ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

‘ನೋ ಚೇಂಜ್‌’ ಎಂದ ಹೈಕಮಾಂಡ್‌; ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಬಿಗ್‌ ಶಾಕ್‌!

On: August 8, 2026 6:08 PM
Follow Us:
ಸಂಪುಟ ಪುನರ್‌ರಚನೆಗೆ ತೆರೆ: ಒಂದು ಸ್ಥಾನಕ್ಕೆ ಮಾತ್ರ ಮಹಿಳೆಗೆ ಅವಕಾಶ?

ಬೆಂಗಳೂರು, ಆ.8: ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ಪುನರ್‌ರಚನೆ ಕುರಿತಂತೆ ಕಳೆದ ಕೆಲ ದಿನಗಳಿಂದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಬಹುತೇಕ ತೆರೆ ಬಿದ್ದಿದ್ದು, ಪ್ರಸ್ತುತ ಸಚಿವ ಸಂಪುಟದಲ್ಲಿ ಯಾವುದೇ ಮಹತ್ವದ ಬದಲಾವಣೆ ಮಾಡುವುದಿಲ್ಲ ಎಂಬ ಸಂದೇಶ ಹೈಕಮಾಂಡ್‌ ಮಟ್ಟದಿಂದ ರಾಜ್ಯ ನಾಯಕರಿಗೆ ರವಾನೆಯಾಗಿದೆ ಎಂದು ತಿಳಿದುಬಂದಿದೆ.

ಸಂಪುಟದಲ್ಲಿ ಖಾಲಿಯಿರುವ ಒಂದು ಸ್ಥಾನವನ್ನು ಮಾತ್ರ ಮಹಿಳಾ ಕೋಟಾದಡಿ ಭರ್ತಿ ಮಾಡುವ ಸಾಧ್ಯತೆ ಇದ್ದು, ಉಳಿದ ಸಚಿವರ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಮಾಡುವ ಉದ್ದೇಶ ಇಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹಿರಿಯ ಶಾಸಕರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂಬ ವದಂತಿಗಳಿಗೆ ಸದ್ಯಕ್ಕೆ ಬ್ರೇಕ್‌ ಬಿದ್ದಂತಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಬೆಳವಣಿಗೆಯ ಬೆನ್ನಲ್ಲೇ ಸಂಪುಟ ಪುನರ್‌ರಚನೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಾಗೂ ಪಕ್ಷದ ವರಿಷ್ಠರೊಂದಿಗೆ ಸಚಿವ ಸಂಪುಟ, ಖಾತೆ ಹಂಚಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂಬ ನಿರೀಕ್ಷೆಯೂ ರಾಜಕೀಯ ವಲಯದಲ್ಲಿ ಮೂಡಿತ್ತು.

ಸಂಪುಟ ಪುನರ್‌ರಚನೆಯ ಸಂದರ್ಭದಲ್ಲಿ ಕೆಲ ಸಚಿವರನ್ನು ಕೈಬಿಟ್ಟು ಹಿರಿಯ ಶಾಸಕರಿಗೆ ಅವಕಾಶ ನೀಡಲಾಗುತ್ತದೆ ಎಂಬ ಚರ್ಚೆ ಇತ್ತೀಚೆಗೆ ತೀವ್ರವಾಗಿತ್ತು. ವಿಶೇಷವಾಗಿ ಜಿಲ್ಲಾವಾರು ಸಚಿವ ಸ್ಥಾನಗಳ ಹಂಚಿಕೆ, ಪ್ರಾದೇಶಿಕ ಹಾಗೂ ಸಾಮಾಜಿಕ ಸಮೀಕರಣಗಳನ್ನು ಮುಂದಿಟ್ಟುಕೊಂಡು ಹಲವು ರೀತಿಯ ರಾಜಕೀಯ ಲೆಕ್ಕಾಚಾರಗಳು ನಡೆದಿದ್ದವು.

