ಶಿವಮೊಗ್ಗ, ಆ.1: ಸಂಯುಕ್ತ ಕಿಸಾನ್ ಮೋರ್ಚಾ (SKM) ಹಾಗೂ ಜೆಸಿಟಿಯು (JCTU) ದೇಶವ್ಯಾಪಿ ನೀಡಿರುವ ಕರೆಯ ಮೇರೆಗೆ, ಆಗಸ್ಟ್ 10ರಂದು ‘ಕ್ವಿಟ್ ಇಂಡಿಯಾ’ ಚಳುವಳಿಯ ಸ್ಪೂರ್ತಿಯಲ್ಲಿ “ಕಾರ್ಪೊರೇಟ್ಗಳೇ ದೇಶ ಬಿಟ್ಟು ತೊಲಗಿ” ಎಂಬ ಘೋಷಣೆಯಡಿ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿರುವ ಜೈಲು ಭರೋ ಚಳುವಳಿಯನ್ನು ಶಿವಮೊಗ್ಗದಲ್ಲಿಯೂ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ನಗರದ ರೈತ ಸಂಘದ ಜಿಲ್ಲಾ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಹೆಚ್.ಆರ್.ಬಸವರಾಜಪ್ಪ ಅವರು, ರೈತರು, ಕಾರ್ಮಿಕರು ಹಾಗೂ ದುಡಿಯುವ ವರ್ಗಗಳ ಹಿತಾಸಕ್ತಿಗೆ ವಿರುದ್ಧವಾದ ನೀತಿಗಳನ್ನು ವಿರೋಧಿಸುವ ಉದ್ದೇಶದಿಂದ ದೇಶಾದ್ಯಂತ ಈ ಚಳುವಳಿಯನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣ, ಕೃಷಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳು, ಬೆಲೆ ಏರಿಕೆ ಸೇರಿದಂತೆ ವಿವಿಧ ಜನಪರ ಸಮಸ್ಯೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಚಳುವಳಿಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಆಗಸ್ಟ್ 10ರಂದು ಶಿವಮೊಗ್ಗದಲ್ಲಿ ನಡೆಯಲಿರುವ ಜೈಲು ಭರೋ ಚಳುವಳಿಯನ್ನು ಯಶಸ್ವಿಗೊಳಿಸಲು ಗ್ರಾಮ ಮಟ್ಟದಿಂದಲೇ ವ್ಯಾಪಕ ಪ್ರಚಾರ ಕೈಗೊಂಡು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರನ್ನು ಸಂಘಟಿಸುವ ಕುರಿತು ಸಭೆಯಲ್ಲಿ ಚರ್ಚಿಸಿ ರೂಪುರೇಷೆಗಳನ್ನು ಅಂತಿಮಗೊಳಿಸಲಾಯಿತು.
ಸಭೆಯಲ್ಲಿ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್, ಬಿಸಿಯೂಟ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಹನುಮಮ್ಮ, ಸಿಐಟಿಯು (CITU) ಜಿಲ್ಲಾ ಸಂಚಾಲಕ ನಾರಾಯಣ, ಸಹ ಸಂಚಾಲಕ ಷಣ್ಮಖಪ್ಪ, ರೈತ ಸಂಘದ ಮಹಿಳಾ ಸಂಚಾಲಕಿ ಭಾಗ್ಯ ರಾಘವೇಂದ್ರ, ಜಿಲ್ಲಾಾಧ್ಯಕ್ಷ ಕೆ. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಇ.ಬಿ. ಜಗದೀಶ್, ಶಿವಮೊಗ್ಗ ತಾಲೂಕು ಅಧ್ಯಕ್ಷ ಸಿ. ಚಂದ್ರಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಜ್ಞಾನೇಶ್, ಭದ್ರಾವತಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಬಿ. ಹನುಮಂತಪ್ಪ, ಮುಖಂಡರಾದ ಮಂಜಪ್ಪ, ಶೇಖರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.







