ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸೂಗೂರಿನಲ್ಲಿ ಭಕ್ತಿ-ಸಂಭ್ರಮದ ಸಾಗರ: 4.5 ಕೋಟಿ ರೂ. ವೆಚ್ಚದ ಭವ್ಯ ಶ್ರೀ ಮೃಡಬಸವೇಶ್ವರ ದೇವಾಲಯ ಲೋಕಾರ್ಪಣೆ

On: April 24, 2026 12:55 PM
Follow Us:

ಶಿವಮೊಗ್ಗ: ಜಿಲ್ಲೆಯ ಸಾಂಸ್ಕೃತಿಕ ಇತಿಹಾಸದಲ್ಲಿ ಸೂಗೂರು ಗ್ರಾಮವು ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಸುದಿನಕ್ಕೆ ಸಾಕ್ಷಿಯಾಯಿತು. ಗ್ರಾಮದ ಆರಾಧ್ಯ ದೈವ ಶ್ರೀ ಮೃಡಬಸವೇಶ್ವರ ಸ್ವಾಮಿಯ ನೂತನ ಶಿಲಾಮಯ ದೇವಾಲಯದ ಗೃಹಪ್ರವೇಶ, ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ‘ವೇ. ಈಶ್ವರಯ್ಯ ಗಂಗಮ್ಮ ಸಮುದಾಯ ಭವನ’ದ ಉದ್ಘಾಟನಾ ಕಾರ್ಯಕ್ರಮವು ಅತ್ಯಂತ ವೈಭವೋಪೇತವಾಗಿ ನೆರವೇರಿತು. ಭಕ್ತಿ, ಶ್ರದ್ಧೆ ಮತ್ತು ಗ್ರಾಮಸ್ಥರ ಅಭೂತಪೂರ್ವ ಒಗ್ಗಟ್ಟಿನ ಪ್ರತೀಕವಾಗಿ ಈ ಸಮಾರಂಭ ನಡೆಯಿತು.

​ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್ ಅವರು, “ಈ ದೇವಾಲಯ ಕೇವಲ ಕಲ್ಲು-ಸಿಮೆಂಟ್‌ನ ಕಟ್ಟಡವಲ್ಲ; ಇದು ಸೂಗೂರು ಗ್ರಾಮಸ್ಥರ ಅಪಾರ ಶ್ರಮ ಮತ್ತು ಭಕ್ತಿಯ ಜೀವಂತ ಸಾಕ್ಷಿ. ಅಡಿಪಾಯದಿಂದ ಶಿಖರದವರೆಗೆ ಗ್ರಾಮದ ಪ್ರತಿಯೊಬ್ಬರೂ ಹಗಲಿರುಳು ಶ್ರಮಿಸಿದ್ದಾರೆ. ಊರಿನಲ್ಲೇ ಊಟ-ತಿಂಡಿ ಸಿದ್ಧಪಡಿಸಿಕೊಂಡು, ಶ್ರಮದಾನ ಮಾಡುವ ಮೂಲಕ ಇಂತಹ ಭವ್ಯ ಶೈಲಿಯ ದೇವಸ್ಥಾನ ನಿರ್ಮಿಸಿರುವುದು ಇಡೀ ರಾಜ್ಯಕ್ಕೆ ಮಾದರಿ,” ಎಂದು ಶ್ಲಾಘಿಸಿದರು. ಅಲ್ಲದೆ, ತಂತ್ರಜ್ಞಾನದ ಬಳಕೆಯನ್ನು ಮೆಚ್ಚಿದ ಅವರು, ಮಹೇಶಣ್ಣ ಅವರ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ದೇವಸ್ಥಾನದ ಪ್ರತಿಯೊಂದು ಹಂತದ ಕೆಲಸಗಳನ್ನು ಪ್ರಚಾರ ಮಾಡಿದ್ದು ಜನಜಾಗೃತಿಗೆ ಸಹಕಾರಿಯಾಗಿದೆ ಎಂದರು.

