ಶಿವಮೊಗ್ಗ/ನವದೆಹಲಿ, ಆಗಸ್ಟ್ 7: ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ವಿಧಾನ ಪರಿಷತ್ ಸದಸ್ಯರು ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಡಿ.ಎಸ್. ಅರುಣ್ ಅವರ ನೇತೃತ್ವದಲ್ಲಿ 17 ಸದಸ್ಯರ ನಿಯೋಗವು ನವದೆಹಲಿಯಲ್ಲಿರುವ ಭಾರತದ ಪ್ರತಿಷ್ಠಿತ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿ, ಅಲ್ಲಿನ ಐತಿಹಾಸಿಕ ಹಾಗೂ ಸಾಂವಿಧಾನಿಕ ಮಹತ್ವದ ಮಾಹಿತಿ ಪಡೆದುಕೊಂಡಿತು.
ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸವಾಗಿರುವ ರಾಷ್ಟ್ರಪತಿ ಭವನವು ದೇಶದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಹೆಮ್ಮೆಯ ಪ್ರತೀಕವಾಗಿದೆ. ಈ ಹಿನ್ನೆಲೆಯಲ್ಲಿ ನಿಯೋಗವು ರಾಷ್ಟ್ರಪತಿ ಭವನದ ವೈಭವಯುತ ವಾಸ್ತುಶಿಲ್ಪ, ಅದರ ಐತಿಹಾಸಿಕ ಹಿನ್ನೆಲೆ, ನಿರ್ಮಾಣದ ವಿಶೇಷತೆಗಳು ಹಾಗೂ ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯ ಕಾರ್ಯವೈಖರಿಯ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡಿತು.


ಭೇಟಿಯ ವೇಳೆ ರಾಷ್ಟ್ರಪತಿ ಭವನದ ವಿವಿಧ ವಿಭಾಗಗಳು, ಐತಿಹಾಸಿಕ ಕಲಾಕೃತಿಗಳು, ಸಭಾಂಗಣಗಳು ಹಾಗೂ ಪರಂಪರೆಯ ವೈಶಿಷ್ಟ್ಯಗಳನ್ನು ವೀಕ್ಷಿಸಿದ ನಿಯೋಗದ ಸದಸ್ಯರು, ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುವ ಈ ಐತಿಹಾಸಿಕ ಕಟ್ಟಡದ ವೈಭವವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರಪತಿ ಭವನದ ಆಡಳಿತ ವ್ಯವಸ್ಥೆ, ಸಂರಕ್ಷಣೆ ಹಾಗೂ ರಾಷ್ಟ್ರದ ಪ್ರಮುಖ ಕಾರ್ಯಕ್ರಮಗಳಲ್ಲಿ ಅದರ ಪಾತ್ರದ ಕುರಿತು ಸಹ ಮಾಹಿತಿ ಪಡೆದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಗೋಪಿನಾಥ್, ಮಾಜಿ ಅಧ್ಯಕ್ಷರಾದ ಡಿ.ಎಂ. ಶಂಕರಪ್ಪ, ವಾಸುದೇವ್, ವಿಜಯಕುಮಾರ್, ಪ್ರದೀಪ್ ವಿ.ಎಲಿ, ಉದಯಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ 17 ಸದಸ್ಯರ ನಿಯೋಗದ ಸದಸ್ಯರು ಉಪಸ್ಥಿತರಿದ್ದು, ರಾಷ್ಟ್ರಪತಿ ಭವನದ ಭೇಟಿ ತಮ್ಮ ಜೀವನದ ಸ್ಮರಣೀಯ ಅನುಭವವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.








