ಸಂಪತ್ತಿಗಿಂತ ಸತ್ಕಾರ್ಯಕ್ಕೆ ಆದ್ಯತೆ ನೀಡಿ; ಪರೋಪಕಾರದ ಬದುಕೇ ಸಾರ್ಥಕತೆಯ ಹಾದಿ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರ ಆದರ್ಶಗಳನ್ನು ಸ್ಮರಿಸಿದ ಜಗದ್ಗುರುಗಳು
ಶ್ರೀ ರಂಭಾಪುರಿ ಪೀಠ, ಬಾಳೆಹೊನ್ನೂರು: ಜೀವನದಲ್ಲಿ ಏನೇ ಮರೆತರೂ ನಾವು ನಡೆದು ಬಂದ ದಾರಿ, ನಮ್ಮ ಬದುಕಿನ ಮೌಲ್ಯಗಳು ಹಾಗೂ ಸಮಾಜಕ್ಕೆ ನಾವು ಹೊಂದಿರುವ ಕರ್ತವ್ಯವನ್ನು ಎಂದಿಗೂ ಮರೆಯಬಾರದು. ಧರ್ಮ, ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಮನಸ್ಸಿನಲ್ಲಿರುವ ಕಲ್ಮಷವನ್ನು ಕಳೆದುಕೊಳ್ಳುವುದೇ ನಿಜವಾದ ಆಧ್ಯಾತ್ಮ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಲಾಗಿದ್ದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಆಧ್ಯಾತ್ಮವು ಕೇವಲ ಆಚರಣೆ, ಪೂಜೆ ಅಥವಾ ಬಾಹ್ಯ ಪ್ರದರ್ಶನಕ್ಕೆ ಸೀಮಿತವಾಗಬಾರದು. ಮನುಷ್ಯನ ಅಂತರಂಗವನ್ನು ಪರಿಶುದ್ಧಗೊಳಿಸಿ, ಉತ್ತಮ ಚಿಂತನೆ ಮತ್ತು ಸತ್ಪ್ರವೃತ್ತಿಯತ್ತ ಕೊಂಡೊಯ್ಯುವ ಜೀವನ ಮಾರ್ಗವಾಗಬೇಕು ಎಂದು ತಿಳಿಸಿದರು.


ಉತ್ತಮ ಹೃದಯವು ಉತ್ತಮ ಸಂಬಂಧಗಳಿಗೆ ಕಾರಣವಾಗುತ್ತದೆ. ಒಳ್ಳೆಯ ಗುಣಗಳುಳ್ಳ ವ್ಯಕ್ತಿಯ ಸಾನ್ನಿಧ್ಯವು ಬದುಕನ್ನು ಸಾರ್ಥಕಗೊಳಿಸುತ್ತದೆ. ಬದುಕುವುದಕ್ಕಾಗಿ ಸಂಪತ್ತು ಇರಬೇಕು; ಆದರೆ ಸಂಪತ್ತಿಗಾಗಿಯೇ ಬದುಕಬಾರದು. ಮಾನವ ಜೀವನದ ನಿಜವಾದ ಮೌಲ್ಯವು ಸಂಪತ್ತಿನ ಪ್ರಮಾಣದಲ್ಲಿಲ್ಲ, ಬದಲಾಗಿ ವ್ಯಕ್ತಿಯ ಗುಣ, ಸಂಸ್ಕಾರ, ಪರೋಪಕಾರ ಮತ್ತು ಮಾನವೀಯತೆಯಲ್ಲಿ ಅಡಗಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.
ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಕೆಲವೊಮ್ಮೆ ನಾವು ನಡೆದು ಬಂದ ದಾರಿ ಮತ್ತು ತೆಗೆದುಕೊಂಡ ನಿರ್ಧಾರಗಳೇ ಕಾರಣವಾಗಿರುತ್ತವೆ. ಆದ್ದರಿಂದ ಪ್ರತಿಯೊಂದು ಹೆಜ್ಜೆಯನ್ನೂ ವಿವೇಕದಿಂದ ಇಡಬೇಕು. ಜೀವನದಲ್ಲಿ ಅವಕಾಶ ಸಿಕ್ಕಾಗ ಇನ್ನೊಬ್ಬರಿಗೆ ಸಹಾಯ ಮಾಡಲು ಹಿಂದೆ ಸರಿಯಬಾರದು. ನಾವು ಮಾಡಿದ ಸಹಾಯ ಒಂದಲ್ಲೊಂದು ರೂಪದಲ್ಲಿ ನಮಗೇ ಮರಳಿ ಬರುತ್ತದೆ. ಪರೋಪಕಾರದ ಮನೋಭಾವವು ವ್ಯಕ್ತಿಯ ಬದುಕಿಗೆ ನೆಮ್ಮದಿ ಮತ್ತು ಸಮಾಜಕ್ಕೆ ಒಳಿತನ್ನು ತರುತ್ತದೆ ಎಂದು ಹೇಳಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವನ ಮನಸ್ಸಿನ ಕೊಳೆಯನ್ನು ತೊಳೆದು, ಶಿವಜ್ಞಾನದ ಅರಿವನ್ನು ಮೂಡಿಸಿದ ಮಹಾನ್ ಆಚಾರ್ಯರಾಗಿದ್ದರು. ಅವರು ತೋರಿದ ಧರ್ಮದ ಹಾದಿ ಮತ್ತು ಬೋಧಿಸಿದ ಆದರ್ಶ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಅವರ ಜೀವನ ಸಂದೇಶಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕಿಗೆ ನಿಜವಾದ ಅರ್ಥ ಮತ್ತು ಸಾರ್ಥಕತೆ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ನಕಾರಾತ್ಮಕ ಮಾತುಗಳಿಂದ ಬೆಳವಣಿಗೆ ತಡೆಯಲು ಸಾಧ್ಯವಿಲ್ಲ
ಶ್ರಾವಣ ಮಾಸದ ನಿಮಿತ್ತ ನಡೆಯುತ್ತಿರುವ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಬೇರಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಕೊಳಕು ನೀರು ಹರಿಸಿದ ಮಾತ್ರಕ್ಕೆ ಗಿಡದ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ. ಅದೇ ರೀತಿ ನಕಾರಾತ್ಮಕ ಮಾತುಗಳು, ಟೀಕೆಗಳು ಮತ್ತು ಅಡೆತಡೆಗಳಿಂದ ನಮ್ಮ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ನೆರಳು ಮತ್ತು ಹಣ್ಣು ನೀಡುವ ಮೂಲಕ ಜನರ ಬದುಕಿಗೆ ಉಪಕಾರವಾಗುವ ಮರದಂತೆ ಮನುಷ್ಯರೂ ಸ್ವಾರ್ಥಬುದ್ಧಿಯನ್ನು ತೊರೆದು ಇತರರಿಗೆ ಉಪಕಾರಿಯಾಗುವಂತೆ ಬದುಕಬೇಕು. ಮತ್ತೊಬ್ಬರ ಬದುಕಿಗೆ ನೆರವಾಗುವ, ನೋವಿಗೆ ಸ್ಪಂದಿಸುವ ಮತ್ತು ಸಮಾಜದ ಒಳಿತಿಗೆ ಕೈಜೋಡಿಸುವ ಬದುಕೇ ನಿಜವಾದ ಸಾರ್ಥಕ ಬದುಕು ಎಂದು ಹೇಳಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರ ಲೀಲೆಗಳು ಮತ್ತು ಪವಾಡಗಳು ಒಂದೆರಡಲ್ಲ, ನೂರಾರು. ಆದರೆ ಅವರ ಜೀವನದ ಅತ್ಯಂತ ದೊಡ್ಡ ಸಂದೇಶವೆಂದರೆ ಜ್ಞಾನ ಮತ್ತು ಧರ್ಮದ ಬೆಳಕನ್ನು ಸಮಾಜದ ಪ್ರತಿಯೊಬ್ಬರ ಬದುಕಿಗೂ ತಲುಪಿಸುವುದು. ಅವರು ತೋರಿದ ಅರಿವಿನ ಹಾದಿ ಜೀವಾತ್ಮರ ಬದುಕಿಗೆ ಬೆಳಕು ನೀಡುವಂತದ್ದು ಎಂದು ತಿಳಿಸಿದರು.

