ಯಡ್ರಾಮಿ: “ಭಗವಂತನು ತಾನು ಸೃಷ್ಟಿಸಿದ ಈ ಜಗತ್ತಿನಲ್ಲಿ ಪ್ರತಿಯೊಬ್ಬ ಜೀವಿಗೂ ನೆಮ್ಮದಿಯಿಂದ ಬದುಕಿ ಬಾಳಲು ಸಮಾನವಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾನೆ. ಮಾನವನು ತನ್ನ ನಿರಂತರ ಸಾಧನೆ ಹಾಗೂ ಸತ್ಕರ್ಮಗಳಿಂದ ಮಾತ್ರ ಜೀವನದಲ್ಲಿ ಶ್ರೇಯಸ್ಸನ್ನು ಸಾಧಿಸಲು ಸಾಧ್ಯ. ಅದರಲ್ಲೂ ಮುಖ್ಯವಾಗಿ ಶ್ರಮ ಸಂಸ್ಕೃತಿಯನ್ನು ಅಳವಡಿಸಿಕೊಂಡಾಗ ಮಾತ್ರ ವೈಯಕ್ತಿಕ ಹಾಗೂ ಸಾಮಾಜಿಕ ಬದುಕು ಉಜ್ವಲಗೊಳ್ಳಲು ಸಾಧ್ಯ” ಎಂದು ಬಾಳೇಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳಾದ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಯಡ್ರಾಮಿ ತಾಲೂಕಿನ ಬೆಣ್ಣೂರು ಗ್ರಾಮದ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದ ನೂತನ ಭವ್ಯ ಕಟ್ಟಡದ ಉದ್ಘಾಟನೆ ಹಾಗೂ ಶ್ರೀ ಶಿವಲಿಂಗ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ “ಜನಜಾಗೃತಿ ಧರ್ಮ ಸಮಾರಂಭ”ದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಆಶೀರ್ವಚನ ನೀಡಿದರು.

ಧರ್ಮದ ಹಾದಿಯಲ್ಲಿ ನಡೆದರೆ ಸುಖ-ಸಂಪತ್ತು ತಾನಾಗಿಯೇ ಪ್ರಾಪ್ತವಾಗುತ್ತದೆ: ರಂಭಾಪುರಿ ಶ್ರೀಗಳು
ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಮಾನವ ಜೀವನದ ಪರಮ ಗುರಿಯನ್ನು ನೆನಪಿಸುತ್ತಾ ಮಾರ್ಗದರ್ಶನ ನೀಡಿದರು. ”ಮಾನವ ಜನ್ಮವು ಅತ್ಯಂತ ಶ್ರೇಷ್ಠವಾದದ್ದು. ನಮ್ಮ ಸಂಸ್ಕೃತಿಯಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಹೇಳಲಾಗಿದೆ. ಇವುಗಳಲ್ಲಿ ಕನಿಷ್ಠ ಒಂದನ್ನಾದರೂ ಸನ್ಮಾರ್ಗದಲ್ಲಿ ಸಂಪಾದಿಸದೇ ಹೋದರೆ ಮನುಷ್ಯನ ಜೀವನವೇ ವ್ಯರ್ಥವಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಕೇವಲ ಲೌಕಿಕ ಸಂಪತ್ತು ಮತ್ತು ತನ್ನ ಭೌತಿಕ ಬಯಕೆಗಳನ್ನು ಈಡೇರಿಸಿಕೊಳ್ಳುವುದನ್ನೇ ಜೀವನದ ಏಕೈಕ ಗುರಿಯನ್ನಾಗಿ ಮಾಡಿಕೊಂಡಿದ್ದಾನೆ. ಆದರೆ, ಇದು ಸರಿಯಲ್ಲ. ಮನುಷ್ಯನು ಧರ್ಮದ ಹಾದಿಯಲ್ಲಿ ನಡೆದಾಗ, ಭಗವಂತನ ಅಪಾರ ದಯೆಯಿಂದ ಉಳಿದೆಲ್ಲ ಸುಖ-ಸಂಪತ್ತುಗಳೂ ತಾನಾಗಿಯೇ ಪ್ರಾಪ್ತವಾಗುತ್ತವೆ.”ಎಂದರು.

