ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯ ಹೆಮ್ಮೆಯ ತಾಣವಾಗಿರುವ ಸೂಗೂರು ಗ್ರಾಮವು ಅಪೂರ್ವ ಧಾರ್ಮಿಕ ವೈಭವಕ್ಕೆ ಸಾಕ್ಷಿಯಾಯಿತು. ಗ್ರಾಮದ ಆರಾಧ್ಯ ದೈವ ಶ್ರೀ ಮೃಡಬಸವೇಶ್ವರ ಸ್ವಾಮಿಯ ನೂತನ ಭವ್ಯ ದೇವಾಲಯದ ಉದ್ಘಾಟನಾ ಪ್ರಯುಕ್ತ ನಡೆಯುತ್ತಿರುವ 48ನೇ ದಿನದ ಮಹಾ ಮಂಡಲೋತ್ಸವ, ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಜಾಗೃತಿ ಸಮಾರಂಭವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಸೂಗೂರು ಗ್ರಾಮದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಶ್ರೀ ರಂಭಾಪುರಿ ಜಗದ್ಗುರುಗಳ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ ಭಕ್ತರಲ್ಲಿ ಭಕ್ತಿ ಸಂಭ್ರಮ ಮೂಡಿಸಿತು.
ಈ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ, ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು. ಸೂಗೂರು ಗ್ರಾಮದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆದಿರುವುದು ಭಕ್ತರಲ್ಲಿ ವಿಶೇಷ ಸಂಭ್ರಮವನ್ನು ಉಂಟುಮಾಡಿತು.


ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಅಡ್ಡಪಲ್ಲಕ್ಕಿ ಮೆರವಣಿಗೆಯ ವೇಳೆ ಜೈಘೋಷ, ವೇದಘೋಷ, ಮಹಿಳೆಯರ ಪೂರ್ಣಕುಂಭದೊಂದಿಗೆ, ನಾದಸ್ವರ, ತಾಳಮದ್ದಳೆ ನಡುವೆ ಭಕ್ತರು ಭಕ್ತಿ ಪರವಶರಾಗಿ ಶ್ರೀ ಜಗದ್ಗುರುಗಳ ದರ್ಶನ ಪಡೆದರು. ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.



✨ ಧರ್ಮ ಎಂದರೆ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೌಲ್ಯ
ಧರ್ಮಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ರಂಭಾಪುರಿ ಜಗದ್ಗುರುಗಳು, “ಸೂಗೂರು ಗ್ರಾಮದ ಇತಿಹಾಸದಲ್ಲಿ ಇಂದಿನ ದಿನವು ಸುವರ್ಣಾಕ್ಷರಗಳಿಂದ ದಾಖಲೆಯಾಗುವ ದಿನವಾಗಿದೆ. ಧರ್ಮ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕಾರ್ಯದಲ್ಲಿ ಗ್ರಾಮಸ್ಥರು ತೋರಿರುವ ಬದ್ಧತೆ ಶ್ಲಾಘನೀಯವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಧರ್ಮ ಎಂದರೆ ಕೇವಲ ಪೂಜೆ-ಪುನಸ್ಕಾರವಲ್ಲ. ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು, ದುಃಖಿತನಿಗೆ ಸಾಂತ್ವನ, ಆಡಿದ ಮಾತಿನಂತೆ ನಡೆದುಕೊಳ್ಳುವುದು – ಇವೆಲ್ಲವೂ ಧರ್ಮದ ಜೀವಾಳ” ಎಂದು ಶ್ರೀಗಳು ಹೇಳಿದರು.
📍 ಇಂದಿನ ಸಮಾಜದಲ್ಲಿ ಮಾತು ಒಂದು, ನಡೆ ಮತ್ತೊಂದು ಎಂಬ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಧಾರ್ಮಿಕ ನಾಯಕರು, ಸಮಾಜದ ಮುಖಂಡರು ಹಾಗೂ ಜನಪ್ರತಿನಿಧಿಗಳು ಆದರ್ಶ ಜೀವನದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕೆಂದು ಕರೆ ನೀಡಿದರು.



“ಒಳ್ಳೆಯವರ ಒಡನಾಟ ಜೀವನಕ್ಕೆ ಬೆಳಕು, ದುರ್ಜನರ ಸಹವಾಸವೇ ಸರ್ವನಾಶಕ್ಕೆ ನಾಂದಿ. ಧರ್ಮದ ಹಾದಿ ಎಂದಿಗೂ ಕದಡದಿರಲಿ.”
