ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಧುವಣಗಿತ್ತಿಯಂತೆ ಕಂಗೊಳಿಸುತ್ತಿರುವ ಮಲೆನಾಡ ಹೆಬ್ಬಾಗಿಲು!: ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಅಲಂಕಾರ ಸಮಿತಿಯ ಯುವ ಪಡೆ ಭರ್ಜರಿ ಸಿದ್ಧತೆ

On: May 17, 2026 8:44 AM
Follow Us:

ಶಿವಮೊಗ್ಗ: ಸುಮಾರು 34 ವರ್ಷಗಳ ಬಳಿಕ ಪಂಚಪೀಠಾಧೀಶ್ವರರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ ಶಿವಮೊಗ್ಗ ನಗರದಲ್ಲಿ ಇಂದು ಮೇ 17ರಂದು ನಡೆಯಲಿದ್ದು, ಇಡೀ ನಗರವೇ ಧಾರ್ಮಿಕ ಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ತೇಲುತ್ತಿದೆ. ಮಹೋತ್ಸವದ ಅಂಗವಾಗಿ ಶಿವಮೊಗ್ಗ ನಗರವು ಮಧುವಣಗಿತ್ತಿಯಂತೆ ಅಲಂಕಾರಗೊಂಡು ಕಂಗೊಳಿಸುತ್ತಿದ್ದು, ಎಲ್ಲೆಡೆ ಕೇಸರಿ ಬಣ್ಣದ ಸಂಭ್ರಮ ಮನೆಮಾಡಿದೆ.

ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ, ರಾಜ್ಯ ರಾಜಕೀಯದಲ್ಲಿ ಐದು ದಶಕಗಳ ಸುದೀರ್ಘ ಹೋರಾಟದ ಪಯಣ ಪೂರೈಸಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ರೈತನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭವೂ ಇದೇ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದು, ನಗರದಾದ್ಯಂತ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಮಾಡಿದ್ದಾರೆ.

ನಗರದ ಪ್ರಮುಖ ವೃತ್ತಗಳು, ರಸ್ತೆ ಮಾರ್ಗಗಳು ಹಾಗೂ ಬಡಾವಣೆಗಳು ಬಂಟಿಂಗ್ಸ್, ಫ್ಲೆಕ್ಸ್, ಕೇಸರಿ ಧ್ವಜಗಳು ಮತ್ತು ಭವ್ಯ ಸ್ವಾಗತ ಕಮಾನುಗಳಿಂದ ಅಲಂಕರಿಸಲ್ಪಟ್ಟಿವೆ. ಅಮೀರ್ ಅಹಮ್ಮದ್ ವೃತ್ತ ಸಂಪೂರ್ಣ ಕೇಸರಿಮಯವಾಗಿ ರೂಪಾಂತರಗೊಂಡಿದ್ದು, ಗಾಂಧಿಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಜೈಲ್ ರಸ್ತೆ, ಸವಳಂಗ ರಸ್ತೆ, ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ, ಜೈಲ್ ಸರ್ಕಲ್, ಅಕ್ಕಮಹಾದೇವಿ ವೃತ್ತ, ಲಕ್ಷ್ಮೀ ಟಾಕೀಸ್ ವೃತ್ತ ಸೇರಿದಂತೆ ನಗರದ ಅನೇಕ ಪ್ರಮುಖ ಭಾಗಗಳಲ್ಲಿ ವಿಶೇಷ ಸಿಂಗಾರಗೊಂಡಿದೆ.