ಮುಖ್ಯಮಂತ್ರಿಯವರ ತವರು ಜಿಲ್ಲೆ ವ್ಯಾಪ್ತಿಗೆ ಎರಡು ಸಚಿವ ಸ್ಥಾನಗಳು ದೊರೆತಿರುವ ಹಿನ್ನೆಲೆಯಲ್ಲಿ ಎಚ್‌.ಸಿ. ಬಾಲಕೃಷ್ಣ ಅವರನ್ನು ಸಂಪುಟದಿಂದ ಕೈಬಿಡಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಅದೇ ರೀತಿ ಮಂಡ್ಯ ಜಿಲ್ಲೆಗೂ ಎರಡು ಸಚಿವ ಸ್ಥಾನಗಳು ದೊರೆತಿರುವ ಹಿನ್ನೆಲೆಯಲ್ಲಿ ಸಚಿವ ಚೆಲುವರಾಯಸ್ವಾಮಿ ಅವರ ಸ್ಥಾನಕ್ಕೂ ಕುತ್ತು ಬರಬಹುದು ಎಂಬ ಊಹಾಪೋಹಗಳು ಹರಿದಾಡಿದ್ದವು.

ಬೆಂಗಳೂರು ನಗರದಲ್ಲೂ ಸಚಿವ ಸ್ಥಾನಗಳ ಹಂಚಿಕೆಯನ್ನು ಸಾಮಾಜಿಕ ಸಮೀಕರಣದ ದೃಷ್ಟಿಯಿಂದ ಮರುಪರಿಶೀಲಿಸಲಾಗುತ್ತದೆ ಎಂಬ ಚರ್ಚೆ ನಡೆದಿತ್ತು. ಮುಸ್ಲಿಂ ಸಮುದಾಯದ ಇಬ್ಬರು ಸಚಿವರ ಪೈಕಿ ಒಬ್ಬರನ್ನು ಕೈಬಿಟ್ಟು, ಮತ್ತೊಬ್ಬರನ್ನು ಮುಂದುವರಿಸುವ ಸಾಧ್ಯತೆ ಇದೆ ಎಂಬ ವದಂತಿಗಳೂ ರಾಜಕೀಯ ವಲಯದಲ್ಲಿ ವ್ಯಾಪಕವಾಗಿದ್ದವು.

ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಯ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಕೆಲವು ಹಿರಿಯ ಶಾಸಕರು ಪಟ್ಟು ಹಿಡಿದಿದ್ದರು. ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಹಾಗೂ ಎಂ. ಕೃಷ್ಣಪ್ಪ ಅವರು ಸಚಿವ ಸ್ಥಾನಕ್ಕಾಗಿ ತಮ್ಮ ಬೇಡಿಕೆಯನ್ನು ಪ್ರಬಲವಾಗಿ ಮುಂದಿಟ್ಟಿದ್ದರು ಎನ್ನಲಾಗಿದೆ.

ಸಚಿವ ಸ್ಥಾನ ಸಿಗದಿದ್ದರೆ ಬೇರೆ ಯಾವುದೇ ರಾಜಕೀಯ ಸಂಧಾನಕ್ಕೆ ತಾವು ಸಿದ್ಧರಿಲ್ಲ ಎಂಬ ನಿಲುವನ್ನು ಕೃಷ್ಣಪ್ಪ ಅವರು ಮುಂದುವರಿಸಿದ್ದಾರೆ ಎನ್ನಲಾಗಿದ್ದು, ಜಯಚಂದ್ರ ಅವರೊಂದಿಗೆ ಡಿ.ಕೆ. ಶಿವಕುಮಾರ್‌ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಈ ಮಾತುಕತೆಯ ಬಳಿಕ ಜಯಚಂದ್ರ ಅವರು ತಮ್ಮ ನಿಲುವಿನಲ್ಲಿ ಕೆಲವು ಮಟ್ಟಿಗೆ ಸಡಿಲಿಕೆ ತೋರಿದ್ದಾರೆ ಎಂಬ ಮಾಹಿತಿ ಪಕ್ಷದ ವಲಯದಿಂದ ಕೇಳಿಬಂದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿರುವ ಬಸವರಾಜ ಶಿವಣ್ಣನವರ್‌ ಮತ್ತು ರಾಘವೇಂದ್ರ ಹಿಟ್ನಾಳ್‌ ಅವರ ಪೈಕಿ ಒಬ್ಬರನ್ನು ಸಂಪುಟಕ್ಕೆ ಸೇರಿಸಬೇಕು ಎಂಬ ಚರ್ಚೆಯೂ ನಡೆದಿತ್ತು ಎನ್ನಲಾಗಿದೆ.

