– ವಿಶ್ವ ಪರಿಸರ ದಿನದ ವಿಶೇಷ ಲೇಖನ
ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಸರ್ಕಾರದ ಹೊಣೆ, ನೈಸರ್ಗಿಕ ಸಂಪನ್ಮೂಲಗಳನ್ನು ಅನುಭವಿಸುವುದು ಮಾತ್ರ ನಮ್ಮ ಕೆಲಸ ಎಂಬ ಉದಾಸೀನದ ಮನೋಭಾವನೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೆಚ್ಚಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ, ಧಾರ್ಮಿಕ ವಿಚಾರಧಾರೆಗಳನ್ನು ಕೇವಲ ಪೂಜೆ-ಪುನಸ್ಕಾರಗಳಿಗೆ ಸೀಮಿತಗೊಳಿಸದೆ, ಸಮಾಜದ ಜ್ವಲಂತ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತಾ ನಾಡು, ನುಡಿ, ಜಲ ಮತ್ತು ಪರಿಸರ ಸಂರಕ್ಷಣೆಗೆ ತಮ್ಮನ್ನೇ ಸಮರ್ಪಿಸಿಕೊಂಡವರು ಶ್ರೀ ಜಗದ್ಗುರುಗಳು. ಬರಗಾಲದಿಂದ ತತ್ತರಿಸುತ್ತಿದ್ದ ಲಕ್ಷಾಂತರ ರೈತರ ಬಾಳಿಗೆ ಭಗೀರಥನಂತೆ ಆಶಾಕಿರಣವಾದವರು, ಬಹುಭಾಷಾ ಪಂಡಿತರು, ವೈಚಾರಿಕತೆಯ ಹರಿಕಾರರೂ ಆದ ಶ್ರೀ ಮದ್ದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರ ಜೀವಜಲ ಹಾಗೂ ಪರಿಸರ ಕಾಳಜಿಗೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.

ಕೆರೆಗಳಿಗೆ ಜೀವ ತುಂಬಿದ ಆಧುನಿಕ ಭಗೀರಥ ತರಳಬಾಳು ಶ್ರೀಗಳು
ಜಗಳೂರು, ಚನ್ನಗಿರಿ, ದಾವಣಗೆರೆ, ತರೀಕೆರೆ, ಹಳೇಬೀಡು, ಭರಮಸಾಗರ ಹಾಗೂ ಸಿರಿಗೆರೆ ವ್ಯಾಪ್ತಿಯ ನೂರಾರು ಒಣಗಿದ ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಾಕಾರಗೊಳಿಸಿದ ಕೀರ್ತಿ ಪೂಜ್ಯ ಶ್ರೀಗಳಿಗೆ ಸಲ್ಲುತ್ತದೆ. ಅವರ ಅಚಲ ಸಂಕಲ್ಪ ಮತ್ತು ನಿರಂತರ ಪ್ರಯತ್ನದ ಫಲವಾಗಿ ಇಂದು ತುಂಗೆ-ಭದ್ರೆಯರು ಹಳ್ಳಿಗಳ ಕೆರೆ-ಕಟ್ಟೆಗಳಲ್ಲಿ ಅವಿರ್ಭವಿಸಿರುವುದು ಜನಸಾಮಾನ್ಯರಿಗೆ ಪವಾಡದಂತೆ ಗೋಚರಿಸುತ್ತಿದೆ. ಈ ಭಗೀರಥ ಪ್ರಯತ್ನದಿಂದಾಗಿಯೇ ಶ್ರೀಗಳಿಗೆ ‘ಜಲಋಷಿ’ ಎಂಬ ಸಾರ್ಥಕ ಅಭಿದಾನ ಒಲಿದುಬಂದಿದೆ.