ಪರಿಸ್ಥಿತಿ ಬದಲಿಸಲಾಗದಿದ್ದರೆ ಮನಸ್ಥಿತಿ ಬದಲಿಸಿಕೊಳ್ಳಬೇಕು
ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಎಲ್ಲ ಸಂದರ್ಭಗಳನ್ನೂ ನಮ್ಮ ಇಚ್ಛೆಯಂತೆ ಬದಲಿಸಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ಬದಲಿಸುವುದು ಕಷ್ಟವಾದಾಗ ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವುದು ಜಾಣ್ಮೆಯ ನಡೆ ಎಂದು ಹೇಳಿದರು.
ನೂರಾರು ಟೀಕೆಗಳು ಮತ್ತು ಟಿಪ್ಪಣಿಗಳಿಂದ ಮಾಡಲಾಗದ ಪರಿವರ್ತನೆಯನ್ನು ಒಂದು ಒಳ್ಳೆಯ ಮಾತಿನಿಂದ ಸಾಧಿಸಲು ಸಾಧ್ಯವಿದೆ. ಮಾತಿನಲ್ಲಿ ಅಪಾರವಾದ ಶಕ್ತಿ ಇದೆ. ಆದ್ದರಿಂದ ನಮ್ಮ ಮಾತುಗಳು ಮತ್ತೊಬ್ಬರ ಮನಸ್ಸಿಗೆ ನೋವುಂಟು ಮಾಡುವಂತಿರದೆ, ಬದುಕಿನಲ್ಲಿ ಧೈರ್ಯ, ಭರವಸೆ ಮತ್ತು ಪ್ರೇರಣೆ ತುಂಬುವಂತಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಯಚೂರು ಕಿಲ್ಲಾ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು, ಹುಡಗಿಯ ಹಿರೇಮಠದ ಶ್ರೀ ಸೋಮೇಶ್ವರ ಶಿವಾಚಾರ್ಯರು ಹಾಗೂ ಕರ್ಜಗಿ ಮಠದ ಶ್ರೀ ಸೋಮನಾಥ ಶಿವಾಚಾರ್ಯರು ಉಪಸ್ಥಿತರಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ಗಂಗಾಧರ ಹಿರೇಮಠರಿಂದ ಪ್ರಾರ್ಥನೆ ನೆರವೇರಿತು. ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾ ಮುಖ್ಯೋಪಾಧ್ಯಾಯರಾದ ವೀರೇಶ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರಾವಣ ಸೋಮವಾರದ ವಿಶೇಷ ಪೂಜೆ
ಬೆಳಿಗ್ಗೆ ಶ್ರೀ ಪೀಠದ ಎಲ್ಲಾ ದೈವಗಳಿಗೆ ಶ್ರಾವಣ ಮಾಸದ ಎರಡನೇ ಸೋಮವಾರದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಲೋಕಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿ, ಆಗಮಿಸಿದ್ದ ಭಕ್ತರಿಗೆ ಶುಭ ಹಾರೈಸಿದರು.
ಧರ್ಮ, ಸತ್ಯ, ಅಹಿಂಸೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸಬೇಕು ಎಂದು ಈ ಸಂದರ್ಭದಲ್ಲಿ ಜಗದ್ಗುರುಗಳು ಕರೆ ನೀಡಿದರು.
ಸಮಾರಂಭದ ನಂತರ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.