ನಗರ ಪ್ರವೇಶಿಸುವ ವಿವಿಧ ರಸ್ತೆ ಮಾರ್ಗಗಳಲ್ಲಿಯೂ ಭವ್ಯ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದ್ದು, ರಾತ್ರಿ ವೇಳೆ ವಿದ್ಯುತ್ ದೀಪಾಲಂಕಾರದಿಂದ ನಗರವೇ ಹಬ್ಬದ ಮೆರಗು ಪಡೆದುಕೊಂಡಿದೆ. ಮೆರವಣಿಗೆ ಸಾಗುವ ಸಂಪೂರ್ಣ ಮಾರ್ಗದಲ್ಲಿ ವಿಶೇಷ ಬೆಳಕಿನ ಅಲಂಕಾರ ಕೈಗೊಳ್ಳಲಾಗುತ್ತಿದ್ದು, ಶಿವಮೊಗ್ಗ ನಗರ ಜನಮನ ಸೆಳೆಯುವ ರೀತಿಯಲ್ಲಿ ಕಂಗೊಳಿಸುತ್ತಿದೆ.

ಇಂದು ಮೇ 17ರಂದು ಮಧ್ಯಾಹ್ನ 3.30ಕ್ಕೆ ಗಾಂಧಿಬಜಾರ್‌ನ ಬಸವೇಶ್ವರ ದೇವಸ್ಥಾನದಿಂದ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಆರಂಭವಾಗಲಿದೆ. ಮೆರವಣಿಗೆ ಗಾಂಧಿಬಜಾರ್, ನೆಹರೂ ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ ಹಾಗೂ ಜೈಲ್ ರಸ್ತೆ ಮೂಲಕ ಸಾಗುತ್ತಾ ಅಲ್ಲಮಪ್ರಭು ಮೈದಾನವನ್ನು ತಲುಪಲಿದೆ. ಬಳಿಕ ಸಂಜೆ 6 ಗಂಟೆಗೆ ಧಾರ್ಮಿಕ ಸಭೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ನಗರದ ಪ್ರತಿಯೊಂದು ಬಡಾವಣೆಯಲ್ಲಿಯೂ ಮನೆಮನೆಗೆ ತೆರಳಿ ಕಾರ್ಯಕ್ರಮದ ಪ್ರಚಾರ ಕಾರ್ಯವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಸಮಾಜದ ಮುಖಂಡರು, ಯುವಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದು, ಶಿವಮೊಗ್ಗದಲ್ಲಿ ಅಪೂರ್ವ ಭಕ್ತಿ ಮತ್ತು ಸಾಮಾಜಿಕ ಏಕತೆಯ ವಾತಾವರಣ ನಿರ್ಮಾಣವಾಗಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಶಿವಮೊಗ್ಗ ಮಹಾನಗರ ಪಾಲಿಕೆ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹೆಚ್.ಕೆ. ರಾಜಶೇಖರ್ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮ ಇರಲಿ, ಮೊದಲಿಗರಾಗಿ ಹಾಜರಾಗಿ ಯುವಕರನ್ನು ಸಂಘಟಿಸುವ ಗುಣ ಅವರದ್ದು.

ಶಿವಮೊಗ್ಗ ನಗರದಲ್ಲಿ ತಮ್ಮದೇ ಆದ ಬಲಿಷ್ಠ ಯುವಕರ ಪಡೆಯನ್ನು ಹೊಂದಿರುವ ಅವರು, ಸಮಾಜದ ಕಾರ್ಯಕ್ರಮಗಳನ್ನು ಕೇವಲ ಕರ್ತವ್ಯವಾಗಿ ಅಲ್ಲದೆ, ತಮ್ಮ ಮನೆಯ ಕಾರ್ಯವೆಂದು ಭಾವಿಸಿ ತೊಡಗಿಸಿಕೊಳ್ಳುವ ನಾಯಕತ್ವವನ್ನು ಬೆಳೆಸಿಕೊಂಡಿದ್ದಾರೆ. ಯುವಕರನ್ನು ಸಮಾಜಮುಖಿ ಚಟುವಟಿಕೆಗಳತ್ತ ಸೆಳೆಯುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದು, ಸಮಾಜದ ಐಕ್ಯತೆ ಮತ್ತು ಸಂಘಟನಾ ಶಕ್ತಿಗೆ ಹೊಸ ಚೈತನ್ಯ ತುಂಬುತ್ತಿದ್ದಾರೆ.