​ಮಾಜಿ ಶಾಸಕರಾದ ಅಶೋಕ್ ನಾಯ್ಕ್ ಅವರು ಮಾತನಾಡಿ, “ಬಿ.ಎಸ್. ಯಡಿಯೂರಪ್ಪನವರ ಸರ್ಕಾರದ ಸಹಕಾರ ಮತ್ತು ಅನುದಾನದ ಫಲವಾಗಿ ಇಂದು ಸೂಗೂರು ಗ್ರಾಮವು ನಗರ ಪ್ರದೇಶದಂತೆ ಅಭಿವೃದ್ಧಿ ಕಂಡಿದೆ. ದೇವಸ್ಥಾನಗಳನ್ನು ಕಟ್ಟುವುದು ಎಷ್ಟು ಮುಖ್ಯವೋ, ನಮ್ಮ ಸಂಸ್ಕೃತಿ ಮತ್ತು ಮಾತೃಶಕ್ತಿಯನ್ನು ಗೌರವಿಸಿ ಸಂಸ್ಕಾರಯುತ ಕುಟುಂಬವನ್ನು ಬೆಳೆಸುವುದು ಅಷ್ಟೇ ಮುಖ್ಯ. ಹಿಂದೂ ಧರ್ಮವು ಪ್ರಕೃತಿಯನ್ನು ದೈವವೆಂದು ಆರಾಧಿಸುವ ಶ್ರೇಷ್ಠ ಧರ್ಮವಾಗಿದ್ದು, ಮುಂಬರುವ ದಿನಗಳಲ್ಲಿ ಭಾರತವು ವಿಶ್ವಗುರುವಾಗಿ ಹೊರಹೊಮ್ಮಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಠಮಾನ್ಯಗಳ ಮಾರ್ಗದರ್ಶನದಲ್ಲಿ ಧರ್ಮ ರಕ್ಷಣೆ ಮಾಡುವ ಅನಿವಾರ್ಯತೆಯನ್ನು ಅವರು ಪ್ರತಿಪಾದಿಸಿದರು.

ಶಿಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಎಸ್. ಜೆ. ಶೇಖರ್ ಅವರು ಮಾತನಾಡಿ 1965ರಲ್ಲಿ ಸ್ಥಾಪಿತಗೊಂಡು ಶಿಥಿಲಾವಸ್ಥೆಯಲ್ಲಿದ್ದ ಈ ಪುರಾತನ ದೇವಸ್ಥಾನವನ್ನು ಸುಮಾರು 4.5 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ಅತ್ಯಂತ ಕಲಾತ್ಮಕವಾಗಿ ಪುನರ್ನಿರ್ಮಿಸಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು. ಈ ಭವ್ಯ ದೇಗುಲದ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸಿದ ಗ್ರಾಮದ ಹಿರಿಯರು, ದಾನಿಗಳು ಮತ್ತು ಭಕ್ತಾದಿಗಳ ನಿಸ್ವಾರ್ಥ ಸೇವೆಯನ್ನು ಅವರು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಿದರು.

