ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

‘ಆಧುನಿಕ ಭಗೀರಥ’ ಬಿಎಸ್‌ವೈಗೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರುಗಳ ಗೌರವದ ನುಡಿ

On: May 8, 2026 4:22 PM
Follow Us:

– ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ ತರಳಬಾಳು ಮಠ

ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ದೆಹಲಿಯಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಾವು ಬೆಂಗಳೂರು ವಿಮಾನ ನಿಲ್ದಾಣದತ್ತ ಪ್ರಯಾಣಿಸುತ್ತಿದ್ದೆವು. ಮಾರ್ಗಮಧ್ಯೆ ಇದ್ದಕ್ಕಿದ್ದಂತೆ ಮೊಬೈಲ್ ರಿಂಗಣಿಸಿತು. ಕರೆ ಮಾಡಿದ್ದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ನಮಗೆ ಕರೆ ಮಾಡಿ ಆಶೀರ್ವಾದ ಪಡೆಯುವುದು ಅವರ ರೂಢಿಸಿಕೊಂಡು ಬಂದ ಧಾರ್ಮಿಕ ಶ್ರದ್ಧೆ. ಆದರೆ, ಅಂದಿನ ಕರೆಯ ಉದ್ದೇಶ ಬೇರೆಯೇ ಆಗಿತ್ತು.

ಕುಶಲೋಪರಿಯ ನಂತರ ಅವರು ವಿನಮ್ರವಾಗಿ ಕೇಳಿದರು, “ಬುದ್ಧಿ, ನಾಳೆ ನಾನು ರಾಜ್ಯದ ಬಜೆಟ್ ಮಂಡಿಸಲಿದ್ದೇನೆ. ತಮ್ಮ ಆಶೀರ್ವಾದ ಬೇಕು. ಮಠಕ್ಕಾಗಿ ಏನಾದರೂ ಮಾಡಬೇಕೆಂದಿದ್ದೇನೆ, ಏನು ಮಾಡಲಿ?” ಎಂದು ಕೇಳಿದರು.

ಯಡಿಯೂರಪ್ಪನವರ ಧಾರ್ಮಿಕ ಶ್ರದ್ಧೆ ನಿಷ್ಕಳಂಕವಾದುದು. ನಾಡಿನ ಮುಖ್ಯಮಂತ್ರಿಯಾಗಿ ಅವರು ಯಾವುದೇ ತಾರತಮ್ಯ ಮಾಡದೆ ಎಲ್ಲ ಸಮುದಾಯಗಳ ಧಾರ್ಮಿಕ ಸಂಸ್ಥೆಗಳಿಗೆ ನೆರವು ನೀಡುತ್ತಾ ಬಂದವರು. ಆದರೆ, ನಮ್ಮ ಮಠಕ್ಕೆ ಏನು ಮಾಡಲಿ ಎಂಬ ಅವರ ಪ್ರಶ್ನೆ ನಮಗೆ ಅಷ್ಟು ಸರಿ ಎನಿಸಲಿಲ್ಲ.

ನಾವು ತಕ್ಷಣವೇ ಕಟುವಾಗಿ ಪ್ರತಿಕ್ರಿಯಿಸಿದೆವು: “ಮಠಕ್ಕೆ ಕಾಣಿಕೆ ಕೊಡಲು ಲಕ್ಷಾಂತರ ಶಿಷ್ಯರಿದ್ದಾರೆ. ನೀವು ಕೇವಲ ಸ್ವಜಾತಿಯ ಮಠಕ್ಕೆ ಸಹಾಯ ಮಾಡಿದರೆ ಕೆಟ್ಟ ಹೆಸರು ಪಡೆದುಕೊಳ್ಳುತ್ತೀರಿ.” ನಮ್ಮ ಈ ಮಾತಿನಿಂದ ಅವರು ಕ್ಷಣಕಾಲ ನಿರುತ್ತರರಾದರು. ಆದರೆ ತಕ್ಷಣವೇ ಚೇತರಿಸಿಕೊಂಡು, “ಹಾಗಾದರೆ ನಾನೇನು ಮಾಡಲಿ?” ಎಂದು ಮರುಸವಾಲು ಹಾಕಿದರು. ಅವರ ಆ ವಿನಮ್ರತೆ ನಮ್ಮನ್ನು ‘ಭಕ್ತಿಕಂಪಿತ’ರನ್ನಾಗಿ ಮಾಡಿತು.