ಅಡ್ಡಪಲ್ಲಕ್ಕಿ ಮಹೋತ್ಸವದ ಸಿದ್ಧತೆಯಲ್ಲಿಯೂ ಹೆಚ್.ಕೆ. ರಾಜಶೇಖರ್ ಅವರ ನೇತೃತ್ವದ ತಂಡ ವಿಶೇಷವಾಗಿ ತೊಡಗಿಸಿಕೊಂಡಿದ್ದು, ನಗರ ಸಿಂಗಾರದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ.

ಉತ್ಸವ ಸಮಿತಿಯು ಅಲಂಕಾರ ಸಮಿತಿಯ ಸಂಚಾಲಕನಾಗಿ ನನ್ನನ್ನು ನೇಮಕ ಮಾಡಿ, 25 ಜನರ ತಂಡವನ್ನು ಜವಾಬ್ದಾರಿಯಾಗಿ ನೀಡಿದೆ. ಇಡೀ ತಂಡ ಹಗಲು-ರಾತ್ರಿ ಎನ್ನದೇ ನಗರವನ್ನು ಅಲಂಕರಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದು ಕೇವಲ ಒಂದು ಕಾರ್ಯಕ್ರಮವಲ್ಲ, ನಮ್ಮ ಸಮಾಜದ ಗೌರವದ ಪ್ರತೀಕವಾಗಿದೆ. ಪ್ರತಿಯೊಬ್ಬರೂ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿದ್ದು, ಅಂತಿಮ ಹಂತದ ಕಾರ್ಯಗಳು ಪೂರ್ಣಗೊಂಡಿವೆ ಎಂದು ಅಲಂಕಾರ ಸಮಿತಿ ಸಂಚಾಲಕ ಹೆಚ್.ಕೆ. ರಾಜಶೇಖರ್ ತಿಳಿಸಿದ್ದಾರೆ.

ಅಲಂಕಾರ ಸಮಿತಿಯ ಪ್ರಮುಖ ಕಾರ್ಯಕರ್ತರಾದ ಉಮಾಶಂಕರ್ ಅವರು ಸಹ ಸಮಾಜದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಂಘಟನಾ ಶಕ್ತಿಯ ವ್ಯಕ್ತಿತ್ವವಾಗಿ ಪರಿಚಿತರಾಗಿದ್ದಾರೆ. ತಮ್ಮದೇ ಆದ ಯುವಕರ ಬಳಗದೊಂದಿಗೆ ಹಗಲಿರುಳು ಶ್ರಮಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ಗುಣದಿಂದ ಅವರು ಸಮಾಜದಲ್ಲಿ ವಿಶೇಷ ಗೌರವವನ್ನು ಗಳಿಸಿದ್ದಾರೆ.

ಯಾವುದೇ ಸಮಾಜಮುಖಿ ಕಾರ್ಯ ಇರಲಿ, ಅದರಲ್ಲಿ ತೊಡಗಿಸಿಕೊಳ್ಳುವ ಉತ್ಸಾಹ, ಕಾರ್ಯನಿಷ್ಠೆ ಮತ್ತು ಸಂಘಟನಾ ಸಾಮರ್ಥ್ಯ ಅವರ ವ್ಯಕ್ತಿತ್ವದ ಪ್ರಮುಖ ಅಂಶಗಳಾಗಿವೆ. ಯುವಕರನ್ನು ಒಗ್ಗೂಡಿಸಿ ಕಾರ್ಯನಿರ್ವಹಿಸುವ ಅವರ ಶೈಲಿ ಅನೇಕ ಮಂದಿಗೆ ಪ್ರೇರಣೆಯಾಗಿದೆ.