ಜೀವನದ ನಶ್ವರತೆ ಮತ್ತು ಧರ್ಮಾಚರಣೆ
ವಿದ್ಯೆ ಹಾಗೂ ಸಂಪತ್ತಿನ ಗಳಿಕೆಯ ನಡುವೆ ಧರ್ಮದ ಅನಿವಾರ್ಯತೆಯನ್ನು ವಿವರಿಸಿದ ಜಗದ್ಗುರುಗಳು, “ನಾವು ವಿದ್ಯೆ ಮತ್ತು ಸಂಪತ್ತನ್ನು ಗಳಿಸುವಾಗ ನೂರು ವರ್ಷಗಳ ಕಾಲ ದೀರ್ಘವಾಗಿ ಬದುಕುತ್ತೇವೆ ಎಂಬ ಸಕಾರಾತ್ಮಕ ಮತ್ತು ಆಶಾದಾಯಕ ಭಾವನೆಯನ್ನು ಹೊಂದಿರಬೇಕು. ಆದರೆ, ಧರ್ಮಾಚರಣೆ ಮತ್ತು ಪುಣ್ಯದ ಕೆಲಸಗಳನ್ನು ಮಾಡುವಾಗ ಮಾತ್ರ, ಮೃತ್ಯುದೇವತೆಯು ಯಾವ ಘಳಿಗೆಯಲ್ಲಾದರೂ ನಮ್ಮನ್ನು ಈ ಲೋಕದಿಂದ ಎಳೆದುಕೊಂಡು ಹೋಗಬಹುದು ಎಂಬ ನಶ್ವರತೆಯ ಅರಿವು ಮತ್ತು ಜಾಗೃತಿ ಇರಬೇಕು.

ಈ ಭಯ ಮತ್ತು ಭಕ್ತಿಯನ್ನು ಇಟ್ಟುಕೊಂಡು ಪ್ರತಿಯೊಬ್ಬರೂ ಪ್ರತಿದಿನ ಧರ್ಮ ಪರಿಪಾಲನೆ ಮಾಡಬೇಕು. ಯುಗಪುರುಷ ಶ್ರೀ ಜಗದ್ಗುರು ರೇಣುಕಾಚಾರ್ಯರು ಜಗತ್ತಿಗೆ ಬೋಧಿಸಿದ ಆದರ್ಶ ಚಿಂತನೆ ಹಾಗೂ ಜೀವನ ದರ್ಶನಗಳನ್ನು ಅರಿತು, ಅವುಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಮಾನವ ಜನ್ಮ ಸಾರ್ಥಕಗೊಳ್ಳುತ್ತದೆ” ಎಂದು ನುಡಿದರು.

ಶಿವಲಿಂಗಯ್ಯ ಶಾಸ್ತ್ರಿಗಳ ಧರ್ಮ ಪ್ರಸಾರ ಕಾರ್ಯಕ್ಕೆ ರಂಭಾಪುರಿ ಶ್ರೀಗಳ ಶ್ಲಾಘನೆ
ಇದೇ ಸಂದರ್ಭದಲ್ಲಿ ಮಠದ ಧಾರ್ಮಿಕ ಕಾರ್ಯಗಳನ್ನು ಶ್ಲಾಘಿಸಿದ ಶ್ರೀಗಳು, “ಪ್ರವಚನ ಪ್ರವೀಣರಾದ ಶಿವಲಿಂಗಯ್ಯ ಶಾಸ್ತ್ರಿಗಳವರು ಹಳ್ಳಿ ಹಳ್ಳಿಗಳಿಗೆ ನಿರಂತರವಾಗಿ ಸಂಚರಿಸಿ, ಭಕ್ತರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಮೂಲಕ ಧರ್ಮ ಮತ್ತು ಸಂಸ್ಕೃತಿಯನ್ನು ಮನೆಮನೆಗೆ ತಲುಪಿಸುತ್ತಿದ್ದಾರೆ. ಈ ಭಾಗದಲ್ಲಿ ಧರ್ಮ ಪ್ರಸಾರ ಮಾಡಿದ ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ಭಕ್ತರು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ನೀಡಿದ ದಾನ-ಧರ್ಮದ ಹಣವನ್ನು ಮಠದ ಸದ್ಬಳಕೆ ಹಾಗೂ ಅಭಿವೃದ್ಧಿಗಾಗಿ ವಿನಿಯೋಗಿಸಿರುವುದು ಅವರಲ್ಲಿರುವ ನಿಷ್ಕಲ್ಮಶ ಧರ್ಮನಿಷ್ಠೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಶ್ರೀಮಠವು ಹೀಗೆಯೇ ಮತ್ತಷ್ಟು ಅಭಿವೃದ್ಧಿ ಹೊಂದಿ, ಮುಂಬರುವ ದಿನಗಳಲ್ಲಿ ಭಕ್ತಕೋಟಿಗೆ ಸನ್ಮಾರ್ಗ ತೋರುವ ದಿವ್ಯ ಕೇಂದ್ರವಾಗಲಿ” ಎಂದು ಹಾರೈಸಿದರು.