ಗ್ರಾಮದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ಸಮುದಾಯ ಭವನದ ಮಹತ್ವವನ್ನು ಬಗ್ಗೆ ಹೇಳಿದ ಅವರು, ಈ ಹಿಂದೆ ಮದುವೆ ಹಾಗೂ ಇತರ ಶುಭ ಕಾರ್ಯಕ್ರಮಗಳಿಗಾಗಿ ನಗರ ಪ್ರದೇಶಗಳನ್ನು ಅವಲಂಬಿಸಬೇಕಾಗಿದ್ದ ಪರಿಸ್ಥಿತಿ ಈಗ ದೂರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಈ ಭವನವು ಕೇವಲ ಸೂಗೂರು ಗ್ರಾಮಕ್ಕೆ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳ ಜನರಿಗೂ ಸಾಮಾಜಿಕ ಕಾರ್ಯಗಳಿಗಾಗಿ ಬಹಳಷ್ಟು ಅನುಕೂಲವಾಗಲಿದೆ. ಶ್ರೀ ಮೃಡಬಸವೇಶ್ವರ ಸ್ವಾಮಿಯು ಸಮಸ್ತ ಜನತೆಗೆ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂದು ಅವರು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಾಧು ವೀರಶೈವ ಸಮಾಜದ ಮುಖಂಡರು ಹಾಗೂ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಷಣ್ಮುಖಪ್ಪನವರು, ಸೂಗೂರು ಗ್ರಾಮದ ಜನರ ಅಪ್ರತಿಮ ಭಕ್ತಿ ಮತ್ತು ಒಗ್ಗಟ್ಟನ್ನು ಶ್ಲಾಘಿಸಿದರು. ಸುಮಾರು 5 ಕೋಟಿ ರೂಪಾಯಿ ವೆಚ್ಚದ ಭವ್ಯ ದೇವಸ್ಥಾನ ಹಾಗೂ 60 ಲಕ್ಷ ರೂಪಾಯಿ ವೆಚ್ಚದ ಕಲ್ಯಾಣ ಮಂಟಪ ನಿರ್ಮಾಣವಾಗಿರುವುದು ಗ್ರಾಮದ ಶಕ್ತಿಗೆ ಸಾಕ್ಷಿಯಾಗಿದೆ. ಗ್ರಾಮದಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಾಗ ಎಲ್ಲರೂ ಒಂದಾಗುವ ಇಲ್ಲಿನ ಸಂಪ್ರದಾಯವು ಇಡೀ ಜಿಲ್ಲೆಗೆ ಮಾದರಿಯಾಗಿದೆ ಎಂದು ಅವರು ಬಣ್ಣಿಸಿದರು.

