ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ತಾಯಿ ಎಂಬುದು ಕೇವಲ ಒಂದು ಪದವಲ್ಲ; ಅದು ಪ್ರೀತಿ, ತ್ಯಾಗ ಮತ್ತು ಕರ್ತವ್ಯದ ಪ್ರತಿರೂಪ: ಶ್ರೀ ಶಾಂತವೀರ ಮಹಾಸ್ವಾಮೀಜಿ

On: May 11, 2026 8:58 PM
Follow Us:

ಹೊಸದುರ್ಗ: ವಿಶ್ವ ತಾಯಂದಿರ ದಿನಾಚರಣೆಯ ಅಂಗವಾಗಿ 23ನೇ ವರ್ಷದ 5ನೇ ತಿಂಗಳ ಸುಜ್ಞಾನ ಸಂಗಮ ಕಾರ್ಯಕ್ರಮವು ಹೊಸದುರ್ಗದಲ್ಲಿ ಭಕ್ತಿಭಾವ, ಸಂಸ್ಕಾರ ಮತ್ತು ಆತ್ಮೀಯತೆಯ ವಾತಾವರಣದಲ್ಲಿ ಭಾನುವಾರ ಸಂಜೆ ನೆರವೇರಿತು. ಸಮಾಜದಲ್ಲಿ ತಾಯಂದಿರ ಅಪಾರ ಕೊಡುಗೆ, ತ್ಯಾಗ, ಮಮತೆ ಹಾಗೂ ಕುಟುಂಬ ನಿರ್ಮಾಣದಲ್ಲಿ ಅವರ ಪಾತ್ರವನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಎಲ್ಲರ ಮನಸೆಳೆಯಿತು.

ಈ ಕಾರ್ಯಕ್ರಮವು ಶ್ರೀ ಜಗದ್ಗುರು ಕುಂಚಟಿಗ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾಯಕಯೋಗಿ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿಯವರು ವಹಿಸಿ ಆಶೀರ್ವಚನ ನೀಡಿದರು.

ತಾಯಿಯ ಮಮತೆ, ಸಹನೆ ಮತ್ತು ಜೀವನ ಮೌಲ್ಯಗಳ ಕುರಿತು ಮನಮುಟ್ಟುವಂತೆ ಮಾತನಾಡಿದ ಶ್ರೀಗಳು, “ತಾಯಿ ಎಂಬುದು ಕೇವಲ ಒಂದು ಪದವಲ್ಲ; ಅದು ಪ್ರೀತಿ, ತ್ಯಾಗ ಮತ್ತು ಕರ್ತವ್ಯದ ಪ್ರತಿರೂಪ. ತಾಯಂದಿರ ಸೇವೆಯನ್ನು ಗೌರವಿಸುವ ಸಮಾಜವೇ ಸದ್ಗುಣ ಮತ್ತು ಸತ್ಪಥದಲ್ಲಿ ಸಾಗಲು ಸಾಧ್ಯ” ಎಂದು ಹೇಳಿದರು.

ಇಂದಿನ ಯುವ ಪೀಳಿಗೆ ತಂದೆ-ತಾಯಿಯ ಗೌರವವನ್ನು ಕೇವಲ ಮಾತುಗಳಲ್ಲಿ ಅಥವಾ ಸಾಮಾಜಿಕ ಜಾಲತಾಣದ ಶುಭಾಶಯಗಳಲ್ಲಿ ಸೀಮಿತಗೊಳಿಸದೆ, ಜೀವನದಲ್ಲಿ ಉತ್ತಮ ನಡತೆ, ಸಂಸ್ಕಾರ ಮತ್ತು ಜವಾಬ್ದಾರಿಯುತ ಬದುಕಿನ ಮೂಲಕ ತೋರಿಸಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಅಂಬಿಕಾ ಜಯಪ್ಪ ಮಾತನಾಡಿ, ಇಂದಿನ ಕುಟುಂಬ ವ್ಯವಸ್ಥೆಯ ಬೆನ್ನೆಲುಬಾಗಿರುವ ತಾಯಂದಿರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

“ತಾಯಿಯ ಋಣವನ್ನು ಮಾತುಗಳಿಂದ ವರ್ಣಿಸುವುದರಿಂದ ಅಥವಾ ವರ್ಷಕ್ಕೊಮ್ಮೆ ‘ಸ್ಟೇಟಸ್’ ಹಾಕುವುದರಿಂದ ತೀರಿಸಲಾಗುವುದಿಲ್ಲ. ಮಕ್ಕಳು ಉತ್ತಮ ಸಂಸ್ಕಾರ, ಜವಾಬ್ದಾರಿ ಮತ್ತು ಸಾಧನೆಯ ದಾರಿಯಲ್ಲಿ ನಡೆದಾಗ ಮಾತ್ರ ತಾಯಂದಿರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ,” ಎಂದು ಅಭಿಪ್ರಾಯಪಟ್ಟರು.