– ರಂಭಾಪುರಿ ಶ್ರೀಗಳು
“ದುರ್ಲಭಂ ತ್ರಯಮೇವೈತದ್ದೇವಾನುಗ್ರಹಹೇತುಕ್ಮ್ |
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ ||”
ಮನುಷ್ಯನಿಗೆ ಮನುಷ್ಯತ್ವ, ಮುಮುಕ್ಷತ್ವ (ಮೋಕ್ಷದ ಅಪೇಕ್ಷೆ) ಮತ್ತು ದೊಡ್ಡವರ ಸಹವಾಸ ಪ್ರಾಪ್ತವಾಗಬೇಕಾದರೆ ಪರಮಾತ್ಮನ ಅನುಗ್ರಹವಿದ್ದರೆ ಮಾತ್ರ ಸಾಧ್ಯ. ಮಾನವೀಯ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ನಿಜವಾದ ಮನುಷ್ಯತ್ವವನ್ನು ಪಡೆಯಲು ಅರ್ಹರಾಗುತ್ತೇವೆ. ಈ ಮನುಷ್ಯತ್ವ ಸಿದ್ಧಿಸಬೇಕಾದರೆ ಪರಮಾತ್ಮನ ಅನುಗ್ರಹ ಮತ್ತು ಆಶೀರ್ವಾದಗಳು ಸದಾ ನಮ್ಮ ಮೇಲಿರಬೇಕು.
ನಾವು ಯಾವ ಧರ್ಮದಲ್ಲೇ ಹುಟ್ಟಿರಲಿ, ಯಾವ ಪರಂಪರೆಯಲ್ಲೇ ಬೆಳೆದಿರಲಿ, ಎಲ್ಲರ ಅಂತಿಮ ಆಶಯ ಒಂದೇ — ಯಾವ ಪರಮಾತ್ಮನಿಂದ ಜೀವಾತ್ಮವು ಅಗಲಿ ಬಂದಿದೆಯೋ, ಕೊನೆಗೆ ಅದೇ ಪರಮಾತ್ಮನಲ್ಲಿ ಒಂದಾಗುವುದು. ಅದನ್ನೇ ಶಾಸ್ತ್ರಕಾರರು ಮುಕ್ತಿ, ಮೋಕ್ಷ, ಕೈವಲ್ಯ, ನಿರ್ವಾಣ, ನಿಸ್ಸ್ರೇಯಸ ಎಂದು ನಾನಾ ಹೆಸರುಗಳಿಂದ ಕರೆಯುತ್ತಾರೆ. ಈ ಮೋಕ್ಷ ಪ್ರಾಪ್ತಿಯಾಗಬೇಕಾದರೂ ದೈವಾನುಗ್ರಹ ಅತ್ಯಗತ್ಯ.
ಬದುಕಿನಲ್ಲಿ ದೊಡ್ಡವರ ಸಹವಾಸ ಮತ್ತು ಮಹಾನುಭಾವರ ಸಂಪರ್ಕ ಬಹಳ ಮುಖ್ಯವಾದುದು. ಒಳ್ಳೆಯವರ ಒಡನಾಟದಲ್ಲಿ ಬದುಕಿದರೆ ಜೀವನವು ಸಮೃದ್ಧಿಗೊಳ್ಳುತ್ತದೆ, ವಿಕಾಸಗೊಳ್ಳುತ್ತದೆ. ಅದೇ ದುರ್ಜನರ ಸಹವಾಸದಲ್ಲಿದ್ದರೆ ಜೀವನವು ಸರ್ವನಾಶವಾಗುತ್ತದೆ ಎನ್ನುವ ಎಚ್ಚರಿಕೆ ಸದಾ ನಮ್ಮಲ್ಲಿರಲಿ. ಬಾಲ್ಯದಲ್ಲಿ ವಿದ್ಯೆಯನ್ನು ಗಳಿಸಬೇಕು, ತಾರುಣ್ಯದಲ್ಲಿ ಧರ್ಮದ ಹಾದಿಯಲ್ಲಿ ಸಂಪತ್ತನ್ನು ಗಳಿಸಬೇಕು; ಆ ಮೂಲಕ ಈ ಭೂಮಿಯ ಮೇಲೆ ನಾವು ನಡೆಸುವ ಬಾಳನ್ನು ಸಾರ್ಥಕಪಡಿಸಿಕೊಳ್ಳಬೇಕು.
