ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

​”ಗಳಿಸಿದ ಸಂಪತ್ತಲ್ಲ, ಬೆವರ ಹನಿ ಹಾಗೂ ಆತ್ಮವಿಶ್ವಾಸವೇ ಬದುಕಿನ ಶ್ರೀರಕ್ಷೆ”: ಯಲಹಂಕದ ಆಂಜನೇಯ-ಚೈತ್ರಾ ದಂಪತಿಗಳ ಸ್ವಗೃಹದಲ್ಲಿ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳ ಸಂದೇಶ

On: June 9, 2026 2:23 PM
Follow Us:

ಯಲಹಂಕ (ಬೆಂಗಳೂರು): “ಮನುಷ್ಯನ ಅಹಂಕಾರ, ಪ್ರತಿಷ್ಠೆ ಅಥವಾ ಅಧಿಕಾರದಿಂದ ಎಂದಿಗೂ ಹೊಟ್ಟೆ ತುಂಬುವುದಿಲ್ಲ. ಹಸಿವಾದಾಗ ಅನ್ನವೇ ಬೇಕು, ಆ ಅನ್ನವು ಪ್ರಾಮಾಣಿಕ ಶ್ರಮದಿಂದ ಬಂದಾಗ ಮಾತ್ರ ಬದುಕಿನಲ್ಲಿ ನಿಜವಾದ ತೃಪ್ತಿ ಮತ್ತು ನೆಮ್ಮದಿ ಸಾಧ್ಯ. ಅಡ್ಡದಾರಿಗಳಿಂದ ಗಳಿಸುವ ಅಪಾರ ಸಂಪತ್ತು ನೆಮ್ಮದಿಯನ್ನೇ ಕಸಿದುಕೊಳ್ಳುತ್ತದೆ. ಆದ್ದರಿಂದ ಚಿತ್ತಶುದ್ಧಿಯ ಕಾಯಕ ಮತ್ತು ಅದರಿಂದ ಸಿಗುವ ತೃಪ್ತಿಯೇ ಮನುಷ್ಯನನ್ನು ಮುಕ್ತಿಯತ್ತ ಮುನ್ನಡೆಸುತ್ತದೆ,” ಎಂದು ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.

✨ ಭಕ್ತಿ-ಭಾವದ ಸಂಗಮ: ಹಾರೋಹಳ್ಳಿಯ ಆಂಜನೇಯ-ಚೈತ್ರಾ ದಂಪತಿಗಳ ಸ್ವಗೃಹದಲ್ಲಿ ಕಣ್ಣುಮನ ಸೆಳೆದ ಇಷ್ಟಲಿಂಗ ಪೂಜೆ ಹಾಗೂ ಗುರು ವಂದನಾ ಸಂಭ್ರಮ!

ಯಲಹಂಕದ ಹಾರೋಹಳ್ಳಿಯಲ್ಲಿರುವ ಶ್ರೀಮತಿ ಚೈತ್ರಾ ಮತ್ತು ಶ್ರೀ ಎನ್.ಎಸ್. ಆಂಜನೇಯ ಅವರ ನಿವಾಸವು ಸಂಪೂರ್ಣ ಆಧ್ಯಾತ್ಮಿಕ ಮಾರ್ಪಟ್ಟಿತ್ತು. ಯುರೋಪ್ ಪ್ರವಾಸ ಮುಗಿಸಿ ಆಗಮಿಸಿದ್ದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಸಮಾರಂಭವು ಭಕ್ತಿ ಮತ್ತು ಶ್ರದ್ಧೆಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು.

