ಬೆಂಗಳೂರು: “ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಹೀಗಿರುವಾಗ ಮುಖ್ಯಮಂತ್ರಿಗಳು ಯಾವ ಪುರುಷಾರ್ಥಕ್ಕಾಗಿ ತುಮಕೂರಿನಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದಾರೆ?” ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳು, ಹಗರಣಗಳು ಮತ್ತು ಕಾನೂನು ಸುವ್ಯವಸ್ಥೆಯ ಕುಸಿತದ ಕುರಿತು ಅಂಕಿ-ಅಂಶಗಳ ಸಮೇತ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ತಂತ್ರಗಾರಿಕೆ
ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗಳಿಸಿರುವ ಗೆಲುವನ್ನು ಪ್ರಸ್ತಾಪಿಸಿದ ವಿಜಯೇಂದ್ರ, “ಈ ಗೆಲುವಿಗೆ ಗ್ಯಾರಂಟಿ ಯೋಜನೆಗಳ ದುಡ್ಡೇ ಕಾರಣ. ಹಣ ಬಿಡುಗಡೆ ಮಾಡಿ ಚುನಾವಣೆ ಗೆಲ್ಲುವ ತಂತ್ರ ಹೆಚ್ಚು ದಿನ ಫಲಿಸುವುದಿಲ್ಲ. ಈ ಗೆಲುವಿನ ನಾಗಾಲೋಟ ಬಹಳ ದಿನ ನಡೆಯದು. ಹಿಂದೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದಾಗ ನಂಜನಗೂಡು ಸೇರಿದಂತೆ ವಿವಿಧ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನತೆ ಇವರನ್ನು ಮನೆಗೆ ಕಳುಹಿಸಿದ್ದನ್ನು ಮುಖ್ಯಮಂತ್ರಿಗಳು ಮರೆತಿಲ್ಲ ಎಂದು ಭಾವಿಸುತ್ತೇನೆ” ಎಂದರು.
ಗ್ಯಾರಂಟಿಗಳನ್ನೇ ಅಭಿವೃದ್ಧಿ ಎಂದು ಬಿಂಬಿಸುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿದ ಅವರು, “ಕಳೆದ ಮೂರು ವರ್ಷಗಳಲ್ಲಿ ರಸ್ತೆ ನಿರ್ಮಾಣ, ನೀರಾವರಿ ಯೋಜನೆಗಳು, ಶಾಲೆ-ಆಸ್ಪತ್ರೆಗಳ ಸುಧಾರಣೆಗೆ ಒಂದು ರೂಪಾಯಿ ಅನುದಾನ ನೀಡಲಾಗಿದೆಯೇ? ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ನಿಧಿ ಬಿಡುಗಡೆ ಮಾಡಲು ಇವರಿಂದ ಸಾಧ್ಯವಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ; ರಸ್ತೆ ಗುಂಡಿಗಳೂ ಮುಚ್ಚದ ಯೋಗ್ಯತೆ
ಬೆಂಗಳೂರು ಮಹಾನಗರದ ರಸ್ತೆಗಳ ಅವ್ಯವಸ್ಥೆಯನ್ನು ಟೀಕಿಸಿದ ಅವರು, “ರಾಜಧಾನಿಯ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗದ ಈ ಸರ್ಕಾರಕ್ಕೆ ಕೃಷಿ ಕ್ಷೇತ್ರದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ನೆರೆ ಮತ್ತು ಭೀಕರ ಬರಗಾಲದ ಸಂದರ್ಭದಲ್ಲಿ ಅನ್ನದಾತನ ನೆರವಿಗೆ ಧಾವಿಸದ ಸರ್ಕಾರ, ಕೇವಲ ಜಾಹೀರಾತುಗಳ ಮೂಲಕ ತನ್ನ ಯಶಸ್ಸನ್ನು ಬಿಚ್ಚಿಡಲು ಹೊರಟಿದೆ. ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳುವ ಕನಿಷ್ಠ ಸಂವೇದನೆಯೂ ಈ ಸರ್ಕಾರಕ್ಕೆ ಇಲ್ಲದಿರುವುದು ದುರ್ದೈವ” ಎಂದರು.
