ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ಸಾವಿರಾರು ಅಡಿಕೆ ಮರಗಳು: ಭದ್ರಾವತಿ ತಾಲ್ಲೂಕಿನಾದ್ಯಂತ ಅಪಾರ ಹಾನಿ – ತಕ್ಷಣದ ಪರಿಹಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಆಗ್ರಹ

On: April 27, 2026 1:48 PM
Follow Us:

ನಲುಗಿದ ಭದ್ರಾವತಿಯ ಅನ್ನದಾತ: ನೂರಾರು ಎಕರೆ ಅಡಿಕೆ ತೋಟ ನೆಲಸಮ

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು, ಸನ್ಯಾಸಿ ಕೋಡುಮಗ್ಗಿ, ಆನವೇರಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ರಾತ್ರಿ ವರುಣ ಅಕ್ಷರಶಃ ತಾಂಡವವಾಡಿದ್ದಾನೆ. ಭೀಕರ ಬಿರುಗಾಳಿ ಸಹಿತ ಸುರಿದ ಮಳೆಗೆ ಸುಮಾರು ನೂರಾರು ಹೆಚ್ಚು ಎಕರೆ ಪ್ರದೇಶದಲ್ಲಿದ್ದ ಅಡಿಕೆ ಮರಗಳು ಬುಡಸಮೇತ ಕಿತ್ತುಬಂದು ನೆಲಕ್ಕುರುಳಿವೆ. ದಶಕಗಳ ಕಾಲ ಮಕ್ಕಳಂತೆ ಪೋಷಿಸಿ, ಇನ್ನು ಕೆಲವೇ ದಿನಗಳಲ್ಲಿ ಫಸಲು ನೀಡಬೇಕಿದ್ದ ಮರಗಳು ಸಾಲು ಸಾಲಾಗಿ ಮಣ್ಣು ಪಾಲಾಗಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಅಡಿಕೆ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ನೂರಾರು ರೈತ ಕುಟುಂಬಗಳ ಬದುಕು ಇಂದು ಬೀದಿಗೆ ಬಿದ್ದಂತಾಗಿದ್ದು, ಹಸಿರಾಗಿದ್ದ ತೋಟಗಳು ಈಗ ಸ್ಮಶಾನದಂತಾಗಿರುವುದು ಎದೆ ಇರಿಯುವಂತಿದೆ.

ಈ ಭಾಗದ ರೈತರು ಬ್ಯಾಂಕುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಹಗಲಿರುಳು ಬೆವರು ಸುರಿಸಿ ಅಡಿಕೆ ತೋಟಗಳನ್ನು ಅಭಿವೃದ್ಧಿಪಡಿಸಿದ್ದರು. ಆದರೆ, ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ರೈತನ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಒಂದು ಅಡಿಕೆ ಮರ ಮತ್ತೆ ಫಸಲು ನೀಡುವ ಹಂತಕ್ಕೆ ಬರಲು ಕನಿಷ್ಠ ಹತ್ತು ವರ್ಷಗಳೇ ಬೇಕು, ಇಂತಹ ಸಂದರ್ಭದಲ್ಲಿ ನೂರಾರು ಎಕರೆ ಬೆಳೆ ಹಾನಿಯಾಗಿರುವುದು ರೈತರ ಬೆನ್ನೆಲುಬನ್ನೇ ಮುರಿದಿದೆ. ಹೀಗಾಗಿ, ಜಿಲ್ಲಾಡಳಿತ ಮತ್ತು ಸರ್ಕಾರವು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಹಾಗೂ ಕೇವಲ ಅಲ್ಪ ಪರಿಹಾರ ನೀಡದೆ, ಮರಗಳನ್ನು ಕಳೆದುಕೊಂಡ ರೈತರಿಗೆ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಗರಿಷ್ಠ ಮೊತ್ತದ ಪರಿಹಾರ ನೀಡಿ ಅವರ ಬದುಕಿಗೆ ಆಸರೆಯಾಗಬೇಕು ಎಂಬುದು ಸಂತ್ರಸ್ತ ರೈತರ ತೀವ್ರ ಒತ್ತಾಯವಾಗಿದೆ.