ನಯನಮನ ಸೆಳೆಯುವಂತೆ ಅಲಂಕೃತಗೊಂಡಿದ್ದ ಇಷ್ಟಲಿಂಗ ಪೂಜೆ, ಭಕ್ತಿಭಾವದ ಗುರುವಂದನೆ ಹಾಗೂ ನೆರೆದಿದ್ದ ನೂರಾರು ಭಕ್ತಾದಿಗಳಿಗೆ ಉಣಬಡಿಸಿದ ಭರ್ಜರಿ ಮಹಾಪ್ರಸಾದದ ಸೇವೆ ಇಡೀ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತ್ತು. ಕೋವಿಡ್ ಸಮಯದಲ್ಲಿ ಸರಳವಾಗಿ ನಡೆದಿದ್ದ ಗೃಹಪ್ರವೇಶದ ಕೊರತೆಯನ್ನು ನೀಗಿಸುವಂತೆ, ಕಲ್ಯಾಣದ ಮಹಾಮನೆಯ ಶರಣ ಸಂಸ್ಕೃತಿಯನ್ನು ನೆನಪಿಸುವ ಸದ್ಭಾವದ ವಾತಾವರಣ ಇಲ್ಲಿ ನಿರ್ಮಾಣವಾಗಿತ್ತು. ನೆರೆದಿದ್ದ ಹಿತೈಷಿಗಳು ಹಾಗೂ ವಿವಿಧ ಭಾಗಗಳಿಂದ ಬಂದಿದ್ದ ಬಂಧು-ಮಿತ್ರರೆಲ್ಲರೂ ಈ ಧಾರ್ಮಿಕ ಸಂಭ್ರಮವನ್ನು ಕಣ್ಣುತುಂಬಿಕೊಂಡು, ಆಂಜನೇಯ ದಂಪತಿಗಳ ವಿಶಾಲ ಜನಬಾಂಧವ್ಯ ಹಾಗೂ ಭಕ್ತಿ ನಿಷ್ಠೆಗೆ ಮನಸಾರೆ ಸಾಕ್ಷಿಯಾದರು.

ಬೆಂಗಳೂರಿನ ಯಲಹಂಕ ತಾಲೂಕಿನ ಹಾರೋಹಳ್ಳಿಯ ಶ್ರೀಮತಿ ಚೈತ್ರಾ ಮತ್ತು ಶ್ರೀ ಎನ್.ಎಸ್. ಆಂಜನೇಯ ಅವರ ಸ್ವಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಷ್ಟಲಿಂಗ ಪೂಜೆ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಪೂಜ್ಯರು ದಿವ್ಯ ಆಶೀರ್ವಚನ ನೀಡಿದರು. ಯುರೋಪ್ ಹಾಗೂ ಜರ್ಮನಿಯ ಪ್ರವಾಸ ಮುಗಿಸಿ ಆಗಮಿಸಿದ್ದ ಪೂಜ್ಯರು, ದಂಪತಿಗಳ ಆಶಯದಂತೆ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶ್ವಗುರು ಬಸವಣ್ಣನವರ ಹಾಗೂ ಶರಣರ ತತ್ವ ಆದರ್ಶಗಳನ್ನು ಮನವರಿಕೆ ಮಾಡಿಕೊಟ್ಟರು.

💰 ‘99 ರೂಪಾಯಿಯ ಕಥೆ’ ಮೂಲಕ ಲೋಭದ ಪರಿಣಾಮ ಬಿಚ್ಚಿಟ್ಟ ಬಸವಕೇಂದ್ರ ಶ್ರೀಗಳು

ಸಭೆಯಲ್ಲಿದ್ದ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಇಂದಿನ ಆಧುನಿಕ ಜಗತ್ತಿನಲ್ಲಿ ಮನುಷ್ಯನು ಹೇಗೆ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ ಎಂಬುದನ್ನು ‘ತೊಂಬತ್ತೊಂಬತ್ತು ರೂಪಾಯಿಯ ಕಥೆ’ಯ ಮೂಲಕ ಮನಮುಟ್ಟುವಂತೆ ವಿವರಿಸಿದರು.