ಗ್ರಾಮದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಸೂಗೂರು ಗ್ರಾಮದ ಎಂ.ಜಿ.ಪ್ರಸನ್ನ ಅಭಿಯಂತರರಾಗಿ ಕರ್ನಾಟಕ ನೀರಾವರಿ ನಿಗಮ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರ ಸೇವೆಯನ್ನು ಸ್ಮರಿಸಿದ ಷಣ್ಮುಖಪ್ಪನವರು, ಹುಟ್ಟೂರಿನ ಮೇಲಿನ ಪ್ರೀತಿಯಿಂದ ಸರ್ಕಾರದ ವಿವಿಧ ಅನುದಾನಗಳನ್ನು ತಂದು ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ಅವರ ಕಾರ್ಯವನ್ನು ಶ್ಲಾಘಿಸಿದರು. ಮುಂದಿನ ವರ್ಷ ಸೂಗೂರು ಗ್ರಾಮದಲ್ಲಿ ‘ಗಂಗಾರತಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಈಗಾಗಲೇ ಅನುದಾನ ಮೀಸಲಿಡಲಾಗಿದೆ ಎಂಬ ಶುಭ ಸುದ್ದಿಯನ್ನು ಹಂಚಿಕೊಂಡರು. ಇದೇ ವೇಳೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 19 ವರ್ಷದ ಹಿಂದೂ ಫೈರ್ ಬ್ರಾಂಡ್ ಖ್ಯಾತಿಯ ಹಾರಿಕಾ ಅವರ ಧಾರ್ಮಿಕ ಪ್ರಜ್ಞೆಯನ್ನು ಮೆಚ್ಚಿದ ಅವರು, ಯುವಶಕ್ತಿಯು ಧರ್ಮ ಜಾಗೃತಿಯಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ ಎಂದರು. ಕಳೆದ ಒಂದೂವರೆ ತಿಂಗಳಿಂದ ಹಗಲಿರುಳು ಶ್ರಮಿಸಿದ ಸೂಗೂರು ಗ್ರಾಮದ ಯುವಕರ ತಂಡ ಮತ್ತು ಸಮಿತಿ ಸದಸ್ಯರ ಶ್ರಮದಿಂದ ಈ ಸಮಾರಂಭವು ಯಶಸ್ವಿಯಾಗಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಶಿವಮೊಗ್ಗ ಹಾಲು ಒಕ್ಕೂಟದ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಚ್. ಬಿ. ದಿನೇಶ್ ಬುಳ್ಳಾಪುರ ಅವರು ಮಾತನಾಡಿ, ಸೂಗೂರು ಗ್ರಾಮವು ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ಮಾದರಿಯಾಗಿ ಬೆಳೆಯುತ್ತಿದ್ದು, ಇಲ್ಲಿನ ಗುರು ಪರಂಪರೆ ಶ್ಲಾಘನೀಯ ಎಂದರು. ಒಂದು ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ದೇವಸ್ಥಾನ ನಿರ್ಮಿಸುವುದು ಸುಲಭದ ಮಾತಲ್ಲ; ಆದರೆ ಗ್ರಾಮಸ್ಥರ ಒಗ್ಗಟ್ಟು, ದಾನಿಗಳ ಉದಾರತೆ ಹಾಗೂ ಸರ್ಕಾರದ ಸಹಕಾರದಿಂದ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭವ್ಯ ಕಲ್ಲಿನ ದೇವಸ್ಥಾನ ಸಾಕಾರಗೊಂಡಿದೆ. ಕಳೆದ ಒಂದು ತಿಂಗಳಿನಿಂದ ದೇವಸ್ಥಾನ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರೆಲ್ಲರೂ ಹಗಲಿರುಳು ಶ್ರಮಿಸಿ ಈ ಸುಂದರ ವೇದಿಕೆಯನ್ನು ಸಿದ್ಧಪಡಿಸಿರುವುದು ಅವರ ಭಕ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವದಂತೆ ಭಕ್ತರ ಶ್ರಮವೇ ದೇವಸ್ಥಾನಕ್ಕೆ ನಿಜವಾದ ಅರ್ಥ ನೀಡುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ದೇವಸ್ಥಾನವು ಊರಿನ ಶಾಂತಿ, ನೆಮ್ಮದಿ ಮತ್ತು ಐಕ್ಯತೆಯ ಸಂಕೇತವಾಗಿದೆ ಎಂದು ತಿಳಿಸಿದರು. ನಾಳೆ ನಡೆಯಲಿರುವ ಪರಮಪೂಜ್ಯರ ಸಾನ್ನಿಧ್ಯದ ಕಳಸಾರೋಹಣ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ವಿನಂತಿಸಿದರು. ಮೃಡ ಬಸವೇಶ್ವರ ಸ್ವಾಮಿಯು ಎಲ್ಲರಿಗೂ ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ ಹಾಗೂ ಮುಂದಿನ ದಿನಗಳಲ್ಲಿ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದರು.

​ಮಾಜಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಚ್. ಎಲ್. ಷಡಾಕ್ಷರಿ ಅವರು ಸಂಸ್ಕಾರದ ಕುರಿತು ಮಾತನಾಡುತ್ತಾ, “ಮಕ್ಕಳಿಗೆ ಕೇವಲ ಶಾಲಾ ಶಿಕ್ಷಣ ನೀಡಿದರೆ ಸಾಲದು, ಅದರ ಜೊತೆಗೆ ಆಚಾರ-ವಿಚಾರಗಳನ್ನು ಕಲಿಸಬೇಕು. ಸೋಮವಾರ ದೇವಸ್ಥಾನಕ್ಕೆ ಹೋಗುವುದು, ಭಜನೆ ಮಾಡುವುದು ಸಂಸ್ಕಾರದ ಭಾಗವಾಗಲಿ. ಐಟಿ-ಬಿಟಿ ಕ್ಷೇತ್ರದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಹಳ್ಳಿಗಳ ರೈತ ಕುಟುಂಬದ ಹಿರಿಯರ ಮಾರ್ಗದರ್ಶನ ಇಂದಿನ ಪೀಳಿಗೆಗೆ ಮಾದರಿಯಾಗಬೇಕು,” ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಗ್ರಾಮದ ಪಿ.ಎಂ. ಶಿವಕುಮಾರ್ ಅವರು, ಗ್ರಾಮದ ಆರಾಧ್ಯ ದೈವ ಶ್ರೀ ಮೂಡಬಸವೇಶ್ವರ ಸ್ವಾಮಿಯ ನೂತನ ಶಿಲಾಮಯ ದೇವಾಲಯದ ಗೃಹಪ್ರವೇಶವು ಮುಂಜಾನೆಯ ಬ್ರಾಹ್ಮಿ ಮುಹೂರ್ತದಲ್ಲಿ ಭಕ್ತಾದಿಗಳ ಹರ್ಷೋದ್ಗಾರಗಳ ನಡುವೆ ಅತ್ಯಂತ ವೈಭವದಿಂದ ನೆರವೇರಿತು.

1965ರಲ್ಲಿ ಹಿರಿಯರು ನಿರ್ಮಿಸಿದ್ದ ಹಳೆಯ ಹಂಚಿನ ದೇವಾಲಯವು ಕಾಲಕ್ರಮೇಣ ಶಿಥಿಲಗೊಂಡಿದ್ದರಿಂದ, ಇಡೀ ಗ್ರಾಮಸ್ಥರು ಒಗ್ಗೂಡಿ ಈ ಭವ್ಯ ಶಿಲಾಮಯ ಗುಡಿಯನ್ನು ನಿರ್ಮಿಸಲು ಸಂಕಲ್ಪ ಮಾಡಿದ್ದಾಗಿ ತಿಳಿಸಿದರು. ಯೋಜನೆಯ ಆರಂಭದಲ್ಲಿ ಶ್ರಮಿಸಿ ಇಂದು ಲಿಂಗೈಕ್ಯರಾಗಿರುವ ಮುನೇಶ್ವರಪ್ಪ, ಪಿ.ಆರ್.ಶಿವರಾಜ್, ಶಿವಕುಮಾರ್ ಇವರಗಳ ತ್ಯಾಗವನ್ನು ಅವರು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸಿದರು.

ಸುಮಾರು 4.5 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ಗ್ರಾಮಸ್ಥರ ಅಪ್ರತಿಮ ಭಕ್ತಿ ಮತ್ತು ಸಂಘಟಿತ ಶ್ರಮಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಪ್ರತಿಯೊಂದು ಕೃಷಿಕ ಕುಟುಂಬವೂ ಆರ್ಥಿಕ ಸಂಕಷ್ಟದ ನಡುವೆಯೂ ತಲಾ 50,000 ರೂಪಾಯಿಗಳ ದೇಣಿಗೆ ನೀಡುವ ಮೂಲಕ ದೇವಾಲಯದ ಜೀರ್ಣೋದ್ಧಾರಕ್ಕೆ ಭದ್ರ ಬುನಾದಿ ಹಾಕಿರುವುದನ್ನು ಶಿವಕುಮಾರ್ ಅವರು ಶ್ಲಾಘಿಸಿದರು. ತಮಿಳುನಾಡಿನ ಶಿಲ್ಪಿಗಳ ನೈಪುಣ್ಯತೆ ಹಾಗೂ ಹೊನ್ನಾಳಿ ತಾಲೂಕಿನ ಬೀರಗೊಂಡನಹಳ್ಳಿಯಲ್ಲಿ ಕೆತ್ತಲ್ಪಟ್ಟ ಗರ್ಭಗುಡಿಯ ಮೂರ್ತಿಯು ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿದ್ದು, ಈ ಪುಣ್ಯಕ್ಷೇತ್ರವು ಮುಂದಿನ ಪೀಳಿಗೆಗೆ ಸಂಸ್ಕಾರ ನೀಡುವ ಮತ್ತು ಗ್ರಾಮದ ಒಗ್ಗಟ್ಟನ್ನು ಕಾಯುವ ಶಕ್ತಿಕೇಂದ್ರವಾಗಿ ಬೆಳಗಲಿ ಎಂದು ಅವರು ಆಶಿಸಿದರು.