ಮಕ್ಕಳು ದುಶ್ಚಟ ಮತ್ತು ದುರಭ್ಯಾಸಗಳಿಗೆ ಒಳಗಾದಾಗ ತಾಯಂದಿರು ಅನುಭವಿಸುವ ನೋವು ಅಳತೆಯಲ್ಲದ್ದು. ಆದ್ದರಿಂದ ಯುವ ಪೀಳಿಗೆ ತಂದೆ-ತಾಯಿಗೆ ಗೌರವ ನೀಡಿ ಸಮಾಜಮುಖಿ ಬದುಕು ಕಟ್ಟಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಇದೇ ವೇಳೆ ಶಾಂತವೀರ ಶ್ರೀಗಳು ಹೊಸದುರ್ಗದಲ್ಲಿ ಜ್ಞಾನ, ಸಂಸ್ಕೃತಿ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಉಪನ್ಯಾಸವನ್ನು ಡಾ. ಮೇಘ ಎಂ. ಕಟ್ಟೆ ನೀಡಿದರು.“ಸ್ವಹಾರೈಕೆ ಮತ್ತು ಪೋಷಣೆ – ತಾಯಂದಿರ ಯೋಗಕ್ಷೇಮದ ಅಡಿಪಾಯ” ವಿಷಯದ ಕುರಿತು ಮಾತನಾಡಿದ ಅವರು, ಮಹಿಳೆಯರು ಕುಟುಂಬದ ಜವಾಬ್ದಾರಿಗಳ ನಡುವೆ ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು.

“ತಾಯಿಯ ಆರೋಗ್ಯ ಚೆನ್ನಾಗಿದ್ದರೆ ಕುಟುಂಬದ ಆರೋಗ್ಯವೂ ಉತ್ತಮವಾಗಿರುತ್ತದೆ. ಪ್ರತಿಯೊಂದು ಕೆಲಸವನ್ನೂ ತಾವೇ ಮಾಡಬೇಕೆಂಬ ಒತ್ತಡದಿಂದ ದೂರವಿದ್ದು, ಕುಟುಂಬ ಸದಸ್ಯರ ಸಹಕಾರದೊಂದಿಗೆ ಜೀವನವನ್ನು ಸಮತೋಲನದಿಂದ ನಡೆಸಬೇಕು,” ಎಂದು ತಿಳಿಸಿದರು.

ಯೋಗ, ಧ್ಯಾನ, ವಾಯುವಿಹಾರ, ವಿಶ್ರಾಂತಿ ಹಾಗೂ ಆಧ್ಯಾತ್ಮಿಕ ಜೀವನಶೈಲಿ ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯವಶ್ಯಕ ಎಂದು ಅವರು ವಿವರಿಸಿದರು.

​ನಿವೃತ್ತ ಶಿಕ್ಷಕಿ ಶ್ರೀಮತಿ ಚಂದ್ರಿಕಾ ಮಹೇಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಶಿಕ್ಷಣ ಮತ್ತು ಸಂಸ್ಕಾರದ ಮೊದಲ ಗುರು ತಾಯಿ. ಶ್ರೀ ಶಾಂತವೀರ ಮಹಾಸ್ವಾಮೀಜಿಯವರು ಸರ್ವ ಸಮಾಜವನ್ನು ಪ್ರೀತಿಯಿಂದ ಒಪ್ಪಿಕೊಳ್ಳುವ ‘ಗುರುತಾಯಿ’ಯಾಗಿ ನಮ್ಮನ್ನು ಮುನ್ನಡೆಸುತ್ತಿದ್ದಾರೆ,” ಎಂದರು. ಮುಖ್ಯ ಅತಿಥಿಯಾಗಿ ಶ್ರೀಮತಿ ಚೇತನ ಜಗದೀಶ್ ಪ್ರಸಾದ್ ಭಾಗವಹಿಸಿದ್ದರು.

“ಕುಂಚಿಟಿಗ ಮಹಾ ಸಂಸ್ಥಾನ ಮಠವು ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಎಲ್ಲ ವರ್ಗಗಳನ್ನು ಪ್ರೀತಿಯಿಂದ ಕಾಣುವ ‘ತಾಯಿತನ’ವನ್ನು ಹೊಂದಿದೆ. ಸ್ವಾಮಿಗಳಾದವರು ಸರ್ವರನ್ನು ಸಮಾನವಾಗಿ ಪ್ರೀತಿಸಬೇಕು ಎಂಬ ತತ್ವದಡಿ ನಮ್ಮ ಮಠವು ಸಾಗುತ್ತಿರುವುದು ನಮ್ಮೆಲ್ಲರ ಹೆಮ್ಮೆ.”