✨ ಅತಿಯಾದ ಆಸೆಯೇ ನೆಮ್ಮದಿ ಕಸಿದುಕೊಳ್ಳುತ್ತದೆ: ಸ್ವಾಮೀಜಿಗಳ ಸಂದೇಶ

“ಒಂದು ಊರಿನಲ್ಲಿದ್ದ ಶ್ರೀಮಂತ ಸಾಹುಕಾರನಿಗೆ ದೊಡ್ಡ ಬಂಗ್ಲೆ, ಎಸಿ ರೂಮ್, ಆಳು-ಕಾಳು ಎಲ್ಲವೂ ಇದ್ದರೂ ರಾತ್ರಿ ನೆಮ್ಮದಿಯ ನಿದ್ದೆ ಬರುತ್ತಿರಲಿಲ್ಲ. ಆದರೆ ಆತನ ಮನೆಯ ಪಕ್ಕದ ಗುಡಿಸಲಿನಲ್ಲಿದ್ದ ಬಡ ಕಾಯಕಜೀವಿ ದಂಪತಿಗಳು ದಿನದ ದುಡಿಮೆ ಮುಗಿಸಿ ನೆಮ್ಮದಿಯಿಂದ ಕಣ್ಣುತುಂಬ ನಿದ್ದೆ ಮಾಡುತ್ತಿದ್ದರು. ಇದನ್ನು ಕಂಡು ಅಸೂಯೆಪಟ್ಟ ಸಾಹುಕಾರನ ಸ್ನೇಹಿತನೊಬ್ಬ, ಆ ಬಡವರ ನೆಮ್ಮದಿ ಕೆಡಿಸಲು ಒಂದು ಉಪಾಯ ಹೂಡಿದ. ಅವರ ಗುಡಿಸಲಿನೊಳಗೆ ಯಾರಿಗೂ ತಿಳಿಯದಂತೆ 99 ರೂಪಾಯಿಗಳಿದ್ದ ನಾಣ್ಯದ ಗಂಟನ್ನು ಎಸೆದ.

ಆ ದುಡ್ಡನ್ನು ನೋಡಿದ ದಂಪತಿಗಳಿಗೆ, ‘ಇನ್ನೊಂದು ರೂಪಾಯಿ ಸೇರಿಸಿ 100 ರೂಪಾಯಿ ಮಾಡಬೇಕು’ ಎಂಬ ಆಸೆ ಚಿಗುರಿತು. ಆ ಒಂದು ರೂಪಾಯಿಯ ಆಸೆ ನಿಧಾನವಾಗಿ ಅವರ ಹೊಟ್ಟೆಯ ಹಸಿವನ್ನು, ಕಣ್ಣಿನ ನಿದ್ದೆಯನ್ನು ಕದಿಯಿತು. ಗಳಿಸಿದ್ದನ್ನು ಕಾಯಲು ತಡಕೆ ಬಾಗಿಲು ಮರದ ಬಾಗಿಲಾಯಿತು; ಮರದ ಬಾಗಿಲು ಕಬ್ಬಿಣದ ಗೇಟ್ ಆಯಿತು. ಮುಂದೆ ಸಿಸಿಟಿವಿ ಕ್ಯಾಮೆರಾ, ಕಾವಲು ನಾಯಿ ಬಂದರೂ ಆತಂಕ ಮಾತ್ರ ದೂರಾಗಲಿಲ್ಲ. ಕೇವಲ ಒಂದು ರೂಪಾಯಿಯ ಲೋಭ ಇಡೀ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡಿತು.”