ಧರ್ಮದ ವಿಚಾರದಲ್ಲಿ ನಮ್ಮ ನಡೆ ಮತ್ತು ನಂಬಿಕೆಗಳು ಎಂದಿಗೂ ಕದಡಬಾರದು, ಬದಲಾಗಬಾರದು. ಯಾರೋ ಏನೋ ಹೇಳುತ್ತಾರೆ ಎಂದು ನಮ್ಮ ಮೂಲ ಪರಂಪರೆ ಹಾಗೂ ಸಂಸ್ಕಾರಗಳನ್ನು ಯಾರೂ ಬಿಟ್ಟುಕೊಡಬಾರದು.


ರೇಣುಕಾಚಾರ್ಯರ ದಶಧರ್ಮ ಸೂತ್ರ ಹಾಗೂ ಬಸವಣ್ಣನವರ ಸಪ್ತ ಸೂತ್ರಗಳ ಸಂದೇಶ
ವಿಶ್ವಧರ್ಮದ ವಿಭು ಮತ್ತು ಮಹಾ ಮಾನವತಾವಾದಿಯಾದ ಶ್ರೀ ಜಗದ್ಗುರು ರೇಣುಕಾಚಾರ್ಯರು, ಮಹಾಮುನಿ ಅಗಸ್ತ್ಯರಿಗೆ ಬೋಧನೆ ಮಾಡುವಾಗ ಅಹಿಂಸಾದಿ ಧ್ಯಾನ ಪರ್ಯಂತರವಾದ ಧರ್ಮದ ದಶವಿಧ ಸೂತ್ರಗಳನ್ನು (10 ಸೂತ್ರಗಳು) ಬೋಧಿಸಿದರು. ಈ ದಶಧರ್ಮ ಸೂತ್ರಗಳಲ್ಲಿನ ಒಂದೊಂದು ಅಂಶಗಳನ್ನು ಇಟ್ಟುಕೊಂಡೇ ಜಗತ್ತಿನ ಬೇರೆ ಬೇರೆ ಧರ್ಮಗಳು ಪ್ರಖ್ಯಾತಿಯನ್ನು ಪಡೆದು ಬಂದಿವೆ. ರೇಣುಕಾಚಾರ್ಯರು ಬೋಧಿಸಿದ ಅಹಿಂಸಾ ತತ್ತ್ವವನ್ನು ಮುಖ್ಯವಾಗಿಟ್ಟುಕೊಂಡು ಜೈನ ಮತ್ತು ಬೌದ್ಧ ಧರ್ಮಗಳು ಪ್ರಖ್ಯಾತಿ ಪಡೆದಿವೆ. ಸತ್ಯ ಮತ್ತು ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಹಾಗೂ ಸತ್ಯಕ್ಕಾಗಿ ಹೋರಾಡಿದ ಸತ್ಯ ಹರಿಶ್ಚಂದ್ರನ ಹೆಸರನ್ನು ನಾವು ಇಂದಿಗೂ ಸ್ಮರಿಸುತ್ತೇವೆ.
ಪ್ರಾಚೀನ ಕಾಲದಲ್ಲಿ ರೇಣುಕಾಚಾರ್ಯರು ದಶವಿಧ ಸೂತ್ರಗಳನ್ನು ಬೋಧಿಸಿದರೆ, 12ನೇ ಶತಮಾನದಲ್ಲಿ ಜಗಜ್ಯೋತಿ ಭಕ್ತಿ ಭಂಡಾರಿ ಬಸವಣ್ಣನವರು ಅದೇ ಧರ್ಮದ ಸೂತ್ರಗಳನ್ನು ಅಚ್ಚಕನ್ನಡದಲ್ಲಿ ಸಪ್ತ ಸೂತ್ರಗಳನ್ನಾಗಿ (7 ಸೂತ್ರಗಳು) ಹೀಗೆ ಸರಳೀಕರಿಸಿ ಹೇಳಿದರು:
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನಗೆ ಬಣ್ಣಿಸಬೇಡ, ಇದಿರು ಹಳಿಯಲು ಬೇಡ.
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ.
ಬಸವಣ್ಣನವರ ಸಪ್ತ ಸೂತ್ರಗಳಲ್ಲಿನ ‘ಹುಸಿಯ ನುಡಿಯಲು ಬೇಡ’ (ಸುಳ್ಳು ಹೇಳಬಾರದು) ಎಂಬ ಒಂದು ತತ್ತ್ವವನ್ನು ಮಾತ್ರ ಪರಿಪಾಲಿಸಿಕೊಂಡು ಬಂದರೆ, ವೀರಶೈವ ಲಿಂಗಾಯತ ಧರ್ಮವು ಬಹುದೊಡ್ಡ ಪ್ರಮಾಣದಲ್ಲಿ ಬೆಳೆದು ಬಾಳಲು ಸಾಧ್ಯವಾಗುತ್ತದೆ. ಇವತ್ತಿನ ದಿನಗಳಲ್ಲಿ ಈ ಎಲ್ಲ ತತ್ತ್ವಗಳನ್ನು ನಮ್ಮ ಜೀವನದಲ್ಲಿ ಪರಿಪಾಲನೆ ಮಾಡುವುದು ಅತ್ಯಂತ ಶ್ರೇಷ್ಠ ಹಾಗೂ ಶ್ರೇಯಸ್ಕರವಾಗಿದೆ.