ಹಗರಣಗಳ ಸರಮಾಲೆ: ಸಿಎಂ ರಾಜೀನಾಮೆಗೆ ಆಗ್ರಹ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ರಹಿತ ಆಡಳಿತದ ಜಪವನ್ನು ಲೇವಡಿ ಮಾಡಿದ ವಿಜಯೇಂದ್ರ, “ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ಹಗರಣ ಬಯಲಾದಾಗಲೇ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಸದನದಲ್ಲೇ ಹಗರಣವನ್ನು ಒಪ್ಪಿಕೊಂಡು, ಸಚಿವರು ರಾಜೀನಾಮೆ ನೀಡುವಂತಾಯಿತು. ಮತ್ತೊಂದೆಡೆ ‘ಮುಡಾ’ ಹಗರಣದಲ್ಲಿ 14 ನಿವೇಶನಗಳನ್ನು ವಾಪಸ್ ಮಾಡಿರುವುದು ರಾಜ್ಯದ ಜನತೆಗೆ ತಿಳಿದಿದೆ. ಯುವಜನತೆಗೆ ಉದ್ಯೋಗ ನೀಡದೆ ವಂಚಿಸುತ್ತಿರುವ ಸರ್ಕಾರದ ‘ಅಹಿಂದ’ ಮುಖವಾಡ ಈಗ ಕಳಚಿಬಿದ್ದಿದೆ” ಎಂದು ಹೇಳಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅರಾಜಕತೆ
ರಾಜ್ಯದ ಶಿಕ್ಷಣ ಸಚಿವರ ಕಾರ್ಯವೈಖರಿಯನ್ನು ಖಂಡಿಸಿದ ಅವರು, “ಇತಿಹಾಸದಲ್ಲೇ ಇಂತಹ ಶಿಕ್ಷಣ ಸಚಿವರನ್ನು ರಾಜ್ಯ ಕಂಡಿಲ್ಲ. ಇವರಿಗೆ ರಾಜ್ಯ ಶಿಕ್ಷಣ ನೀತಿಯನ್ನು (SEP) ತರಲು ಸಾಧ್ಯವಾಗಿಲ್ಲ, ಇತ್ತ ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ (NEP) ಅನುಷ್ಠಾನಗೊಳಿಸುತ್ತಿಲ್ಲ. ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸರ್ಕಾರದ ಎಡವಟ್ಟಿನಿಂದಾಗಿ 6,500 ಗ್ರಾಮೀಣ ಗ್ರಂಥಾಲಯಗಳು ಮುಚ್ಚುವ ಹಂತ ತಲುಪಿವೆ” ಎಂದು ಆತಂಕ ವ್ಯಕ್ತಪಡಿಸಿದರು.
ಆರೋಗ್ಯ ಕ್ಷೇತ್ರದ ದುಸ್ಥಿತಿಯನ್ನು ಬಿಚ್ಚಿಡುತ್ತಾ, “ಸ್ವತಃ ಮುಖ್ಯಮಂತ್ರಿಗಳ ಸ್ವಂತ ಜಿಲ್ಲೆಯಲ್ಲೇ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಕಳೆದ 15 ತಿಂಗಳಿನಲ್ಲಿ 550ಕ್ಕೂ ಹೆಚ್ಚು ನವಜಾತ ಶಿಶುಗಳು ಮರಣ ಹೊಂದಿವೆ. ಗರ್ಭಿಣಿಯರು ಹಾಗೂ ಬಾಣಂತಿಯರ ಸರಣಿ ಸಾವುಗಳು ಸಂಭವಿಸುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ” ಎಂದು ದೂರಿದರು.
ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ; ‘ಅಹಿಂದ’ ಹೆಸರಿನ ದುರ್ಬಳಕೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪ್ರತಿದಿನ ಕೊಲೆಗಳು ನಡೆಯುತ್ತಿವೆ. ಸಿಎಂ ಜಿಲ್ಲೆಯೇ ಇಂದು ಡ್ರಗ್ ಮಾಫಿಯಾದ ಕೇಂದ್ರವಾಗಿದ್ದು, ಮಾದಕವಸ್ತು ಉತ್ಪಾದನಾ ಫ್ಯಾಕ್ಟರಿಗಳು ಪತ್ತೆಯಾಗುತ್ತಿವೆ. ಪೊಲೀಸ್ ಇಲಾಖೆಗೆ ತನ್ನ ಜವಾಬ್ದಾರಿಯ ಅರಿವಿಲ್ಲದಂತಾಗಿದೆ. ಜೈಲುಗಳಲ್ಲಿ ಕ್ರಿಮಿನಲ್‌ಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂದು ವಿಜಯೇಂದ್ರ ತೀವ್ರ ಕಳವಳ ವ್ಯಕ್ತಪಡಿಸಿದರು.
“ಹೆಚ್ಚು ಬಜೆಟ್ ಮಂಡಿಸಿದ ಮತ್ತು ದೀರ್ಘಕಾಲ ಸಿಎಂ ಆಗಿದ್ದ ವೈಯಕ್ತಿಕ ದಾಖಲೆಯನ್ನು ಹೊರತುಪಡಿಸಿದರೆ, ಸಿದ್ದರಾಮಯ್ಯನವರು ಅಹಿಂದ ಸಮುದಾಯಗಳನ್ನು ಕೇವಲ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ದುರ್ಬಳಕೆ ಮಾಡಿಕೊಂಡ ಅಪಕೀರ್ತಿಗೆ ಪಾತ್ರರಾಗಿದ್ದಾರೆ” ಎಂದು ಲೇವಡಿ ಮಾಡಿದರು.
ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿನ ಸೋಲಿನಿಂದ ಹತಾಶವಾಗಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದೆ. ಈ ಸರ್ಕಾರದ ಆಡಳಿತ ವೈಖರಿಯಿಂದ ಜನತೆ ಬೇಸತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾವತ್ತೇ ಚುನಾವಣೆ ನಡೆದರೂ ಜನರು ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಮಾಜಿ ಸಚಿವರಾದ ಬಿ.ಎ. ಬಸವರಾಜ್ (ಬೈರತಿ ಬಸವರಾಜ್), ಶಶಿಕಲಾ ಜೊಲ್ಲೆ, ರಾಜ್ಯ ವಕ್ತಾರ ಎಚ್. ವೆಂಕಟೇಶ್ ದೊಡ್ಡೇರಿ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಹಾಗೂ ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಉಪಸ್ಥಿತರಿದ್ದರು.