ಮನುಷ್ಯನಿಗೆ ಎಲ್ಲದರಲ್ಲೂ ಅತೃಪ್ತಿ ಇರಬಹುದು, ಆದರೆ ಊಟ ಒಂದರಲ್ಲೇ ಆತ ‘ಸಾಕು’ ಎನ್ನಲು ಸಾಧ್ಯ. ಎಷ್ಟೇ ಪ್ರೀತಿಯಿಂದ ಮೈಸೂರು ಪಾಕು ಮಾಡಿಸಿದರೂ ಮನುಷ್ಯ ಒಂದು ಅಥವಾ ಎರಡು ತಿನ್ನಬಹುದು, ಮೂರನೆಯದಕ್ಕೆ ತಲೆ ತಿರುಗುತ್ತದೆ ಎನ್ನುತ್ತಾನೆ. ಭಗವಂತ ಊಟ ಮತ್ತು ನಿದ್ದೆಯಲ್ಲಿ ಕೊಟ್ಟಿರುವ ಈ ತೃಪ್ತಿಯನ್ನು ಮನುಷ್ಯ ಬೇರೆಲ್ಲೂ ಹುಡುಕಲು ಸಾಧ್ಯವಿಲ್ಲ ಎಂದು ಗುರುಗಳು ತಿಳಿಸಿದರು.

ಹನ್ನೆರಡನೇ ಶತಮಾನದ ಶರಣರಾದ ಮೋಳಿಗೆ ಮಾರಯ್ಯನ ಜೀವನವನ್ನು ಉಲ್ಲೇಖಿಸಿದ ಸ್ವಾಮೀಜಿಗಳು, ಅವರು ಮೂಲತಃ ಕಾಶ್ಮೀರದ ರಾಜರಾಗಿದ್ದರು ಎಂದು ವಿವರಿಸಿದರು.“ರಾಜ್ಯ, ಆಸ್ತಿ, ಆನೆ, ಕುದುರೆ ಎಲ್ಲವನ್ನೂ ಬಿಟ್ಟು ಬಸವ ಕಲ್ಯಾಣಕ್ಕೆ ಬಂದರು. ಅಲ್ಲಿಗೆ ಬಂದ ಮೇಲೆ ಕಟ್ಟಿಗೆ ಮಾರಾಟ ಮಾಡಿ ಜೀವನ ನಡೆಸಿದರು” ಎಂದು ಹೇಳಿದರು. ಈ ವೇಳೆ ಅವರು ವಚನವನ್ನು ಸ್ಮರಿಸಿದರು.

“ಆನೆ ಕುದುರೆ ಬಂಡಿ ಭಂಡಾರವಿದ್ದಡೇನು
ತಾನುಂಬುದು ಹಿಡಿಯಕ್ಕಿ
ಮಲಗುವುದು ಅರ್ಧ ಮಂಚ
ಕುಡಿಯುವುದು ಒಂದಾವಿನ ಹಾಲು”

ಮುಂದುವರಿದು ವಚನದ ಇನ್ನೊಂದು ಭಾಗವನ್ನು ಉಲ್ಲೇಖಿಸಿದರು:

“ಈ ಉರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜ
ಒಡಲು ಭೂಮಿಯ ಸಂಗ
ಒಡವೆ ತಾನೇನಪ್ಪುದೋ
ಕೈ ಹಿಡಿದ ಮಡದಿ ಪರರ ಸಂಗ
ಪ್ರಾಣ ವಾಯುವಿನ ಸಂಗ
ಸಾವಿನ ಸಂಗಡ ಯಾರೂ ಇಲ್ಲ ನಿಕ್ಕಳಂಕ ಮಲ್ಲಿಕಾರ್ಜುನ”