ಜಿಲ್ಲೆಯಾದ್ಯಂತ ಕಳೆದ ರಾತ್ರಿ ಬೀಸಿದ ಭೀಕರ ಗಾಳಿ ಮತ್ತು ಸುರಿದ ಭಾರೀ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಪ್ರಕೃತಿಯ ವಿಕೋಪಕ್ಕೆ ಸಿಲುಕಿ ರೈತರ ಬೆಳೆಗಳು ನಾಶವಾಗಿದ್ದು, ನೂರಾರು ಕುಟುಂಬಗಳು ಆಸರೆ ಕಳೆದುಕೊಂಡಿವೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು ಜಿಲ್ಲಾ ಬಿಜೆಪಿ ಘಟಕವು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಂತ್ರಸ್ತರಿಗೆ ತಕ್ಷಣವೇ ನ್ಯಾಯ ಒದಗಿಸುವಂತೆ ಒತ್ತಾಯಿಸಿತು.

ಕಳೆದ ರಾತ್ರಿ ಸುರಿದ ಗಾಳಿ-ಮಳೆಗೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ತೋಟಗಳು ನೆಲಸಮವಾಗಿವೆ. ಸಾವಿರಾರು ಅಡಿಕೆ ಮರಗಳು ಬುಡಸಮೇತ ಉರುಳಿದ್ದು, ದಶಕಗಳ ಕಾಲ ಬೆಳೆಸಿದ ತೋಟ ಕಣ್ಣೆದುರೇ ನಾಶವಾಗಿರುವುದನ್ನು ಕಂಡು ರೈತರು ಕಣ್ಣೀರು ಹಾಕುತ್ತಿದ್ದಾರೆ. ಅಡಿಕೆ ಮಾತ್ರವಲ್ಲದೆ, ಕೊಯ್ಲಿಗೆ ಬಂದಿದ್ದ ಬಾಳೆ ಹಾಗೂ ಇತರೆ ತೋಟಗಾರಿಕಾ ಬೆಳೆಗಳು ಮಣ್ಣು ಪಾಲಾಗಿವೆ.

“ವರ್ಷವಿಡೀ ಬೆವರು ಸುರಿಸಿ ಬೆಳೆಸಿದ ಬೆಳೆ ಇಂದು ನೆಲಸಮವಾಗಿದೆ. ಸಾಲ ಮಾಡಿ ಕೃಷಿ ಮಾಡಿದ್ದ ರೈತ ಇಂದು ಬೀದಿಗೆ ಬೀಳುವಂತಾಗಿದೆ. ಜಿಲ್ಲಾಡಳಿತವು ಕೇವಲ ಭರವಸೆ ನೀಡದೆ, ತಕ್ಷಣವೇ ವೈಜ್ಞಾನಿಕ ಸಮೀಕ್ಷೆ ನಡೆಸಿ ಗರಿಷ್ಠ ಪರಿಹಾರ ನೀಡಬೇಕು,” ಎಂದು ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.

ಬಿರುಗಾಳಿಯ ತೀವ್ರತೆಗೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅನೇಕ ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ. ಬಡವರ ಆಶ್ರಯಕ್ಕೆ ಭಾರೀ ಹೊಡೆತ ಬಿದ್ದಿದ್ದು, ಸಂತ್ರಸ್ತರು ನೆಲೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಾದ್ಯಂತ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ತಂತಿಗಳು ತುಂಡಾಗಿ ಬಿದ್ದಿವೆ. ಇದರಿಂದ ಬಹುತೇಕ ಹಳ್ಳಿಗಳು ಸಂಪೂರ್ಣ ಕತ್ತಲಲ್ಲಿ ಮುಳುಗಿವೆ.

ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಈ ಕೆಳಗಿನ ತುರ್ತು ಕ್ರಮಗಳಿಗೆ ಆಗ್ರಹಿಸಲಾಗಿದೆ:

  1. ತ್ವರಿತ ಸಮೀಕ್ಷೆ ಮತ್ತು ಪರಿಹಾರ: ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ತಕ್ಷಣ ಜಂಟಿ ಸಮೀಕ್ಷೆ ಆರಂಭಿಸಬೇಕು. ಮನೆ ಕಳೆದುಕೊಂಡವರು ಹಾಗೂ ಬೆಳೆ ಹಾನಿಗೊಳಗಾದ ರೈತರಿಗೆ ವಿಳಂಬವಿಲ್ಲದೆ ಪರಿಹಾರ ಬಿಡುಗಡೆ ಮಾಡಬೇಕು.
  2. ವಿದ್ಯುತ್ ಸಂಪರ್ಕ ಪುನರ್ ಸ್ಥಾಪನೆ: ಮೆಸ್ಕಾಂ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ, ತುಂಡಾದ ತಂತಿಗಳನ್ನು ಸರಿಪಡಿಸಿ, ಹಾನಿಗೊಳಗಾದ ಕಂಬಗಳನ್ನು ತಕ್ಷಣ ಬದಲಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.
  3. ಸಾರ್ವಜನಿಕ ಸುರಕ್ಷತೆ: ರಸ್ತೆಗಳಿಗೆ ಬಿದ್ದಿರುವ ಮರಗಳನ್ನು ತಕ್ಷಣ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ನೆಲಕ್ಕೆ ಬಿದ್ದಿರುವ ವಿದ್ಯುತ್ ತಂತಿಗಳಿಂದ ಜನರು ಹಾಗೂ ಜಾನುವಾರುಗಳಿಗೆ ಅಪಾಯವಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು.