ವೀರಶೈವ ಧರ್ಮದ ಬೇರು ಮತ್ತು ಗುರುವಿನ ಪ್ರಾಮುಖ್ಯತೆ
ವೀರಶೈವ ಲಿಂಗಾಯತ ಧರ್ಮವು ಸಮಾನತೆ, ಕರುಣೆ ಮತ್ತು ಸಾರ್ವತ್ರಿಕ ಪ್ರೀತಿಯ ಭದ್ರ ಬುನಾದಿಯ ಮೇಲೆ ನಿರ್ಮಾಣವಾಗಿದೆ. ಈ ಧರ್ಮದಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲ, ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲ, ಹಾಗೂ ಉಚ್ಚ-ನೀಚ ಎಂಬ ಸ್ವಾರ್ಥದ ಸಂಕುಚಿತ ಮನೋಭಾವನೆಯೂ ಇಲ್ಲ. ಯಾರೇ ಈ ಧರ್ಮದ ಉದಾತ್ತ ತತ್ತ್ವ ಮತ್ತು ಸಿದ್ಧಾಂತಗಳಿಗೆ ತಲೆಬಾಗಿ ಬರುತ್ತಾರೋ, ಅವರೆಲ್ಲರಿಗೂ ಈ ಧರ್ಮವು ಸದಾಕಾಲ ತನ್ನ ಬಾಗಿಲನ್ನು ತೆರೆದಿಟ್ಟಿದೆ ಎಂಬುದನ್ನು ನಾವು 12ನೇ ಶತಮಾನದ ಕ್ರಾಂತಿಕಾರಿ ಇತಿಹಾಸದಿಂದ ತಿಳಿದುಕೊಳ್ಳಬಹುದು ಎಂದರು.
ವೀರಶೈವ ಧರ್ಮದಲ್ಲಿ ಅಡಗಿರುವ ‘ವಿಶ್ವಬಂಧುತ್ವ’ ಮತ್ತು ‘ಸರ್ವೇಷಾಂ ಹಿತಕಾರಕಂ’ (ಎಲ್ಲರ ಹಿತವನ್ನು ಬಯಸುವ) ಚಿಂತನೆಗಳು ಯುಗಪುರುಷ ಜಗದ್ಗುರು ರೇಣುಕಾಚಾರ್ಯರು ಹಾಗೂ 12ನೇ ಶತಮಾನದ ಬಸವಾದಿ ಶಿವಶರಣರ ಮುಖ್ಯ ಧೇಯವಾಗಿತ್ತು.
🔹 ಧರ್ಮದ ಹಾದಿಯಲ್ಲಿ ಗುರುವಿನ ಸ್ಥಾನ
ಜಗತ್ತಿನ ಭೌತಿಕ ಕತ್ತಲೆಯನ್ನು ಕಳೆಯಲು ಸೂರ್ಯ ಬೇಕು; ಆದರೆ ಮನುಷ್ಯನ ಬದುಕಿನ ಅಜ್ಞಾನವೆಂಬ ಆಂತರಿಕ ಕತ್ತಲೆಯನ್ನು ಕಳೆಯಲು ‘ಗುರು’ ಅತ್ಯಗತ್ಯ. ಜಗದ್ಗುರು ಬಸವಣ್ಣನವರು ತಮ್ಮ ವಚನದಲ್ಲಿ ಗುರುವಿನ ಮಹತ್ವವನ್ನು ಹೀಗೆ ಸಾರಿದ್ದಾರೆ:
ಎಂದು ಹೇಳುವ ಮೂಲಕ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಗುರುವಿಗೆ ಇರುವ ಪ್ರಥಮ ಪ್ರಾಶಸ್ತ್ಯವನ್ನು ಒತ್ತಿ ಹೇಳಿದ್ದಾರೆ. ಆದ್ದರಿಂದ, ನಾವು ಗುರುವಿನ ಸನ್ಮಾರ್ಗದರ್ಶನದಲ್ಲಿ ನಮ್ಮ ಬದುಕನ್ನು ವಿಕಾಸಗೊಳಿಸಬೇಕೇ ಹೊರತು, ಅದನ್ನು ಕಲುಷಿತಗೊಳಿಸುವ ಅಥವಾ ದಾರಿ ತಪ್ಪಿಸುವ ಕಾರ್ಯಕ್ಕೆ ಕೈಹಾಕಬಾರದು.