ನಮ್ಮ ಗ್ರಾಮದ ಹೆಮ್ಮೆಯ ಪುತ್ರರಾದ ಎಂ.ಜಿ. ಪ್ರಸನ್ನ ಅವರು ಕರ್ನಾಟಕ ನೀರಾವರಿ ನಿಗಮದಲ್ಲಿ ಅಭಿಯಂತರರಾಗಿ ರಾಜ್ಯಕ್ಕೆ ಸೇವೆ ಸಲ್ಲಿಸುವುದರ ಜೊತೆಗೆ, ಗ್ರಾಮದ ಅಭಿವೃದ್ಧಿ ಮತ್ತು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ತೋರಿರುವ ಕಾಳಜಿ ಅಭಿನಂದನೀಯ. ಅವರು ತಮ್ಮ ಬಿಡುವಿಲ್ಲದ ವೃತ್ತಿ ಜೀವನದ ನಡುವೆಯೂ ಹುಟ್ಟೂರಿನ ಮೇಲಿನ ಪ್ರೀತಿಯಿಂದ ಶ್ರೀ ಮೂಡಬಸವೇಶ್ವರ ದೇವಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಮಾರ್ಗದರ್ಶನ ಹಾಗೂ ಅಗತ್ಯ ಸಹಕಾರ ನೀಡುವ ಮೂಲಕ ಭಕ್ತಿ ಮೆರೆದಿದ್ದಾರೆ.

ದೇವಸ್ಥಾನದ ಇಂತಹ ಪವಿತ್ರ ಕಾರ್ಯಗಳಲ್ಲಿ ತಾಂತ್ರಿಕ ಸಲಹೆಗಳ ಜೊತೆಗೆ, ಗ್ರಾಮದ ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆಯೂ ಅವರು ವಿಶೇಷ ಆಸಕ್ತಿ ವಹಿಸುತ್ತಾ ಬಂದಿದ್ದಾರೆ. ಒಬ್ಬ ದಕ್ಷ ಅಧಿಕಾರಿಯಾಗಿ ಸರ್ಕಾರದ ಮಟ್ಟದಲ್ಲಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸುತ್ತಿರುವ ಪ್ರಸನ್ನ ಅವರು, ಸಾಮಾಜಿಕ ಕಳಕಳಿಯ ಮೂಲಕ ಊರಿನ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇವರ ಇಂತಹ ನಿಸ್ವಾರ್ಥ ಸೇವೆ ಮತ್ತು ಕೊಡುಗೆಗಳು ನಮ್ಮ ಗ್ರಾಮದ ಒಗ್ಗಟ್ಟು ಮತ್ತು ಏಳಿಗೆಗೆ ದೊಡ್ಡ ಶಕ್ತಿಯಾಗಿವೆ ಎಂದು ಹೇಳಿದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ​ಶಿವಮೊಗ್ಗದ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ಅಶೋಕ್ ನಾಯ್ಕ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ ಕುಮಾರ್, ಸಾಧು ವೀರಶೈವ ಸಮಾಜದ ಮುಖಂಡರು ಸೋಮಿನಕೊಪ್ಪದ ಷಣ್ಮುಖಪ್ಪ, ಶಿವ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಗಡ್ಲಬಸಪ್ಪ, ಶ್ರೀ ಮೃಡ ಬಸವೇಶ್ವರ ಸೇವಾ ಸಮಿತಿಯ ಪ್ರಕಾಶಪ್ಪ, ಪಾಲಕ್ಷಪ್ಪ, ಶಿವಮೊಗ್ಗ ಹಾಲು ಒಕ್ಕೂಟ ನಿರ್ದೇಶಕರಾದ ಎಚ್. ಬಿ. ದಿನೇಶ್ ಬುಳ್ಳಾಪುರ, ವ್ಯವಸ್ಥಾಪಕರಾದ ಎಸ್. ಜಿ. ಶೇಖರ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷರಾದ ಎಚ್. ಎಲ್. ಷಡಾಕ್ಷರಿ, ಕು. ಹಾರಿಕಾ, ರುದ್ರಯ್ಯ, ಮಹೇಶ್ವರಪ್ಪ, ಶಿವಕುಮಾರ್, ನವಲಯ್ಯ, ಮಲ್ಲಕಾರ್ಜುನ್, ಮಂಜುನಾಥ್, ಕುಮಾರ್, ನವೀನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

