭಾವದಿಂದ ವಿಶ್ವಗುರು ಬಸವಣ್ಣನವರ ಜಯಂತಿಯಾಗಿ ಅರ್ಥಪೂರ್ಣವಾಗಿದೆ,” ಎಂದರು.
ಮುಂದುವರಿದು, ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ವಿವರಿಸುತ್ತಾ, “ಪ್ರಾಮಾಣಿಕವಾಗಿ ದುಡಿದು ಸಂಪಾದಿಸುವುದೇ ಕಾಯಕ. ಹಾಗೆ ಗಳಿಸಿದ್ದನ್ನು ಹಂಚಿ ತಿನ್ನುವುದೇ ದಾಸೋಹ. ಕಾಗೆ ಮತ್ತು ಕೋಳಿಗಳಿಗೂ ಇರುವ ಈ ಹಂಚಿಣ್ಣುವ ಗುಣ ಮನುಷ್ಯನಿಗೆ ಇರಬೇಕು. ಸ್ವರಾರ್ಥ ಬಿಟ್ಟು ಸೌಹಾರ್ದತೆಯಿಂದ ಬದುಕುವುದೇ ಧರ್ಮ,” ಎಂದು ಕಿವಿಮಾತು ಹೇಳಿದರು.

ಸೂಗೂರು ಗ್ರಾಮದ ಏಕತೆ ಮತ್ತು ಸಮಿತಿಯ ಕಾರ್ಯಕ್ಕೆ ಶ್ಲಾಘನೆ
ಈ ಬೃಹತ್ ಕಾರ್ಯಕ್ರಮದ ಯಶಸ್ಸಿನ ಹಿಂದೆ ಶ್ರೀ ಮೃಡಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಅವಿರತ ಶ್ರಮವಿದೆ. ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯನ್ನು ಒಗ್ಗೂಡಿಸಿ, ಅತ್ಯಂತ ಶಿಸ್ತುಬದ್ಧವಾಗಿ ದೇವಸ್ಥಾನ ಹಾಗೂ ಸಮುದಾಯ ಭವನವನ್ನು ನಿರ್ಮಿಸಿರುವುದು ಇಡೀ ಜಿಲ್ಲೆಗೆ ಮಾದರಿಯಾಗಿದೆ.
“ಮನೆಯಲ್ಲಿ ಕೇವಲ ‘ನನ್ನವರು’ ಎಂಬ ಭಾವವಿರುತ್ತದೆ, ಆದರೆ ಇಂತಹ ಮಠ-ಮಂದಿರಗಳಲ್ಲಿ ‘ನಾವೆಲ್ಲರೂ ಒಂದೇ’ ಎಂಬ ವಿಶಾಲ ಮನೋಭಾವ ಬೆಳೆಯುತ್ತದೆ. ಈ ದೇವಸ್ಥಾನವು ಕೇವಲ ಹರಟೆ ಹೊಡೆಯುವ ತಾಣವಾಗದೆ, ಸಂಜೆ ಕಾಯಕ ಮುಗಿಸಿ ಬಂದ ರೈತರಿಗೆ ನೆಮ್ಮದಿ ನೀಡುವ ತಾಣವಾಗಲಿ,” ಎಂದು ಶ್ರೀಗಳು ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನ ಪಡೆದರು. ಸಮುದಾಯ ಭವನವು ಗ್ರಾಮದ ಎಲ್ಲ ವರ್ಗದ ಜನರಿಗೆ ಸಾಮಾಜಿಕ ಕಾರ್ಯಕ್ರಮಗಳಿಗೆ ನೆರವಾಗಲಿದೆ. ಶ್ರೀ ಮೃಡ ಬಸವೇಶ್ವರ ಸ್ವಾಮಿ ಸೇವಾ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರ ಸಂಘಟಿತ ಪ್ರಯತ್ನವು ಗ್ರಾಮದ ಅಭಿವೃದ್ಧಿ ಹಾಗೂ ಆಧ್ಯಾತ್ಮಿಕ ಉನ್ನತಿಗೆ ನಾಂದಿ ಹಾಡಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಅಶೋಕ್ ನಾಯ್ಕ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ ಕುಮಾರ್, ಸಾಧು ವೀರಶೈವ ಸಮಾಜದ ಮುಖಂಡರು ಸೋಮಿನಕೊಪ್ಪದ ಷಣ್ಮುಖಪ್ಪ, ಶಿವ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಗಡ್ಲಬಸಪ್ಪ, ಶ್ರೀ ಮೃಡ ಬಸವೇಶ್ವರ ಸೇವಾ ಸಮಿತಿಯ ಪ್ರಕಾಶಪ್ಪ, ಪಾಲಕ್ಷಪ್ಪ, ಶಿವಮೊಗ್ಗ ಹಾಲು ಒಕ್ಕೂಟ ನಿರ್ದೇಶಕರಾದ ಎಚ್. ಬಿ. ದಿನೇಶ್, ವ್ಯವಸ್ಥಾಪಕರಾದ ಎಸ್. ಜಿ. ಶೇಖರ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷರಾದ ಎಚ್. ಎಲ್. ಷಡಾಕ್ಷರಿ, ಕು. ಹಾರಿಕಾ, ರುದ್ರಯ್ಯ, ಮಹೇಶ್ವರಪ್ಪ, ಶಿವಕುಮಾರ್, ನವಲಯ್ಯ, ಮಲ್ಲಕಾರ್ಜುನ್, ಮಂಜುನಾಥ್, ಕುಮಾರ್, ನವೀನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.