🔹 ವಿಶ್ವಮಾನವ ಸಂದೇಶ
ಬಸವಣ್ಣನವರು ಅಂದೇ ಇಡೀ ಜಗತ್ತಿಗೆ ಅನ್ವಯವಾಗುವಂತಹ ತಮ್ಮ ಅಮರ ವಚನದ ಮೂಲಕ ಸಾರಿದ್ದರು:
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ,
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯ.”
⚠️ ಇಂದಿನ ವಾಸ್ತವ ಮತ್ತು ನಮ್ಮ ಕರ್ತವ್ಯ
ಆದರೆ, ಇತ್ತೀಚಿನ ದಿನಗಳಲ್ಲಿ ಬಸವಣ್ಣನವರ ಹೆಸರನ್ನು ಹೇಳುವ ಕೆಲವು ಮಠಾಧೀಶರೇ ಧರ್ಮದ ನೈಜ ದಾರಿಯನ್ನು ತಪ್ಪಿಸುತ್ತಿದ್ದಾರೆ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಸ್ವಾರ್ಥ ಮತ್ತು ತಪ್ಪು ಪ್ರಚಾರದ ಅಂತಹ ಮಾತುಗಳಿಗೆ ಸಮಾಜವು ಮರುಳಾಗಬಾರದು. ಬದಲಿಗೆ, ಶರಣರು ನಮಗೆ ಹಾಕಿಕೊಟ್ಟ ಸತ್ಯ, ಶುದ್ಧ ಹಾಗೂ ನ್ಯಾಯಸಮ್ಮತವಾದ ಧರ್ಮದ ಸಂವಿಧಾನವನ್ನು ನಾವೆಲ್ಲರೂ ಭಕ್ತಿಯಿಂದ ಪರಿಪಾಲಿಸಬೇಕಾಗಿದೆ ಎಂದು ಶ್ರೀಗಳು ಹೇಳಿದರು .
🛕 ಶ್ರೀ ಮೃಡಬಸವೇಶ್ವರ ದೇವಾಲಯಕ್ಕೆ ಜಗದ್ಗುರುಗಳ ಮೆಚ್ಚುಗೆ
ಸೂಗೂರಿನಲ್ಲಿ ನಿರ್ಮಾಣಗೊಂಡಿರುವ ಶ್ರೀ ಮೃಡಬಸವೇಶ್ವರ ದೇವಾಲಯದ ವಾಸ್ತುಶಿಲ್ಪ ಮತ್ತು ಭವ್ಯತೆಯನ್ನು ಕೊಂಡಾಡಿದ ಜಗದ್ಗುರುಗಳು, “ಇಂತಹ ಸುಂದರ ಹಾಗೂ ಕಲಾತ್ಮಕ ದೇವಾಲಯವನ್ನು ನಾನು ಅಪರೂಪವಾಗಿ ಕಂಡಿದ್ದೇನೆ” ಎಂದು ಶ್ಲಾಘಿಸಿದರು.
ದೇವಾಲಯ ನಿರ್ಮಾಣಕ್ಕೆ ಶ್ರಮಿಸಿದ ಗ್ರಾಮಸ್ಥರು, ದಾನಿಗಳು, ಸಮಿತಿಯ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸೇವೆಯನ್ನು ಸ್ಮರಿಸಿದ ಅವರು, “ದೇವಾಲಯಕ್ಕೆ ಬರುವ ಭಕ್ತರ ಬದುಕಿನಲ್ಲಿ ಆಧ್ಯಾತ್ಮಿಕ ಪರಿವರ್ತನೆ ಉಂಟಾದಾಗ ಮಾತ್ರ ದೇವಾಲಯ ನಿರ್ಮಾಣದ ಉದ್ದೇಶ ಸಾರ್ಥಕವಾಗುತ್ತದೆ” ಎಂದು ಹೇಳಿದರು.

“ಶ್ರೀ ತರಳಬಾಳು ಜಗದ್ಗುರುಗಳ ಜನ್ಮಭೂಮಿ ಸೂಗೂರು ಗ್ರಾಮದ ಹಿರಿಮೆ!”