“ಒಬ್ಬ ಮನುಷ್ಯನು ಎಷ್ಟೇ ದೊಡ್ಡ ರಾಜನಾಗಿದ್ದರೂ, ಕೋಟ್ಯಧಿಪತಿಯಾಗಿದ್ದರೂ ಅವನು ಉಣ್ಣುವುದು ಕೇವಲ ಒಂದು ಹಿಡಿ ಅಕ್ಕಿಯ ಅನ್ನ, ಮಲಗುವುದು ಅರ್ಧ ಮಂಚದ ಜಾಗ ಮಾತ್ರ. ಸತ್ತ ಮೇಲೆ ಈ ಒಡಲು ಮಣ್ಣು ಪಾಲಾಗುತ್ತದೆ, ಒಡವೆಗಳು ಪರರ ಪಾಲಾಗುತ್ತವೆ. ಪ್ರಾಣವಾಯು ವಿಸ್ಮೃತಿಯಲ್ಲಿ ಲೀನವಾಗುತ್ತದೆ. ಸಾವಿನ ಸನ್ನಿಧಿಯಲ್ಲಿ ನಾವು ಗಳಿಸಿದ ಯಾವುದೇ ಸಂಪತ್ತು ನಮ್ಮ ಜೊತೆಗೆ ಬರುವುದಿಲ್ಲ. ನಮ್ಮ ಜೊತೆ ಬರುವುದು ಕೇವಲ ನಾವು ಮಾಡಿದ ಪುಣ್ಯ ಮತ್ತು ಪಾಪಗಳು ಮಾತ್ರ. ಹೀಗಿರುವಾಗ ಉರುಳಿಲ್ಲದ ಈ ಸಿರಿಯನ್ನು ನೆಚ್ಚಿ ಬದುಕು ಹಾಳು ಮಾಡಿಕೊಳ್ಳಬಾರದು,” ಎಂದು ಕರೆ ನೀಡಿದರು.

​ಬೆಂಗಳೂರಿನಂತಹ ಮಹಾನಗರಕ್ಕೆ ಗ್ರಾಮೀಣ ಭಾಗದಿಂದ ಬಂದು ಸ್ವಂತ ಪರಿಶ್ರಮದಿಂದ ನೆಲೆ ಕಂಡುಕೊಂಡ ಆಂಜನೇಯ ಅವರ ಶ್ರಮವನ್ನು ಶ್ಲಾಘಿಸಿದ ಪೂಜ್ಯರು, ಶರಣೆ ಆಯ್ದಕ್ಕಿ ಲಕ್ಕಮ್ಮನವರ ವಚನವನ್ನು ಉಲ್ಲೇಖಿಸಿ ಕಾಯಕದ ಮಹತ್ವವನ್ನು ಸಾರಿದರು:

“ಮನಶುದ್ಧವಿಲ್ಲದವನಿಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತನಿಗೆ
ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆ ಉಳ್ಳನ್ನಕ್ಕರ”

“ಯಾರ ಮನಸ್ಸಿನಲ್ಲಿ ಶುದ್ಧತೆ ಇರುವುದಿಲ್ಲವೋ ಅವರಿಗೆ ಮಾತ್ರ ಹಣದ ಬಡತನ ಕಾಡುತ್ತದೆ. ಆದರೆ ಚಿತ್ತಶುದ್ಧಿಯಿಂದ, ಪ್ರಾಮಾಣಿಕತೆಯಿಂದ ಕಾಯಕ ಮಾಡುವ ಸದ್ಭಕ್ತನಿಗೆ ಹೋದ ಕಡೆಯಲ್ಲೆಲ್ಲಾ ಯಶಸ್ಸು ಮತ್ತು ಸಂಪತ್ತು ಲಕ್ಷ್ಮಿಯ ರೂಪದಲ್ಲಿ ಒಲಿದು ಬರುತ್ತದೆ. ಕೆಲಸವೇ ಇಲ್ಲ ಎಂದು ನಿಷ್ಕ್ರಿಯರಾಗಿ ಕೂರುವವರಿಗಿಂತ, ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡುವವರಿಗೆ ಬದುಕಿನಲ್ಲಿ ಎಂದೂ ಕೊರತೆಯಾಗುವುದಿಲ್ಲ,” ಎಂದರು.