ಇದು ಕೇವಲ ಊರಿನ ಅಥವಾ ಸಮಾಜದ ಕಾರ್ಯಕ್ರಮವಲ್ಲ, ನಮ್ಮ ಮನೆಯ ಹಬ್ಬ ಎಂಬ ಭಾವನೆಯೊಂದಿಗೆ ಇಡೀ ತಂಡ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಬಂಟಿಂಗ್ಸ್ ಹಾಗೂ ತೋರಣಗಳನ್ನು ಅಳವಡಿಸುವ ಪ್ರಮುಖ ಕಾರ್ಯ ಪೂರ್ಣಗೊಂಡಿದೆ. ಸಮಾಜದ ಎಲ್ಲ ವರ್ಗದ ಜನರು ಈ ಕಾರ್ಯಕ್ರಮವನ್ನು ತಮ್ಮದೇ ಉತ್ಸವವಾಗಿ ಸ್ವೀಕರಿಸಿರುವುದು ಸಂತಸದ ಸಂಗತಿ ಎಂದು ಉಮಾಶಂಕರ್ ತಿಳಿಸಿದ್ದಾರೆ.

ಅಡ್ಡಪಲ್ಲಕ್ಕಿ ಮಹೋತ್ಸವದ ಸಿದ್ಧತೆಯಲ್ಲಿ ಅಲಂಕಾರ ಸಮಿತಿಯ ಸದಸ್ಯರುಗಳಾದ ಉಮೇಶ್ ಕತ್ತಿಗೆ, ಸಚಿನ್ ಪೂಜಾರ್, ಉಮೇಶ್ ಎಟಿಎಂ, ಚಂದ್ರು, ಪ್ರವೀಣ್ ವಿದ್ಯಾನಗರ, ರುದ್ರಪ್ಪ ಬೆನ್ನೂರು, ಮೋಹನ್, ಪ್ರಮೋದ್, ಮಲ್ಲೇಶಪ್ಪ, ಮಲ್ಲಿಕಾರ್ಜುನ ಹೂಗಾರ್, ಅನಿಲ್ ಪಟೇಲ್, ರಾಜಯ್ಯ, ಮನೋಹರ ಸಜ್ಜನ್, ಗಂಗಾಧರ್, ಶರತ್ ಸೇರಿದಂತೆ ಹಲವರು ಸಕ್ರಿಯವಾಗಿ ಭಾಗವಹಿಸಿ ನಗರ ಸಿಂಗಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹಗಲು-ರಾತ್ರಿ ಎನ್ನದೇ ಕಾರ್ಯನಿರ್ವಹಿಸಿದ ತಂಡದ ಸದಸ್ಯರು, ಅಡ್ಡ ಪಲ್ಲಕ್ಕಿ ಮಹೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಭಾಗಗಳಲ್ಲಿ ಅಲಂಕಾರ, ಬಂಟಿಂಗ್ಸ್ ಅಳವಡಿಕೆ, ಸ್ವಾಗತ ಕಮಾನು ನಿರ್ಮಾಣ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಯಡಿಯೂರಪ್ಪ ಅಭಿನಂದನಾ ಸಮಾರಂಭದ ಅಂಗವಾಗಿ ಶಿವಮೊಗ್ಗ ನಗರದಲ್ಲಿ ಅಭೂತಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಧಾರ್ಮಿಕ ಭಕ್ತಿ, ಸಾಮಾಜಿಕ ಐಕ್ಯತೆ ಹಾಗೂ ಉತ್ಸವದ ಸಂಭ್ರಮ ಒಂದೇ ವೇದಿಕೆಯಲ್ಲಿ ಮೂಡಿಬರುತ್ತಿದೆ.

ಪಂಚಪೀಠಾಧೀಶ್ವರರ ಐತಿಹಾಸಿಕ ಅಡ್ಡಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಇಂದು ನಡೆಯಲಿರುವ ಮಹಾ ದಾಸೋಹಕ್ಕಾಗಿ ತರಕಾರಿ ಮಾರುಕಟ್ಟೆಯಿಂದ ತರಕಾರಿಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಸಮಿತಿಯ ಯುವಕರು ಅತ್ಯಂತ ಶ್ರದ್ಧೆಯಿಂದ ನಿಭಾಯಿಸಿದರು. ಇದು ಕೇವಲ ಸಮಾಜದ ಕಾರ್ಯಕ್ರಮವಲ್ಲ, ನಮ್ಮ ಮನೆಯ ಹಬ್ಬ ಎಂಬ ಭಾವನೆಯೊಂದಿಗೆ ಮುಂಜಾನೆಯೇ ತರಕಾರಿ ಮಾರುಕಟ್ಟೆಗೆ ಧಾವಿಸಿದ ಯುವ ಪಡೆ, ಮಹಾ ದಾಸೋಹಕ್ಕೆ ಅಗತ್ಯವಿರುವ ಸಕಲ ತರಕಾರಿಗಳನ್ನು ಅತ್ಯಂತ ಉತ್ಸಾಹದಿಂದ ತಾವೇ ನಿಂತು ಪಡೆದುಕೊಂಡರು.