“ಸಂಕಷ್ಟದಲ್ಲಿರುವ ಜಿಲ್ಲೆಯ ಜನರೊಂದಿಗೆ ನಾವು ನಿಂತಿದ್ದೇವೆ. ಜಿಲ್ಲಾಡಳಿತ ಹಾಗೂ ಮೆಸ್ಕಾಂ ಅಧಿಕಾರಿಗಳು ಜನರ ನೋವಿಗೆ ತಕ್ಷಣ ಸ್ಪಂದಿಸಬೇಕು. ಪರಿಹಾರ ಕಾರ್ಯದಲ್ಲಿ ವಿಳಂಬವಾಗಿದೆಯಾದರೆ ಅಥವಾ ರೈತರಿಗೆ ನ್ಯಾಯ ದೊರೆಯದಿದ್ದರೆ, ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ್ ಸರ್ಜಿ, ಮಾಜಿ ಶಾಸಕ ಅಶೋಕ್ ನಾಯಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಹಾಗೂ ಪ್ರಮುಖರಾದ ಶ್ರೀನಿವಾಸ್, ಬಳ್ಳೇಕೆರೆ ಸಂತೋಷ್, ಮಾಲತೇಶ್, ವಿನ್ಸೆಂಟ್, ಮಂಜುನಾಥ್, ವಿಜಯ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು ಸಂತ್ರಸ್ತ ರೈತರಿಗೆ ಧೈರ್ಯ ತುಂಬಿದರು.

K.M.Sathish Gowda

Join WhatsApp

Join Now

Facebook

Join Now

Read more

ಶಿವಮೊಗ್ಗದಲ್ಲಿ ಮೇ 3 ರಂದು ‘ಪತ್ರಕರ್ತರ ಧ್ವನಿ’ ಸಂಘದ 2ನೇ ವಾರ್ಷಿಕೋತ್ಸವ: ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ

ಮಕ್ಕಳ ಸಾಧನೆಯನ್ನು ಹಗುರವಾಗಿ ಮಾತನಾಡುವುದು ಸರಿಯಲ್ಲ: ಬೊಮ್ಮಾಯಿ, ವಿಶ್ವನಾಥ್‌ಗೆ ಮಧು ಬಂಗಾರಪ್ಪ ತಿರುಗೇಟು

ಬಿ.ಎಸ್.ವೈ ಅಭಿಮಾನೋತ್ಸವ: ಸಿರಿಗೆರೆ ಶ್ರೀ ತರಳಬಾಳು ಜಗದ್ಗುರುಗಳಿಗೆ ವಿಜಯೇಂದ್ರ, ಕಾರಜೋಳ ಅವರಿಂದ ಅಧಿಕೃತ ಆಹ್ವಾನ

ಚಿತ್ರದುರ್ಗದ ಪುಣ್ಯಭೂಮಿಯಲ್ಲಿ ಬಿಎಸ್‍ವೈ ‘ಅಭಿಮಾನೋತ್ಸವ’: ಐದು ದಶಕಗಳ ಜನಪರ ಹೋರಾಟಕ್ಕೊಂದು ಗೌರವ ನಮನ

ಸಾಗರ ತಾಲ್ಲೂಕು ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ವಿಚಾರ: ಜನರಲ್ಲಿ ಅನಾವಶ್ಯಕ ಆತಂಕ ಬೇಡ – ಪರಿಸರ ಹಾನಿಗೆ ನಮ್ಮ ಸ್ಪಷ್ಟ ವಿರೋಧ : ಸಂಸದ ಬಿ.ವೈ. ರಾಘವೇಂದ್ರ

ಸಿರಿಗೆರೆ ತರಳಬಾಳು ಶ್ರೀಗಳ ಪ್ರೇರಣೆಯಿಂದ ಸೂಗೂರು ಗ್ರಾಮದಲ್ಲಿ ಭಕ್ತಿ–ಅಭಿವೃದ್ಧಿಯ ಮಹಾಪರ್ವ: ಹೆಚ್. ಆರ್. ಬಸವರಾಜಪ್ಪ

Leave a Comment