ಜನಮನ ಸೆಳೆದ ಭವ್ಯ ಸಾರೋಟ್ ಮೆರವಣಿಗೆ
ಧರ್ಮ ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಅತ್ಯಂತ ಸಡಗರ ಹಾಗೂ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಶ್ರೀ ರಂಭಾಪುರಿ ಜಗದ್ಗುರುಗಳನ್ನು ಭವ್ಯವಾಗಿ ಅಲಂಕರಿಸಲಾಗಿದ್ದ ಸಾರೋಟ್‌ನಲ್ಲಿ ಕೂರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ಮಂಗಳಾರತಿ ಹಿಡಿದ ಸಾಗಿದರು. ವೀರಗಾಸೆ, ಪುರವಂತರ ಸಾಹಸ ಕಲೆಗಳು ಮತ್ತು ವಿವಿಧ ಭಜನಾ ಮಂಡಳಿಗಳ ಭಕ್ತಿಗೀತೆಗಳ ಗಾಯನವು ಮೆರವಣಿಗೆಗೆ ಅಪೂರ್ವವಾದ ಸಾಂಸ್ಕೃತಿಕ ಮೆರಗನ್ನು ನೀಡಿತು. ಬೆಣ್ಣೂರು ಹಾಗೂ ಸುತ್ತಮುತ್ತಲಿನ ಸಾವಿರಾರು ಭಕ್ತರು ಈ ಐತಿಹಾಸಿಕ ಧಾರ್ಮಿಕ ಉತ್ಸವಕ್ಕೆ ಸಾಕ್ಷಿಯಾದರು.

ಮಠಾಧೀಶರ ನುಡಿ ನಮನ ಹಾಗೂ ಗಣ್ಯರ ಉಪಸ್ಥಿತಿ
ಸಮಾರಂಭದಲ್ಲಿ ಆಲೂರು ಹಿರೇಮಠದ ಪೂಜ್ಯ ಶ್ರೀ ಕೆಂಚವೃಷಭೇಂದ್ರ ಶಿವಾಚಾರ್ಯ ಸ್ವಾಮಿಗಳು ಮತ್ತು ಕೆಂಭಾವಿ ಹಿರೇಮಠದ ಪೂಜ್ಯ ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಸುತ್ತಮುತ್ತಲಿನ ವಿವಿಧ ಮಠಗಳ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದು ಭಕ್ತಿಪೂರ್ವಕ ನುಡಿ ನಮನ ಸಲ್ಲಿಸಿದರು.

ವೇದಿಕೆಯಲ್ಲಿ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್, ಪ್ರಮುಖ ಮುಖಂಡರಾದ ಶಿವಶರಣಪ್ಪ ಸಿರಿ, ಹಿರೇಮಠದ ಸಿದ್ದರಾಮಯ್ಯ ಸ್ವಾಮಿ, ಚಂದ್ರಶೇಖರ ಪುರಾಣಿಕ ಸೇರಿದಂತೆ ಭಾಗದ ನೂರಾರು ಗಣ್ಯರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಮಾರಂಭದ ಆರಂಭದಲ್ಲಿ ಶಿವಲಿಂಗಯ್ಯ ಶಾಸ್ತ್ರಿಗಳು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿ, ಸರ್ವರನ್ನೂ ಭಕ್ತಿಪೂರ್ವಕವಾಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.











