ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮನಸ್ಸನ್ನು ಶಾಂತ–ಪ್ರಶಾಂತಗೊಳಿಸುವ ಮಾರ್ಗವೇ ಅಧ್ಯಾತ್ಮ: ಶ್ರೀ ರಂಭಾಪುರಿ ಜಗದ್ಗುರುಗಳು

On: August 13, 2026 10:41 PM
Follow Us:

ಶ್ರೀ ರಂಭಾಪುರಿ ಪೀಠ, ಬಾಳೆಹೊನ್ನೂರು, ಆ.13: ಭಾರತೀಯ ಸಂಸ್ಕೃತಿಯಲ್ಲಿ ಆಚರಿಸುವ ಪ್ರತಿಯೊಂದು ಹಬ್ಬವೂ ಕೇವಲ ಸಂಭ್ರಮಕ್ಕೆ ಸೀಮಿತವಾಗಿರದೆ, ಮಾನವನ ಬದುಕಿಗೆ ಅಗತ್ಯವಾದ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ನೈತಿಕ ಮೌಲ್ಯಗಳನ್ನು ಪರಿಚಯಿಸುವ ಮಹತ್ವದ ಸಂದರ್ಭಗಳಾಗಿವೆ. ಹಬ್ಬಗಳ ಆಚರಣೆಯ ಮೂಲಕ ಮನುಷ್ಯನ ಭಾವನೆಗಳು ವಿಕಾರಗೊಳ್ಳದೆ, ವಿಕಾಸದತ್ತ ಸಾಗುವಂತೆ ಮಾಡುವ ಉದ್ದೇಶ ಅಡಗಿದೆ. ಚಂಚಲ ಮನಸ್ಸನ್ನು ಶಾಂತ–ಪ್ರಶಾಂತಗೊಳಿಸುವ ಮಾರ್ಗವೇ ಅಧ್ಯಾತ್ಮ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶ್ರೀ ರಂಭಾಪುರಿ ಪೀಠದಲ್ಲಿ ಗುರುವಾರ 35ನೇ ವರ್ಷದ ತಪೋನುಷ್ಠಾನದ ಅಂಗವಾಗಿ ನಡೆದ ಪುರಾಣ ಪ್ರವಚನ ಹಾಗೂ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿನ ಹಬ್ಬ–ಹರಿದಿನಗಳು ಮನುಷ್ಯನ ಬದುಕಿಗೆ ಉತ್ತಮ ದಿಕ್ಕು ತೋರಿಸುವ ಜೀವನಮೌಲ್ಯಗಳ ಪ್ರತೀಕವಾಗಿವೆ ಎಂದು ತಿಳಿಸಿದರು.

ಹಿಂದೂ ಸಂಸ್ಕೃತಿಯಲ್ಲಿ ಆಚರಿಸುವ ಹಬ್ಬಗಳಲ್ಲಿ ಬದುಕಿನ ಶ್ರೇಯಸ್ಸಿಗೆ ಬೇಕಾದ ಅನೇಕ ಅಮೂಲ್ಯ ಅಂಶಗಳನ್ನು ಕಾಣಬಹುದು. ಇವು ಮಾನವ ಜೀವನದ ಉನ್ನತಿಗೆ ದಿಕ್ಸೂಚಿಗಳಾಗಿವೆ. ಹೀಗಾಗಿ ಹಬ್ಬಗಳ ಆಚರಣೆಯ ಹಿಂದಿರುವ ತಾತ್ವಿಕ ಹಾಗೂ ಆಧ್ಯಾತ್ಮಿಕ ಆಶಯಗಳನ್ನು ಅರಿತುಕೊಳ್ಳುವುದು ಅಗತ್ಯ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.

ಬೆಳೆಯುತ್ತಿರುವ ಯುವಜನತೆಯಲ್ಲಿ ಸಾತ್ವಿಕ ಹಾಗೂ ತಾತ್ವಿಕ ಚಿಂತನೆಗಳನ್ನು ಬೆಳೆಸುವ ಅಗತ್ಯವಿದೆ. ಆಧುನಿಕ ಜೀವನದ ವೇಗದ ನಡುವೆ ಯುವಕರು ಭಾರತೀಯ ಸಂಸ್ಕೃತಿ, ಧರ್ಮ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಅರಿತುಕೊಳ್ಳಬೇಕು. ದೇಶದ ಸಾಂಸ್ಕೃತಿಕ ಪಾವಿತ್ರ್ಯವನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಅದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.

ದೇಶ ಹಾಗೂ ಧರ್ಮಗಳು ಬೇರೆಬೇರೆಯಾಗಿದ್ದರೂ ಅಧ್ಯಾತ್ಮ ಸಾಧನೆಯ ಮೂಲ ಆಶಯ ಒಂದೇ ಆಗಿದೆ. ಮನುಷ್ಯನ ಜೀವನವು ಸತ್ಯದ ಸನ್ಮಾರ್ಗದಲ್ಲಿ ಸಾಗಬೇಕು. ಒಂದು ಧರ್ಮವು ಮತ್ತೊಂದು ಧರ್ಮದ ಸತ್ಯವನ್ನು ಪರಿಗಣಿಸದಿದ್ದರೂ ಸತ್ಯದ ಸ್ವರೂಪ ಎಂದಿಗೂ ಬದಲಾಗುವುದಿಲ್ಲ. ಸತ್ಯ ಮತ್ತು ಸಂಸ್ಕೃತಿಗೆ ಗೌರವ ನೀಡದೆ ಹೋದರೆ ಸಮಾಜದ ನೈತಿಕ ಹಾಗೂ ಸಾಂಸ್ಕೃತಿಕ ನೆಲೆ ದುರ್ಬಲವಾಗುತ್ತದೆ ಎಂದು ಅವರು ಎಚ್ಚರಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಸಮಾಜದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೋಧಿಸಿ ಜನರ ಬದುಕನ್ನು ಉದ್ಧರಿಸಿದ ಮಹಾನ್ ಆಚಾರ್ಯರು. ಅವರ ಚಿಂತನೆಗಳು ಹಾಗೂ ಬೋಧನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಶ್ರೀ ರಂಭಾಪುರಿ ಜಗದ್ಗುರುಗಳು ಎಂದರು.