– ಶ್ರೀಮತಿ ನಾಗರತ್ನ ತಮ್ಮಣ್ಣ

​ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹಾಗೂ ಆದರ್ಶ ತಾಯಂದಿರಾದ ಈ ಕೆಳಕಂಡವರನ್ನು ಗೌರವಿಸಿ ಸನ್ಮಾನಿಸಲಾಯಿತು:

  • ​ಶ್ರೀಮತಿ ಕೆಂಚಮ್ಮ ಬಸವಲಿಂಗಪ್ಪ, ಶ್ರೀಮತಿ ರಾಧಾ ಮಹೇಂದ್ರ, ಶ್ರೀಮತಿ ಯಶೋಧ ಅನಂತ್, ಶ್ರೀಮತಿ ನಾಗರತ್ನ ತಮ್ಮಣ್ಣ, ಶ್ರೀಮತಿ ವನಜಾಕ್ಷಮ್ಮ ಹನುಮಂತಪ್ಪ, ಶ್ರೀಮತಿ ನಳಿನಮ್ಮ ಚಂದ್ರಪ್ಪ, ಶ್ರೀಮತಿ ಜಯಮ್ಮ ಕದುರಪ್ಪ, ಶ್ರೀಮತಿ ಸಾವಿತ್ರಮ್ಮ ಸಿದ್ದಪ್ಪ, ಶ್ರೀಮತಿ ಗೌರಮ್ಮ ಸಂಕಪ್ಪ, ಶ್ರೀಮತಿ ಗಿರಿಜಮ್ಮ ಕೆಂಚದ್ಯಾಮಪ್ಪ, ಶ್ರೀಮತಿ ಪ್ರಭಾ ಭೈರಪ್ಪ, ಶ್ರೀಮತಿ ಗೌರಮ್ಮ ಮಂಜಪ್ಪ ಹಾಗೂ ಶ್ರೀಮತಿ ಕರಿಯಮ್ಮ ಶಿವಪ್ಪ.
  • ​ಜೊತೆಗೆ, ಕುಂಚಶ್ರೀ ಸಂಗಮೇಶ್ವರ ಭಜನಾ ಮಂಡಳಿಯ ಮಹಿಳಾ ಸದಸ್ಯರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

​ಕಾರ್ಯಕ್ರಮದಲ್ಲಿ ಕುಂಚಿಟಿಗ ಸಮಾಜದ ಮುಖಂಡರು, ಶ್ರೀ ಸಂಗಮೇಶ್ವರ ಯುವ ವೇದಿಕೆ, ಶ್ರೀ ಸಂಗಮೇಶ್ವರ ಸಮುದಾಯ ಭವನ ಸಮಿತಿ, ಶಾಂತವೀರಶ್ರೀ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ: ಆದರ್ಶ ಡೆವಲಪರ್ಸ್‌ನ ಜಯಶಂಕರ್‌ಗೆ ‘ಶ್ರೀ ವೀರಭದ್ರೇಶ್ವರ ಪ್ರಶಸ್ತಿ’ ಪ್ರಧಾನ: ‘ವೀರಭದ್ರನಾಗಿ ಬದುಕಿದರೆ ಸಮಾಜ ಸುಭದ್ರವಾಗುತ್ತದೆ’: ಶ್ರೀ ರಂಭಾಪುರಿ ಜಗದ್ಗುರುಗಳು

ಪ್ರತಿಭೆಯ ಹಣೆಗೆ ವಿಭೂತಿಯಂತೆ ಹೊಳೆಯಲಿ ಸಂಸ್ಕಾರ: ಅಂಕಗಳ ಬೆನ್ನಟ್ಟುವ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಬದುಕಿಗೂ ಆದ್ಯತೆ ಅಗತ್ಯ: ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ

ಸಂಸ್ಕಾರಯುತ ಶಿಕ್ಷಣವೇ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ: ಶ್ರೀ ರಂಭಾಪುರಿ ಜಗದ್ಗುರುಗಳು

ಸಿರಿಗೆರೆಯಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ: ‘ತರಳಬಾಳು’ ನಮ್ಮ ಮಠದ ಸಂವಿಧಾನ!: ಸಮಾಜಮುಖಿ ಆಡಳಿತಕ್ಕೆ ಗುರುಗಳ ಆದರ್ಶ ಅನುಸರಿಸಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ತೂಕಬದ್ಧ ನಡವಳಿಕೆಗೆ ಶ್ರೀ ತರಳಬಾಳು ಜಗದ್ಗುರುಗಳ ಮೆಚ್ಚುಗೆ

ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ ಎಂಬ ಸಂಕಲ್ಪ ಮಾಡಿಕೊಳ್ಳಿ: ಮಕ್ಕಳಿಗೆ ಸಂಸ್ಕಾರ ನೀಡುವುದೇ ದಂಪತಿಗಳ ದೊಡ್ಡ ಕರ್ತವ್ಯ: ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು

ಗುರುಗಳ ಶ್ರದ್ಧಾಂಜಲಿಗೆ ನಿಜವಾದ ಗೌರವವೆಂದರೆ ದುಶ್ಚಟಗಳಿಂದ ದೂರವಿರುವ ಸಂಕಲ್ಪ: ಬಸವಣ್ಣನವರ ವಚನವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸಿದ ಲಿಂ. ಶ್ರೀ ಶಿವಕುಮಾರ ಮಹಾಸ್ವಾಮೀಜಿ: ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Leave a Comment