ಆತ್ಮವಿಶ್ವಾಸದ ಮಹತ್ವವನ್ನು ವಿವರಿಸಿದ ಸ್ವಾಮೀಜಿಗಳು ಬಸವಣ್ಣನವರ ವಚನವನ್ನು ಉಲ್ಲೇಖಿಸಿದರು:

“ಹಾಸಿ ದುಡಿದಡೆ ಹತ್ತು ಬೆರಳುಗಳು ಉಂಟು
ತನಗೂ ಉಂಟು ತನ್ನ ಪುರಾತನರಿಗೂ ಉಂಟು

ಭಗವಂತ ನಮಗೆ ಬರೀ ಎರಡು ಕೈಗಳನ್ನಷ್ಟೇ ನೀಡಿಲ್ಲ, ದುಡಿದು ಬದುಕಲು ‘ಹತ್ತು ಬೆರಳುಗಳನ್ನು’ ನೀಡಿದ್ದಾನೆ. ಆ ಆತ್ಮವಿಶ್ವಾಸ ನಮ್ಮಲ್ಲಿದ್ದರೆ ನಮಗಷ್ಟೇ ಅಲ್ಲ, ನಮ್ಮನ್ನು ನಂಬಿದವರಿಗೂ ಅನ್ನ ಹಾಕುವ ಸಾಮರ್ಥ್ಯ ನಮಗೆ ಸಿಗುತ್ತದೆ ಎಂದು ಭಕ್ತರಲ್ಲಿ ಧೈರ್ಯ ತುಂಬಿದರು.

​ಮನುಷ್ಯನ ದುಡಿಮೆಯ ಹಾದಿ ಎಷ್ಟು ಪವಿತ್ರವಾಗಿರಬೇಕು ಎಂಬುದನ್ನು ಡಿ.ವಿ. ಗುಂಡಪ್ಪನವರ (ಡಿವಿಜಿ) ಸಾಲುಗಳ ಮೂಲಕ ನೆನಪಿಸಿದ ಸ್ವಾಮೀಜಿ, “ನಾವು ಉಣ್ಣುವ ಅನ್ನವನ್ನು ಬೇಯಿಸಿದ ನೀರು ನಮ್ಮ ಶ್ರಮದ ಬೆವರಾಗಿರಬೇಕೇ ಹೊರತು ಪರರ ಕಣ್ಣೀರಿನದಾಗಿರಬಾರದು” ಎಂದರು. ಸ್ವಂತ ಪರಿಶ್ರಮದಿಂದ ಕಟ್ಟಿದ ಸಣ್ಣ ಗುಡಿಸಲೂ ಕೂಡ ಪರರ ಕಣ್ಣೀರಿನಿಂದ ಕಟ್ಟಿದ ಅರಮನೆಗಿಂತ ಕೋಟಿ ಪಟ್ಟು ನೆಮ್ಮದಿ ನೀಡುತ್ತದೆ.

​ಕೋವಿಡ್ ಸಂದರ್ಭದಲ್ಲಿ ಸರಳವಾಗಿ ಗೃಹಪ್ರವೇಶ ಮಾಡಿದ್ದ ಆಂಜನೇಯ ಹಾಗೂ ಚೈತ್ರಾ ದಂಪತಿಗಳು, ಇಂದು ತಮ್ಮ ನಿವಾಸದಲ್ಲಿ ಗುರು-ಲಿಂಗ-ಜಂಗಮ ಪೂಜೆಯ ಮೂಲಕ ನೆರೆಹೊರೆಯವರಿಗೆ, ಬಂಧು-ಮಿತ್ರರಿಗೆ ಅನ್ನಪ್ರಸಾದ ಸೇವೆ ಒದಗಿಸಿರುವುದನ್ನು ಪೂಜ್ಯರು ಶ್ಲಾಘಿಸಿದರು.