ತರಳಬಾಳು ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಜನ್ಮಭೂಮಿ ಇದೇ ‘ಸೂಗೂರು ಗ್ರಾಮ’ ಎಂಬ ಸಂಗತಿಯನ್ನು ಕೇಳಿ ರಂಭಾಪುರಿ ಜಗದ್ಗುರುಗಳಿಗೆ ಹಾಲಿಗೆ ಜೇನು-ಸಕ್ಕರೆ ಬೆರೆಸಿದಷ್ಟೇ ಪರಮಾನಂದವಾಗಿದೆ.
ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ತರಳಬಾಳು ಶ್ರೀಗಳು, ತಾವು ಹಾಗೂ ಸುತ್ತೂರು ಶ್ರೀಗಳು ಎಲ್ಲರೂ ಒಂದೇ ವಾಹನದಲ್ಲಿ ಜೊತೆಯಾಗಿ ತೆರಳಿ ಸಮಾರಂಭವನ್ನು ಉದ್ಘಾಟಿಸಿದ್ದ ಮಧುರ ನೆನಪನ್ನು ಅವರು ಮೆಲಕು ಹಾಕಿದರು. ಅಲ್ಲದೆ, ಇತ್ತೀಚೆಗೆ ಅಗಲಿದ ಡಾ. ಶಾಮನೂರು ಶಿವಶಂಕರಪ್ಪ ಅವರ ಶ್ರದ್ಧಾಂಜಲಿ ಸಮಾರಂಭದಲ್ಲಿ ತರಳಬಾಳು ಶ್ರೀಗಳು ಮತ್ತು ತಾವು ಪಾಲ್ಗೊಂಡು, ಪರಸ್ಪರ ಸ್ನೇಹ ಹಾಗೂ ಸೌಹಾರ್ದತೆಯಿಂದ ಮಾತನಾಡಿದ್ದನ್ನು ಹೆಮ್ಮೆಯಿಂದ ಸ್ಮರಿಸಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜಕೀಯ ಮತ್ತು ಸಮಾಜಕ್ಕಾಗಿ ಪಟ್ಟ 50 ವರ್ಷಗಳ ಅವಿರತ ಶ್ರಮದ ಪ್ರತಿಫಲವಾಗಿ ಚಿತ್ರದುರ್ಗ ನಗರದಲ್ಲಿ ಐತಿಹಾಸಿಕ ಸನ್ಮಾನ ಸಮಾರಂಭ ನಡೆದಿತ್ತು. ಅದರಲ್ಲಿ ಪಂಚ ಪೀಠಾಧೀಶರು ಹಾಗೂ ಸಾವಿರಾರು ಮಠಾಧೀಶರು ಪಾಲ್ಗೊಂಡಿದ್ದನ್ನು ಹಂಚಿಕೊಂಡ ಶ್ರೀಗಳು, ಇತ್ತೀಚೆಗೆ ಮೇ 17 ರಂದು ಶಿವಮೊಗ್ಗ ನಗರದಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರು ಯಡಿಯೂರಪ್ಪನವರಿಗಾಗಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮರ್ಪಣಾ ಸಮಾರಂಭದ ಭವ್ಯ ಯಶಸ್ಸನ್ನು ಮುಕ್ತಕಂಠದಿಂದ ಶ್ಲಾಘಿಸಿದರು.



ಬಿಳಿಕಿ ಮತ್ತು ಮಳಲಿ ಶ್ರೀಗಳ ಮಾರ್ಗದರ್ಶನದಲ್ಲಿ ಸೂಗೂರಿನ ಧಾರ್ಮಿಕ ಉತ್ಸವ ಯಶಸ್ವಿ; ಪತ್ರಕರ್ತ ಸತೀಶ್ ಗೌಡ ಅವರ ಕಾರ್ಯಕ್ಕೆ ರಂಭಾಪುರಿ ಶ್ರೀಗಳ ಶ್ಲಾಘನೆ
“ಶಿವಮೊಗ್ಗದ ಕಾರ್ಯಕ್ರಮ ಮುಗಿದ ಇಷ್ಟು ಬೇಗ ಮತ್ತೊಮ್ಮೆ ಸೂಗೂರು ಗ್ರಾಮಕ್ಕೆ ಆಗಮಿಸುವ ಸಂದರ್ಭ ಬರುತ್ತದೆ ಎಂದು ಭಾವಿಸಿರಲಿಲ್ಲ. ಆದರೆ ಬಿಳಿಕಿ ಶ್ರೀಗಳ ದಿವ್ಯ ಮಾರ್ಗದರ್ಶನ, ಮಳಲಿ ಶ್ರೀಗಳ ನಿರಂತರ ಪ್ರೋತ್ಸಾಹ ಹಾಗೂ ದೇವಸ್ಥಾನ ಸಮಿತಿಯ ಪದಾಧಿಕಾರಿಗಳ ಉದಾರ ಮನಸ್ಸಿನಿಂದಾಗಿ ಈ ಅದ್ಭುತ ಧರ್ಮ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ” ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.