ಆಗ ನಮ್ಮ ಕಣ್ಣಮುಂದೆ ಸುಳಿದಿದ್ದು ಸಿರಿಗೆರೆ ಮಠದ ಪಕ್ಕದ ರಸ್ತೆಯಲ್ಲಿ ನೀರಿಗಾಗಿ ಬಿಂದಿಗೆ ಹಿಡಿದು ನಿಲ್ಲುತ್ತಿದ್ದ ಮಹಿಳೆಯರ ದೃಶ್ಯ. ಕೂಡಲೇ ಮುಖ್ಯಮಂತ್ರಿಗಳಿಗೆ ತಿಳಿಸಿದೆವು: “ಸಿರಿಗೆರೆ ಮತ್ತು ಸುತ್ತಮುತ್ತಲಿನ 50-60 ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ತೀವ್ರ ತೊಂದರೆಯಿದೆ. ಸಮೀಪದ ಚನ್ನಗಿರಿ ತಾಲೂಕಿನ ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಸುವ ಯೋಜನೆ ಮಂಜೂರು ಮಾಡಿಕೊಟ್ಟರೆ ದೊಡ್ಡ ಪುಣ್ಯದ ಕೆಲಸ ಮಾಡಿದಂತಾಗುತ್ತದೆ.” ಯಡಿಯೂರಪ್ಪನವರು ತಡಮಾಡದೆ, “ಖಂಡಿತ ಬುದ್ಧಿ, ತಮ್ಮ ಅಪೇಕ್ಷೆಯಂತೆ ಮಾಡುತ್ತೇನೆ,” ಎಂದು ಭರವಸೆ ನೀಡಿದರು.

ರಾಜಕಾರಣಿಗಳು ಸಾಮಾನ್ಯವಾಗಿ ನೀಡುವ ಪೊಳ್ಳು ಭರವಸೆ ಇದಾಗಿರಲಿಲ್ಲ. ಅಚ್ಚರಿಯೆಂದರೆ, ಮರುದಿನವೇ ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಈ ಯೋಜನೆಗೆ 25 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಕ್ರಮೇಣ ಯೋಜನೆಯ ವ್ಯಾಪ್ತಿ ಹೆಚ್ಚಿ, ಒಟ್ಟು ವೆಚ್ಚ 80 ಕೋಟಿ ರೂ.ಗಳಿಗೆ ಏರಿತು. ಇಂದು ಅಂತರ್ಜಲ ಬತ್ತಿರುವ ಈ ಕಾಲದಲ್ಲಿ ಈ ಯೋಜನೆ ಇಲ್ಲದಿದ್ದರೆ ಆ ಹಳ್ಳಿಗಳ ಜನರ ಸ್ಥಿತಿ ಏನಾಗುತ್ತಿತ್ತು ಎಂದು ನೆನೆದರೆ ಆತಂಕವಾಗುತ್ತದೆ.

ನಮ್ಮ ಮತ್ತು ಯಡಿಯೂರಪ್ಪನವರ ಸಂಬಂಧ ದಶಕಗಳಷ್ಟು ಹಳೆಯದು. 1985ರಲ್ಲಿ ಶಿಕಾರಿಪುರದಲ್ಲಿ ನಡೆದ ‘ತರಳಬಾಳು ಹುಣ್ಣಿಮೆ ಮಹೋತ್ಸವ’ದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಅವರು ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ, ನಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸದಾ ಪಾಲ್ಗೊಳ್ಳುತ್ತಾ ಬಂದಿದ್ದಾರೆ.