​ಸೂಗೂರು ಶ್ರೀ ಮೃಡಬಸವೇಶ್ವರ ಸನ್ನಿಧಿಯಲ್ಲಿ ಮೊಳಗಿದ ಸನಾತನ ಧರ್ಮದ ಶಂಖನಾದ: “ಶಿಕ್ಷಣದ ಜೊತೆ ಸಂಸ್ಕಾರವೂ ಇರಲಿ” – ಪೋಷಕರಿಗೆ ಕು. ಹಾರಿಕಾ ಕರೆ

ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರ ಉದ್ಧಟತನದ ಹೇಳಿಕೆಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ರಕ್ಷಣಾ ವೇದಿಕೆಯ ಸಯ್ಯದ್ ಮುಜಿಬುಲ್ಲಾ ಖಂಡನೆ

ಶಿವಮೊಗ್ಗದಲ್ಲಿ ಖಾಸಗಿ ಶಿಕ್ಷಣದ ಡೊನೇಷನ್ ದಂಧೆ ವಿರುದ್ಧ ಕರವೇ ಕಾವಲು ಪಡೆ: ರಾಜ್ಯಾಧ್ಯಕ್ಷ ಹೆಚ್. ಸುರೇಶ್ ಕಠಿಣ ಎಚ್ಚರಿಕೆ

“ಶ್ರೀ ಮೃಡಬಸವೇಶ್ವರ ದೇವಸ್ಥಾನ ಗೃಹಪ್ರವೇಶ: ಪುಣ್ಯಭೂಮಿ ಸೂಗೂರಿನಲ್ಲಿ ತರಳಬಾಳು ಜಗದ್ಗುರುಗಳ ಪೂರ್ವಾಶ್ರಮದ ನೆಲವನ್ನು ಭಕ್ತಿಭಾವದಿಂದ ಸ್ಮರಿಸಿದ ಬೆಕ್ಕಿನಕಲ್ಮಠ ಶ್ರೀಗಳು”

ಎಸ್‌ಎಸ್‌ಎಲ್‌ಸಿ ಹಿಂದಿ ಗ್ರೇಡಿಂಗ್ ವಿವಾದ: ಗೊಂದಲ ಸೃಷ್ಟಿಸಿದ ನಿರ್ಧಾರಕ್ಕೆ ತೀವ್ರ ಖಂಡನೆ – ಸಚಿವ ಮಧು ಬಂಗಾರಪ್ಪ ರಾಜೀನಾಮೆಗೆ ಬಳ್ಳೇಕೆರೆ ಸಂತೋಷ್ ಆಗ್ರಹ

​ಪಹಲ್ಗಾಮ್ ದಾಳಿಗೆ ಒಂದು ವರ್ಷ: “ಭಾರತ ಭಯೋತ್ಪಾದನೆಗೆ ತಲೆಬಾಗದು” – ಹುತಾತ್ಮರನ್ನು ಸ್ಮರಿಸುತ್ತಲೇ ಉಗ್ರರಿಗೆ ಪ್ರಧಾನಿ ಮೋದಿ ಎಚ್ಚರಿಕೆ

Leave a Comment