ಈ ಮಹತ್ಕಾರ್ಯದಲ್ಲಿ ಅಲಂಕಾರ ಸಮಿತಿಯ ಸಂಚಾಲಕರಾದ ಹೆಚ್.ಕೆ. ರಾಜಶೇಖರ್ ನೇತೃತ್ವದಲ್ಲಿ ಪ್ರಮುಖರಾದ ಬಳ್ಳೇಕೆರೆ ಸಂತೋಷ್, ವಕೀಲರಾದ ಚಂದ್ರಶೇಖರ್, ಉಮಾಶಂಕರ್, ಸತೀಶ್ ಮುಂಚೇಮನೆ ಹಾಗೂ ಸುಧಾಕರ್ ಸೇರಿದಂತೆ ಸಮಿತಿಯ ಸದಸ್ಯರು ಹಗಲಿರುಳು ಶ್ರಮಿಸಿ, ದಾಸೋಹ ಸೇವೆಗೆ ಹೆಗಲಿಗೆ ಹೆಗಲು ಕೊಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ; ಕಾಯಕ-ದಾಸೋಹ ತತ್ವವೇ ಸಹಕಾರಕ್ಕೆ ಬುನಾದಿ – ಡಾ. ಧನಂಜಯ್ ಸರ್ಜಿ

​ಸಾವಿರ ರೂಪಾಯಿಯಿಂದ ಕೋಟ್ಯಂತರ ರೂ. ವಹಿವಾಟು: ಬಸವೇಶ್ವರ ಸಹಕಾರ ಸಂಘದ ಶತಮಾನದ ಬೆಳವಣಿಗೆ ಹಾಗೂ ಅಧ್ಯಕ್ಷ ಬಳ್ಳೇಕೆರೆ ಸಂತೋಷ್ ಸಾರಥ್ಯಕ್ಕೆ ಸಿ.ಎಸ್.ಷಡಾಕ್ಷರಿ ಶ್ಲಾಘನೆ

ಶಿವಮೊಗ್ಗದಲ್ಲಿ ಇತಿಹಾಸ ಪ್ರಸಿದ್ಧ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಬಿ.ಎಸ್.ವೈ ಅಭಿನಂದನಾ ಸಮಾರಂಭ ಯಶಸ್ವಿಗೊಳಿಸಲು ಆಯನೂರು ಮಂಜುನಾಥ್ ಕರೆ

ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ: ಶೋಷಿತರ ಪಾಲಿಗೆ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ – ಸಂಸದ ಬಿ.ವೈ. ರಾಘವೇಂದ್ರ

ಸರ್ವೆ ಸ್ಥಗಿತ, ರಸಗೊಬ್ಬರ ಕೊರತೆ ತಕ್ಷಣ ಬಗೆಹರಿಸಿ: ಇಲ್ಲದಿದ್ದರೆ ಉಗ್ರ ಹೋರಾಟ – ಹೆಚ್.ಆರ್. ಬಸವರಾಜಪ್ಪ ಎಚ್ಚರಿಕೆ

“ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಬಸವ ತತ್ವದ ಕಾಯಕ-ದಾಸೋಹಕ್ಕೆ ಸಿಕ್ಕ ವಿಜಯೋತ್ಸವ” – ಬಿ.ಎಸ್. ಯಡಿಯೂರಪ್ಪ ಶ್ಲಾಘನೆ

Leave a Comment