ಯಡಿಯೂರಪ್ಪನವರು ಕನ್ನಡ ನಾಡು ಕಂಡ ಅಪ್ರತಿಮ ರೈತ ಹೋರಾಟಗಾರರು. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇರಲಿ ಅಥವಾ ಏತ ನೀರಾವರಿ ಯೋಜನೆಗಳಿರಲಿ, ಅವರು ಎಂದೂ ಅನುದಾನ ನೀಡಲು ಹಿಂಜರಿದವರಲ್ಲ. ಜಗಳೂರು ಮತ್ತು ಭರಮಸಾಗರ ಭಾಗದ 1,220 ಕೋಟಿ ರೂ. ಮೊತ್ತದ ಬೃಹತ್ ಏತ ನೀರಾವರಿ ಯೋಜನೆಗೆ ಅವರು ತೋರಿದ ಔದಾರ್ಯ ಮರೆಯಲಾಗದು. ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸುವ ಅವರ ಈ ಕರ್ತವ್ಯನಿಷ್ಠೆ ಮತ್ತು ಗುರು-ಹಿರಿಯರ ಮೇಲಿರುವ ಅನನ್ಯ ಭಕ್ತಿಯನ್ನು ಶ್ರೀ ತರಳಬಾಳು ಜಗದ್ಗುರುಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಯಡಿಯೂರಪ್ಪನವರ ಸಾರ್ಥಕ 50 ವರ್ಷಗಳ ಸುದೀರ್ಘ ರಾಜಕೀಯ ಪಯಣವು ಕೇವಲ ಅಧಿಕಾರದ ಹಾದಿಯಾಗಿರದೆ, ಅದು ಜನಸೇವೆಯ ಮಹಾಯಜ್ಞವಾಗಿದೆ. ಶಿಕಾರಿಪುರದ ಪುರಸಭೆ ಸದಸ್ಯತ್ವದಿಂದ ಆರಂಭವಾಗಿ ರಾಜ್ಯದ ಮುಖ್ಯಮಂತ್ರಿಯವರೆಗಿನ ಅವರ ಈ ಐದು ದಶಕಗಳ ಪಯಣದಲ್ಲಿ ರೈತಪರ ಕಾಳಜಿ ಮತ್ತು ಅಭಿವೃದ್ಧಿಯ ಹಸಿವು ಎಂದೂ ಕಡಿಮೆಯಾಗಲಿಲ್ಲ. ಅಂದು ಶ್ರೀ ತರಳಬಾಳು ಜಗದ್ಗುರುಗಳು ತೋರಿದ ಸಾಮಾಜಿಕ ಕಳಕಳಿಯ ಹಾದಿಯಲ್ಲಿ ನಡೆದು, ಸಾವಿರಾರು ಕುಟುಂಬಗಳ ದಾಹ ತಣಿಸಿದ ಬಿಎಸ್‌ವೈ, ಕೇವಲ ರಾಜಕಾರಣಿಯಾಗಿ ಉಳಿಯದೆ ಈ ಭಾಗದ ಜನರ ಪಾಲಿಗೆ ಅಕ್ಷರಶಃ ‘ಜಲದಾತ’ನಾಗಿ ಇತಿಹಾಸದ ಪುಟಗಳಲ್ಲಿ ಅಚ್ಚೊತ್ತಿದ್ದಾರೆ. ಅವರ ಈ ಅಪ್ರತಿಮ ಸೇವೆಗೆ ಗೌರವ ಸಲ್ಲಿಸಲು ನಾಳೆ ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ‘ಅಭಿಮಾನೋತ್ಸವ’ವು ಅವರ ಸಾರ್ಥಕ ಸೇವೆಯ ಸಂಭ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕನ್ನಡ ನಾಡಿನ ಅಪ್ರತಿಮ ರೈತ ನಾಯಕ ಬಿ.ಎಸ್. ಯಡಿಯೂರಪ್ಪನವರು ಸಾರ್ಥಕ 50 ವರ್ಷಗಳ ರಾಜಕೀಯ ಸೇವೆ ಪೂರೈಸಿರುವುದು ಹೆಮ್ಮೆಯ ಸಂಗತಿ. ಅವರ ಈ ಸುವರ್ಣ ಪಥದ ಸಂಭ್ರಮಕ್ಕೆ ‘ಡಿಟೆಕ್ಟಿವ್‌ ನ್ಯೂಸ್ 24’ ಸುದ್ದಿ ಸಂಸ್ಥೆಯು ಹೃತ್ಪೂರ್ವಕವಾಗಿ ಶುಭ ಕೋರುತ್ತದೆ. ಜನಸಾಮಾನ್ಯರ ಧ್ವನಿಯಾಗಿ ಐದು ದಶಕಗಳ ಕಾಲ ಶ್ರಮಿಸಿದ ಈ ಜನನಾಯಕನಿಗೆ ನಮ್ಮ ಗೌರವಪೂರ್ವಕ ನಮನಗಳು.

K.M.Sathish Gowda

Join WhatsApp

Join Now

Facebook

Join Now

Read more

ಬಿಎಸ್‌ವೈ ಅಭಿಮಾನೋತ್ಸವಕ್ಕೆ ‘ವೈದ್ಯಕೀಯ ಕವಚ’: ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಸಂಜೀವಿನಿಯಾದ ಡಾ.ಲಕ್ಷ್ಮಣ್, ಡಾ. ಚನ್ನಮಲ್ಲಯ್ಯ, ಡಾ.ನಾರಾಯಣ್ ತಂಡ

ಇಂಧನ ಉಳಿತಾಯಕ್ಕೆ ಪ್ರಧಾನಿ ಮೋದಿ ಮಾದರಿ: ಎಸ್‌ಪಿಜಿ ಬೆಂಗಾವಲು ಪಡೆಯಲ್ಲಿ 50% ಕಡಿತಕ್ಕೆ ಸೂಚನೆ

ದೇಶಕ್ಕೆ ಬುದ್ಧಿ ಹೇಳುವ ಕೇಂದ್ರಕ್ಕೆ ಒಂದು ಪರೀಕ್ಷೆ ನಡೆಸಲಾಗುತ್ತಿಲ್ಲವೇ? : ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಬಸವೇಶ್ವರ ಸೊಸೈಟಿಯ ಶತಮಾನೋತ್ಸವ ಸಂಭ್ರಮ: ಮೇ 16 ಮತ್ತು 17ರಂದು ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭ

ವೈದ್ಯಕೀಯ ಆಕಾಂಕ್ಷಿಗಳಿಗೆ ಬಿಗ್ ಅಪ್‌ಡೇಟ್: ನೀಟ್ 2026 ರದ್ದು; ಶೀಘ್ರದಲ್ಲೇ ಮರುಪರೀಕ್ಷೆಯ ಹೊಸ ದಿನಾಂಕ ಘೋಷಣೆ

ಬಿಎಸ್‌ವೈ ಅಭಿಮಾನೋತ್ಸವದ ಅಭೂತಪೂರ್ವ ಯಶಸ್ಸು: ನಾಡಿನ ಜನತೆ ಹಾಗೂ ಆಗಮಿಸಿದ ಗಣ್ಯರಿಗೆ ಸಂಸದ ಬಿ.ವೈ. ರಾಘವೇಂದ್ರ ಕೃತಜ್ಞತೆ

Leave a Comment