ಧರ್ಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅಂಬಾಜಿಯೋಗಾಯಿ ಹಿರೇಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಮನುಷ್ಯನ ಜೀವನದಲ್ಲಿ ಸ್ಥಾನಮಾನ, ಆಸ್ತಿ–ಅಂತಸ್ತುಗಳು ಬದಲಾಗಬಹುದು. ಆದರೆ ಮಾನವೀಯ ಮೌಲ್ಯಗಳು ಹಾಗೂ ಪರಸ್ಪರ ಸಂಬಂಧಗಳು ಯಾವಾಗಲೂ ಶಾಶ್ವತವಾಗಿರುತ್ತವೆ ಎಂದು ಹೇಳಿದರು.

ಜೀವನದಲ್ಲಿ ಸುಖ ಬಂದಾಗಲೂ, ದುಃಖ ಎದುರಾದಾಗಲೂ ಎರಡನ್ನೂ ಸಮನ್ವಯದಿಂದ ಸ್ವೀಕರಿಸಿ ಬದುಕುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಿಜವಾದ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ಚಿಂತನೆಗಳು ಸಕಲರಿಗೂ ಅನ್ವಯವಾಗುವಂತಹವು ಎಂದು ತಿಳಿಸಿದರು.

ಶ್ರೀ ಜಗದ್ಗುರು ರೇಣುಕಾ ವಿಜಯ ಪುರಾಣ ಪ್ರವಚನ ನಡೆಸಿದ ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಶಾಂತಿಯಿಂದ ತತ್ತರಿಸುತ್ತಿರುವ ಜಗತ್ತಿಗೆ ಅಧ್ಯಾತ್ಮದ ಅರಿವು ಹಾಗೂ ಮಹಾನುಭಾವರ ಆದರ್ಶ ವಿಚಾರಧಾರೆಗಳ ಅನುಸಂಧಾನ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಶ್ರಾವಣ ಮಾಸವು ಹಿಂದೂಗಳು ಹಾಗೂ ವೀರಶೈವ ಸಮುದಾಯದ ಜನತೆಗೆ ಅತ್ಯಂತ ಪವಿತ್ರವಾದ ಕಾಲವಾಗಿದೆ. ಭೌತಿಕ ಬದುಕಿನಲ್ಲಿ ಮನುಷ್ಯ ಎಷ್ಟೇ ಸಂಪತ್ತು ಹೊಂದಿದ್ದರೂ ಆಂತರಿಕ ನೆಮ್ಮದಿ ಇಲ್ಲದಿದ್ದರೆ ಜೀವನದಲ್ಲಿ ಪೂರ್ಣ ಸಂತೃಪ್ತಿ ದೊರೆಯುವುದಿಲ್ಲ. ಅಧ್ಯಾತ್ಮ ಸಾಧನೆಯ ಮೂಲಕ ಮಾತ್ರ ಆಂತರಿಕ ಸಂತೃಪ್ತಿ, ಸಮಾಧಾನ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನದ ಸಿದ್ಧಾಂತಗಳು ಹಾಗೂ ಸಾಧನೆಯ ಮಾರ್ಗಗಳು ಇಂದಿನ ಸಮಾಜಕ್ಕೂ ಆಶಾಕಿರಣವಾಗಿವೆ. ಧರ್ಮ ಹಾಗೂ ಅಧ್ಯಾತ್ಮದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿಯೊಂದಿಗೆ ಇಡೀ ಸಮಾಜವೂ ಸಾತ್ವಿಕವಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಮೊಳಗಿತು. ಜಾನಪದ ಕಲಾವಿದ ಗಂಜಿಗಟ್ಟಿ ಕೃಷ್ಣಮೂರ್ತಿ ಅವರಿಂದ ಪ್ರಾರ್ಥನೆ ನೆರವೇರಿತು. ಚಿತ್ರದುರ್ಗದ ಹಾಸ್ಯ ಕಲಾವಿದ ಟಿ. ಜಗನ್ನಾಥ್ ಅವರು ಹಾಸ್ಯಮಯ ಮಾತುಗಳ ಮೂಲಕ ರಂಜಿಸಿದರು. ಶಿಕ್ಷಕ ವೀರೇಶ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಸೋಮೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಲೋಕಕಲ್ಯಾಣ ಹಾಗೂ ಜನಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ, ಭಕ್ತರಿಗೆ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ಭಕ್ತಿ–ಶ್ರದ್ಧೆಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಶಿವಮೊಗ್ಗದ ಎಸ್.ಹೆಚ್. ಸಿದ್ದಣ್ಣ ಹಾಗೂ ಅರಸೀಕೆರೆ ತಾಲ್ಲೂಕಿನ ಶಂಕರನಹಳ್ಳಿ ಗ್ರಾಮಸ್ಥರು ಅನ್ನದಾಸೋಹ ಸೇವೆ ಸಲ್ಲಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

Leave a Comment