​”ಮನೆಯಲ್ಲಿ ನಿಜವಾದ ಶಾಂತಿ ನೆಲೆಸಬೇಕಾದರೆ ಶರಣ ಪರಂಪರೆಯಂತೆ ಶ್ರದ್ಧಾಭಕ್ತಿಯ ಪೂಜೆ ಹಾಗೂ ಬಂದವರೆಲ್ಲರಿಗೂ ಹೊಟ್ಟೆತುಂಬ ಪ್ರಸಾದ ವಿತರಣೆಯಾಗಬೇಕು. ಬಂದವರು ಸಂತೃಪ್ತಿಯಿಂದ ಆಶೀರ್ವದಿಸಿ ತೆರಳಿದರೆ ಅದೇ ಮನೆಗೆ ದೊಡ್ಡ ಮಂಗಳಕರ ಆಶೀರ್ವಾದ. ಇಂದು ಈ ಮನೆಯಲ್ಲಿ ಗೃಹಪ್ರವೇಶ ಮತ್ತು ಗುರುಪ್ರವೇಶ ಎರಡೂ ಒಟ್ಟಿಗೆ ನಡೆದು ಪರಮ ಶಾಂತಿ ಲಭಿಸಿದೆ,” ಎಂದು ಹಾರೈಸಿದರು.

ಕಾರ್ಯಕ್ರಮಕ್ಕೆ ಬಂದಿದ್ದ ಬಂಧು-ಬಳಗವನ್ನು ಉಲ್ಲೇಖಿಸಿದ ಸ್ವಾಮೀಜಿಗಳು, “ಇಷ್ಟು ಜನರು ಬರುವುದು ಸುಮ್ಮನೆ ಸಾಧ್ಯವಿಲ್ಲ. ಜನರ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡವರಿಗೆ ಮಾತ್ರ ಇದು ಸಾಧ್ಯ” ಎಂದು ಹೇಳಿದರು. ಆಂಜನೇಯ ಮತ್ತು ಚೈತ್ರ ದಂಪತಿಯ ಜನಸಂಪರ್ಕ ಮತ್ತು ಸ್ನೇಹಬಾಂಧವ್ಯವನ್ನು ಅವರು ಶ್ಲಾಘಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಹಿನ್ನೆಲೆಯನ್ನು ವಿವರಿಸಿದ ಸ್ವಾಮೀಜಿಗಳು, “ನಿನ್ನೆ ಮಧ್ಯಾಹ್ನ ಯುರೋಪಿನಿಂದ ಫ್ಲೈಟ್‌ನಲ್ಲಿ ಕೂತು, ಇಂದು ಬೆಳಿಗ್ಗೆ ಎಂಟು ಗಂಟೆಗೆ ಬಂದಿದ್ದೇವೆ. ಆಯಾಸ ಇತ್ತು. ಆದರೆ ಇಲ್ಲಿ ಪೂಜೆ, ಭಕ್ತಿ, ಆತಿಥ್ಯ ನೋಡಿದ ಮೇಲೆ ಆ ಎಲ್ಲಾ ಆಯಾಸವೂ ಹೋಗಿಬಿಟ್ಟಿತು” ಎಂದು ಹೇಳಿದರು.

