ಶಿವಮೊಗ್ಗ, ಜುಲೈ 26: ಮಾಜಿ ಶಾಸಕ ಹಾಗೂ ಕರ್ನಾಟಕ ಮಾಜಿ ಶಾಸಕರ ವೇದಿಕೆಯ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ಎಂ. ಚಂದ್ರಶೇಖರಪ್ಪ ಅವರ ನಿಧನಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಕ್ರಿಯಾಶೀಲ, ನೇರ ಹಾಗೂ ನಿಷ್ಠುರ ವ್ಯಕ್ತಿತ್ವ ಹೊಂದಿದ್ದ ಹೆಚ್.ಎಂ. ಚಂದ್ರಶೇಖರಪ್ಪ ಅವರು ವೀರಶೈವ-ಲಿಂಗಾಯತ ಸಮಾಜದ ಹಿತಕ್ಕಾಗಿ ಅವಿರತವಾಗಿ ಶ್ರಮಿಸಿದವರು. ತಮ್ಮೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು ಸಮಾಜದ ಅಭಿವೃದ್ಧಿ ಹಾಗೂ ಜನಹಿತದ ವಿಚಾರಗಳನ್ನು ಸದಾ ಹಂಚಿಕೊಳ್ಳುತ್ತಿದ್ದ ಸಂದರ್ಭಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಜಗದ್ಗುರುಗಳು ಸ್ಮರಿಸಿದ್ದಾರೆ.
ಸುಮಾರು 34 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಶ್ರೀ ಜಗದ್ಗುರು ಪಂಚಾಚಾರ್ಯ ಅಡ್ಡಪಲ್ಲಕ್ಕಿ ಮಹೋತ್ಸವ ಯಶಸ್ವಿಗೊಳಿಸಲು ಅವರು ಅತ್ಯಂತ ಸಕ್ರಿಯವಾಗಿ ಶ್ರಮಿಸಿದ್ದರು. ಆ ಮಹೋತ್ಸವದ ಬಳಿಕವೇ ಶಿವಮೊಗ್ಗ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಅದು ಗುರುಸೇವೆಯ ಫಲವೆಂಬ ಭಾವನೆಯನ್ನು ಅವರು ಸದಾ ವ್ಯಕ್ತಪಡಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಅಗಲಿದ ಹೆಚ್.ಎಂ. ಚಂದ್ರಶೇಖರಪ್ಪ ಅವರ ಪವಿತ್ರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ಕರುಣಿಸಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ದಯಪಾಲಿಸಲಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ಸಂತಾಪ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.