ದಶಕಗಳ ಹಿಂದೆಯೇ ಆರಂಭವಾದ ಪರಿಸರ ಕ್ರಾಂತಿ
ಸಸ್ಯರಾಶಿ ಮತ್ತು ಜೀವಜಲದ ರಕ್ಷಣೆಗಾಗಿ ತ್ರಿಕಾಲದಲ್ಲೂ ಚಿಂತಿಸುವ ಪೂಜ್ಯ ಶ್ರೀಗಳ ಪರಿಸರ ಕಾಳಜಿಯನ್ನು ಗುರುತಿಸಿ ಭಾರತ ಸರ್ಕಾರವು 1987ರಲ್ಲಿಯೇ ಅವರಿಗೆ ಪ್ರತಿಷ್ಠಿತ ‘ಇಂದಿರಾ ಪ್ರಿಯದರ್ಶನಿ ವೃಕ್ಷಮಿತ್ರ ಪ್ರಶಸ್ತಿ’ ನೀಡಿ ಗೌರವಿಸಿದೆ. ವಿನಾಶದ ಅಂಚಿನಲ್ಲಿದ್ದ ಆಯುರ್ವೇದ ಮೂಲಿಕೆ ಹಾಗೂ ವೈದ್ಯಕೀಯ ಸಸ್ಯಗಳ ಸಂರಕ್ಷಣೆಗಾಗಿ 2002ರಲ್ಲಿ ಅವರಿಗೆ ‘Certificate of Excellence’ ಗೌರವ ಪುರಸ್ಕಾರ ಲಭಿಸಿದೆ.
ಗ್ರಾಮೀಣ ಭಾಗದ ಪರಿಸರವನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಡಲು ಶ್ರೀಗಳು ನೂರಾರು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಪ್ರಸ್ತುತ ದೇಶಾದ್ಯಂತ ಸಾಗುತ್ತಿರುವ ‘ಸ್ವಚ್ಛ ಭಾರತ’ ಪರಿಕಲ್ಪನೆಗೆ ಶ್ರೀಗಳು 1990ರ ದಶಕದಲ್ಲೇ ಮುನ್ನುಡಿ ಬರೆದಿದ್ದರು. ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಅಂದಿನ ದಿನಗಳಲ್ಲೇ 421 ಹಳ್ಳಿಗಳಲ್ಲಿ 4426 ಶೌಚಾಲಯಗಳನ್ನು ನಿರ್ಮಿಸಿಕೊಡುವ ಮೂಲಕ ಗ್ರಾಮೀಣ ಆರೋಗ್ಯ ರಕ್ಷಣೆಗೆ ನಾಂದಿ ಹಾಡಿದರು. ಅಷ್ಟೇ ಅಲ್ಲದೆ, ದಾವಣಗೆರೆಯಲ್ಲಿ ಸ್ಥಾಪಿತವಾಗಿರುವ ‘ತರಳಬಾಳು ಕೃಷಿ ವಿಜ್ಞಾನ ಕೇಂದ್ರ’ವು ಕಳೆದ ಹಲವು ದಶಕಗಳಿಂದ ನಾಲ್ಕು ಜಿಲ್ಲೆಗಳ ರೈತರಿಗೆ ಕೃಷಿ ಉತ್ತೇಜನ ಮತ್ತು ವೈಜ್ಞಾನಿಕ ಸಲಹೆಗಳನ್ನು ನೀಡುವ ಮೂಲಕ ಅಪ್ಪಟ ರೈತಸ್ನೇಹಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

🌱 ಹಸಿರು ಉಸಿರಾಗಿಸಿದ ಹತ್ತು ಲಕ್ಷ ಬೀಜದುಂಡೆಗಳ ಅಭಿಯಾನ
ಕಳೆದ ವರ್ಷ ಪರಮಪೂಜ್ಯ ಶ್ರೀಗಳ ದಿವ್ಯ ನೇತೃತ್ವದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ ಒಂದು ಅಭೂತಪೂರ್ವ ಹಸಿರು ಕ್ರಾಂತಿ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು, ಭಕ್ತಾದಿಗಳು ಹಾಗೂ ಶಿಷ್ಯ ಸಮುದಾಯ ಒಗೂಡಿ ಬರೋಬ್ಬರಿ 10 ಲಕ್ಷ ಬೀಜದುಂಡೆಗಳನ್ನು (Seed Balls) ಸಿದ್ಧಪಡಿಸಿದ್ದರು. ಮೆದಿಕೇರಿಪುರ ಸಮೀಪವಿರುವ ಶ್ರೀಮಠದ ಸಾವಿರಾರು ಎಕರೆ ವ್ಯಾಪ್ತಿಯ ‘ಶ್ರೀ ಶಿವಕುಮಾರವನ’ದಲ್ಲಿ ಈ ಬೀಜದುಂಡೆಗಳನ್ನು ಭೂತಾಯಿಯ ಮಡಿಲಿಗೆ ಅರ್ಪಿಸಲಾಯಿತು. ಇಂದು ಆ ಬೀಜಗಳು ಮೊಳಕೆಯೊಡೆದು ಹಸಿರಾಗಿ ನಳನಳಿಸುತ್ತಿರುವುದು ಶ್ರೀಗಳ ದೂರದೃಷ್ಟಿಗೆ ಸಾಕ್ಷಿಯಾಗಿದೆ.


🌱ಜಲಋಷಿಯ ಹಸಿರು ನಡೆ: ನಾಡಿಗೆಲ್ಲ ಜಲದೀಪ: ವಿಶ್ವ ಪರಿಸರ ದಿನದ ಭಕ್ತಿಪೂರ್ವಕ ನಮನಗಳು
ವಿಶ್ವ ಪರಿಸರ ದಿನದ ಈ ಶುಭ ಸಂದರ್ಭದಲ್ಲಿ, ಪ್ರಕೃತಿಯ ಶುದ್ಧತೆ ಹಾಗೂ ಮಾನವನ ಸನ್ಮನಕ್ಕಾಗಿ ಸದಾ ಹಂಬಲಿಸುವ, ಮಾತೃ ಹೃದಯದ ಸಂಕಲ್ಪ ಋಷಿ, ಕನ್ನಡ ನಾಡಿನ ಪ್ರತ್ಯಕ್ಷ ದೈವ ಎಂದೇ ಕರೆಸಿಕೊಳ್ಳುವ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಲೋಕಕಲ್ಯಾಣದ ಕೈಂಕರ್ಯಗಳನ್ನು ಕೃತಜ್ಞತೆಯಿಂದ ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅವರ ಹಸಿರು ನಡೆ ನಮಗೆಲ್ಲರಿಗೂ ದಾರಿದೀಪವಾಗಲಿ.