ಇದರ ನಡುವೆ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದು ಪ್ರತಿಪಕ್ಷಗಳಿಗೆ ರಾಜಕೀಯ ಅಸ್ತ್ರವಾಗಬಹುದು ಎಂಬ ಆಕ್ಷೇಪಗಳು ಪಕ್ಷದೊಳಗೇ ಕೇಳಿಬಂದಿದ್ದವು. ಹೀಗಾಗಿ ನಾಗೇಂದ್ರ ಅವರನ್ನು ಬದಲಾವಣೆ ಮಾಡಿ, ಅವರ ಬದಲಿಗೆ ಅದೇ ಸಮುದಾಯದ ಅನ್ನಪೂರ್ಣ ತುಕಾರಾಮ್‌ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಕುರಿತೂ ಚರ್ಚೆಗಳು ನಡೆದಿದ್ದವು ಎನ್ನಲಾಗಿದೆ.

ಆದರೆ ಸದ್ಯದ ಬೆಳವಣಿಗೆಗಳ ಪ್ರಕಾರ ಈ ರೀತಿಯ ಬದಲಾವಣೆಗಳಿಗೆ ಹೈಕಮಾಂಡ್‌ ಒಲವು ತೋರಿಲ್ಲ ಎನ್ನಲಾಗುತ್ತಿದೆ.

ಸಂಪುಟದಲ್ಲಿ ಖಾಲಿಯಿರುವ ಒಂದು ಸ್ಥಾನವನ್ನು ಮಹಿಳಾ ಪ್ರತಿನಿಧಿಗೆ ನೀಡುವ ಸಾಧ್ಯತೆ ಮಾತ್ರ ಉಳಿದಿದೆ ಎನ್ನಲಾಗುತ್ತಿದೆ. ಈ ಸ್ಥಾನಕ್ಕೆ ಗಾಯತ್ರಿ ಶಾಂತೇಗೌಡ ಅವರ ಹೆಸರು ಮುಂಚೂಣಿಯಲ್ಲಿದ್ದು, ಅವರನ್ನು ಸಚಿವ ಸಂಪುಟಕ್ಕೆ ಸೇರಿಸುವುದು ಬಹುತೇಕ ಖಚಿತ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿವೆ.

ಮಹಿಳಾ ಕೋಟಾದಡಿ ಸಚಿವ ಸ್ಥಾನಕ್ಕಾಗಿ ಲಕ್ಷ್ಮೀ ಹೆಬ್ಬಾಳ್ಕರ್‌, ರೂಪಕಲಾ, ಕನೀಜ್‌ ಫಾತಿಮಾ, ನಯನಾ ಮೋಟಮ್ಮ, ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಹಾಗೂ ಆರತಿ ಕೃಷ್ಣ ಸೇರಿದಂತೆ ಹಲವು ಆಕಾಂಕ್ಷಿಗಳು ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಆದರೆ ಸದ್ಯದ ರಾಜಕೀಯ ಲೆಕ್ಕಾಚಾರದಲ್ಲಿ ಇವರ ಪ್ರಯತ್ನಕ್ಕೆ ಫಲ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಸಂಪುಟ ಪುನರ್‌ರಚನೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡುವೆ ಮಹತ್ವದ ಮಾತುಕತೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಸಚಿವ ಸಂಪುಟದ ಭವಿಷ್ಯ, ಖಾತೆಗಳ ಹಂಚಿಕೆ ಹಾಗೂ ಪಕ್ಷದೊಳಗಿನ ಅಸಮಾಧಾನ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಡಿ.ಕೆ. ಶಿವಕುಮಾರ್‌ ಅವರು ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಸಂಪುಟ ಪುನರ್‌ರಚನೆ ಕುರಿತ ವದಂತಿಗಳಿಗೆ ಮತ್ತಷ್ಟು ಬಲ ಬಂದಿತ್ತು.

ಆದರೆ ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಸಂಪುಟ ಪುನರ್‌ರಚನೆಯ ಕುರಿತು ಹೊಸದಾಗಿ ಯಾವುದೇ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿಲ್ಲ. ರಾಜ್ಯದ ನಾಯಕರು ಹಾಗೂ ಪಕ್ಷದ ವರಿಷ್ಠರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ಸಂಪುಟದಲ್ಲಿ ಪ್ರಮುಖ ಬದಲಾವಣೆ ಮಾಡುವ ಪ್ರಸ್ತಾಪವಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್‌ ರವಾನಿಸಿದೆ ಎನ್ನಲಾಗುತ್ತಿದೆ.