ಮಾಜಿ ಸಂಸದ ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಸಮಾಜದ ಅಧ್ಯಕ್ಷ ಜ್ಯೋತಿ ಪ್ರಕಾಶ್ ಹಾಗೂ ಇತರ ಗಣ್ಯರ ಸಮಾಜಮುಖಿ ಸೇವೆಯನ್ನು ಜಗದ್ಗುರುಗಳು ಪ್ರಶಂಸಿಸಿದರು.
ಇದೇ ಸಂದರ್ಭದಲ್ಲಿ, ನಮ್ಮ ವೀರಶೈವ ಲಿಂಗಾಯತ ಸಮಾಜದ ಪ್ರತಿಯೊಂದು ಕಾರ್ಯಕ್ರಮಗಳ ವರದಿಯನ್ನು ಲಕ್ಷಾಂತರ ಜನರಿಗೆ ನಿರಂತರವಾಗಿ ತಲುಪಿಸುತ್ತಿರುವ ಶಿವಮೊಗ್ಗದ ಪತ್ರಕರ್ತರಾದ ಸತೀಶ್ ಗೌಡ ಅವರ ಕಾರ್ಯವೈಖರಿಯನ್ನು ಪೂಜ್ಯ ಶ್ರೀಗಳು ಅತ್ಯಂತ ಹೆಮ್ಮೆಯಿಂದ ಕೊಂಡಾಡಿ, ಆಶೀರ್ವದಿಸಿದರು. ರೇಣುಕಾಚಾರ್ಯ ಗುರುಕುಲದ ಸಾಧಕರು ನಡೆಸಿಕೊಟ್ಟ ವೇದಘೋಷ, ಸಹೋದರಿ ಕಲ್ಪನಾ ಅವರ ಸುಮಧುರ ಭಕ್ತಿಗೀತೆಗಳ ಗಾಯನ, ಶಿವಕುಮಾರ್ ಅವರ ಸ್ವಾಗತ ಭಾಷಣ ಹಾಗೂ ಮಹೇಶ್ ಅವರ ಪ್ರಾಸ್ತಾವಿಕ ನುಡಿಗಳು ಈ ಧಾರ್ಮಿಕ ಸಮಾರಂಭದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದವು.
📌 ಶ್ರೀಗಳ ಸಂದೇಶ: ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ಭಿನ್ನಾಭಿಪ್ರಾಯಗಳನ್ನು ಮರೆತು ಸಾಮರಸ್ಯದಿಂದ ಬದುಕಬೇಕು ಎಂಬ ಸಂದೇಶವನ್ನು ಪುನರುಚ್ಚರಿಸಿದರು.



ಒಂದಾಗಿ ಬಾಳೋಣ ಎಂಬ ಮಂಗಳ ಸಂದೇಶ ಮತ್ತು ಪ್ರಕೃತಿಯ ಆಶೀರ್ವಾದ
ಉತ್ಸವದ ಆರಂಭದಲ್ಲಿ ಮಳೆ ಬಂದು ಕಾರ್ಯಕ್ರಮ ಎಲ್ಲಿ ಕೆಟ್ಟುಹೋಗುತ್ತದೆಯೋ ಎಂದು ಎಲ್ಲರೂ ಆತಂಕಗೊಂಡಿದ್ದರು. ಆದರೆ ಈ ಧರ್ಮ ಸಮಾರಂಭಕ್ಕೆ ಪ್ರಕೃತಿಯೂ ಸಹ ಸಹಕಾರ ನೀಡಿದೆ. ಈಗ ಕೊನೆಯ ಹಂತದಲ್ಲಿ ಬೀಳುತ್ತಿರುವ ಮಳೆಯ ತುಂತುರು ಹನಿಗಳು ಒಂದು ಶುಭ ಸೂಚನೆಯ ಸಂಕೇತವಾಗಿದ್ದು, ಈ ನಾಡಿಗೆ ಹಾಗೂ ಭಕ್ತರಿಗೆ ಒಳ್ಳೆಯದಾಗಲಿರುವ ಮುನ್ಸೂಚನೆಯಾಗಿದೆ.
ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಅಂದು ಹಾಡಿದ್ದ ಅಮೂಲ್ಯ ಸಾಲುಗಳನ್ನು ಶ್ರೀಗಳು ಸ್ಮರಿಸಿದರು:
“ಒಂದಾಗಿ ಬಾಳೋಣ ಬನ್ನಿರೆ, ಚಂದಾಗಿ ಬಾಳೋಣ ಬನ್ನಿರೆ…
ಒಂದಾಗಿ ಚಂದಾಗಿ ನಗುನಗುತಾ ಸೊಗಸಿನ ಬಾಳನ್ನು ಬೆಳೆಸೋಣ ಬನ್ನಿರೆ, ಒಂದಾಗಿ ಬಾಳೋಣ ಬನ್ನಿರೆ…”
ಸೂಗೂರು ಗ್ರಾಮದಲ್ಲಿರುವ ಈ ಅನನ್ಯ ಒಗ್ಗಟ್ಟು ಮತ್ತು ಸಾಮರಸ್ಯವು ಇನ್ನುಳಿದ ನಗರ ಹಾಗೂ ಗ್ರಾಮೀಣ ಭಾಗದ ಜನತೆಗೆ ದಿಕ್ಸೂಚಿಯಾಗಲಿ. ನೆರೆದಿದ್ದ ಭಕ್ತಾದಿಗಳಿಗೆ ಸೂಗೂರಿನ ಕುಲದೈವ ಶ್ರೀ ಮೃಡಬಸವೇಶ್ವರ ಸ್ವಾಮಿ ಹಾಗೂ ಸಕಲ ಶಿವಶರಣರ, ಪಂಚಾಚಾರ್ಯರ ಅಂತಃಕರಣದ ಆಶೀರ್ವಾದ ಸದಾ ಇರಲಿ ಎಂದು ಜಗದ್ಗುರುಗಳು ಹಾರೈಸಿದರು.

ಅಡ್ಡಪಲ್ಲಕ್ಕಿ ಉತ್ಸವಕ್ಕೆ ರಂಗು ತಂದ ಪುರವಂತಿಕೆ ಕಲಾ ವೈಭವ!
ಇದೇ ಸಂದರ್ಭದಲ್ಲಿ ನಡೆದ ಜಗದ್ಗುರುಗಳ ಭವ್ಯ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಸೂಗೂರಿನ ಶ್ರೀ ಮೃಡಬಸವೇಶ್ವರ ಪುರವಂತಿಕೆ ಕಲಾ ತಂಡವು ತನ್ನ ಅದ್ಭುತ ಕಲಾ ಪ್ರದರ್ಶನದ ಮೂಲಕ ವಿಶೇಷ ಮೆರಗು ನೀಡಿತು. ತಂಡದ ಪ್ರಮುಖರಾದ ಬ್ರಹ್ಮಚಾರ್, ಮೌನೇಶ್ವರಚಾರ್, ವರುಣಾಚಾರ್, ವೀರೇಶ, ರವಿ, ಮಧು ಕುಮಾರ್, ರವಿ ಕುಮಾರ್, ಗಿರೀಶ, ರೇವಣಪ್ಪ ಹಾಗೂ ಬಸವರಾಜು ಸೂಗೂರು ಇವರನ್ನೊಳಗೊಂಡ ಕಲಾತಂಡವು ಸಾಂಪ್ರದಾಯಿಕ ಶೈಲಿಯ ಪುರವಂತಿಕೆ ಸೇವೆಯ ಮೂಲಕ ನೆರೆದಿದ್ದ ಸಹಸ್ರಾರು ಭಕ್ತರ ಕಣ್ಮನ ಸೆಳೆಯಿತು.
ಸಮಾರಂಭದಲ್ಲಿ ಮಾಜಿ ಸಂಸದರಾದ ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್, ಸಹ್ಯಾದ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಹಾ.ಮಾ.ನಾಗರಾಜ್, ಶ್ರೀ ಮೃಡಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಕಾಶಣ್ಣ, ಪ್ರಮುಖರಾದ ಮಹೇಶಣ್ಣ, ಮಲ್ಲಿಕಾರ್ಜುನ್, ಮಂಜುನಾಥ್, ನವೀನ್, ನವುಲಯ್ಯ, ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇವರೊಂದಿಗೆ ಗ್ರಾಮದ ಹಿರಿಯರು, ಪ್ರಮುಖರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಭಕ್ತಾದಿಗಳು ಬಹುಸಂಖ್ಯೆಯಲ್ಲಿ ಆಗಮಿಸಿ, ಇಡೀ ಧರ್ಮ ಸಮಾರಂಭ ಮತ್ತು ಉತ್ಸವವನ್ನು ಅತ್ಯಂತ ಯಶಸ್ವಿಗೊಳಿಸಿದರು.