ಕೊನೆಯಲ್ಲಿ ಅವರು, “ಈ ಕುಟುಂಬ ಇನ್ನೂ ಹೆಚ್ಚು ಗುರು-ಲಿಂಗ-ಜಂಗಮ ಸೇವೆ ಮಾಡುವ ಶಕ್ತಿ, ಸಾಮರ್ಥ್ಯ, ಸಮೃದ್ಧಿಯನ್ನು ಬಸವಾದಿ ಶರಣರು ಅನುಗ್ರಹಿಸಲಿ” ಎಂದು ಆಶೀರ್ವದಿಸಿದರು. ಕಾರ್ಯಕ್ರಮದ ಆಯೋಜನೆಗೆ ಕಾರಣಕರ್ತರಾದ ಲೇಖಕ ಹಾಗೂ ಪತ್ರಕರ್ತ ಸತೀಶ್ ಗೌಡ ಅವರಿಗೆ ಕೃತಜ್ಞತೆ ಸಲ್ಲಿಸಿ, ಎಲ್ಲರಿಗೂ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿನಾಯಕ ಫೈನಾನ್ಸಿಯಲ್ ಸಂಸ್ಥೆಯ ಮಾಲೀಕರಾದ ಎನ್‌.ಎಸ್‌. ಆಂಜನೇಯ, ಎಲ್‌.ಐ‌.ಸಿ. ಮುಖ್ಯ ಜೀವ ವಿಮಾ ಸಲಹೆಗಾರರು ಹಾಗೂ ಎಂ.ಡಿ.ಆರ್‌.ಟಿ., ಚೇರ್ಮನ್ ಕ್ಲಬ್ ಸದಸ್ಯರಾದ ಹೆಚ್‌. ಈಶ್ವರ, ನಾಗರಾಜ್ ಶಿಕ್ಷಕರು ನಿಂಬೇಗೊಂದಿ, ಡಿಟೆಕ್ಟಿವ್ ನ್ಯೂಸ್ 24 ಮುಖ್ಯ ಸಂಪಾದಕ ಕೆ.ಎಂ. ಸತೀಶ್ ಗೌಡ, ಜೀವ ವಿಮಾ ಸಲಹೆಗಾರರು, ಜಾನಪದ ಕಲಾವಿದರಾದ ಯಂಕೇಶ್ವರಪ್ಪ (ಕೆಂಚಿಕೊಪ್ಪ) ಬೆಂಗಳೂರು, ಬ್ಯುಸಿನೆಸ್ ಸಲ್ಯೂಷನ್ಸ್ ಸಂಸ್ಥೆಯ ಮಾಲೀಕರಾದ ಪ್ರವೀಣ್, ಅರುಣ್, ಶರತ್, ವಿಜಯ್, ಸೋಮನಾಥ್ ಸೇರಿದಂತೆ ಸಮಾಜದ ಅನೇಕ ಮುಖಂಡರು, ಗಣ್ಯರು ಹಾಗೂ ಬಂಧುಗಳು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಕುಂದಗೋಳದಲ್ಲಿ ಧರ್ಮಜಾಗೃತಿ ಸಮಾರಂಭ: “ಸಜ್ಜನರಿಗೆ ಬರುವ ಆಪತ್ತು ಹಾಗೂ ದುರ್ಜನರಿಗೆ ದೊರಕುವ ಸಂಪತ್ತು ಶಾಶ್ವತವಲ್ಲ”: ಶ್ರೀ ರಂಭಾಪುರಿ ಜಗದ್ಗುರುಗಳು

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ಗೌರವ ರಕ್ಷೆ ಮತ್ತು ಆಶೀರ್ವಾದ

ಭಕ್ತನ ಹೃದಯವೇ ಭಗವಂತನಿರುವ ಗುಡಿ: ಶ್ರೀ ರಂಭಾಪುರಿ ಜಗದ್ಗುರುಗಳು

​ವೀರಶೈವ ಲಿಂಗಾಯತ ಸಮಾಜದ ಸಂಘಟನೆ ಹಾಗೂ ಯುವ ಪೀಳಿಗೆಯ ಸಬಲೀಕರಣಕ್ಕೆ ಒತ್ತು: ಮಹಾಸಭಾ ಮಾಸಿಕ ಸಭೆಯಲ್ಲಿ ಅಧ್ಯಕ್ಷೆ ಹೇಮಲತಾ ಕರೆ

ಚಿಕ್ಕಮಗಳೂರು: ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಶ್ರೀ ಬಸವೇಶ್ವರ ಜಯಂತಿ ಸಂಭ್ರಮ; ‘ಅರಿವಿನ ಜಾಗೃತಿಗೆ ಧರ್ಮದ ಅವಶ್ಯಕತೆ’ — ಶ್ರೀ ರಂಭಾಪುರಿ ಜಗದ್ಗುರುಗಳು

ಶಿವಮೊಗ್ಗ: ಸೆಪ್ಟೆಂಬರ್‌ನಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಅದ್ದೂರಿ ‘ಶ್ರೀ ವೀರಭದ್ರೇಶ್ವರ ಜಯಂತೋತ್ಸವ’; ಶ್ರೀಶೈಲ ಜಗದ್ಗುರುಗಳಿಗೆ ಆಮಂತ್ರಣ

Leave a Comment