ಒಟ್ಟಾರೆ, ಕಳೆದ ಹಲವು ದಿನಗಳಿಂದ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಸಚಿವ ಸಂಪುಟ ಪುನರ್‌ರಚನೆಯ ವಿಚಾರ ಸದ್ಯಕ್ಕೆ ತಣ್ಣಗಾಗುವ ಸಾಧ್ಯತೆ ಇದೆ. ಒಂದು ಖಾಲಿ ಸ್ಥಾನಕ್ಕೆ ಮಾತ್ರ ಮಹಿಳಾ ಪ್ರತಿನಿಧಿಯನ್ನು ನೇಮಿಸಿ, ಉಳಿದ ಸಚಿವರನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಾಗಿದೆ.

ಇದರಿಂದ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದ ಹಿರಿಯ ಶಾಸಕರು ಹಾಗೂ ಸಚಿವ ಸ್ಥಾನ ಕಳೆದುಕೊಳ್ಳಬಹುದು ಎಂಬ ಆತಂಕದಲ್ಲಿದ್ದ ಕೆಲ ಸಚಿವರಿಗೆ ಸದ್ಯಕ್ಕೆ ನಿರಾಳತೆ ದೊರೆತಂತಾಗಿದೆ.

ಆದಾಗ್ಯೂ ಡಿ.ಕೆ. ಶಿವಕುಮಾರ್‌ ಅವರ ದೆಹಲಿ ಭೇಟಿ ಹಾಗೂ ಹೈಕಮಾಂಡ್‌ ನಾಯಕರೊಂದಿಗಿನ ಮಾತುಕತೆಯ ಬಳಿಕ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ. ಹೀಗಾಗಿ ಸಂಪುಟದ ವಿಚಾರದಲ್ಲಿ ಈಗಾಗಲೇ ತೀರ್ಮಾನವಾಗಿರುವ ನಿಲುವಿನಲ್ಲಿ ಕೊನೆಯ ಕ್ಷಣದಲ್ಲಿ ಯಾವುದೇ ಬದಲಾವಣೆ ಆಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

K.M.Sathish Gowda

Join WhatsApp

Join Now

Facebook

Join Now

Read more

ಗುಡ್ಡೆಕಲ್ಲು ಜಾತ್ರಾ ಮಹೋತ್ಸವ: ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಹಾಗೂ ಜೆಡಿಎಸ್ ನಾಯಕರಿಂದ ಶ್ರೀ ಬಾಲಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ

ಆಗಸ್ಟ್‌ 8ರಂದು ನೆಲಮಂಗಲದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ 4ನೇ ರಾಜ್ಯ ಪತ್ರಕರ್ತರ ಸಮ್ಮೇಳನ

ನೇಕಾರರ ಅಭಿವೃದ್ಧಿಗೆ ಬಿಜೆಪಿ ಬದ್ಧ; ಮತ್ತೆ ಅಧಿಕಾರಕ್ಕೆ ಬಂದರೆ ಹೊಸ ಯೋಜನೆಗಳು: ಬಿ.ವೈ.ವಿಜಯೇಂದ್ರ

ಎಂಎಲ್‌ಸಿ ಡಿ.ಎಸ್. ಅರುಣ್ ನೇತೃತ್ವದಲ್ಲಿ ರಾಷ್ಟ್ರಪತಿ ಭವನಕ್ಕೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 17 ಸದಸ್ಯರ ನಿಯೋಗ ಭೇಟಿ

ಗುಡ್ಡೆಕಲ್ಲಿನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಜಾತ್ರಾ ಮಹೋತ್ಸವ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರಿಂದ ವಿಶೇಷ ಪೂಜೆ, ಸ್ವಾಮಿಯ ದರ್ಶನ

ಆಗಸ್ಟ್ 10ರಂದು ದೇಶಾದ್ಯಂತ ‘ಜೈಲ್ ಭರೋ’ ಚಳುವಳಿ: ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆಗೆ ಹೆಚ್.ಆರ್. ಬಸವರಾಜಪ್ಪ ಕರೆ

Leave a Comment